×
Ad

ಪ್ರಿಯಕರನಿಗಾಗಿ ಮೂರರ ಹರೆಯದ ಮಗಳನ್ನು ನೀರಿಗೆ ಎಸೆದು ಕೊಂದ ತಾಯಿ!

Update: 2025-09-18 22:02 IST

 ಅಂಜಲಿ | PC : indiatoday.in

ಅಜ್ಮೇರ್(ರಾಜಸ್ಥಾನ): ತನ್ನ ಪ್ರಿಯಕರ ಇಷ್ಟ ಪಡದ್ದರಿಂದ ತನ್ನ ಪತಿಯಿಂದ ಪಡೆದಿದ್ದ ಮೂರರ ಹರೆಯದ ಮಗಳನ್ನು ಸರೋವರಕ್ಕೆ ಎಸೆದು ಕೊಲೆ ಮಾಡಿದ ಮಹಿಳೆಯನ್ನು ಅಜ್ಮೇರ್ ಪೋಲಿಸರು ಬಂಧಿಸಿದ್ದಾರೆ.

ಮೂಲತಃ ಉತ್ತರ ಪ್ರದೇಶದ ವಾರಣಾಸಿ ನಿವಾಸಿ ಅಂಜಲಿ(28) ಪತಿಯಿಂದ ಪ್ರತ್ಯೇಕಗೊಂಡ ಬಳಿಕ ಅಜ್ಮೇರ್‌ಗೆ ಸ್ಥಳಾಂತರಗೊಂಡು ತನ್ನ ಪ್ರಿಯಕರ ಅಲ್ಕೇಶ್ ಜೊತೆ ವಾಸವಾಗಿದ್ದಳು. ಆಕೆ ಹೋಟೆಲ್‌ವೊಂದರಲ್ಲಿ ಸ್ವಾಗತಕಾರ್ತಿಯಾಗಿ ಕೆಲಸ ಮಾಡುತ್ತಿದ್ದು, ಅಲ್ಕೇಶ್ ಕೂಡ ಅಲ್ಲಿಯೇ ಕೆಲಸ ಮಾಡುತ್ತಿದ್ದಾನೆ.

ಮಂಗಳವಾರ ರಾತ್ರಿ ಮಗುವಿಗೆ ಜೋಗುಳ ಹಾಡಿ ಅದು ನಿದ್ರೆಗೆ ಜಾರುತ್ತಿದ್ದಂತೆ ಅದನ್ನೆತ್ತಿಕೊಂಡು ಸರೋವರವೊಂದರ ಬಳಿ ವಾಕಿಂಗ್‌ಗೆ ಹೋಗಿದ್ದ ಅಂಜಲಿ ಅಲ್ಲಿ ಆಕೆ ಮಗುವನ್ನು ನೀರಿಗೆ ಎಸೆದಿದ್ದಳು.

ತಡರಾತ್ರಿ ಪ್ರದೇಶದಲ್ಲಿ ಗಸ್ತುಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೇಬಲ್ ಗೋವಿಂದ ಶರ್ಮಾ ಅವರು ರಸ್ತೆಯಲ್ಲಿ ಅಂಜಲಿ ಮತ್ತು ಅಲ್ಕೇಶ್‌ರನ್ನು ಕಂಡು ಇಷ್ಟು ರಾತ್ರಿಯಲ್ಲಿ ಇಲ್ಲೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು. ತಾನು ಮಗುವಿನೊಂದಿಗೆ ಮನೆಯಿಂದ ಹೊರಕ್ಕೆ ಬಂದಿದ್ದೆ, ಆದರೆ ದಾರಿಯಲ್ಲಿ ಮಗು ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಆಗಿನಿಂದ ಹುಡುಕುತ್ತಿದ್ದರೂ ಪತ್ತೆಯಾಗಿಲ್ಲ ಎಂದು ಅಂಜಲಿ ಉತ್ತರಿಸಿದ್ದಳು.

ಪೋಲಿಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಅಂಜಲಿ ಮಗಳನ್ನು ಎತ್ತಿಕೊಂಡು ಸರೋವರದ ಸುತ್ತ ಠಳಾಯಿಸುತ್ತಿದ್ದುದು ಕಂಡುಬಂದಿತ್ತು. ಕೆಲ ಗಂಟೆಗಳ ಬಳಿಕ ನಸುಕಿನ 1:30ರ ಸುಮಾರಿಗೆ ಆಕೆ ಒಬ್ಬಳೇ ಕಂಡು ಬಂದಿದ್ದು,ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಈ ದೃಶ್ಯಾವಳಿಗಳು ಅಂಜಲಿಯ ಹೇಳಿಕೆಗೆ ವ್ಯತಿರಿಕ್ತವಾಗಿದ್ದು,ಸಂಶಯವನ್ನು ಹುಟ್ಟು ಹಾಕಿದ್ದವು.

ಬುಧವಾರ ಬೆಳಿಗ್ಗೆ ಪೋಲಿಸರು ಸರೋವರದಲ್ಲಿ ಮಗುವಿನ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅಂಜಲಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಮಗುವನ್ನು ಸರೋವರದಲ್ಲಿ ಎಸೆದಿದ್ದನ್ನು ಒಪ್ಪಿಕೊಂಡಿದ್ದಳು.

ಅಂಜಲಿ ಒಬ್ಬಳೇ ಈ ಕೊಲೆಯನ್ನು ಮಾಡಿದ್ದಾಳೆ ಎನ್ನುವುದನ್ನು ಪೋಲಿಸರು ಕಂಡುಕೊಂಡಿದ್ದಾರೆ. ನಸುಕಿನ ಎರಡು ಗಂಟೆಯ ಸುಮಾರಿಗೆ ಅಂಜಲಿ ಮಗು ಕಾಣೆಯಾಗಿದೆ ಎಂದು ಅಲ್ಕೇಶ್‌ಗೆ ತಿಳಿಸಿದ್ದಳು.

ತನ್ನ ಪತಿಯಿಂದ ಜನಿಸಿದ್ದ ಮಗಳನ್ನು ಅಲ್ಕೇಶ್ ಇಷ್ಟ ಪಡುತ್ತಿರಲಿಲ್ಲ ಮತ್ತು ಆ ಬಗ್ಗೆ ತನ್ನನ್ನು ಆಗಾಗ್ಗೆ ಅಣಕಿಸುತ್ತಿದ್ದ. ಒತ್ತಡದಿಂದಾಗಿ ತಾನು ಈ ಕೃತ್ಯವನ್ನು ಮಾಡಿದ್ದಾಗಿ ಅಂಜಲಿ ಪೋಲಿಸರಿಗೆ ತಿಳಿಸಿದ್ದಾಳೆ.

ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಅಂಜಲಿಯನ್ನು ಬಂಧಿಸಿದ್ದಾರೆ. ಅಲ್ಕೇಶ್ ಯಾವುದೇ ರೀತಿಯಲ್ಲಿ ಮಗುವಿನ ಕೊಲೆಯಲ್ಲಿ ಭಾಗಿಯಾಗಿದ್ದನೇ ಎನ್ನುವುದನ್ನು ತಿಳಿದುಕೊಳ್ಳಲು ತನಿಖೆಯನ್ನು ಮುಂದುವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News