×
Ad

ದೆಹಲಿಯಲ್ಲಿ ರಸ್ತೆ ಅಪಘಾತ: ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ ಮೃತ್ಯು

Update: 2025-09-15 07:47 IST

ನವಜೋತ್ ಸಿಂಗ್ PC: x.com/ndtv

ಹೊಸದಿಲ್ಲಿ: ಬಿಎಂಡಬ್ಲ್ಯೂ ಕಾರು ಬೈಕಿಗೆ ಡಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮೃತಪಟ್ಟು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ದೆಹಲಿ ಕಂಟೋನ್ಮೆಂಟ್ ಮೆಟ್ರೊ ಸ್ಟೇಷನ್ ಬಳಿ ವರ್ತುಲ ರಸ್ತೆಯಲ್ಲಿ ನಡೆದಿದೆ.

ಮೃತ ನವಜೋತ್ ಸಿಂಗ್ (52) ಅವರು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಉಪ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬಂಗ್ಲಾಸಾಹಿಬ್ ಗುರುದ್ವಾರದಿಂದ ಮನೆಗೆ ಬರುತ್ತಿದ್ದ ವೇಳೆ ಬೈಕಿಗೆ ಕಾರು ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ನವಜೋತ್ ಸಿಂಗ್ ಅವರ ಪತ್ನಿ ಸಂದೀಪ್ ಕೌರ್ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸನಿಹದಲ್ಲೇ ಇದ್ದ ಆಸ್ಪತ್ರೆಗೆ ಸೇರಿಸುವ ಬದಲು ಘಟನೆ ನಡೆದ ಸ್ಥಳದಿಂದ 17 ಕಿಲೋಮೀಟರ್ ದೂರ ಇದ್ದ ಜಿಬಿಟಿ ನಗರದ ನ್ಯೂಲೈಫ್ ಆಸ್ಪತ್ರೆಗೆ ತಂದೆ- ತಾಯಿಯನ್ನು ದಾಖಲಿಸಿದ ಬಗ್ಗೆ ಮಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಪಘಾತ ನಡೆಸಿದ ಕಾರಿನ ಚಾಲಕಿ ಪೋಷಕರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯ ಬಗ್ಗೆ ಆಸ್ಪತ್ರೆಯವರ ಬಳಿ ಯಾವುದೇ ಮಾಹಿತಿ ಇಲ್ಲ; ಮಹಿಳೆಯ ಚಲನ ವಲನಗಳನ್ನು ಆಸ್ಪತ್ರೆ ಮರೆ ಮಾಚುತ್ತಿದ್ದು, ನಕಲಿ ಮೆಡಿಕೊ ಲೀಗಲ್ ಪ್ರಮಾಣಪತ್ರ ಸಿದ್ಧಪಡಿಸಲು ನೆರವಾಗುತ್ತಿದೆ ಎಂದು ಅವರು ಆಪಾದಿಸಿದ್ದಾರೆ.

ಕಾರು ಚಲಾಯಿಸುತ್ತಿದ್ದ ಮಹಿಳೆಯನ್ನು ಗಗನ್‌ ಪ್ರೀತ್ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಪ್ರಯಾಣಿಕನ ಆಸನದಲ್ಲಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News