ಅಹ್ಮದಾಬಾದ್ ವಿಮಾನ ಪತನ | ಏರ್ ಇಂಡಿಯಾ, ಬೋಯಿಂಗ್ ವಿರುದ್ಧ ಬ್ರಿಟನ್ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡುವ ಸಾಧ್ಯತೆ
Photo: PTI
ಹೊಸದಿಲ್ಲಿ : ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಬ್ರಿಟನ್ ಪ್ರಜೆಗಳ ಕುಟುಂಬಸ್ಥರು ಏರ್ ಇಂಡಿಯಾ, ಬೋಯಿಂಗ್ ವಿರುದ್ಧ ಬ್ರಿಟನ್‌ನ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
242 ಪ್ರಯಾಣಿಕರು ಮತ್ತು ಸಿಬ್ಬಂದಿಗಳಿದ್ದ ಏರ್ ಇಂಡಿಯಾ ವಿಮಾನ ಅಹ್ಮದಾಬಾದ್‌ನಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಪತನವಾಗಿತ್ತು. ಮೃತರಲ್ಲಿ181 ಮಂದಿ ಭಾರತೀಯ ಪ್ರಜೆಗಳಾಗಿದ್ದರೆ, 52 ಮಂದಿ ಬ್ರಿಟನ್ ಪ್ರಜೆಗಳಿದ್ದರು.
ಏರ್ ಇಂಡಿಯಾ ಮತ್ತು ಬೋಯಿಂಗ್ ವಿರುದ್ಧ ಸಂಭಾವ್ಯ ಮೊಕದ್ದಮೆಗಳನ್ನು ಹೂಡಲು ಸಂತ್ರಸ್ತರ ಕುಟುಂಬಗಳು ಲಂಡನ್ ಮೂಲದ ಕಾನೂನು ಸಂಸ್ಥೆ ʼಕೀಸ್ಟೋನ್ ಲಾʼ ಜೊತೆ ಸಮಾಲೋಚಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ಪರಿಹಾರವನ್ನು ಕೋರುವ ಬಗ್ಗೆ ಮೊಕದ್ದಮೆ ಹೂಡುವ ಸಾಧ್ಯತೆಯಿದೆ.
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ʼಕೀಸ್ಟೋನ್ ಲಾʼ ಕೂಡ ಒಪ್ಪಿಕೊಂಡಿದೆ.
ಏರ್ ಇಂಡಿಯಾ ಸಂಸ್ಥೆಯ ಮಾಲಕತ್ವ ಹೊಂದಿರುವ ಟಾಟಾ ಗ್ರೂಪ್ ಈ ಹಿಂದೆ 1 ಕೋಟಿ ರೂ. ಪರಿಹಾರವನ್ನು ಘೋಷಿಸಿತ್ತು. ನಂತರ ತಕ್ಷಣದ ಆರ್ಥಿಕ ಅಗತ್ಯಗಳನ್ನು ಪೂರೈಸಲು ಕುಟುಂಬಗಳಿಗೆ ತಲಾ 25 ಲಕ್ಷ ರೂ. ಹೆಚ್ಚುವರಿ ಪರಿಹಾರವನ್ನು ಘೋಷಿಸಿತ್ತು.