×
Ad

ವಿದೇಶ ಪ್ರವಾಸಗಳನ್ನು ಕೈಗೊಳ್ಳುವ ಪ್ರಧಾನಿಗೆ ಮಣಿಪುರಕ್ಕೆ ಭೇಟಿ ನೀಡಲು ಸಹಾನುಭೂತಿಯಿಲ್ಲವೇ?: ಕಾಂಗ್ರೆಸ್ ವಾಗ್ದಾಳಿ

Update: 2025-06-15 15:47 IST

PC | PTI 

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯ ಮೂರು ದಿನಗಳ ವಿದೇಶಿ ಪ್ರವಾಸದ ಬಗ್ಗೆ ರವಿವಾರ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಇಂತಹ ಭೇಟಿಗಳಿಗೆ ಚೈತನ್ಯ, ರೋಮಾಂಚನ ಹಾಗೂ ಉತ್ಸಾಹದಂಥ ಮೂರು ಚೈತನ್ಯಗಳನ್ನು ಹೊಂದಿರುವ ಪ್ರಧಾನಿಗೆ, ನಿರಂತರವಾಗಿ ನೋವು ಅನುಭವಿಸುತ್ತಿರುವ ಮಣಿಪುರದ ಜನತೆಯನ್ನು ಭೇಟಿಯಾಗಿ, ಅವರಿಗೆ ಸಹಾನುಭೂತಿ ತೋರುವ ನಾಲ್ಕನೆಯ ಚೈತನ್ಯವಿಲ್ಲವೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ.

"ಮೇ 2023ರಿಂದ ಇಲ್ಲಿಯವರೆಗೆ ಇದು ಪ್ರಧಾನಿ ನರೇಂದ್ರ ಮೋದಿಯ 35ನೇ ವಿದೇಶಿ ಪ್ರವಾಸವಾಗಿದ್ದು, ಮಣಿಪುರವನ್ನು ಇಂತಹ ತುಚ್ಛ ರೀತಿಯಲ್ಲಿ ನಡೆಸಿಕೊಳ್ಳುವುದು ಪ್ರಧಾನಿಯೊಬ್ಬರ ರೋಗಿಷ್ಠ ಮನಸ್ಥಿತಿಯಾಗಿದೆ" ಎಂದೂ ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, "ಇಂದು ಬೆಳಗ್ಗೆ ಪ್ರಧಾನಿಗಳು ಸೈಪ್ರಸ್, ಕೆನಡಾ ಹಾಗೂ ಕ್ರೊಯೇಷಿಯಾಗೆ ತೆರಳಲಿದ್ದಾರೆ. ಅವರು ಭಾರತ ಮತ್ತು ಕೆನಡಾ ನಡುವಿನ ಸಂಬಂಧವನ್ನು (a+b)^2 ಸೂತ್ರಕ್ಕೆ ಈ ಹಿಂದೆ ಹೋಲಿಸುವ ಮೂಲಕ, ತಮ್ಮ ಬೀಜಗಣಿತದ ಜ್ಞಾನವನ್ನು ಪ್ರದರ್ಶಿಸಿದ್ದ ಕಾಲವೂ ಇತ್ತು. ಆದರೆ, ಇದಾದ ನಂತರ ವಿಷಯಗಳು ತೀರಾ ಭಯಾನಕ ಸ್ವರೂಪಕ್ಕೆ ತಿರುಗಿದವು" ಎಂದೂ ಛೇಡಿಸಿದ್ದಾರೆ.

"ಕೆನಡಾ ದೇಶ ಭಾರತಕ್ಕೆ ಆಮಂತ್ರಣ ನೀಡಲು ಹಿಂದಡಿ ಇಡುತ್ತಿರುವಂತೆ ಕಂಡಾಗ, ಮೋದಿಯ ಭಜನೆಕಾರರು, ಒಂದೊಮ್ಮೆ ಅವರಿಗೆ ಆಮಂತ್ರಣ ದೊರೆತರೂ ಕೆನಡಾಗೆ ತೆರಳುವುದಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಆದರೆ, ಎಂದಿನಂತೆ ಅವರು ಮತ್ತೊಮ್ಮೆ ಬೆತ್ತಲಾಗಿದ್ದಾರೆ" ಎಂದು ಅವರು ಕಟಕಿಯಾಡಿದ್ದಾರೆ.

ಈ ನಡುವೆ, ರವಿವಾರ ಮೂರು ದೇಶಗಳ ಪ್ರವಾಸವನ್ನು ಪ್ರಾರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಮೊದಲಿಗೆ ಕೆನಡಾದಲ್ಲಿ ಆಯೋಜನೆಗೊಂಡಿರುವ ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಸೈಪ್ರಸ್ ಹಾಗೂ ಕ್ರೊಯೇಷಿಯಾಗೆ ಭೇಟಿ ನೀಡಲಿರುವ ಅವರು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರ ಬಲವರ್ಧನೆಯ ಕುರಿತು ಎರಡೂ ದೇಶಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News