×
Ad

ಉತ್ತರಪ್ರದೇಶ| ́ನೀರು ತಣ್ಣಗಿದೆ ಎಂದು ಅಧಿಕಾರಿಗಳು ಹೊಂಡಕ್ಕಿಳಿದು ಮಗನನ್ನು ರಕ್ಷಿಸಲು ನಿರಾಕರಿಸಿದ್ದರುʼ: ಅಪಘಾತದಲ್ಲಿ ಮೃತ ಟೆಕ್ಕಿಯ ತಂದೆ ಆರೋಪ

Update: 2026-01-19 16:02 IST

Photo Credit : indiatoday.in

ನೋಯ್ಡಾ,ಜ.19: ದಟ್ಟವಾದ ಮಂಜಿನಿಂದಾಗಿ ಕಾರು ಕಾಲುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ನೀರು ತುಂಬಿದ್ದ ಆಳವಾದ ಹೊಂಡಕ್ಕೆ ಬಿದ್ದ ಪರಿಣಾಮ ಮೃತಪಟ್ಟಿದ್ದ ಸಾಫ್ಟವೇರ್ ಇಂಜನಿಯರ್ ಯುವರಾಜ ಮೆಹ್ತಾ (27) ಕುಟುಂಬವು ರಕ್ಷಣಾ ತಂಡಗಳು ತಣ್ಣಗಿದ್ದ ನೀರು ಮತ್ತು ಸಂಭಾವ್ಯ ಅಪಾಯಗಳ ಕಾರಣದಿಂದ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಳಂಬ ಮಾಡಿದ್ದವು ಎಂದು ಆರೋಪಿಸಿದೆ. ಗ್ರೇಟರ್ ನೋಯ್ಡಾದ ಸೆಕ್ಟರ್ 150ರಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ ಈ ಘಟನೆಯು ವಿಪತ್ತು ಸನ್ನದ್ಧತೆಯ ಬಗ್ಗೆ ಕಳವಳಗಳನ್ನು ಹುಟ್ಟುಹಾಕಿದೆ.

ಮೂರು ಇಲಾಖೆಗಳ ಅಧಿಕಾರಿಗಳು ಮತ್ತು ಸುಮಾರು 80 ಸಿಬ್ಬಂದಿಗಳು ಸ್ಥಳದಲ್ಲಿದ್ದರೂ ಯುವ ಇಂಜಿನಿಯರ್‌ನನ್ನು ರಕ್ಷಿಸಲು ಸಾಧ್ಯವಾಗದ್ದು ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸುವ ಸ್ಥಳೀಯ ಆಡಳಿತದ ಸಾಮರ್ಥ್ಯವನ್ನು ಪರಿಶೀಲಿಸುವಂತೆ ಮಾಡಿದೆ.

ಯುವರಾಜ ತಂದೆ ರಾಜಕುಮಾರ್‌ ಮೆಹ್ತಾ ಪ್ರಕಾರ, ಮಗ ತಾನು ಕಾರು ಸಹಿತ ಹೊಂಡದಲ್ಲಿ ಬಿದ್ದಿದ್ದು ತನ್ನನ್ನು ರಕ್ಷಿಸಿ ಎಂದು ಮೊಬೈಲ್ ಕರೆಯ ಮೂಲಕ ಬೇಡಿಕೊಂಡಿದ್ದ. ತಕ್ಷಣ ಅವರು ಅಪಘಾತ ಸ್ಥಳಕ್ಕೆ ಧಾವಿಸಿದಾಗ ಗೋಚರತೆಯು ಕಳಪೆಯಾಗಿತ್ತು ಮತ್ತು ಪದೆ ಪದೇ ಕರೆ ಮಾಡಿ ಮಗನ ಕಾರನ್ನು ಪತ್ತೆ ಹಚ್ಚಲು ಹೆಣಗಾಡಿದ್ದರು.

‘ಹೇಗೋ ನಾನು ಮಗನಿಗೆ ಕರೆ ಮಾಡಿದಾಗ ಆತ ಕಾರಿನೊಳಗೆ ತನ್ನ ಟಾರ್ಚ್‌ಲೈಟ್‌ನ್ನು ಬೆಳಗಿಸಿದ್ದ. ಹೀಗಾಗಿ ನಮಗೆ ಸ್ಪಲ್ಪ ಬೆಳಕು ಕಾಣುತ್ತಿತ್ತು. ಆದರೆ ನೀರಿನೊಳಗೆ ಪ್ರವೇಶಿಸಿವುದು ಯಾರಿಗೂ ಕಷ್ಟಕರವಾಗಿತ್ತು. ಪೋಲಿಸ್ ಮತ್ತು ಇತರ ರಕ್ಷಣಾ ಅಧಿಕಾರಿಗಳು ಹಗ್ಗವನ್ನು ಎಸೆದು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ’ ಎಂದು ಮೆಹ್ತಾ ಸುದ್ದಿಸಂಸ್ಥೆಗೆ ತಿಳಿಸಿದರು.

ಪೋಲಿಸರು, ಅಗ್ನಿಶಾಮಕ ದಳ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (ಎಸ್‌ಆರ್‌ಡಿಎಫ್) ಸ್ಥಳದಲ್ಲಿದ್ದರೂ ತಕ್ಷಣದ ರಕ್ಷಣಾ ಪ್ರಯತ್ನಗಳು ನಡೆದಿರಲಿಲ್ಲ.

‘ಪೋಲಿಸರನ್ನು ಕರೆಸಲಾಗಿತ್ತು ಮತ್ತು ಸಮೀಪದ ಕೆಲವರು ಸಹ ನೆರವಾಗಲು ಪ್ರಯತ್ನಿಸಿದ್ದರು. ಆದರೆ ನನ್ನ ಮಗನನ್ನು ಉಳಿಸಲು ಏನೂ ಮಾಡಲೂ ಸಾಧ್ಯವಾಗಲಿಲ್ಲ’ ಎಂದು ಹೇಳಿದ ಮೆಹ್ತಾ, ಹೆಪ್ಪುಗಟ್ಟಿಸುವ ತಾಪಮಾನ ಮತ್ತು ಹೊಂಡದಲ್ಲಿ ಹುದುಗಿರುವ ಕಬ್ಬಿಣದ ಸರಳುಗಳ ಅಪಾಯವನ್ನು ಉಲ್ಲೇಖಿಸಿ ರಕ್ಷಣಾ ಸಿಬ್ಬಂದಿಗಳು ನೀರಿಗಿಳಿಯಲು ನಿರಾಕರಿಸಿದ್ದರು ಎಂದು ಆರೋಪಿಸಿದರು. ‘ಅನುಭವಿ ಮುಳುಗು ತಜ್ಞರು ನೀರಿಗಿಳಿದಿದ್ದರೆ ಬಹುಶಃ ನನ್ನ ಮಗ ಉಳಿಯಬಹುದಿತ್ತು’ ಎಂದರು.

ದುರಂತದ ಬಗ್ಗೆ ಪ್ರತಿಕ್ರಿಯಿಸಿದ ನೋಯ್ಡಾದ ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೀವ್‌ ನಾರಾಯಣ ಮಿಶ್ರಾ ಅವರು,‘ ಯುವಕನ ಜೀವವನ್ನು ಉಳಿಸಲು ನಾವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೆವು. ಆದರೆ ಗೋಚರತೆ ಶೂನ್ಯಕ್ಕೆ ಸಮೀಪವಿತ್ತು ಮತ್ತು ನಮ್ಮ ಪ್ರಯತ್ನಗಳು ವಿಫಲಗೊಂಡವು. ಕುಟುಂಬದ ದೂರಿನ ಆಧಾರದ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News