×
Ad

ಹಣಕಾಸು ಅವ್ಯವಹಾರ ಮತ್ತು ಕಾರ್ಯಾಚರಣೆ ಲೋಪಗಳಿಂದ ರೈಲ್ವೆಗೆ 573 ಕೋಟಿ ರೂ.ನಷ್ಟ: ಸಿಎಜಿ

Update: 2025-07-22 18:19 IST

PC : Indian Railways

ಹೊಸದಿಲ್ಲಿ: ಹಣಕಾಸು ಅವ್ಯವಹಾರಗಳು ಮತ್ತು ಕಾರ್ಯಾಚರಣೆಗಳಲ್ಲಿ ಅದಕ್ಷತೆಯಿಂದಾಗಿ ಭಾರತೀಯ ರೈಲ್ವೆಯು 573 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ ಎಂದು ಲೋಕಸಭೆಯಲ್ಲಿ ಸೋಮವಾರ ಮಂಡಿಸಲಾದ ಮಹಾಲೇಖಪಾಲ (ಸಿಎಜಿ)ರ ವರದಿಯು ಬೆಟ್ಟು ಮಾಡಿದೆ. ವರದಿಯು ಚೇತರಿಕೆ ಪ್ರಕ್ರಿಯೆ, ಯೋಜನೆಗಳ ಅನುಷ್ಠಾನ ಮತ್ತು ಆಸ್ತಿ ನಿರ್ವಹಣೆಯಲ್ಲಿ ವ್ಯವಸ್ಥಿತ ದೌರ್ಬಲ್ಯವನ್ನು ಬಹಿರಂಗಗೊಳಿಸಿದೆ. ಇದಕ್ಕೂ ಮುನ್ನ ಎ.4ರಂದು ರಾಜ್ಯಸಭೆಯಲ್ಲಿ ಮಂಡಿಸಲಾದ ವರದಿಯು ವಿತ್ತವರ್ಷ 23ರವರೆಗೆ ನಡೆಸಲಾಗಿದ್ದ ಪರೀಕ್ಷಾ ಲೆಕ್ಕ ಪರಿಶೋಧನೆಯ ಆಧಾರದಲ್ಲಿ 25 ಸಂಬಂಧಿತ ಅವಲೋಕನಗಳನ್ನು ಮತ್ತು ಅನ್ವಯವಾಗುವಲ್ಲಿ ನಂತರದ ಅವಧಿಗಳ ನವೀಕರಣಗಳನ್ನು ಒಳಗೊಂಡಿತ್ತು.

ಭಾರತೀಯ ರೈಲ್ವೆಯು ಹೆಚ್ಚಿನ ದಕ್ಷತೆ,ಖಾಸಗಿ ಹೂಡಿಕೆ ಮತ್ತು ದೊಡ್ಡ ಪ್ರಮಾಣದಲ್ಲಿ ಮೂಲಸೌಕರ್ಯ ಆಧುನೀಕರಣಕ್ಕೆ ಒತ್ತು ನೀಡುತ್ತಿರುವ ಸಮಯದಲ್ಲಿಯೇ ಸಿಎಜಿ ವರದಿ ಹೊರಬಿದ್ದಿದೆ. ಸಿಎಜಿಯ ಅವಲೋಕನಗಳು ಆದಾಯ ನಿರ್ವಹಣೆ,ಒಪ್ಪಂದ ಜಾರಿ ಯೋಜನೆಯಲ್ಲಿನ ನಿರಂತರ ಸವಾಲುಗಳನ್ನು ಎತ್ತಿ ತೋರಿಸಿದ್ದು,ಇವು ರೈಲ್ವೆ ವಲಯದ ಸುಧಾರಣಾ ಮಹತಾಕಾಂಕ್ಷೆಗಳನ್ನು ದುರ್ಬಲಗೊಳಿಸಬಹುದು.

ವರದಿಯಲ್ಲಿ ಎತ್ತಿ ತೋರಿಸಿರುವಂತೆ ಉತ್ತರ ರೈಲ್ವೆಯು ಐದು ಸರಕಾರಿ ಅನುದಾನಿತ ಶಾಲೆಗಳಿಂದ ಭೂ ಮೌಲ್ಯದ ಶೇ.6ರಷ್ಟು ದರದಲ್ಲಿ ಪರವಾನಿಗೆ ಶುಲ್ಕವನ್ನು ವಸೂಲು ಮಾಡುವಂತೆ ರೈಲ್ವೆ ಮಂಡಳಿಯ ನಿರ್ದೇಶನಗಳನ್ನು ಕಡೆಗಣಿಸಿದ್ದು ಅತ್ಯಂತ ದುಬಾರಿ ಲೋಪವಾಗಿದ್ದು,ಇದೊಂದೇ ಬಾಬತ್ತಿನಲ್ಲಿ 148.61 ಕೋಟಿ ರೂ.ಗಳ ನಷ್ಟವುಂಟಾಗಿದೆ.

ಸಾಮೂಹಿಕ ರಾಯಲ್ಟಿ ಮೊತ್ತದ ಹೊರತಾಗಿಯೂ ಗಣಿಗಾರಿಕೆ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ಗುತ್ತಿಗೆದಾರರಿಂದ ಜಿಲ್ಲಾ ಖನಿಜ ಪ್ರತಿಷ್ಠಾನಕ್ಕೆ 55.51 ಕೋಟಿ ರೂ.ಗಳ ದೇಣಿಗೆಯನ್ನು ವಸೂಲಿ ಮಾಡುವಲ್ಲಿ ವೈಫಲ್ಯವು ಇನ್ನೊಂದು ಗಮನಾರ್ಹ ಲೋಪವಾಗಿದೆ.

ಇನ್ನೊಂದೆಡೆ ಪೂರ್ವ ಮಧ್ಯ ರೈಲ್ವೆಯ ಬಿನಾ ಸೈಡಿಂಗ್‌ನಲ್ಲಿ ರೈಲ್ವೆ ಇಂಜಿನ್‌ಗಳನ್ನು ಬಳಸಿ ಶಂಟಿಂಗ್ ಚಟುವಟಿಕೆಗಾಗಿ ಸೈಡಿಂಗ್ ಮಾಲಿಕರಿಂದ ಶಂಟಿಗ್ ಶುಲ್ಕಗಳನ್ನು ವಸೂಲು ಮಾಡುವಲ್ಲಿ ವೈಫಲ್ಯದಿಂದಾಗಿ 50.77 ಕೋಟಿಗಳ ಆದಾಯ ನಷ್ಟವುಂಟಾಗಿದೆ.

ದಕ್ಷಿಣ ರೈಲ್ವೆ,ದಕ್ಷಿಣ ಪೂರ್ವ ರೈಲ್ವೆ,ದಕ್ಷಿಣ ಪಶ್ಚಿಮ ರೈಲ್ವೆ,ಈಶಾನ್ಯ ಗಡಿನಾಡು ರೈಲ್ವೆ ಸೇರಿದಂತೆ ವಿವಿಧ ರೈಲ್ವೆ ವಲಯಗಳಲ್ಲಿಯೂ ಕಾರ್ಯಾಚರಣೆ ಲೋಪಗಳಿಂದ ನಷ್ಟ ಉಂಟಾಗಿರುವುದನ್ನೂ ವರದಿಯು ಬೆಟ್ಟು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News