×
Ad

ಲೋಕಸಭೆಯಲ್ಲಿ ಕ್ರೀಡಾಡಳಿತ, ಮಾದಕ ದ್ರವ್ಯ ನಿಗ್ರಹ ಮಸೂದೆ ಅಂಗೀಕಾರ

Update: 2025-08-11 21:16 IST

ಮನ್‌ಸುಖ್ | PC : PTI 

ಹೊಸದಿಲ್ಲಿ, ಆ. 12: ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತಂತೆ ಪ್ರತಿಪಕ್ಷದ ಸದಸ್ಯರ ಪ್ರತಿಭಟನೆ ನಡುವೆ ಬಹು ನಿರೀಕ್ಷಿತ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯನ್ನು ಲೋಕಸಭೆಯಲ್ಲಿ ಸೋಮವಾರ ಅಂಗೀಕರಿಸಲಾಯಿತು.

ಪ್ರತಿಪಕ್ಷದ ಪ್ರತಿಭಟನೆ ಹಿನ್ನೆಲೆಯಲ್ಲಿ ಲೋಕಸಭೆ ಕಲಾಪವನ್ನು ಬೆಳಗ್ಗೆ ಮುಂದೂಡಲಾಗಿತ್ತು. ಅಪರಾಹ್ನ 2 ಗಂಟೆಗೆ ಸದನ ಮತ್ತೆ ಸೇರಿದಾಗ ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ (ತಿದ್ದುಪಡಿ) ಮಸೂದೆಯನ್ನು ಕೂಡ ಅಂಗೀಕರಿಸಲಾಯಿತು.

‘‘ಸ್ವಾತಂತ್ರ್ಯಾನಂತರ ಕ್ರೀಡೆಯಲ್ಲಿ ಇದು ಏಕೈಕ ಅತಿ ದೊಡ್ಡ ಸುಧಾರಣೆ. ಈ ಮಸೂದೆ ಕ್ರೀಡಾ ಒಕ್ಕೂಟಗಳಲ್ಲಿ ಹೊಣೆಗಾರಿಕೆ, ನ್ಯಾಯ ಹಾಗೂ ಉತ್ತಮ ಆಡಳಿತದ ಖಾತರಿ ನೀಡುತ್ತದೆ’’ ಎಂದು ಕೇಂದ್ರದ ಕ್ರೀಡಾ ಸಚಿವ ಮನ್‌ ಸುಖ್ ಮಾಂಡವೀಯ ತಿಳಿಸಿದ್ದಾರೆ.

‘‘ಇದು ಭಾರತದ ಕ್ರೀಡಾ ಕ್ಷೇತ್ರದಲ್ಲಿ ಭಾರೀ ಮಹತ್ವದ ಬೆಳವಣಿಗೆಯಾಗಲಿದೆ. ಇಂತಹ ಮಹತ್ವದ ಮಸೂದೆ ಹಾಗೂ ಸುಧಾರಣೆಗೆ ಪ್ರತಿಪಕ್ಷದ ಭಾಗವಹಿಸುವಿಕೆ ಇಲ್ಲದಿರುವುದು ದುರಾದೃಷ್ಟಕರ’’ಎಂದು ಅವರು ಹೇಳಿದ್ದಾರೆ.

ಮಸೂದೆಗಳನ್ನು ಪರಿಶೀಲಿಸಲು ಹಾಗೂ ಅಂಗೀಕರಿಸಲು ಮಂಡಿಸಿದ ಸಂದರ್ಭ ಸದನದಲ್ಲಿ ಪ್ರತಿಪಕ್ಷದ ಸದಸ್ಯರು ಇರಲಿಲ್ಲ. ಅವರಲ್ಲಿ ಹೆಚ್ಚಿನವರು ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರೋಧಿಸಿ ಹಾಗೂ ಮತದಾರರ ದತ್ತಾಂಶ ವಂಚನೆ ಆರೋಪಿಸಿ ಚುನಾವಣಾ ಆಯೋಗದ ಕೇಂದ್ರ ಕಚೇರಿಯತ್ತ ರ‍್ಯಾಲಿ ನಡೆಸುತ್ತಿದ್ದರು. ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ಆದರೆ, ಇಬ್ಬರು ಸಂಸದರು ಪರಿಶೀಲನಾ ಚರ್ಚೆಯಲ್ಲಿ ಭಾಗವಹಿಸಿ ಮಸೂದೆಯನ್ನು ಬೆಂಬಲಿಸಿ ಮಾತನಾಡಿದ ಬಳಿಕ, ಪ್ರತಿಪಕ್ಷದ ಸದಸ್ಯರು ಸದನಕ್ಕೆ ಹಿಂದಿರುಗಿದರು ಹಾಗೂ ಘೋಷಣೆಗಳನ್ನು ಕೂಗಲು ಆರಂಭಿಸಿದರು.

ಈ ಗದ್ದಲದ ನಡುವೆ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಅನಂತರ ಸದನವನ್ನು ಅಪರಾಹ್ನ 4 ಗಂಟೆ ವರೆಗೆ ಮುಂದೂಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News