×
Ad

ಉತ್ತರ ಪ್ರದೇಶ | ಬಾಲಕಿಯ ಅಪಹರಣ, ಅತ್ಯಾಚಾರ ಪ್ರಕರಣಕ್ಕೆ ತಿರುವು : ಸುಳ್ಳು ಹೇಳಿಕೆ ನೀಡಿರುವುದಾಗಿ ಹೇಳಿದ ಸಂತ್ರಸ್ತೆ

ಆರೋಪಿ ಯುವಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ನ್ಯಾಯಾಲಯ

Update: 2025-11-01 19:15 IST

ಸಾಂದರ್ಭಿಕ ಚಿತ್ರ | indianexpress

ಸಹರಾನ್‌ಪುರ : ಉತ್ತರ ಪ್ರದೇಶದ ಸಹರಾನ್‌ಪುರದ 22 ವರ್ಷದ ಯುವಕನೋರ್ವನಿಗೆ ಇನ್ನೊಂದು ಸಮುದಾಯದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದಲ್ಲಿ ಎರಡು ವಾರಗಳ ಹಿಂದೆ ಸ್ಥಳೀಯ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಪ್ರಕರಣ ಇದೀಗ ವಿಭಿನ್ನ ತಿರುವು ಪಡೆದುಕೊಂಡಿದೆ.

ಇತ್ತೀಚೆಗೆ 18 ವರ್ಷ ತುಂಬಿದ ಸಂತ್ರಸ್ತೆ, ನನ್ನ ತಂದೆ ನ್ಯಾಯಾಲಯದಲ್ಲಿ ಆರೋಪಿಯ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾರೆ. ನನ್ನ ಪೋಷಕರು ನನ್ನನ್ನು ದಾರಿ ತಪ್ಪಿಸಿದ್ದಾರೆ. ಆತನೊಂದಿಗೆ ವಾಸಿಸಲು ನಾನು ಬಯಸುತ್ತೇನೆ ಎಂದು ಹೇಳಿರುವುದಾಗಿ indianexpress ವರದಿ ಮಾಡಿದೆ.

ಗುರುವಾರ ಪೊಲೀಸರು ಈ ಕುರಿತು ಸಭೆ ಕರೆದಿದ್ದರು. ಸಭೆಯಲ್ಲಿ ಸಂತ್ರಸ್ತೆ, ಆಕೆಯ ಕುಟುಂಬ ಮತ್ತು ಅಪರಾಧಿಯ ಕುಟುಂಬವೂ ಭಾಗವಹಿಸಿತ್ತು."ಬಾಲಕಿ ಮನೆಯಲ್ಲಿ ತೊಂದರೆ ಸೃಷ್ಟಿಸುತ್ತಿದ್ದಾಳೆಂದು ಆಕೆಯನ್ನು ಮನೆಯಲ್ಲಿ ಇರಿಸಿಕೊಳ್ಳಲು ಕುಟುಂಬವು ನಿರಾಕರಿಸಿದೆ. ಅಪರಾಧಿಯ ಪೋಷಕರು ಕೂಡ ಆಕೆಯನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದರು. ಅವಳ ಕಾರಣದಿಂದ ನಮ್ಮ ಮಗ ಜೈಲಿಗೆ ಹೋಗಿದ್ದಾನೆ ಎಂದು ಹೇಳಿದರು. ಈ ಮಧ್ಯೆ ಬಾಲಕಿ ತನ್ನ ಮನೆಗೆ ತೆರಳಲು ನಿರಾಕರಿಸಿದ್ದಾರೆ" ಎಂದು ಸಹರಾನ್‌ಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದರಿಂದಾಗಿ ಬಾಲಕಿಯನ್ನು ಮೀರತ್‌ನಲ್ಲಿರುವ ಮಹಿಳಾ ಆಶ್ರಯ ತಾಣಕ್ಕೆ ಕಳುಹಿಸಲು ನಿರ್ಧರಿಸಲಾಯಿತು. ಬಾಲಕಿ ರಕ್ಷಣಾ ಕೇಂದ್ರಕ್ಕೆ ಹೋಗಲು ಒಪ್ಪಿಕೊಂಡಳು ಎಂದು ಅಧಿಕಾರಿ ಹೇಳಿದರು.

ಪೊಲೀಸರ ಪ್ರಕಾರ, ಸಭೆ ನಡೆಯುವ ಮೊದಲು, ಬಾಲಕಿ ಆರೋಪಿಯ ಮನೆಗೆ ಹೋಗಿ ಅವರೊಂದಿಗೆ ಇರುವುದಾಗಿ ಹೇಳಿದ್ದಳು. ವಿಡಿಯೋವೊಂದರಲ್ಲಿ, ಬಾಲಕಿ ತನ್ನ ಸಹೋದರ ಮತ್ತು ಮಾವನೊಂದಿಗೆ ಆರೋಪಿಯ ಮನೆಗೆ ಬಂದಿದ್ದಾಗಿ ಹೇಳಿದ್ದಾಳೆ. ನ್ಯಾಯಾಲಯದಲ್ಲಿ ಆರೋಪಿಯ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ತನ್ನ ತಂದೆ ಒತ್ತಾಯಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.

ಬಾಲಕಿ ಆರೋಪಿಯ ಮನೆಯಲ್ಲಿದ್ದಾಳೆ ಎಂದು ತಿಳಿದ ಇತರ ಸಂಬಂಧಿಕರು ಮತ್ತು ಹಿಂದೂ ಸಂಘಟನೆಯ ಸದಸ್ಯರು ಮನೆಯ ಹೊರಗೆ ಜಮಾಯಿಸಿ ಪೊಲೀಸರು ಬರುವವರೆಗೂ ಧರಣಿ ಕುಳಿತರು. ಆದರೆ ಬಾಲಕಿ ನಮ್ಮೊಂದಿಗೆ ಇರುವುದು ನಮಗೆ ಅವಶ್ಯಕತೆಯಿಲ್ಲ ಎಂದು ಯುವಕನ ಕುಟುಂಬವು ಹೇಳಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಈ ಪ್ರಕರಣವು 2022ರಲ್ಲಿ ನಡೆದಿದೆ. ಬಾಲಕಿ ನಾಪತ್ತೆಯಾದ ಬಳಿಕ ಆಕೆಯ ಪೋಷಕರು ನೆರೆಹೊರೆಯ ಯುವಕ ಆಕೆಯನ್ನು ಅಪಹರಿಸಿದ್ದಾನೆಂದು ಆರೋಪಿಸಿದರು. ಎಫ್ಐಆರ್ ದಾಖಲು ಬಳಿಕ ಪೊಲೀಸರು ತನಿಖೆ ನಡೆಸಿ ಬಾಲಕಿಯನ್ನು ಪತ್ತೆಹಚ್ಚಿದ್ದರು ಮತ್ತು ಆರೋಪಿಯನ್ನು ಬಂಧಿಸಿದ್ದರು.

ನಂತರ ಆರೋಪಿಗೆ ಜಾಮೀನು ನೀಡಲಾಯಿತು. ತರುವಾಯ, ಪೊಲೀಸರು ಅವನ ವಿರುದ್ಧ ಅತ್ಯಾಚಾರದ ಆರೋಪದಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದರು. ವಿಚಾರಣೆಯ ಸಮಯದಲ್ಲಿ ಬಾಲಕಿ ನ್ಯಾಯಾಲಯದ ಮುಂದೆ ಹೇಳಿಕೆಯನ್ನು ದಾಖಲಿಸಿದಳು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News