ಪಂಜಾಬ್ | ʼಆಪರೇಷನ್ ಸಿಂಧೂರ್ʼ ವೇಳೆ ಭಾರತೀಯ ಯೋಧರಿಗೆ ʼಪುಟಾಣಿ ಸೈನಿಕʼನ ಸೇವೆ!
PC : indiatoday.in
ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಭಾರಿ ಸೇನಾ ಜಮಾವಣೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಅಂತಾರಾಷ್ಟ್ರೀಯ ಗಡಿ ಬಳಿಯಿರುವ ಧೂಳುಮಿಶ್ರಿತ ಹಾಗೂ ಶಾಖದಲ್ಲಿ ಅದ್ದಿ ತೆಗೆದಂತಿರುವ ಪಂಜಾಬ್ ನ ತಾರಾವಾಲಿ ಗ್ರಾಮದ ನಿವಾಸಿಗಳು ಸಾಕ್ಷಿಯಾಗಿದ್ದರು. ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯಲ್ಲೂ ಯಾವುದೇ ಅಳುಕಿಲ್ಲದೆ ಭಾರತೀಯ ಯೋಧರಿಗೆ ಹಾಲು, ಲಸ್ಸಿ, ಐಸ್ ಕ್ರೀಂ ಅನ್ನು ಪೂರೈಸಿದ್ದ 10 ವರ್ಷದ ಬಾಲಕ ಶ್ರವಣ್ ಸಿಂಗ್ ಸದ್ಯ ಸುದ್ದಿಯ ಕೇಂದ್ರ ಬಿಂದುವಾಗಿದ್ದಾನೆ. ಆತ ಫಿರೋಝ್ ಪುರ್ ಜಿಲ್ಲೆಯ ತನ್ನ ಗ್ರಾಮದಲ್ಲಿ ಯುದ್ಧದಂತಹ ಸ್ಥಿತಿಗೆ ಸಾಕ್ಷಿಯಾದರೂ, ಅದ್ಯಾವುದರಿಂದ ಆತ ಎದೆಗುಂದಿರಲಿಲ್ಲ. ಯಾವುದೇ ಸಮವಸ್ತ್ರ, ಆಯುಧ ಇಲ್ಲದಿದ್ದರೂ, ಆತನ ಧೈರ್ಯಕ್ಕೆ ಯಾವುದೇ ಸಾಟಿ ಇರಲಿಲ್ಲ.
ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಮೇ 10ರಂದು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿತ್ತು. ಇದಾದ ಬಳಿಕ, ಭಾರತ ಮತ್ತು ಪಾಕಿಸ್ತಾನ ನಡುವಿನ ಅಂತಾರಾಷ್ಟ್ರೀಯ ಗಡಿಗುಂಟ ನಿರ್ಮಾಣವಾಗಿದ್ದ ಪ್ರಕ್ಷುಬ್ಧ ಪರಿಸ್ಥಿತಿಯನ್ನೂ ಲೆಕ್ಕಿಸದೆ, ತಮ್ಮ ಹೊಲದಲ್ಲಿ ಬಿಡಾರ ಹೂಡಿದ್ದ ಭಾರತೀಯ ಯೋಧರಿಗೆ ತಾರಾವಲಿ ಗ್ರಾಮದ ಸ್ಥಳೀಯ ರೈತ ಸೋನಾ ಸಿಂಗ್ ಅವರ ಪುತ್ರ ಶ್ರವಣ್ ಸಿಂಗ್, ನೀರು, ಹಾಲು, ಲಸ್ಸಿ ಹಾಗೂ ಐಸ್ ಕ್ರೀಂ ಅನ್ನೂ ಪೂರೈಸಿದ್ದ. ಅಸಹನೀಯ ಸೆಖೆ ಹಾಗೂ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸನ್ನಿವೇಶ ಸೃಷ್ಟಿಯಾಗಿದ್ದುದರಿಂದ ಹಲವರು ಭೀತಿಗೊಳಗಾಗಿದ್ದ ಹೊರತಾಗಿಯೂ, ಅದ್ಯಾವುದನ್ನೂ ಲೆಕ್ಕಿಸದೆ, ಶ್ರವಣ್ ಸಿಂಗ್ ದಿನ ನಿತ್ಯ ಸೇನಾಪಡೆಗಳ ಬಳಿಗೆ ತೆರಳಿ, ನೀವೆಂದಿಗೂ ಏಕಾಂಗಿಗಳಲ್ಲ ಎಂದು ಅವರಿಗೆ ನೆನಪು ಮಾಡಿಕೊಟ್ಟಿದ್ದ.
ಶ್ರವಣ್ ಸಿಂಗ್ ನ ಈ ಅಪ್ರತಿಮ ಧೈರ್ಯವನ್ನು ಪ್ರಶಂಸಿಸಿ, ಏಳನೆಯ ಇನ್ ಫ್ಯಾಂಟ್ರಿ ವಿಭಾಗದ ಪ್ರಧಾನ ಕಮಾಂಡಿಂಗ್ ಅಧಿಕಾರಿಯಾದ ಮೇಜರ್ ಜನರಲ್ ರಂಜಿತ್ ಸಿಂಗ್ ಮನ್ರಾಲ್ ಅವರು ಆತನಿಗೆ ಸ್ಮರಣಿಕೆ, ವಿಶೇಷ ಭೋಜನ ಹಾಗೂ ಆತನ ಅಚ್ಚುಮೆಚ್ಚಿನ ಐಸ್ ಕ್ರೀಂ ಅನ್ನು ಉಡುಗೊರೆ ನೀಡುವ ಮೂಲಕ, ಸಮಾರಂಭವೊಂದರಲ್ಲಿ ಆತನನ್ನು ಸನ್ಮಾನಿಸಿದರು.
ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಶ್ರವಣ್ ಸಿಂಗ್, “ನಾನು ಭಯಗೊಂಡಿರಲಿಲ್ಲ. ನಾನು ಮುಂದೆ ಬೆಳೆದ ನಂತರ, ಸೈನಿಕನಾಗಲು ಬಯಸುತ್ತೇನೆ. ನಾನು ಸೈನಿಕರಿಗೆ ನೀರು, ಲಸ್ಸಿ ಹಾಗೂ ಐಸ್ ಕ್ರೀಂ ಅನ್ನು ತಂದು ಕೊಡುತ್ತಿದ್ದೆ. ಅವರು ನನ್ನನ್ನು ತುಂಬಾ ಇಷ್ಟಪಡುತ್ತಿದ್ದರು” ಎಂದು ಅಪಾರ ಆತ್ಮವಿಶ್ವಾನಸದೊಂದಿಗೆ ಹೇಳಿದ್ದಾನೆ.
ಆತನ ಈ ಧೈರ್ಯ ಯಾರ ಗಮನಕ್ಕೂ ಬಾರದಂತೇನೂ ಹೋಗಲಿಲ್ಲ. ಈ ಬಾಲಕನ ಸರಳ ಆದರೆ, ಅಗಾಧ ಸೇವೆಗೆ ಮಾರು ಹೋದ ಭಾರತೀಯ ಸೇನೆ, ಆತನನ್ನು ಸನ್ಮಾನಿಸಿದೆ. ಇದರಿಂದ ಹರ್ಷಗೊಂಡಿದ್ದ ಶ್ರವಣ್ ಸಿಂಗ್, “ಅವರು ನನಗೆ ಭೋಜನ ಮತ್ತು ಐಸ್ ಕ್ರೀಂ ನೀಡಿದರು. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ನಾನು ಸೈನಿಕನಾಗಿ, ದೇಶ ಸೇವೆ ಮಾಡಲು ಬಯಸುತ್ತೇನೆ” ಎಂದು ಹೇಳಿದ್ದಾನೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಅದ್ದೂರಿ ಸ್ಮರಣೆಯ ವೇಳೆ, ಇತಿಹಾಸವು ಭಾರಿ ಪ್ರಮಾಣದ ಸೇನಾ ಚಲನವಲನಗಳು, ಯುದ್ಧ ತಂತ್ರಗಳು ಹಾಗೂ ಹಿರಿಯ ಸೇನಾಧಿಕಾರಿಗಳನ್ನು ನೆನಪಿನಲ್ಲಿಟ್ಟುಕೊಳ್ಳಲಿದೆ. ಆದರೆ, ಈ ಕತೆಯ ಅಂಚಿನಲ್ಲಿ ತನ್ನ ದೇಶಕ್ಕೆ ಶಸ್ತ್ರಾಸ್ತ್ರಗಳ ಬದಲು ಎದೆಗುಂದದ ಸ್ಫೂರ್ತಿ ಹೊಂದಿರುವ ವಿಶಾಲ ಹೃದಯದೊಂದಿಗೆ ಸೇವೆ ಸಲ್ಲಿಸಿದ ಶ್ರವಣ್ ಸಿಂಗ್ ಎಂಬ ಈ ಪುಟ್ಟ ಬಾಲಕನ ಹೆಸರು ದೇಶಾದ್ಯಂತ ಮಾರ್ದನಿಸಲಿದೆ.
ಸೌಜನ್ಯ: indiatoday.in