×
Ad

ನಮಗೆ ಪರಿಹಾರ ಬೇಡ, ನ್ಯಾಯಬೇಕು: ಕೋರ್ಟ್ ಗೆ ತಿಳಿಸಿದ ಆರ್ ಜಿಕರ್ ಅತ್ಯಾಚಾರ- ಕೊಲೆ ಪ್ರಕರಣದ ಸಂತ್ರಸ್ತೆಯ ಕುಟುಂಬಸ್ಥರು

Update: 2025-01-20 18:55 IST

Photo | PTI

ಕೋಲ್ಕತ್ತಾ: ಕೋಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ಸಂಜಯ್ ರಾಯ್ ಗೆ ಕೋಲ್ಕತ್ತಾದ ಸೀಲ್ಡಾ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದು, 17 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ಆದರೆ ಸಂತ್ರಸ್ತೆಯ ಕುಟುಂಬವು ಪರಿಹಾರ ನಮಗೆ ಬೇಡ ಎಂದು ಕೋರ್ಟ್‌ ನಲ್ಲಿ ಹೇಳಿಕೊಂಡಿದೆ.

ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ್ದ ಸೀಲ್ಡಾ ನ್ಯಾಯಾಲಯದ ನ್ಯಾಯಮೂರ್ತಿ ಅನಿರ್ಬನ್ ದಾಸ್, ಸಂತ್ರಸ್ತೆಯ ಪೋಷಕರಿಗೆ 17 ಲಕ್ಷ ರೂ.ಪರಿಹಾರ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿದರು. ಈ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಸಂತ್ರಸ್ತೆಯ ಪೋಷಕರು ತಮಗೆ ಪರಿಹಾರ ಬೇಡ, ನ್ಯಾಯ ಬೇಕು ಎಂದು ಹೇಳಿದ್ದಾರೆ.

ಈ ವೇಳೆ ನ್ಯಾಯಮೂರ್ತಿ ಅನಿರ್ಬನ್ ದಾಸ್ ಮಾತು ಮುಂದುವರಿಸುತ್ತಾ, ಕಾನೂನಿನ ಪ್ರಕಾರ ಪರಿಹಾರವನ್ನು ಆದೇಶಿಸಿದ್ದೇನೆ, ಅವರು ಹಣವನ್ನು ಹೇಗೆ ಬೇಕಾದರೂ ಬಳಸಲು ಸ್ವತಂತ್ರರು ಎಂದು ಹೇಳಿದ್ದಾರೆ.

ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿಯಲ್ಲಿ ಸಂಜಯ್ ರಾಯ್ ನ್ನು ದೋಷಿ ಎಂದು ಪರಿಗಣಿಸಲಾಗಿದೆ. ಇಂದು ಮುಂಜಾನೆ, ನ್ಯಾಯಾಲಯವು ಸಂಜಯ್ ರಾಯ್ ಹೇಳಿಕೆಯನ್ನು ಆಲಿಸಿದೆ. ಈ ವೇಳೆ ಸಂಜಯ್‌ ರಾಯ್‌, ನಾನು ಈ ಕೃತ್ಯವನ್ನು ಎಸಗಿಲ್ಲ, ನನ್ನ ಮೇಲೆ ಆರೋಪ ಹೊರಿಸಲಾಗಿದೆ. ಬಹಳಷ್ಟು ಸಾಕ್ಷಿಗಳನ್ನು ನಾಶಪಡಿಸಲಾಗಿದೆ. ನಾನು ಅದನ್ನು ಮಾಡಿದ್ದರೆ ನನ್ನ ರುದ್ರಾಕ್ಷಿ ಮಾಲೆ ಮುರಿದುಹೋಗುತ್ತಿತ್ತು. ನನ್ನ ಮೇಲೆ ಆರೋಪ ಹೊರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವೇ ನಿರ್ಧರಿಸಿ ಎಂದು ಹೇಳಿದರು.

ಈ ವೇಳೆ ಮಾತು ಮುಂದುವರಿಸಿದ ನ್ಯಾಯಮೂರ್ತಿ ಅನಿರ್ಬನ್ ದಾಸ್, ನಾನು ನ್ಯಾಯ ಒದಗಿಸಬೇಕಾಗಿದೆ. ನನ್ನ ಮುಂದಿರುವ ಸಾಕ್ಷ್ಯಗಳ ಆಧಾರದ ಮೇಲೆ ನಾನು ತೀರ್ಪು ನೀಡುತ್ತೇನೆ. ನಾನು ನಿಮ್ಮ ಮಾತನ್ನೂ ಮೂರು ಗಂಟೆಗಳ ಕಾಲ ಕೇಳಿದ್ದೇನೆ. ನಿಮ್ಮ ವಕೀಲರು ನಿಮ್ಮ ಪ್ರಕರಣದ ಬಗ್ಗೆ ವಾದಿಸಿದ್ದಾರೆ. ಆರೋಪಗಳು ಸಾಬೀತಾಗಿವೆ ಎಂದು ಹೇಳಿದ್ದಾರೆ.

ಸಿಬಿಐ ಪರ ವಕೀಲರು ಈ ಪ್ರಕರಣದಲ್ಲಿ ಸಂಜಯ್ ರಾಯ್ ಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕೆಂದು ಕೋರ್ಟ್ ನಲ್ಲಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News