ಕಪ್'ಸ್ ಕೆಫೆ ಮೇಲೆ ಗುಂಡಿನ ದಾಳಿ: ನಾವು ಈ ದಾಳಿಯಿಂದ ಆಘಾತಗೊಂಡಿದ್ದೇವೆ, ಆದರೆ, ಎದೆಗುಂದುವುದಿಲ್ಲ: ಕಪಿಲ್ ಶರ್ಮರ ಕೆಫೆಯ ಘೋಷಣೆ
ಕಪಿಲ್ ಶರ್ಮ | Credit: X/AMohdWaseemINC and X/@KapilSharmaK9
ಸರ್ರೆ (ಕೆನಡಾ): ಇತ್ತೀಚೆಗಷ್ಟೇ ಕೆನಡಾದ ಸರ್ರೆಯಲ್ಲಿ ನೂತನವಾಗಿ ಪ್ರಾರಂಭಗೊಂಡಿದ್ದ ಖ್ಯಾತ ಕಾಮೆಡಿಯನ್ ಕಪಿಲ್ ಶರ್ಮರ 'ಕಪ್"ಸ್ ಕೆಫ' ಮೇಲೆ ನಡೆದ ಗುಂಡಿನ ದಾಳಿಯ ಆಘಾತದಿಂದ ನಾವು ಚೇತರಿಸಿಕೊಳ್ಳುತ್ತಿದ್ದು, ಆದರೆ, ನಾವು ಎದೆಗುಂದುವುದಿಲ್ಲ ಎಂದು ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಕಪಿಲ್ ಶರ್ಮರ ರೆಸ್ಟೋರೆಂಟ್ ಘೋಷಿಸಿದೆ. ನಾವು ಹಿಂಸೆಯ ವಿರುದ್ಧ ದೃಢವಾಗಿ ನಿಲ್ಲಲಿದ್ದೇವೆ ಎಂದೂ ಅದು ತನ್ನ ಪ್ರಕಟನೆಯಲ್ಲಿ ಒತ್ತಿ ಹೇಳಿದೆ.
ಕಪಿಲ್ ಶರ್ಮರ ಕಫೆ ಶುಕ್ರವಾರ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಪ್ರಕಟನೆ ಬಿಡುಗಡೆ ಮಾಡಿದೆ.
"ನಾವು ಸ್ವಾದಿಷ್ಟ ಕಾಫಿ ಹಾಗೂ ಸ್ನೇಹಮಯ ಸಂವಾದದ ಮೂಲಕ ಬೆಚ್ಚನೆಯ ಅನುಭವದೊಂದಿಗೆ ಸಮುದಾಯ ಹಾಗೂ ಸಂತಸದ ವಾತಾವರಣವನ್ನು ಒಟ್ಟಾಗಿ ತರಲು ಬಯಸಿದ್ದೆವು. ಹಿಂಸೆಯು ಈ ಕನಸನ್ನು ಛೇದಿಸಿರುವುದರಿಂದ ನಮಗೆ ಹೃದಯ ಒಡೆದಂತಾಗಿದೆ. ನಾವು ಈ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದೇವೆಯಾದರೂ, ನಾವು ಎದೆಗುಂದುವುದಿಲ್ಲ" ಎಂದು ತನ್ನ ಪ್ರಕಟನೆಯಲ್ಲಿ ರೆಸ್ಟೋರೆಂಟ್ ಪುನರುಚ್ಚರಿಸಿದೆ.
"ನಿಮ್ಮ ಬೆಂಬಲಕ್ಕೆ ಧನ್ಯವಾದಗಳು. ನಿಮ್ಮ ಕಾರುಣ್ಯದ ಮಾತುಗಳು, ಪ್ರಾರ್ಥನೆಗಳು ಹಾಗೂ ನೆನಪುಗಳು ನೀವು ತಿಳಿದಿರುವುದಕ್ಕಿಂತ ಹೆಚ್ಚು ಅರ್ಥ ಹೊಂದಿವೆ" ಎಂದೂ ಅದು ಧನ್ಯವಾದ ಸಲ್ಲಿಸಿದೆ.
ಕಪಿಲ್ ಶರ್ಮರ ಈ ಕೆಫೆ ಜುಲೈ 4ರಂದು ಕೆನಡಾದಲ್ಲಿನ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಪ್ರಾರಂಭಗೊಂಡಿತ್ತು. ಆದರೆ, ತಮ್ಮ ರೆಸ್ಟೋರೆಂಟ್ ಮೇಲೆ ನಡೆದ ಗುಂಡಿನ ದಾಳಿಯ ಕುರಿತು ಕಪಿಲ್ ಶರ್ಮ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Credit: Insta/@thekapscafe_