×
Ad

ಲೋಕಸಭಾ ಚುನಾವಣಾ ಹಿನ್ನೆಲೆ: ಮೋದಿ ವಿರುದ್ಧ ಐಕ್ಯ ಹೋರಾಟಕ್ಕೆ ಯೋಜನೆ ರೂಪಿಸಿದ ವಿಪಕ್ಷಗಳು

Update: 2023-06-24 21:11 IST

2024ರ ಲೋಕಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ವಿರುದ್ಧದ ಒಗ್ಗಟ್ಟಿನ ಹೋರಾಟಕ್ಕೆ ಪ್ರತಿಪಕ್ಷಗಳು ತಯಾರಾಗುತ್ತಿವೆ. ಆದರೆ ಇದು ನಿಜವಾಗಿಯೂ ಒಂದು ಪ್ರಬಲ ಮೈತ್ರಿಕೂಟವಾಗಿ ಅಂತಿಮ ಸ್ವರೂಪ ಪಡೆಯುವುದೇ ಅಥವಾ ಪ್ರತಿಷ್ಠೆ ಪ್ರತಿಮಾತುಗಳ ಕಚ್ಚಾಟ ಎಲ್ಲವನ್ನೂ ವಿಫಲಗೊಳಿಸಿಬಿಡಬಹುದೇ ?

ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಮಹಾ ಮೈತ್ರಿಕೂಟವನ್ನು ರೂಪಿಸಲು ಪಾಟ್ನಾದಲ್ಲಿ ವಿರೋಧ ಪಕ್ಷಗಳ ಮೊದಲ ಸಭೆ ಶುಕ್ರವಾರ ನಡೆದಿದೆ. ಜೆಡಿಯು ನಾಯಕ, ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಆರ್ಜೆಡಿ ನಾಯಕ, ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಈ ಸಭೆ ಸಂಘಟಿಸಿದ್ದರು. ನಿತೀಶ್ ಕುಮಾರ್ ನಿವಾಸದಲ್ಲಿ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಈ ಸಭೆ, ಕಾಂಗ್ರೆಸ್ ಮತ್ತು ಆಪ್ ನಡುವಿನ ಜಟಾಪಟಿಗೂ ಸಾಕ್ಷಿಯಾಯಿತು.

ಸಭೆಯಲ್ಲಿ ಕಾಂಗ್ರೆಸ್, ಜೆಡಿಯು, ಆರ್ಜೆಡಿ, ಟಿಎಂಸಿ, ಎನ್ ಸಿ ಪಿ , ಡಿಎಂಕೆ, ಸಿಪಿಎಂ, ಸಮಾಜವಾದಿ ಪಕ್ಷ , ಶಿವಸೇನೆ ಉದ್ಧವ್ ಠಾಕ್ರೆ ಬಣ, ಜೆಎಂಎಂ, ಆಮ್ ಆದ್ಮಿ, ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್, ಸಿಪಿಐ, ಸಿಪಿಐ ಎಂಎಲ್ ನಾಯಕರು ಭಾಗವಹಿಸಿದ್ದರು. ಆರ್ ಎಲ್ ಡಿ ಅಧ್ಯಕ್ಷ ಜಯಂತ್ ಚೌಧರಿ ಕುಟುಂಬದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಾಜರಾಗಲು ಆಗುತ್ತಿಲ್ಲವೆಂದು ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದು ತಿಳಿಸಿದ್ದರೆನ್ನಲಾಗಿದೆ. ಸಭೆಗೆ ಬಿಎಸ್ಪಿ ನಾಯಕಿ ಮಾಯಾವತಿ ಅವರನ್ನು ಆಹ್ವಾನಿಸಿರಲಿಲ್ಲ ಎಂದು ವರದಿಯಾಗಿದೆ.

ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ವಿಪಕ್ಷ ನಾಯಕರು, ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಲು 17 ಪಕ್ಷಗಳು ಒಪ್ಪಿಕೊಂಡಿವೆ ಎಂದು ಘೋಷಿಸಿದ್ದಾರೆ. ಆದರೆ ಅಂತಿಮ ಸ್ವರೂಪ ಖಚಿತಪಡಿಸೋದಕ್ಕೆ ಇನ್ನೂ ಒಂದು ಸಭೆ ನಡೆಸಲಾಗುವುದು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮುಂದಿನ ತಿಂಗಳು ವಿರೋಧ ಪಕ್ಷಗಳ ಮತ್ತೊಂದು ಸಭೆ ಆಯೋಜಿಸಲಾಗಿದೆ. ಮೈತ್ರಿಕೂಟದ ನಾಯಕತ್ವ ಹಾಗು ಸೀಟುಗಳ ಹಂಚಿಕೆ ಮತ್ತಿತರ ವಿಚಾರಗಳು ಶಿಮ್ಲಾ ಸಭೆಯಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ. ಆಯಾ ರಾಜ್ಯಗಳಲ್ಲಿ ಒಟ್ಟಾಗಿ ಹೇಗೆ ಮುಂದುವರಿಯಬೇಕು ಎಂಬುದರ ಕುರಿತು ಕಾರ್ಯಸೂಚಿಯನ್ನು ಮುಂದಿನ ಸಭೆಯಲ್ಲಿ ತಯಾರಿಸಲಾಗುವುದು ಎಂದು ಸಭೆಯಲ್ಲಿ ಭಾಗವಹಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ವಿರೋಧ ಪಕ್ಷಗಳು ಒಗ್ಗೂಡುವ ವಿಚಾರವಾಗಿ ನಿತೀಶ್ ಕುಮಾರ್ ಜೊತೆಗೆ ಗಟ್ಟಿಯಾಗಿ ನಿಂತಿರುವಂತೆ ಕಾಣಿಸುತ್ತಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿರುವಂತೆ, ಮೊದಲ ಸಭೆಯ ನಂತರದ ಚಿತ್ರಣವೆಂದರೆ, ಪ್ರತಿಪಕ್ಷಗಳು ಒಗ್ಗಟ್ಟಾಗಿವೆ, ಪ್ರತಿಪಕ್ಷಗಳು ಒಟ್ಟಾಗಿ ಹೋರಾಡುತ್ತವೆ, ಈ ಹೋರಾಟ ಬಿಜೆಪಿಯ ನಿರಂಕುಶ ಆಡಳಿತ ಮತ್ತು ಸೇಡಿನ ರಾಜಕೀಯದ ವಿರುದ್ಧವಾಗಿದೆ.

ಈ ಸರ್ವಾಧಿಕಾರಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಭವಿಷ್ಯದಲ್ಲಿ ಚುನಾವಣೆಗಳೇ ಇರುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ. ಬಿಜೆಪಿಯನ್ನು ಸೋಲಿಸುವುದೇ ಪ್ರತಿಪಕ್ಷಗಳ ಏಕೈಕ ಗುರಿ ಎಂದು ಡಿಎಂಕೆ ಅಧ್ಯಕ್ಷ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಹೇಳಿದ್ದಾರೆ.

ಈ ನಡುವೆ, ಒಗ್ಗಟ್ಟಾಗುವ ವಿಚಾರದಲ್ಲಿ ಒಮ್ಮೆಯೂ ಏಕದನಿಯಲ್ಲಿ ಮಾತನಾಡದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಈ ಸಭೆಯಲ್ಲಿಯೂ ಜಟಾಪಟಿ ನಡೆದಿದೆ. ಕೇಂದ್ರ ಸರ್ಕಾರ ದಿಲ್ಲಿ ಆಡಳಿತದ ವಿಚಾರವಾಗಿ ಹೊರಡಿಸಿರುವ ಸುಗ್ರೀವಾಜ್ಞೆ ಕುರಿತು ಕಾಂಗ್ರೆಸ್ ಸರಿಯಾದ ನಿಲುವು ಪ್ರಕಟಿಸಿಲ್ಲ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ, ಬಿಜೆಪಿ ಜತೆ ಕಾಂಗ್ರೆಸ್ ಡೀಲ್ ಕುದುರಿಸಿಕೊಂಡಿದೆ. ಹೀಗಾಗಿ ಈ ಬಗ್ಗೆ ಯಾವುದೇ ನಿಲುವು ತಾಳುತ್ತಿಲ್ಲ ಎಂದು ಎಎಪಿ ಮುಖ್ಯ ವಕ್ತಾರೆ ಪ್ರಿಯಾಂಕಾ ಕಕ್ಕರ್ ಮಾಡಿದ್ದ ಆರೋಪವನ್ನು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸಿ, ಎಎಪಿಯನ್ನು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಮಾತಿನಿಂದ ಕೋಪಗೊಂಡ ಎಎಪಿ, ಕೇಂದ್ರ ಸರ್ಕಾರದ ಕಠಿಣ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ಸಾರ್ವಜನಿಕವಾಗಿ ವಿರೋಧಿಸುವವರೆಗೂ ಮುಂಬರುವ ವಿಪಕ್ಷಗಳ ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದೂ ಆಗಿದೆ. ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಕಷ್ಟ ಎಂದೂ ಅದು ಹೇಳಿದೆ.

ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ದೇಶದಲ್ಲೀಗ ಕಾಂಗ್ರೆಸ್ ನ ಭಾರತ್ ಜೋಡೊ ಮತ್ತು ಬಿಜೆಪಿ - ಆರ್ ಎಸ್ ಎಸ್ ನ ಭಾರತ್ ತೋಡೊ ಸಿದ್ಧಾಂತಗಳ ಮಧ್ಯೆ ಯುದ್ಧ ನಡೆಯುತ್ತಿದೆ' ಎಂದಿದ್ದಾರೆ.

ಪ್ರತಿಪಕ್ಷಗಳ ಈ ಸಮಾನರಂಗ ಜೆಪಿ ಚಳುವಳಿಯಂತೆಯೇ ಜನಾಶೀರ್ವಾದ ಪಡೆಯಲಿದೆ ಎಂಬ ವಿಶ್ವಾಸವನ್ನು ಎನ್ ಸಿ ಪಿ ನಾಯಕ ಶರದ್ ಪವಾರ್ ವ್ಯಕ್ತಪಡಿಸಿದ್ದಾರೆ. ದೇಶವನ್ನು ಉಳಿಸಲು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂಬ ಸಂದೇಶ ಈ ಸಭೆಯಲ್ಲಿ ಸಿಕ್ಕಿದೆ ಎಂದು ಎಸ್ಪಿ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.

ಎಲ್ಲ ನಾಯಕರು ಸಕಾರಾತ್ಮಕ ಚಿಂತನೆಯೊಂದಿಗೆ ಒಟ್ಟಾಗಿ ಸಾಗಲಿದ್ದಾರೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ.

ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ನಾವು ಒಗ್ಗಟ್ಟಾಗಿ ಹೋರಾಡಬೇಕೆಂದು ದೇಶದ ಜನರು ಬಯಸುತ್ತಿದ್ದಾರೆ ಎಂದು ಆರ್.ಜೆ.ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.

ಪ್ರತಿಪಕ್ಷಗಳ ಸಭೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಕಟು ಟೀಕೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅದನ್ನು ಫೋಟೋ ಸೆಷನ್ ಎಂದು ಕರೆದಿದ್ದಾರೆ. ವಿವಿಧ ವಿರೋಧ ಪಕ್ಷಗಳನ್ನು ಎಂದಿಗೂ ಒಗ್ಗೂಡಿಸಲು ಸಾಧ್ಯವಿಲ್ಲ ಎಂದು ಅವರು ಟೀಕಿಸಿದ್ದಾರೆ.

ಬಿಜೆಪಿ ಸಂಸದ ಸುಶೀಲ್ ಮೋದಿ, ಇದು ಥಗ್ಸ್ ಘಟಬಂಧನ್ ಅಂದ್ರೆ ಸಮಾಜ ಘಾತುಕರ ಮೈತ್ರಿಪಡೆ ಎಂದು ಲೇವಡಿ ಮಾಡಿದ್ದಾರೆ.

ಈ ಸಭೆ ಕುಟುಂಬ ರಾಜಕಾರಣವನ್ನು ಉಳಿಸಿಕೊಳ್ಳುವ ಉದ್ದೇಶದ್ದು ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಟೀಕಿಸಿದ್ದಾರೆ.

ಏಕಾಂಗಿಯಾಗಿ ಮೋದಿಯನ್ನು ಸೋಲಿಸಲಾಗದ ಕಾಂಗ್ರೆಸ್ ಇತರರ ಬೆಂಬಲ ಕೇಳುತ್ತಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಈ ನಡುವೆ ಸಭೆಯಲ್ಲಿ ಭಾಗವಹಿಸದ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಕಾಂಗ್ರೆಸ್, ಆಮ್ ಆದ್ಮಿ ಹಾಗು ಶಿವಸೇನೆಯ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಿದ್ದವರ ಟ್ರ್ಯಾಕ್ ರೆಕಾರ್ಡ್ ಏನು ಎಂದವರು ಪ್ರಶ್ನಿಸಿದ್ದಾರೆ.

ಆದರೆ, ಒಗ್ಗಟ್ಟಾಗಿ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ನಿತೀಶ್ ಕುಮಾರ್ ಗಂಭೀರವಾಗಿಯೇ ತೊಡಗಿದ್ದಾರೆ ಎಂಬುದು ನಿಜ. ಮಮತಾ ಬ್ಯಾನರ್ಜಿ ಅವರಿಗೂ ಈ ಒಗ್ಗೂಡುವಿಕೆ ಅನಿವಾರ್ಯ ಎನ್ನಿಸಿದೆ. ಬಿಜೆಪಿಯನ್ನು ಸೋಲಿಸಲು ನಾವೆಲ್ಲ ಜೊತೆಗೂಡಲೇಬೇಕು, ಬೇರೆ ಪರ್ಯಾಯವಿಲ್ಲ ಎಂಬ ಮಾತನ್ನು ಸೋನಿಯಾ ಗಾಂಧಿ ಕೂಡ ಈಗಾಗಲೇ ಹೇಳಿದ್ದಾರೆ.

ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸುವಾಗ, ಬಿಜೆಪಿ ವಿರುದ್ಧ ವಿಪಕ್ಷದ ಒಬ್ಬನೇ ಅಭ್ಯರ್ಥಿ ವಿಚಾರವೂ ಪ್ರತಿಪಕ್ಷಗಳ ನಡುವೆ ಚರ್ಚೆಯಲ್ಲಿದೆ ಎನ್ನಲಾಗಿದೆ. 450ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ವಿಪಕ್ಷಗಳ ಒಮ್ಮತದ ಒಬ್ಬನೇ ಅಭ್ಯರ್ಥಿಯನ್ನು ನಿಲ್ಲಿಸುವ ವಿಚಾರದಲ್ಲಿ ಪಕ್ಷಗಳು ಯಾವ ನಿರ್ಧಾರಕ್ಕೆ ಬರುತ್ತವೆ ಎಂಬ ಪ್ರಶ್ನೆಯೂ ಇದೆ. ರಾಹುಲ್ ಅವರೇ ಹೇಳಿರುವಂತೆ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಬಿಜೆಪಿ ವಿರುದ್ಧ ಒಗ್ಗಟ್ಟಾಗಲು ಭಿನ್ನಮತಗಳನ್ನು ಬದಿಗಿಡುವ ಸೂತ್ರವೊಂದಕ್ಕೆ ಎಲ್ಲ ಪಕ್ಷಗಳೂ ಬದ್ಧವಾಗಲಿವೆಯೆ ಎಂಬುದೇ ಸದ್ಯದ ಪ್ರಶ್ನೆ.

ಆದರೆ ಇದು ಹೇಳಿದಷ್ಟು ಸುಲಭವಲ್ಲ. ಇಲ್ಲಿ ಎರಡು ವಿಷಯಗಳಿವೆ.

ಒಂದು, ನಿಜಕ್ಕೂ ಇಂತಹದೊಂದು ಪರಸ್ಪರ ವಿರೋಧಿಗಳಾಗಿರುವವರು ಒಗ್ಗಟ್ಟಾಗುವ ಮೈತ್ರಿಕೂಟ ರಚನೆ ಸಾಧ್ಯವೇ ? ಕಾಂಗ್ರೆಸ್ - ಆಮ್ ಆದ್ಮಿ, ತೃಣಮೂಲ - ಸಿಪಿಎಂ ಹೀಗೆ ಆಯಾ ರಾಜ್ಯಗಳಲ್ಲಿ ಬದ್ಧ ಪ್ರತಿಸ್ಪರ್ಧಿಗಳಾಗಿರುವ ಪಕ್ಷಗಳು ಈ ವೇದಿಕೆಯಲ್ಲಿ ಒಗ್ಗಟ್ಟಾಗೋದು ಸಾಧ್ಯನಾ ಎಂಬುದು ಬಹುದೊಡ್ಡ ಪ್ರಶ್ನೆ.

ಇನ್ನೊಂದು ಬಹುಮುಖ್ಯ ಪ್ರಶ್ನೆ, ಮೇಲ್ಮೈಯಲ್ಲಿ ಇಂತಹ ಮೈತ್ರಿ ಸಾಧ್ಯವಾದರೂ ಅದು ತಳಮಟ್ಟದ ಕಾರ್ಯಕರ್ತರು ಹಾಗು ಈ ಪಕ್ಷಗಳ ಮತದಾರರಿಗೆ ತಲುಪುವಷ್ಟು ಪರಿಣಾಮಕಾರಿಯಾಗಲಿದೆಯೇ ಎಂಬುದು. ಆಮ್ ಆದ್ಮಿ ಹಾಗು ಕಾಂಗ್ರೆಸ್ ಈ ವೇದಿಕೆಯಲ್ಲಿ ಒಂದಾಗೋದೇ ಡೌಟ್. ವೇದಿಕೆಯಲ್ಲಿ ಒಂದಾದರೂ ನಾಳೆ ಮೈತ್ರಿಕೂಟದಿಂದ ಕಾಂಗ್ರೆಸ್ ಅಭ್ಯರ್ಥಿ ನಿಂತರೆ ಆಮ್ ಆದ್ಮಿಯ ಕಾರ್ಯಕರ್ತರು ಅವರಿಗಾಗಿ ಪ್ರಚಾರ ಮಾಡ್ತಾರಾ ? ಆಮ್ ಆದ್ಮಿ ಮತದಾರರು ಕಾಂಗ್ರೆಸ್ ಗೆ ಓಟು ಹಾಕ್ತಾರಾ ? ಇದು ಬಹಳ ದೊಡ್ಡ ಪ್ರಶ್ನೆ.

ಉತ್ತರ ಪ್ರದೇಶದಲ್ಲಿ ಎಸ್ಪಿ - ಬಿಎಸ್ಪಿ ಸೇರಿದಾಗ ಇದೇ ಸಮಸ್ಯೆಯಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಒಂದಾದಾಗಲೂ ಈ ಸಮಸ್ಯೆ ಎದುರಾಗಿದೆ. ಇದರಿಂದಾಗಿ ಬಿಜೆಪಿ ಹಿಂದಿಗಿಂತ ಹೆಚ್ಚು ಮತ, ಹೆಚ್ಚು ಸ್ಥಾನ ಪಡೆದಿದೆ.

ಬಿಜೆಪಿ ವಿರುದ್ಧ ಹೋರಾಟಕ್ಕೆ ತಮ್ಮೊಳಗೆ ಒಗ್ಗಟ್ಟು ಬೇಕೆಂದು ಈ ಪಕ್ಷಗಳಿಗೆ ಅರಿವಾಗಿದೆ. ಆದರೆ ಆ ಒಗ್ಗಟ್ಟು ಎಷ್ಟು ಪರಿಣಾಮಕಾರಿಯಾಗಲಿದೆ ಎಂಬುದನ್ನು ಕಾಲವೇ ಹೇಳಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News