×
Ad

ಎಟಿಪಿ ರ್ಯಾಂಕಿಂಗ್: ನಂ.1 ಸ್ಥಾನ ಕಾಯ್ದುಕೊಂಡ ಕಾರ್ಲೊಸ್ ಅಲ್ಕರಾಝ್

Update: 2023-07-17 23:43 IST

ಲಂಡನ್: ವಿಂಬಲ್ಡನ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ವಿಶ್ವದ ನಂ.2ನೇ ಆಟಗಾರ ನೊವಾಕ್ ಜೊಕೊವಿಕ್‌ರನ್ನು ಮಣಿಸಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಎತ್ತಿ ಹಿಡಿದಿರುವ ಕಾರ್ಲೊಸ್ ಅಲ್ಕರಾಝ್ ಸೋಮವಾರ ಬಿಡುಗಡೆಯಾಗಿರುವ ಎಟಿಪಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟ್ರೋಫಿಗೆ ಮುತ್ತಿಟ್ಟಿರುವ ಝೆಕ್ ಆಟಗಾರ್ತಿ ಮಾರ್ಕೆಟಾ ವೊಂಡ್ರೊಸೋವಾ ಡಬ್ಲ್ಯುಟಿಎ ರ್ಯಾಂಕಿಂಗ್‌ನಲ್ಲಿ 10ನೇ ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.

42ನೇ ಸ್ಥಾನದಲ್ಲಿದ್ದ ವೊಂಡ್ರೊಸೋವಾ 32 ಸ್ಥಾನ ಭಡ್ತಿ ಪಡೆದರು. ಶನಿವಾರ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ವೊಂಡ್ರೊಸೋವಾ ಟ್ಯುನಿಶಿಯದ ಉನ್ಸ್ ಜಾಬಿರ್‌ರನ್ನು 6-4, 6-4 ನೇರ ಸೆಟ್‌ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದ್ದರು. 24ರ ಹರೆಯದ ವೊಂಡ್ರೊಸೋವಾ ವಿಂಬಲ್ಡನ್ ಪ್ರಶಸ್ತಿ ಜಯಿಸಿದ ಕೆಳ ರ್ಯಾಂಕಿನ ಹಾಗೂ ಮೊದಲ ಶ್ರೇಯಾಂಕರಹಿತ ಆಟಗಾರ್ತಿ ಎನಿಸಿಕೊಂಡಿದ್ದರು.

ರವಿವಾರ ಜೊಕೊವಿಕ್‌ರನ್ನು 1-6, 7-6(6), 6-4, 3-6, 6-4 ಸೆಟ್ ಗಳಿಂದ ಮಣಿಸಿದ ಅಲ್ಕರಾಝ್ ಮೊದಲ ಬಾರಿ ವಿಂಬಲ್ಡನ್ ಪ್ರಶಸ್ತಿ ಯನ್ನು ಜಯಿಸಿದರು. ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಯು.ಎಸ್. ಓಪನ್ ಫೈನಲ್‌ನಲ್ಲಿ ಕಾಸ್ಪರ್ ರೂಡ್‌ರನ್ನು ಮಣಿಸಿದ್ದ ಅಲ್ಕರಾಝ್ ಎಟಿಪಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದ ಮೊದಲ ಕಿರಿಯ ಆಟಗಾರ ಎನಿಸಿ ಕೊಂಡಿದ್ದರು. ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸ್ಟೆಫನೊಸ್ ಸಿಟ್ಸಿಪಾಸ್‌ರನ್ನು ಸೋಲಿಸಿದ್ದ ಜೊಕೊವಿಕ್ ನಂ.1 ಸ್ಥಾನಕ್ಕೇರಿದರು.

ಟೆನಿಸ್ ಇತಿಹಾಸದಲ್ಲಿ ಹೆಚ್ಚಿನ ವಾರ ನಂ.1 ರ್ಯಾಂಕ್ ಕಾಯ್ದುಕೊಂಡ ಆಟಗಾರ ಎನಿಸಿಕೊಂಡರು. ಮೇನಲ್ಲಿ 20ನೇ ವರ್ಷ ಪೂರೈಸಿದ ಅಲ್ಕರಾಝ್ ಹಾಗೂ 36ರ ಹರೆಯದ ಜೊಕೊವಿಕ್ ಈ ಋತುವಿನಲ್ಲಿ ಅಗ್ರ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಅಲ್ಕರಾಝ್ 29 ವಾರದಿಂದ ಅಗ್ರಸ್ಥಾನದಲ್ಲಿ ದ್ದಾರೆ. 15 ತಿಂಗಳಿನಿಂದ ಡಬ್ಲ್ಯುಟಿಎನಲ್ಲಿ ನಂ.1 ಸ್ಥಾನದಲ್ಲಿದ್ದ ಇಗಾ ಸ್ವಿಯಾಟೆಕ್ ನಂ.2ನೇ ಸ್ಥಾನದಲ್ಲಿರುವ ಅರ್ಯನಾ ಸಬಲೆಂಕಾಗೆ ಅಗ್ರಸ್ಥಾನ ಬಿಟ್ಟುಕೊಡುವ ಸಾಧ್ಯತೆಯಿತ್ತು. ಆದರೆ ಸೋಮವಾರ ಸ್ವಿಯಾಟೆಕ್ ನಂ.1 ಸ್ಥಾನದಲ್ಲಿಯೇ ಉಳಿದಿದ್ದಾರೆ.

ವಿಂಬಲ್ಡನ್‌ನಲ್ಲಿ ಸ್ವಿಯಾಟೆಕ್ ಕ್ವಾರ್ಟರ್ ಫೈನಲ್‌ನಲ್ಲಿ ಸೋತರೆ, ಸಬಲೆಂಕಾ ಅವರು ಸೆಮಿಫೈನಲ್‌ನಲ್ಲಿ ಸೋತಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News