×
Ad

400 ಕೋಟಿ ರೂ. ದರೋಡೆ ಪ್ರಕರಣಕ್ಕೆ ತಿರುವು: ಆರೋಪವೇ ಸುಳ್ಳು ಎಂದ ಪೊಲೀಸರು!

Update: 2026-02-16 21:19 IST

ಸಾಂದರ್ಭಿಕ ಚಿತ್ರ | Photo Credit : AI 

ನಾಶಿಕ್: ಏಳು ಮಂದಿ ದುಷ್ಕರ್ಮಿಗಳು ತನ್ನನ್ನು ಅಪಹರಿಸಿ, ತನ್ನ ಮೇಲೆ ಹಲ್ಲೆ ನಡೆಸಿ, ನಗದನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ನಿಂದ 400 ಕೋಟಿ ರೂ. ಹಣವನ್ನು ದರೋಡೆ ಮಾಡಿದ್ದಾರೆ ಎಂದು ಟ್ರಕ್ ಚಾಲಕನೊಬ್ಬ ನೀಡಿದ್ದ ದೂರು ಸುಳ್ಳಾಗಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸೋಮವಾರ ಮಹಾರಾಷ್ಟ್ರದ ನಾಶಿಕ್ ಗ್ರಾಮಾಂತರ ಪೊಲೀಸರು ವಿಸ್ತೃತ ತನಿಖೆಯ ನಂತರ ಸ್ಪಷ್ಟಪಡಿಸಿದ್ದಾರೆ.

ಬಂಧಿತರಾಗಿದ್ದ ಎಲ್ಲ ಏಳು ಮಂದಿ ಆರೋಪಿಗಳನ್ನು ಇಗಟ್ಪುರಿ ನ್ಯಾಯಾಲಯ ಬಿಡುಗಡೆಗೊಳಿಸಿದ್ದು, ಸುಳ್ಳು ದೂರು ನೀಡಿದ ಆರೋಪದ ಮೇಲೆ ಟ್ರಕ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ.

ಅಕ್ಟೋಬರ್ 22ರಂದು ಸದ್ಯ ಚಲಾವಣೆಯಿಂದ ಹಿಂಪಡೆಯಲಾಗಿರುವ 2000 ರೂ. ಮುಖಬೆಲೆಯ ನೋಟುಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಅನ್ನು ದಾರಿ ಮಧ್ಯೆ ತಡೆಹಿಡಿದ ಏಳು ಮಂದಿ ದುಷ್ಕರ್ಮಿಗಳು, ನನ್ನನ್ನು ಅಪಹರಿಸಿ, ನನ್ನ ಮೇಲೆ ಹಲ್ಲೆ ನಡೆಸಿ, ಟ್ರಕ್ ನಲ್ಲಿದ್ದ 400 ಕೋಟಿ ರೂ. ಮೊತ್ತವನ್ನು ದರೋಡೆ ಮಾಡಿದ್ದಾರೆ ಎಂದು ಸಂದೀಪ್ ಪಾಟೀಲ್ ಎಂಬ ಟ್ರಕ್ ಚಾಲಕ ನೀಡಿದ್ದ ದೂರನ್ನು ಆಧರಿಸಿ ತನಿಖೆ ಕೈಗೊಳ್ಳಲಾಗಿತ್ತು ಎಂದು ಘೋಟಿ ಪೊಲೀಸರು ತಿಳಿಸಿದ್ದಾರೆ.

ನೆರೆಯ ರಾಜ್ಯವಾದ ಕರ್ನಾಟಕದ ಬೆಳಗಾವಿ ಜಿಲ್ಲೆಯ ಚೋರ್ಲಾ ಘಾಟ್ ನಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ್ದ ಏಳು ಮಂದಿ ದುಷ್ಕರ್ಮಿಗಳು, ಬಳಿಕ ಅಲ್ಲಿಂದ ಪರಾರಿಯಾಗಿದ್ದರು ಎಂದು ಸಂದೀಪ್ ಪಾಟೀಲ್ ದೂರು ನೀಡಿದ್ದ. ಇದರ ಬೆನ್ನಿಗೇ, ಕರ್ನಾಟಕ ರಾಜ್ಯ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಟ್ರಕ್ ನಲ್ಲಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹವಾಲಾ ಹಣವನ್ನು ಕೊಂಡೊಯ್ಯಲಾಗುತ್ತಿತ್ತು ಎಂದು ಸಂದೀಪ್ ಪಾಟೀಲ್ ದೂರು ನೀಡಿದ್ದ. ಅಲ್ಲದೆ, ಆತ ತಾನು ಅನುಭವಿಸಿದ ತೊಂದರೆಯನ್ನು ವಿವರಿಸಿ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದನ್ನು ಅಪ್ಲೋಡ್ ಕೂಡಾ ಮಾಡಿದ್ದ. ಈ ದೂರನ್ನು ಆಧರಿಸಿ ನಾವು ಏಳು ಮಂದಿಯನ್ನು ಬಂಧಿಸಿದ್ದೆವು. ಆದರೆ, ಸಂದೀಪ್ ಪಾಟೀಲ್ ಹೇಳಿದ ಕತೆ, ಮಾರ್ಗ, ಕರೆ ದಾಖಲೆಗಳು, ಸಮಯ ಎಲ್ಲದರಲ್ಲೂ ವ್ಯತ್ಯಯ ಕಂಡು ಬಂದಿತು” ಎಂದು ಅವರು ಹೇಳಿದ್ದಾರೆ.

ಘೋಟಿ ಪೊಲೀಸರು ಬಂಧಿಸಿದ್ದ ಎಲ್ಲ ಏಳು ಮಂದಿ ಆರೋಪಿಗಳನ್ನು ಇಗಟ್ಪುರಿ ನ್ಯಾಯಾಲಯ ಬಿಡುಗಡೆಗೊಳಿಸಿದ್ದು, ಸುಳ್ಳು ದೂರಿಗೆ ಸಂಬಂಧಿಸಿದಂತೆ ನಾಶಿಕ್ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News