×
Ad

ಹದಿಹರೆಯದ ಯುವತಿ ಅಪಹರಣ, ಸಾಮೂಹಿಕ ಅತ್ಯಾಚಾರ; ಮೂವರ ಬಂಧನ

Update: 2024-07-10 08:11 IST

ಆಗ್ರಾ: ಹದಿನಾರು ವರ್ಷ ವಯಸ್ಸಿನ ಯುವತಿಯನ್ನು ಅಪಹರಿಸಿ, ಕೂಡಿಹಾಕಿದ ಅಲೀಗಢದ ಮೂವರು ಬಾಲಕರು ಆಕೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು 10 ದಿನಗಳ ಬಳಿಕ ಯುವತಿಯನ್ನು ರಕ್ಷಿಸಿ ಅಪ್ರಾಪ್ತ ವಯಸ್ಸಿನ ಯುವಕ ಹಾಗೂ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಯುವತಿಯನ್ನು ಅಕ್ರಮವಾಗಿ ಕೂಡಿಹಾಕಿ, ಆಕೆಗೆ ನಿದ್ದೆಗುಳಿಗೆಗಳನ್ನು ಬಲವಂತವಾಗಿ ನೀಡಿ, ಪ್ರಜ್ಞಾಹೀನವಾಗಿಸಿ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈ ಅವಧಿಯಲ್ಲಿ ಯುವತಿಯ ಕುಟುಂಬದವರಿಗೆ ಕರೆ ಮಾಡಿ, ಆಕೆಯನ್ನು ಬಿಡುಗಡೆ ಮಾಡಬೇಕಾದರೆ ದೊಡ್ಡಮೊತ್ತದ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು.

ಈ ಮಧ್ಯೆ 24 ಮಂದಿ ಪೊಲೀಸರ ತಂಡ ಆರೋಪಿಗಳ ಮೊಬೈಲ್ ಲೊಕೇಶನ್ ಪತ್ತೆ ಮಾಡಿ ಸೋಮವಾರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಸಂತ್ರಸ್ತೆ ಯುವತಿಯ ತಂದೆ ಖ್ವಾರ್ಸಿ ಠಾಣಾ ವ್ಯಾಪ್ತಿಯ ಬಡಾವಣೆ ನಿವಾಸಿಯಾಗಿದ್ದು, ಈ ಸಂಬಂಧ ಜೂನ್ 29ರಂದು, ತಮ್ಮ ಅಪ್ರಾಪ್ತ ವಯಸ್ಸಿನ ಪುತ್ರಿಯ ಅಪಹರಣವಾದ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಎಸ್ಪಿ ಅಮೃತ್ ಜೈನ್ ಮೇಲ್ವಿಚಾರಣೆಯಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ನ್ಯಾಯಾಲಯ ಆದೇಶದ ಮೇರೆಗೆ ಎಲ್ಲ ವಯಸ್ಕ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ. ಅಪ್ರಾಪ್ತ ವಯಸ್ಸಿನ ಯುವಕನನ್ನು ಆಗ್ರಾದ ಬಾಲಗೃಹಕ್ಕೆ ಕಳುಹಿಸಲಾಗಿದೆ. ಆರೋಪಿಗಳು ಒಂದು ಕ್ರಿಮಿನಲ್ ಗ್ಯಾಂಗ್ ನ ಭಾಗವಾಗಿದ್ದು, ತಲೆ ಮರೆಸಿಕೊಂಡಿರುವ ಮತ್ತೊಬ್ಬನಿಗೆ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News