×
Ad

ನಾವು ಎನ್ಡಿಎ ಮಿತ್ರಪಕ್ಷ ಹೌದು, ಆದರೆ ಅವರ ನೀತಿಗಳು ನಮ್ಮದಲ್ಲ: ಮಿಜೋರಾಂ ಮುಖ್ಯಮಂತ್ರಿ

Update: 2023-07-25 21:56 IST

Photo : ರೊರಮ್ ತಂಗ | PTI 

ಐಝ್ವಲ್ : ತನ್ನ ಪಕ್ಷ ‘ಮಿಜೊ ನ್ಯಾಶನಲ್ ಫ್ರಂಟ್’ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (NDA)ನ ಭಾಗ ಹೌದು, ಆದರೆ ಅದರ ನೀತಿಗಳನ್ನು ನಾವು ಬೆಂಬಲಿಸುವುದಿಲ್ಲ ಎಂದು ಮಿಜೋರಾಂ ಮುಖ್ಯಮಂತ್ರಿ ರೊರಮ್ ತಂಗ ಸೋಮವಾರ ಹೇಳಿದ್ದಾರೆ.

ನಾನಾಗಲಿ, ಮಿಜೊ ನ್ಯಾಶನಲ್ ಫ್ರಂಟ್ ಆಗಲಿ ಕೇಂದ್ರದಲ್ಲಿರುವ ಸರಕಾರಕ್ಕೆ ಹೆದರುವುದಿಲ್ಲ ಎಂದು ರೊರಮ್ತಂಗ ಹೇಳಿದರು.

‘‘ನಾವು ಮ್ಯಾನ್ಮಾರ್ ನಿರಾಶ್ರಿತರನ್ನು ಗಡಿಪಾರು ಮಾಡುವುದಿಲ್ಲ, ಬದಲಿಗೆ ಅವರಿಗೆ ಆಹಾರ ಮತ್ತು ಆಶ್ರಯ ನೀಡುತ್ತೇವೆ ಎಂದು ನಾನು ವಿಧಾನಸಭೆಯಲ್ಲಿ ಘೋಷಿಸಿದ್ದೇನೆ’’ ಎಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಹೇಳಿದರು. ‘‘ಎಮ್ಎನ್ಎಫ್ ಮತ್ತು ಬಿಜೆಪಿ ಅಭಿವೃದ್ಧಿಗಾಗಿ ಜೊತೆಯಲ್ಲಿ ಕೆಲಸ ಮಾಡುತ್ತವೆ, ಆದರೆ, ಅವರು (ಬಿಜೆಪಿ) ಹೇಳುವ ಎಲ್ಲವನ್ನೂ ಅನುಮೋದಿಸುವುದಿಲ್ಲ’’ ಎಂದರು.

2021 ಫೆಬ್ರವರಿಯಲ್ಲಿ, ಮ್ಯಾನ್ಮಾರ್ ನಲ್ಲಿ ಸೇನೆಯು ಚುನಾಯಿತ ಸರಕಾರದ ವಿರುದ್ಧ ಕ್ಷಿಪ್ರಕ್ರಾಂತಿ ನಡೆಸಿ ಆ ದೇಶದ ಆಡಳಿತವನ್ನು ವಶಪಡಿಸಿಕೊಂಡ ಬಳಿಕ, ಆ ದೇಶದ 30,000ಕ್ಕೂ ಅಧಿಕ ಮಂದಿ ಮಿಜೋರಾಂ ಗೆ ಪಲಾಯನಗೈದಿದ್ದಾರೆ. ಮಿಜೋರಾಂ ಸರಕಾರವು ಅವರಿಗೆ ಆಶ್ರಯ, ಗುರುತುಚೀಟಿಗಳು ಮತ್ತು ಇತರ ಸವಲತ್ತುಗಳನ್ನು ಒದಗಿಸಿದೆ.

ಸಮಾನ ನಾಗರಿಕ ಸಂಹಿತೆಗೆ ವಿರೋಧ:

ಸಮಾನ ನಾಗರಿಕ ಸಂಹಿತೆ (ಯುಸಿಸಿ)ಯನ್ನು ವಿರೋಧಿಸುವುದನ್ನು ಮಿಜೊ ನ್ಯಾಶನಲ್ ಫ್ರಂಟ್ ಮುಂದುವರಿಸಲಿದೆ ಎಂದು ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ಮಿಜೋರಾಂ ಮುಖ್ಯಮಂತ್ರಿ ಹೇಳಿದರು. ಸಮಾನ ನಾಗರಿಕ ಸಂಹಿತೆಯು ಮಿಜೋರಾಂ ಜನರ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳು ಮತ್ತು ಅವರ ಸಾಂಪ್ರದಾಯಿಕ ಕಾನೂನುಗಳಿಗೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಆಚರಣೆಗಳು ಮತ್ತು ಕಾನೂನುಗಳಿಗೆ ಸಂವಿಧಾನದ 371(ಜಿ) ವಿಧಿಯಡಿಯಲ್ಲಿ ರಕ್ಷಣೆಯಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News