ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್
Photo: PTI
ಹೊಸದಿಲ್ಲಿ: ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟಿನ ಪಂಚ ಸದಸ್ಯರ ಪೀಠವು ಇಂದು ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದೆ. ಸಲಿಂಗಿ ಜೋಡಿಯ ವಿವಾಹದ ಹಕ್ಕನ್ನು ಕಾನೂನು ಮಾನ್ಯ ಮಾಡುವುದಿಲ್ಲ. ಸಲಿಂಗ ವಿವಾಹಗಳ ಕುರಿತಂತೆ ಕಾನೂನು ರಚಿಸುವುದು ಶಾಸಕಾಂಗಕ್ಕೆ ಬಿಟ್ಟ ವಿಚಾರ ಎಂದು ಹೇಳಿದ ಸುಪ್ರೀಂ ಕೋರ್ಟ್ ಅದೇ ಸಮಯ ಕ್ವೀರ್ ದಂಪತಿಗಳಿಗೆ ನೀಡಬಹುದಾದ ಹಕ್ಕುಗಳು ಮತ್ತು ಸವಲತ್ತುಗಳನ್ನು ಪರಿಶೀಲಿಸಲು ಸಮಿತಿ ರಚಿಸಲು ಕೇಂದ್ರಕ್ಕೆ ಸೂಚಿಸಿದೆ.
“ಕ್ವೀರ್ ದಂಪತಿಗಳ ಸಹಿತ ಅವಿವಾಹಿತ ದಂಪತಿಗಳು ಜಂಟಿಯಾಗಿ ಮಗುವನ್ನು ದತ್ತು ಪಡೆಯಬಹುದು,” ಎಂದು ಸಲಿಂಗ ವಿವಾಹದ ಕುರಿತಂತೆ ತೀರ್ಪು ನೀಡುವ ವೇಳೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರ ಚೂಡ್ ಹೇಳಿದ್ದಾರೆ.
ಸಾಮಾನ್ಯ ದಂಪತಿಗಳು ಮಾತ್ರ ಒಳ್ಳೆಯ ಹೆತ್ತವರಾಗಬಹುದು ಎಂಬ ಭಾವನೆಯು ಕ್ವೀರ್ ದಂಪತಿಗಳ ವಿರುದ್ಧ ತಾರತಮ್ಯವೆಸಗಿದಂತೆ ಎಂದೂ ಸಿಜೆಐ ಹೇಳಿದ್ದಾರೆ.
ಲೈಂಗಿಕ ಧೋರಣೆಯ ಆಧಾರದಲ್ಲಿ ಮದುವೆಯಾಗುವ ವ್ಯಕ್ತಿಯೊಬ್ಬನ ಹಕ್ಕನ್ನು ನಿರ್ಬಂಧಿಸಲಾಗದು ಎಂದು ಹೇಳಿದ ಸುಪ್ರೀಂ ಕೋರ್ಟ್, ಸಲಿಂಗಿ ದಂಪತಿಗಳು ರೇಷನ್ ಕಾರ್ಡ್, ಪಿಂಚಣಿ ಮತ್ತಿತರ ಸವಲತ್ತುಗಳನ್ನು ಪಡೆಯಲು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಸಮಿತಿ ರಚಿಸಬೇಕು ಎಂದು ಸೂಚಿಸಿದೆ.
ಸಲಿಂಗ ವಿವಾಹ ಕುರಿತ ತೀರ್ಪಿನ ಮುಖ್ಯಾಂಶಗಳು
► ತೃತೀಯ ಲಿಂಗಿ ವ್ಯಕ್ತಿ ಮಹಿಳೆಯನ್ನು ವಿವಾಹವಾಗಬಹುದು ಹಾಗೂ ತೃತೀಯ ಲಿಂಗಿ ಮಹಿಳೆಯು ಪುರುಷನನ್ನು ವಿವಾಹವಾಗಬಹುದು
► ವಿಶೇಷ ವಿವಾಹ ಕಾಯಿದೆಯು ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡುವುದಿಲ್ಲ ಎಂಬ ಕಾರಣಕ್ಕೆ ಅದನ್ನು ಅಸಂವಿಧಾನಿಕ ಎಂದು ಘೋಷಿಸಲು ಆಗದು.
► ಸಾಮಾನ್ಯ ದಂಪತಿಗಳು ಮಾತ್ರ ಒಳ್ಳೆಯ ಹೆತ್ತವರಾಗಬಹುದು ಎಂಬ ಊಹೆ ತಪ್ಪು ಎಂದು ಹೇಳಿದ ಸುಪ್ರೀಂ ಕೋರ್ಟ್ ಕ್ವೀರ್ ಮತ್ತು ಅವಿವಾಹಿತ ದಂಪತಿಗಳ ಮಕ್ಕಳ ದತ್ತು ಪಡೆಯುವಿಕೆ ತಡೆಯುವಿಕೆಗೆ ಸಂಬಂಧಿಸಿದ ಸಿಎಆರ್ಎ ನಿಬಂಧನೆಗಳನ್ನು ರದ್ದುಗೊಳಿಸಿದೆ.
► ಕ್ವೀರ್ ಸಮುದಾಯಕ್ಕೆ ಯಾವುದೇ ಸೇವೆಯನ್ನು ಅಥವಾ ಸವಲತ್ತನ್ನು ನಿರಾಕರಿಸುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ.
► ಲಿಂಗದ ಗುರುತಿನ ಬಗ್ಗೆ ವಿಚಾರಿಸಲೆಂದೇ ಠಾಣೆಗೆ ಬರ ಹೇಳಿ ಕ್ವೀರ್ ಸಮುದಾಯಕ್ಕೆ ಯಾವುದೇ ಕಿರುಕುಳ ನೀಡಬಾರದು, ತಮ್ಮ ಹೆತ್ತವರ ಕುಟುಂಬಕ್ಕೆ ಮರಳುವಂತೆ ಕ್ವೀರ್ ಸಮುದಾಯದವರಿಗೆ ಪೊಲೀಸರು ಬಲವಂತಪಡಿಸುವಂತಿಲ್ಲ.
► ಅವರಿಗೆ ಹಾರ್ಮೋನಲ್ ಥೆರಪಿಗೆ ಒಳಗಾಗುವಂತೆಯೂ ಬಲವಂತಪಡಿಸುವ ಹಾಗಿಲ್ಲ.
► ಸಾರ್ವಜನಿಕರಿಗೆ ಕ್ವೀರ್ ಸಮುದಾಯದ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು, ಈ ಸಮುದಾಯಕ್ಕಾಗಿ ಹಾಟ್ಲೈನ್ ರಚಿಸಬೇಕು, ಅವರಿಗಾಗಿ ಸುರಕ್ಷಿತ ತಾಣಗಳನ್ನು ನಿರ್ಮಿಸಬೇಕು, ತೃತೀಯ ಲಿಂಗಿ ಮಕ್ಕಳಿಗೆ ಶಸ್ತ್ರಕ್ರಿಯೆಗೆ ಬಲವಂತಪಡಿಸಬಾರದು.