×
Ad

ಭಯೋತ್ಪಾದಕ ದಾಳಿ ಸಾಧ್ಯತೆ ಕುರಿತ ಗುಪ್ತಚರ ವರದಿ ಬಳಿಕ ಪ್ರಧಾನಿ ಮೋದಿ ಕಾಶ್ಮೀರ ಭೇಟಿ ರದ್ದುಗೊಳಿಸಿದ್ದರು: ಖರ್ಗೆ

Update: 2025-05-06 19:58 IST

 ಮಲ್ಲಿಕಾರ್ಜುನ ಖರ್ಗೆ | PC : PTI 

ರಾಂಚಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮೂರು ದಿನಗಳಿಗೆ ಮುನ್ನ ಗುಪ್ತಚರ ವರದಿ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರ ಭೇಟಿ ರದ್ದುಗೊಳಿಸಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ.

ಸರ್ವಪಕ್ಷಗಳ ಸಭೆಯಲ್ಲಿ ಕೇಂದ್ರ ಸರಕಾರ ಭದ್ರತಾ ವೈಫಲ್ಯವನ್ನು ಒಪ್ಪಿಕೊಂಡಿದೆ. ಆದುದರಿಂದ ಜನರನ್ನು ರಕ್ಷಿಸಲು ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆಯನ್ನು ಮಾಡದೇ ಇರುವುದಕ್ಕಾಗಿ ಕೇಂದ್ರ ಸರಕಾರವನ್ನು ಉತ್ತರದಾಯಿಯನ್ನಾಗಿ ಮಾಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

"ಭಯೋತ್ಪಾದಕ ದಾಳಿ ನಡೆಯುವ ಮೂರು ದಿನಗಳಿಗೆ ಮುನ್ನ ಮೋದಿ ಅವರಿಗೆ ಗುಪ್ತಚರ ವರದಿ ಕಳುಹಿಸಲಾಗಿತ್ತು ಎಂದು ನನಗೆ ಮಾಹಿತಿ ಸಿಕ್ಕಿದೆ.

ಆದುದರಿಂದಲೇ ಅವರು ಕಾಶ್ಮೀರ ಭೇಟಿಯನ್ನು ರದ್ದುಗೊಳಿಸಿದರು. ನಿಮ್ಮ ಭದ್ರತೆಯ ದೃಷ್ಟಿಯಿಂದ ಅಲ್ಲಿಗೆ ಹೋಗುವುದು ಸೂಕ್ತವಲ್ಲ ಎಂದು ಗುಪ್ತಚರ ವರದಿ ಹೇಳಿದಾಗ, ನೀವು ಜನರನ್ನು ರಕ್ಷಿಸಲು ನಿಮ್ಮ ಭದ್ರತೆ, ಗುಪ್ತಚರ ಸಂಸ್ಥೆ, ಸ್ಥಳೀಯ ಪೊಲೀಸ್ ಹಾಗೂ ಗಡಿ ಭದ್ರತಾ ಪಡೆಗೆ ಮಾಹಿತಿ ನೀಡಲಿಲ್ಲ ಯಾಕೆ ? ನಿಮಗೆ ಮಾಹಿತಿ ದೊರೆತ ಕೂಡಲೇ ನೀವು ನಿಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿದಿರಿ. ಆದರೆ, ಪ್ರವಾಸಿಗಳನ್ನು ರಕ್ಷಿಸಲು ಹೆಚ್ಚು ಭದ್ರತಾ ಪಡೆಗಳನ್ನು ಕಳುಹಿಸಿಲ್ಲ’’ ಎಂದು ಅವರು ಹೇಳಿದ್ದಾರೆ.

ಗುಪ್ತಚರ ವೈಫಲ್ಯವನ್ನು ಒಪ್ಪಿಕೊಂಡ ಬಳಿಕ ಪಹಲ್ಗಾಮ್ ದಾಳಿಯಲ್ಲಿನ ಜೀವ ಹಾನಿಗೆ ಕೇಂದ್ರ ಹೊಣೆಯಾಗಬೇಕಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆದ ‘‘ಸಂವಿಧಾನ ಬಚಾವೊ’’ ರ್ಯಾಲಿಯಲ್ಲಿ ಮಾತನಾಡಿದರು.

ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಹಲವು ನಾಯಕರು ಖರ್ಗೆ ಅವರದ್ದು ಬೇಜವಾಬ್ದಾರಿಯುತ ಹಾಗೂ ನಾಚಿಕೆಗೇಡಿನ ಹೇಳಿಕೆ ಎಂದಿದ್ದಾರೆ. ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್, ‘‘ಖರ್ಗೆ ಅವರಿಗೆ ಏನಾಯಿತು. ಸಭೆಯ ಸಂದರ್ಭ ಒಂದೆಡೆ ನಾವು ದೇಶದೊಂದಿಗೆ ಇದ್ದೇವೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಪ್ರಧಾನಿ ಅವರಿಗೆ ದಾಳಿಯ ಕುರಿತು ಮಾಹಿತಿ ಇದ್ದುದರಿಂದ ಕಾಶ್ಮೀರಕ್ಕೆ ಹೋಗಿಲ್ಲ ಎಂದು ಹೇಳುತ್ತಿದ್ದಾರೆ’’, ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News