×
Ad

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ | ಸ್ವಯಂಘೋಷಿತ ದೇವಮಾನವ ಚೈತನ್ಯಾನಂದನ ಕೊಠಡಿಯಲ್ಲಿ ಸೆಕ್ಸ್ ಟಾಯ್, ಮೋದಿ, ಒಬಾಮಾ ಜೊತೆಗಿನ ನಕಲಿ ಫೋಟೊಗಳು ಪತ್ತೆ!

Update: 2025-10-02 21:43 IST

 ಚೈತನ್ಯಾನಂದ ಸರಸ್ವತಿ | Photo Credit: via ANI

ಹೊಸದಿಲ್ಲಿ,ಅ.2: ದಿಲ್ಲಿಯ ವಸಂತ ಕುಂಜ್‌ನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕನಿಷ್ಠ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಿ ಸ್ವಯಂಘೋಷಿತ ‘ದೇವಮಾನವ’ ಚೈತನ್ಯಾನಂದ ಸರಸ್ವತಿಯನ್ನು ಬುಧವಾರ ಮತ್ತೊಮ್ಮೆ ಕ್ಯಾಂಪಸ್‌ಗೆ ಕರೆದೊಯ್ದಿದ್ದ ದಿಲ್ಲಿ ಪೋಲಿಸರು ಆತನ ಕೋಣೆಯಿಂದ ಹಲವಾರು ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳಲ್ಲಿ ಸೆಕ್ಸ್ ಟಾಯ್, ಐದು ಅಶ್ಲೀಲ ಸಿಡಿಗಳು ಹಾಗೂ ಪ್ರಧಾನಿ ಮೋದಿ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಬ್ರಿಟನ್‌ನ ಓರ್ವ ನಾಯಕನ ಜೊತೆಗಿನ ಆತನ ಮೂರು ನಕಲಿ ಫೋಟೊಗಳು ಸೇರಿವೆ.

ಸುಮಾರು ಎರಡು ತಿಂಗಳುಗಳ ಕಾಲ ತಲೆಮರೆಸಿಕೊಂಡಿದ್ದ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನ ಮಾಜಿ ಮುಖ್ಯಸ್ಥ ಚೈತನ್ಯಾನಂದ(62)ನನ್ನು ಆಗ್ರಾದಲ್ಲಿ ಬಂಧಿಸಲಾಗಿತ್ತು.

ಚೈತನ್ಯಾನಂದ ತಲೆಮರೆಸಿಕೊಂಡಿದ್ದಾಗ ಉಳಿದುಕೊಂಡಿದ್ದ ಬಾಗೇಶ್ವರ, ಅಲ್ಮೋರಾ ಮತ್ತು ಇತರ ಸ್ಥಳಗಳಿಗೂ ಪೋಲಿಸ್ ತಂಡಗಳು ಭೇಟಿ ನೀಡಿವೆ.

ಚೈತನ್ಯಾನಂದನ ಫೋನ್‌ನಲ್ಲಿ ಆತ ಹಲವಾರು ಅಪರಿಚಿತ ಮಹಿಳೆಯರೊಂದಿಗೆ ನಡೆಸಿದ್ದ ಅಶ್ಲೀಲ ಚಾಟ್‌ಗಳನ್ನು ಪೋಲಿಸರು ಪತ್ತೆ ಹಚ್ಚಿದ್ದಾರೆ.

ಬಂಧನಕ್ಕೆ ಕೆಲವೇ ದಿನಗಳ ಮೊದಲು ಚಾಟ್‌ವೊಂದರಲ್ಲಿ ಚೈತನ್ಯಾನಂದ ಮಹಿಳೆಯೋರ್ವಳಿಗೆ ‘ದುಬೈನ ಓರ್ವ ಶೇಖ್ ಲೈಂಗಿಕ ಸಂಗಾತಿಯನ್ನು ಬಯಸಿದ್ದಾನೆ. ನಿನಗೆ ಯಾರಾದರೂ ಒಳ್ಳೆಯ ಸ್ನೇಹಿತೆ ಇದ್ದಾಳೆಯೇ?’ ಎಂದು ಕೇಳಿದ್ದ ಎನ್ನಲಾಗಿದೆ.

ಚೈತನ್ಯಾನಂದ ತನ್ನ ಬಲಿಪಶುಗಳನ್ನು ಗುರಿಯಾಗಿಸಿಕೊಂಡಿದ್ದ ತಾಣಗಳನ್ನು ಗುರುತಿಸಲು ಸೋಮವಾರ ಪೋಲಿಸರು ಆತನನ್ನು ಇನ್‌ಸ್ಟಿಟ್ಯೂಟ್‌ಗೆ ಕರೆದೊಯ್ದಿದ್ದರು. ಬುಧವಾರ ಮತ್ತೊಮ್ಮೆ ಆತನನ್ನು ಅಲ್ಲಿಗೆ ಕರೆದೊಯ್ದಿದ್ದ ಪೋಲಿಸರು ಸುಮಾರು ಒಂದೂವರೆ ಗಂಟೆಗಳ ಕಾಲ ಹೊಸದಾಗಿ ಶೋಧ ಕಾರ್ಯಾಚರಣೆಯನ್ನು ನಡೆಸಿದರು ಎಂದು ತನಿಖೆಯೊಂದಿಗೆ ಗುರುತಿಸಿಕೊಂಡಿರುವ ಹಿರಿಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಚೈತನ್ಯಾನಂದನ ಫೋನ್‌ನಿಂದ ಪೋಲಿಸರು ಪಡೆದುಕೊಂಡಿರುವ ಚಾಟ್‌ಗಳಲ್ಲಿ ಆತ ಮಹಿಳೆಯರನ್ನು ಹಲವಾರು ಬಾರಿ ‘ಬೇಬಿ ಡಾಲ್’,‘ಬೇಬಿ’ ಎಂದು ಸಂಬೋಧಿಸಿದ್ದಾನೆ.

ಬಲಿಪಶುಗಳಿಗೆ ಬೆದರಿಕೆಯೊಡ್ಡಿದ್ದ ಮತ್ತು ಚೈತನ್ಯಾನಂದನ ಅಶ್ಲೀಲ ಸಂದೇಶಗಳನ್ನು ತಮ್ಮ ಫೋನ್‌ಗಳಿಂದ ಅಳಿಸುವಂತೆ ಬಲವಂತಗೊಳಿಸಿದ್ದ ಮೂವರು ಮಹಿಳಾ ಸಹಾಯಕಿಯರು ಮತ್ತು ಸಂಸ್ಥೆಯ ವಾರ್ಡನ್‌ಗಳ ಜೊತೆಗೆ ಆತನ ಮುಖಾಮುಖಿಯನ್ನೂ ಪೋಲಿಸರು ಮಾಡಿಸಿದ್ದಾರೆ.

ಚೈತನ್ಯಾನಂದ ಸಂಸ್ಥೆಯ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಗಳ ಫೋಟೊಗಳನ್ನೂ ರಹಸ್ಯವಾಗಿ ಕ್ಲಿಕ್ಕಿಸಿದ್ದ ಎಂದು ಅಧಿಕಾರಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News