×
Ad

ಉತ್ತರಪ್ರದೇಶ | ವಾಗ್ವಾದದ ಸಂದರ್ಭ ರೈಲಿನಿಂದ ತಳ್ಳಿದ TTE : ನೌಕಾಪಡೆ ಅಧಿಕಾರಿಯ ಪತ್ನಿ ಸಾವು

Update: 2025-11-28 21:53 IST

ಸಾಂದರ್ಭಿಕ ಚಿತ್ರ | Photo Credit  : PTI 

 

ಲಕ್ನೋ, ನ. 28: ಟಿಕೆಟ್ ವಿಚಾರವಾಗಿ ನಡೆದ ವಾಗ್ವಾದದ ಸಂದರ್ಭ ಪ್ರಯಾಣ ಟಿಕೆಟ್ ಪರೀಕ್ಷಕ (TTE) ತಳ್ಳಿದ ಭರದಲ್ಲಿ ಭಾರತೀಯ ನೌಕಾ ಪಡೆಯ ಅಧಿಕಾರಿಯ ಪತ್ನಿ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ಉತ್ತರಪ್ರದೇಶದ ಇಟವಾ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಬುಧವಾರ ಸಂಭವಿಸಿದೆ. ಘಟನೆಗೆ ಸಂಬಂಧಿಸಿ ಪ್ರಯಾಣ ಟಿಕೆಟ್ ಪರೀಕ್ಷಕ (TTE) ಸಂತೋಷ್ ಕುಮಾರ್ ವಿರುದ್ಧ ಇಟವಾ ರೈಲ್ವೆ ಪೊಲೀಸ್ (ಜಿಆರ್‌ಪಿ) ಗುರುವಾರ ಹತ್ಯೆ ಪ್ರಕರಣ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೃತಪಟ್ಟ ಮಹಿಳೆಯನ್ನು ಆರತಿ ಯಾದವ್ ಎಂದು ಗುರುತಿಸಲಾಗಿದೆ. ಅವರು ಬುಧವಾರ ಪಾಟ್ನಾ-ಆನಂದ್‌ವಿಹಾರ್ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ TTEಯೊಂದಿಗೆ ವಾಗ್ವಾದ ನಡೆಯಿತು. ಆರತಿ ಯಾದವ್ ಅವರು ವೈದ್ಯಕೀಯ ಚಿಕಿತ್ಸೆಗೆ ದಿಲ್ಲಿಗೆ ತೆರಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಆರತಿ ಯಾದವ್ ಅವರು ಬೇರೊಂದು ರೈಲಿನಲ್ಲಿ ಸೀಟು ಕಾಯ್ದಿರಿಸಿದ್ದರು. ಆದರೆ, ಅವರು ಆತುರದಿಂದ ಪಾಟ್ನಾ-ಆನಂದ್ ವಿಹಾರ್ ವಿಶೇಷ ರೈಲು ಹತ್ತಿದ್ದರು ಎಂದು ವರದಿಗಳು ಹೇಳಿವೆ.

ಜಿಲ್ಲೆಯ ಭರ್ತನದ ಸಮೀಪ ರೈಲು ಹಳಿಯಲ್ಲಿ ಮಹಿಳೆಯೋರ್ವರ ಮೃತದೇಹ ಬುಧವಾರ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಅಪಘಾತ ಪ್ರಕರಣ ಎಂದು ಪರಿಗಣಿಸಲಾಗಿತ್ತು. ಆದರೆ, ತನಿಖೆ ವೇಳೆ ಕೃತ್ಯ ಬಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಆರತಿ ಯಾದವ್ ಅವರ ಪತಿಯನ್ನು ಮುಂಬೈನಲ್ಲಿ ನಿಯೋಜಿಸಲಾಗಿದೆ. ಆರತಿ ಯಾದವ್ ಅವರು ಅಲ್ಲಿಂದ ಆಗಾಗ ಚಿಕಿತ್ಸೆಗಾಗಿ ದಿಲ್ಲಿಗೆ ಹೋಗುತ್ತಿದ್ದರು ಎಂದು ಆರತಿ ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ. TTE ಆರಂಭದಲ್ಲಿ ಅವರ ಪರ್ಸ್ ಅನ್ನು ರೈಲಿನಿಂದ ಹೊರಗೆಸೆದ. ಅನಂತರ ಅವರನ್ನು ರೈಲಿನಿಂದ ಹೊರಗೆ ತಳ್ಳಿದ. ಕೆಳಗೆ ಬಿದ್ದ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಅವರು ಆರೋಪಿಸಿದ್ದಾರೆ.

ಆರತಿ ಅವರ ಮೃತದೇಹ ಕಂಡು ಬಂದ ಸ್ಥಳದಿಂದ ಕೆಲವು ಕೀ. ಮೀಟರ್ ದೂರದಲ್ಲಿ ಅವರ ಪರ್ಸ್ ಪತ್ತೆಯಾಗಿದೆ. ಅವರ ಸೆಲ್‌ಫೋನ್ ನಾಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

TTE ಸಂತೋಷ್ ಕುಮಾರ್ ಅವರ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದೆ ಹಾಗೂ ತನಿಖೆ ಆರಂಭಿಸಲಾಗಿದೆ ಎಂದು ಜಿಆರ್‌ಪಿ ಅಧಿಕಾರಿ ಇಟವಾದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News