ಪ್ರಜ್ವಲ್ ರೇವಣ್ಣ ಪ್ರಧಾನಿ ಮೋದಿಯ ನಿಕಟವರ್ತಿ: ಹಳೆಯ ಪ್ರಚಾರ ಸಭೆಯ ವೀಡಿಯೋ ಉಲ್ಲೇಖಿಸಿ ಕಾಂಗ್ರೆಸ್ ವಾಗ್ದಾಳಿ
ನರೇಂದ್ರ ಮೋದಿ, ಪ್ರಜ್ವಲ್ ರೇವಣ್ಣ | PC : PTI
ಹೊಸದಿಲ್ಲಿ, ಆ.01: ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರದ ನಾಲ್ಕು ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಮಾಜಿ ಸಂಸದ ಹಾಗೂ ಅಮಾನತುಗೊಂಡಿರುವ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವೊಂದು ದೋಷಿ ಎಂದು ಘೋಷಿಸಿದೆ. ಇದರ ಬೆನ್ನಿಗೇ, ಪ್ರಚಾರ ಸಭೆಯಲ್ಲಿ ಪ್ರಜ್ವಲ್ ರೇವಣ್ಣರೊಂದಿಗೆ ಕಾಣಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೋವನ್ನು ಹಂಚಿಕೊಂಡಿಕೊಂಡಿರುವ ಕಾಂಗ್ರೆಸ್, ಅವರ ವಿರುದ್ಧ ವಾಗ್ದಾಳಿ ನಡೆಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಮಾಡಿರುವ ಕಾಂಗ್ರೆಸ್, “ಪ್ರಜ್ವಲ್ ರೇವಣ್ಣ ಪ್ರಧಾನಿ ನರೇಂದ್ರ ಮೋದಿಯವರ ನಿಕಟವರ್ತಿಯಾಗಿದ್ದಾರೆ” ಎಂದು ಆರೋಪಿಸಿದೆ.
“ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣರನ್ನು ದೋಷಿ ಎಂದು ಘೋಷಿಸಲಾಗಿದೆ. ಯಾರು ಇವರು? ನರೇಂದ್ರ ಮೋದಿಯವರ ನಿಕಟವರ್ತಿ. ಅವರೇನು ಮಾಡಿದ್ದರು? ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದ ಪ್ರಜ್ವಲ್ ರೇವಣ್ಣ, ಸುಮಾರು 3,000 ಅಶ್ಲೀಲ ವೀಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಈ ಸಾಮೂಹಿಕ ಅತ್ಯಾಚಾರಿಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಿದ್ದರು” ಎಂದು ಈ ಪೋಸ್ಟ್ ನಲ್ಲಿ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
Prajwal Revanna Declared Guilty in Rape Case
— Congress (@INCIndia) August 1, 2025
? A close associate of Narendra Modi.
? Prajwal raped women and recorded nearly 3,000 obscene videos.
PM Modi campaigned for mass rapist Prajwal in the Lok Sabha election. pic.twitter.com/I12cBRQiPR
2024ರ ಲೋಕಸಭಾ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಅವರ ವಿರುದ್ಧ ಪ್ರಕರಣ ದಾಖಲಾಗಿದ್ದರಿಂದ, ಜೆಡಿಎಸ್ ಪಕ್ಷವು ಅವರನ್ನು ಪಕ್ಷದ ಸದಸ್ಯತ್ವದಿಂದ ಅಮಾನತುಗೊಳಿಸಿತ್ತು.
ಈ ಕುರಿತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕೂಡಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, “ಪ್ರಧಾನಿ ಮೋದಿಯವರು ಸರಣಿ ಅತ್ಯಾಚಾರಿ ಪ್ರಜ್ವಲ್ ರೇವಣ್ಣ ಪರವಾಗಿ ಪ್ರಚಾರ ನಡೆಸಿದ್ದರು” ಎಂದು ಟೀಕಿಸಿದ್ದಾರೆ.