×
Ad

ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳ ಎಫ್‌ಐಆರ್ ವಿವರ ಸಲ್ಲಿಸಲು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್

ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದ ನ್ಯಾಯಾಲಯ

Update: 2025-10-27 15:16 IST

ಸುಪ್ರೀಂಕೋರ್ಟ್ | PC : PTI

ಹೊಸದಿಲ್ಲಿ, ಅ. 27: ದೇಶಾದ್ಯಂತ ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿದೆ. ಇಂತಹ ಪ್ರಕರಣಗಳಲ್ಲಿ ದಾಖಲಾಗಿರುವ ಎಲ್ಲಾ ಎಫ್‌ಐಆರ್ ವಿವರಗಳನ್ನು ತಕ್ಷಣವೇ ಸಲ್ಲಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿಗೊಳಿಸಿದೆ.

ವೃದ್ಧೆಯೊಬ್ಬರು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚನೆಗೆ ಒಳಗಾದ ದೂರಿನ ಆಧಾರದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ನ್ಯಾ. ಸೂರ್ಯ ಕಾಂತ್ ಹಾಗೂ ನ್ಯಾ. ಜೋಯ್ಮಲ್ಯ ಬಾಗ್ಚಿ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಸೋಮವಾರ ಈ ನಿರ್ದೇಶನ ನೀಡಿತು.

“ಡಿಜಿಟಲ್ ಅರೆಸ್ಟ್ ವಂಚನೆಗಳು ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ನಿಂದ ಸಂಘಟಿತವಾಗಿ ನಡೆಯುತ್ತಿವೆ. ಈ ಕುರಿತು ಸಿಬಿಐ ತನಿಖೆಯ ಸಮಗ್ರ ಯೋಜನೆ ರೂಪಿಸುತ್ತಿದೆ,” ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠದ ಗಮನಕ್ಕೆ ತಂದರು.

“ಈ ಹಗರಣದ ವ್ಯಾಪ್ತಿ ಮತ್ತು ಆಳವನ್ನು ಗಮನಿಸಿದರೆ ತನಿಖೆ ನಡೆಯಬೇಕು. ಹೀಗಾಗಿ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಬೇಕು,” ಎಂದು ಆದೇಶಿಸಿದೆ.

ಕೋರ್ಟ್ ತನಿಖೆಯ ಪ್ರಗತಿಯನ್ನು ತಾನೇ ಮೇಲ್ವಿಚಾರಣೆ ಮಾಡುವುದಾಗಿ ಸ್ಪಷ್ಟಪಡಿಸಿದ್ದು, “ಸಿಬಿಐ ತನಿಖೆಯ ವರದಿಯನ್ನು ನಿಯಮಿತವಾಗಿ ಪರಿಶೀಲಿಸಲಾಗುವುದು ಮತ್ತು ಅವಶ್ಯಕತೆ ಇದ್ದಲ್ಲಿ ಸೂಕ್ತ ನಿರ್ದೇಶನಗಳನ್ನು ನೀಡಲಾಗುತ್ತದೆ,” ಎಂದು ತಿಳಿಸಿದೆ.

ತನಿಖೆಗೆ ಅಗತ್ಯವಾದ ತಾಂತ್ರಿಕ ಮೂಲಸೌಕರ್ಯ ಅಥವಾ ಹೊರಗಿನ ಸೈಬರ್ ತಜ್ಞರ ನೆರವು ಬೇಕಾದರೆ ತಕ್ಷಣವೇ ಕೋರ್ಟ್‌ಗೆ ಮಾಹಿತಿ ನೀಡುವಂತೆ ಪೀಠ ಸೂಚಿಸಿದೆ.

ಈ ನಡುವೆ ಹರ್ಯಾಣದ ದಂಪತಿಯನ್ನು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 1.05 ಕೋಟಿ ರೂಪಾಯಿ ವಂಚಿಸಿದ ಪ್ರಕರಣವನ್ನು ಪೀಠ ಗಂಭೀರವಾಗಿ ಪರಿಗಣಿಸಿದೆ. ವಂಚಕರು ನ್ಯಾಯಾಲಯ ಮತ್ತು ತನಿಖಾ ಸಂಸ್ಥೆಗಳ ನಕಲಿ ಆದೇಶ ಪತ್ರಗಳನ್ನು ತೋರಿಸಿ ಹಣ ಸುಲಿಗೆ ಮಾಡಿದ್ದರು.

ವಂಚನೆಗೆ ಒಳಗಾದ 73 ವರ್ಷದ ಮಹಿಳೆಯು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ಪತ್ರ ಬರೆದಿದ್ದು, ಅದರ ಆಧಾರದ ಮೇಲೆ ಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

“ಹಿರಿಯ ನಾಗರಿಕರು ಸೇರಿದಂತೆ ಅಮಾಯಕರನ್ನು ಬೆದರಿಸಲು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳನ್ನು ನಕಲಿ ಮಾಡುವುದು ನ್ಯಾಯಾಂಗದ ಘನತೆಯ ಮೇಲಿನ ನೇರ ದಾಳಿಯಾಗಿದೆ. ಇದು ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನರ ನಂಬಿಕೆಗೆ ಗಂಭೀರ ಧಕ್ಕೆ ಉಂಟುಮಾಡುತ್ತದೆ", ಎಂದು ಪೀಠವು ಕಳವಳ ವ್ಯಕ್ತಪಡಿಸುತ್ತಾ ಹೇಳಿದೆ.

ಈ ಹಿನ್ನೆಲೆಯಲ್ಲಿ ಅಟಾರ್ನಿ ಜನರಲ್ ಅವರ ಸಹಾಯವನ್ನು ಕೋರಿರುವ ಪೀಠ, ಹರ್ಯಾಣ  ಸರಕಾರ ಮತ್ತು ಅಂಬಾಲಾ ಸೈಬರ್ ಅಪರಾಧ ವಿಭಾಗಕ್ಕೆ ತನಿಖೆಯ ಪ್ರಗತಿ ವರದಿ ಸಲ್ಲಿಸಲು ನಿರ್ದೇಶನ ನೀಡಿದೆ.

ದೂರಿನ ಪ್ರಕಾರ, ವಂಚಕರು ಸೆಪ್ಟೆಂಬರ್ 3ರಿಂದ 16ರ ಅವಧಿಯಲ್ಲಿ ಸಿಬಿಐ ಮತ್ತು ಇಡಿ ಅಧಿಕಾರಿಗಳೆಂದು ಹೇಳಿ ವೀಡಿಯೊ ಹಾಗೂ ಆಡಿಯೊ ಕರೆಗಳ ಮೂಲಕ ನ್ಯಾಯಾಲಯದ ನಕಲಿ ದಾಖಲೆ ತೋರಿಸಿ ಹಿರಿಯ ದಂಪತಿಯನ್ನು ಬೆದರಿಸಿ ಹಣ ಕಸಿದುಕೊಂಡಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News