×
Ad

ಮಹಾರಾಷ್ಟ್ರ: ಪಾಲ್ಘರ್ ನಲ್ಲಿ ಇಬ್ಬರು ಸಾಧುಗಳು ಸೇರಿ ಮೂವರ ಹತ್ಯೆ ಪ್ರಕರಣ | ಆರೋಪಿ ಕಾಶಿನಾಥ್ ಚೌಧರಿಯ ಬಿಜೆಪಿ ಸೇರ್ಪಡೆಗೆ ತಡೆ

ವಿರೋಧ ಪಕ್ಷಗಳ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ರಾಜ್ಯ ಘಟಕದಿಂದ ತುರ್ತು ಕ್ರಮ

Update: 2025-11-17 21:40 IST

Photo Credit : X 

ಪಾಲ್ಘರ್: ಗಡ್ಚಿಂಚಲೆ ಸಾಧು ಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಆರೋಪಿ ಕಾಶಿನಾಥ್ ಚೌಧರಿ, ಬಿಜೆಪಿ ಸೇರ್ಪಡೆಗೊಂಡಿರುವುದನ್ನು ಪಕ್ಷದ ರಾಜ್ಯ ಘಟಕವು ತಾತ್ಕಾಲಿಕವಾಗಿ ತಡೆಹಿಡಿದಿದೆ. ಚೌಧರಿ ಸೇರ್ಪಡೆಯ ನಂತರ ವಿರೋಧ ಪಕ್ಷಗಳಿಂದ ಟೀಕೆ ಮತ್ತು ಸಾರ್ವಜನಿಕ ಅಸಮಾಧಾನ ಉಂಟಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ಚವಾಣ್ ಅವರು ಪಾಲ್ಘರ್ ಜಿಲ್ಲಾ ಅಧ್ಯಕ್ಷ ಭರತ್ ರಜಪೂತ್ ಅವರಿಗೆ ಪತ್ರ ಬರೆದು, ಚೌಧರಿಯ ಸೇರ್ಪಡೆಯನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ. “ಸಾಧು ಹತ್ಯೆ ಪ್ರಕರಣದ ಸಂವೇದನಾಶೀಲತೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸೇರ್ಪಡೆ ಅಮಾನತುಗೊಳಿಸಲಾಗಿದೆ,” ಎಂದು ಪಕ್ಷ ಮೂಲಗಳು ತಿಳಿಸಿವೆ.

“ತನಿಖೆಯ ದಾಖಲೆಗಳ ಪ್ರಕಾರ ಚೌಧರಿ ಹೆಸರು ಎಫ್‌ಐಆರ್ ಅಥವಾ ಚಾರ್ಜ್‌ಶೀಟ್‌ ನಲ್ಲಿ ಇಲ್ಲ. ಆದರೂ ಪ್ರಕರಣದ ಗಂಭೀರತೆ ಮತ್ತು ಸಾರ್ವಜನಿಕ ಪ್ರತಿಕ್ರಿಯೆಯನ್ನು ಪರಿಗಣಿಸಿ ಸೇರ್ಪಡೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ,” ಎಂದು ಬಿಜೆಪಿ ವಕ್ತಾರ ನವನಾಥ್ ಬಾನ್ ಸ್ಪಷ್ಟನೆ ನೀಡಿದ್ದಾರೆ.

ಕಾಶಿನಾಥ್ ಚೌಧರಿ ಪಾಲ್ಘರ್ ಜಿಲ್ಲೆಯಲ್ಲಿನ ಪ್ರಭಾವಶಾಲಿ ಸ್ಥಳೀಯ ನಾಯಕ. NCP(ಶರದ್ ಪವಾರ್ ಗುಂಪು)ನಲ್ಲಿ ಗುರುತಿಸಿಕೊಂಡಿದ್ದ ಚೌಧರಿ ನ.16ರಂದು ನೂರಾರು ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಪಾಲ್ಘರ್ ಜಿಲ್ಲಾ ಪರಿಷತ್ತಿನ ನಿರ್ಮಾಣ ಮತ್ತು ಹಣಕಾಸು ಸಮಿತಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

2025ರ ಏಪ್ರಿಲ್ 16ರಂದು ಗಡ್ಚಿಂಚಲೆ ಗ್ರಾಮದಲ್ಲಿ ಇಬ್ಬರು ಸಾಧುಗಳು ಮತ್ತು ಅವರ ಚಾಲಕ ಗುಂಪೊಂದರಿಂದ ಹತ್ಯೆಯಾದ ಪ್ರಕರಣ ರಾಜ್ಯವ್ಯಾಪಿ ಆಕ್ರೋಶ ಹುಟ್ಟಿಸಿತ್ತು. ಪ್ರಕರಣದಲ್ಲಿ 200 ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಲಾಗಿತ್ತು. ಆ ಸಮಯದಲ್ಲಿ ಬಿಜೆಪಿ, ಚೌಧರಿಯನ್ನು ‘ಮುಖ್ಯ ಸೂತ್ರಧಾರಿ’ ಎಂದು ಆರೋಪಿಸಿದ್ದರಿಂದ ಈ ಪ್ರಕರಣ ರಾಜಕೀಯವಾಗಿ ಹೆಚ್ಚು ಸೂಕ್ಷ್ಮತೆ ಪಡೆದಿತ್ತು.

ಚೌಧರಿ ಸೇರ್ಪಡೆಯ ನಂತರ ವಿರೋಧ ಪಕ್ಷಗಳು ಬಿಜೆಪಿಯನ್ನು “ದ್ವಂದ್ವ ನಿಲುವು” ಎಂದು ಟೀಕಿಸಿವೆ. ಅಲ್ಲದೇ ಪಕ್ಷದ ನೈತಿಕ ಹೊಣೆಗಾರಿಕೆಯನ್ನು ಪ್ರಶ್ನಿಸಿವೆ. ಹೆಚ್ಚುತ್ತಿರುವ ಒತ್ತಡದ ನಡುವೆ ಹೈಕಮಾಂಡ್ ಚೌಧರಿಯ ಬಿಜೆಪಿ ಸೇರ್ಪಡೆಯನ್ನು ಅಮಾನತುಗೊಳಿಸುವ ಮೂಲಕ ಪರಿಸ್ಥಿತಿ ಶಮನಗೊಳಿಸಲು ಮುಂದಾಗಿದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News