ಸೈಫ್ ಅಲಿ ಖಾನ್ ಗೆ ಇರಿತ: ಉತ್ತರ ಸಿಗದ ಐದು ಪ್ರಶ್ನೆಗಳು
PC: fb.com
ಮುಂಬೈ: ಖ್ಯಾತ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರನ್ನು ಗುರುವಾರ ಮುಂಜಾನೆ 2.30ರ ಸುಮಾರಿಗೆ ಬಾಂದ್ರಾದ ಗಗನಚುಂಬಿ ಕಟ್ಟಡದ ಅಪಾರ್ಟ್ ಮೆಂಟ್ ನಲ್ಲಿ ಇರಿಯಲಾಗಿದ್ದು, ಅವರ ಬೆನ್ನು ಹುರಿ ಪಕ್ಕದಲ್ಲೇ ಬ್ಲೇಡ್ ಇರುವಂತೆಯೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕತ್ತು ಸೇರಿದಂತೆ ವಿವಿಧೆಡೆ ಆರು ಇರಿತದ ಗಾಯಗಳಾಗಿದ್ದು, ಲೀಲಾವತಿ ಆಸ್ಪತ್ರೆಯಲ್ಲಿ ನಡೆಸಿದ ತುರ್ತು ಶಸ್ತ್ರಚಿಕಿತ್ಸೆ ಬಳಿಕ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಸೈಫ್ ಅವರ ಕಿರಿಯ ಮಗ ಜೆಹ್ ನ ಕೊಠಡಿಯ ಹೊರಗೆ ನಡೆದ ದಾಳಿಯ ಬಳಿಕ ಆಟೊ ರಿಕ್ಷಾದಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಸೈಫ್ ಅಲಿ ಖಾನ್, ಪತ್ನಿ ಕರೀನಾ ಕಪೂರ್ ಮತ್ತು ಇಬ್ಬರು ಮಕ್ಕಳಾದ ಜೆಹ್ ಹಾಗೂ ತೈಮೂರ್ ಹಾಗೂ ಐದು ಮಂದಿ ಮನೆಗೆಲಸದವರು ಘಟನೆ ಸಂದರ್ಭದಲ್ಲಿ 12ನೇ ಮಹಡಿಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ನಲ್ಲಿ ಇದ್ದರು. ದಾಳಿಕೋರ ಮೊದಲು ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಎಂದು ಜೆಹ್ ನ ದಾದಿ ಎಲಿಯಮ್ಮ ಫಿಲಿಪ್ ಹೇಳಿದ್ದಾಗಿ ಪೊಲೀಸರು ವಿವರಿಸಿದ್ದಾರೆ.
ದಾಳಿಕೋರ ಬಲವಂತವಾಗಿ ಮನೆಯನ್ನು ಪ್ರವೇಶಿಸಿಲ್ಲ ಅಥವಾ ಬಾಗಿಲು ಮುರಿದಿಲ್ಲ; ರಾತ್ರಿಯ ವೇಳೆ ದರೋಡೆ ಉದ್ದೇಶದಿಂದ ನುಸುಳಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ದಾಳಿಕೋರ ಮೆಟ್ಟಿಲುಗಳ ಮೂಲಕ ಇಳಿದು ತಪ್ಪಿಸಿಕೊಂಡಿದ್ದಾನೆ.
ಘಟನಾವಳಿಗಳನ್ನು ವಿಶ್ಲೇಷಿಸಿದಾಗ ದಾಳಿಕೋರ ಮಕ್ಕಳ ಕೊಠಡಿಗೆ ನುಸುಳಿದ್ದು ಹೇಗೆ? ಕಾವಲುಗಾರ ಆತನನ್ನು ಗುರುತಿಸಿದ್ದಾನೆಯೇ? ಇದರಲ್ಲಿ ಒಳಗಿನವರ ಕೈವಾಡ ಇದೆಯೇ? ಕಟ್ಟಡದ ವಿನ್ಯಾಸವನ್ನು ದಾಳಿಕೋರ ಚೆನ್ನಾಗಿ ತಿಳಿದುಕೊಂಡಿದ್ದನೇ? ಸಿಸಿಟಿವಿ ಕ್ಯಾಮೆರಾ ಕಣ್ಣಿನಿಂದ ಆತ ಹೇಗೆ ತಪ್ಪಿಸಿಕೊಂಡಿದ್ದಾನೆ ಎಂಬ ಪಂಚ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.