ಪುಣೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಜಂಟಿ ಪ್ರಣಾಳಿಕೆ ಬಿಡುಗಡೆ ಮಾಡಿದ NCP ಬಣಗಳು
ಅಜಿತ್ ಪವಾರ್ ರೊಂದಿಗೆ ವೇದಿಕೆ ಹಂಚಿಕೊಂಡ ಸುಪ್ರಿಯಾ ಸುಳೆ
ಸುಪ್ರಿಯಾ ಸುಳೆ , ಅಜಿತ್ ಪವಾರ್ | Photo Credit : PTI
ಪುಣೆ: ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಹಾಗೂ ಅವರ ಮಾವ ಶರದ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷಗಳು ಮುಂಬರುವ ಪುಣೆ ನಗರ ಪಾಲಿಕೆ ಚುನಾವಣೆಗೆ ಶನಿವಾರ ಜಂಟಿ ಪ್ರಣಾಳಿಕೆ ಬಿಡುಗಡೆ ಮಾಡಿವೆ.
2023ರ ಎನ್ಸಿಪಿ ಇಬ್ಭಾಗದ ಕಹಿ ನೆನಪಿನ ನಂತರ, ಇದೇ ಪ್ರಥಮ ಬಾರಿಗೆ ಅಜಿತ್ ಪವಾರ್ ಹಾಗೂ ಅವರ ಸೋದರ ಸಂಬಂಧಿ ಸುಪ್ರಿಯಾ ಸುಳೆ ಜಂಟಿ ಪತ್ರಿಕಾಗೋಷ್ಠಿಯ ವೇದಿಕೆ ಹಂಚಿಕೊಂಡರು. ಆ ಮೂಲಕ, ಎರಡೂ ಬಣಗಳು ಹತ್ತಿರವಾಗುತ್ತಿರುವ ಸುಳಿವನ್ನು ನೀಡಿದರು.
ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಅಂಗಪಕ್ಷ ಹಾಗೂ ಶರದ್ ಪವಾರ್ ನೇತೃತ್ವದ ಎನ್ಸಿಪಿ ಮಹಾವಿಕಾಸ್ ಅಘಾಡಿಯ ಅಂಗಪಕ್ಷವಾಗಿದ್ದರೂ, ಜನವರಿ 15ರಂದು ಪುಣೆ ಹಾಗೂ ಪಿಂಪ್ರಿ ಚಿಂಚ್ವಾಡ ನಗರ ಪಾಲಿಕೆಗಳಿಗೆ ನಡೆಯುವ ಚುನಾವಣೆಯಲ್ಲಿ ಕೈಜೋಡಿಸಿವೆ.
ಇಲ್ಲಿಯವರೆಗೆ ಚುನಾವಣಾ ಪ್ರಚಾರದಿಂದ ಬಹುದೂರ ಉಳಿದಿದ್ದ ಸುಪ್ರಿಯಾ ಸುಳೆ ಹಾಗೂ ಶರದ್ ಪವಾರ್ ನೇತೃತ್ವದ ಎನ್ಸಿಪಿ ನಾಯಕರು, ಇಂದು ನಡೆದ ಪ್ರಣಾಳಿಕೆ ಬಿಡುಗಡೆಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿರುವ ಮೂಲಕ ಗಮನ ಸೆಳೆದರು.