ಹಾರಲಾಗದೇ ನಿಂತ ಆಕಾಶ ಏರ್ ವಿಮಾನಗಳು!
ಆಕಾಶ ಏರ್ | Photo : PTI
ಹೊಸದಿಲ್ಲಿ : ನೋಟಿಸ್ ಪಿರಿಯಡ್ ನಲ್ಲಿ ಕೆಲಸ ಮಾಡದೇ ರಾಜೀನಾಮೆ ನೀಡಿದ ಪೈಲೆಟ್ ಗಳು ಕಂಪೆನಿಯಿಂದ ನಿರ್ಗಮಿಸಿದ್ದರಿಂದ ಆಕಾಶ ಏರ್ ನ 600 ಕ್ಕೂ ಹೆಚ್ಚಿನ ವಿಮಾನಗಳು ರದ್ದಾಗಿವೆ. ಕೇವಲ 13 ತಿಂಗಳ ಕೂಸು ಆಕಾಶ ಏರ್ ಈಗ ಕಾರ್ಯಾಚರಣೆ ಮಾಡಲು ಆಗದ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಹಾರಾಟದ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಂಪೆನಿಗೆ ಮುಂಗಡ ಬುಕಿಂಗ್ ಸೇರಿದಂತೆ 22 ಕೋಟಿ ರೂ. ನಷ್ಟವಾಗಿದೆ. ಹಠಾತ್ತಾಗಿ ನಿರ್ಗಮಿಸಿದ ಪೈಲಟ್‌ಗಳ ವಿರುದ್ಧ ಅಗತ್ಯ ಕ್ರಮಗಳನ್ನು ಕೋರಿ ವಿಮಾನಯಾನ ಸಂಸ್ಥೆಯು ಕಾನೂನು ನಿಲುವನ್ನು ತೆಗೆದುಕೊಂಡಿದೆ. ಪೈಲೆಟ್ ಗಳಿಂದ ನಷ್ಟ ಭರಿಸಲು ಕಾನೂನು ಸಮರಕ್ಕೆ ಮುಂದಾಗಿದೆ.
ವಿಮಾನಯಾನ ರದ್ದಾದ ಬಳಿಕ ಆಕ್ರೋಶಗೊಂಡ ಪ್ರಯಾಣಿಕರು ಕಂಪೆನಿಯ ವಿಮಾನಗಳ ಕಾರ್ಯಾಚರಣೆಯ ಕುರಿತು ದೂರುಗಳನ್ನು ಸಲ್ಲಿಸುತ್ತಿದ್ದಾರೆ.ಇದರಿಂದ ಕಡಿಮೆ ಅವಧಿಯಲ್ಲಿ ಹೆಸರು ಮಾಡಿದ ಸಂಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆಯಾಗಲಿದೆ ಎಂದು ಸಂಸ್ಥೆಯು ದೂರಿದೆ. ಈ ಎಲ್ಲಾ ಬೆಳವಣಿಗೆಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಕಾರಣ ಎಂದು ಬೊಟ್ಟು ಮಾಡಿರುವ ಸಂಸ್ಥೆ, ತಮ್ಮ ಪೈಲಟ್ ಗಳನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ತನ್ನತ್ತ ಸೆಳೆಯುತ್ತಿದೆ ಎಂದು ಆರೋಪಿಸಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಕಾರಣ ಎಂದಿರುವ ಆಕಾಶ ಏರ್ ನ ಹೇಳಿಕೆಯನ್ನು ಬೆಂಬಲಿಸಿರುವ ಸಂಸ್ಥೆಯ ಮಾಜಿ ಪೈಲಟ್ ಗಳು, ಬೋಯಿಂಗ್ 737 ದೊಡ್ಡ ವಿಮಾನ ಹೊಂದಿರುವ ಏರ್ ಇಂಡಿಯಾ ಎಕ್ಸ್ಪ್ರೆಸ್ ಕಡೆಗೆ ಆಕರ್ಷಣೆ ಸಹಜ ಎಂದು ಪ್ರತಿಕ್ರಿಯಿಸಿದ್ದಾರೆ.