×
Ad

ಅಮುಲ್ ಬಾಲಕಿಯನ್ನು 'ಸೃಷ್ಟಿಸಿದ್ದ' ಖ್ಯಾತ ಕಲಾವಿದ ಸಿಲ್ವೆಸ್ಟರ್ ಡಕುನ್ಹಾ ನಿಧನ

Update: 2023-06-22 18:33 IST

Sylvester daCunha | PTI

ಮುಂಬೈ: ಅಮುಲ್‌ನ ವಿಶಿಷ್ಟ ಬಾಲಕಿಯ ಅಭಿಯಾನದ ಹಿಂದೆ ಇದ್ದ ಖ್ಯಾತ ಕಲಾವಿದ ಸಿಲ್ವೆಸ್ಟರ್ ಡಕುನ್ಹಾ (Sylvester daCunha) ಮಂಗಳವಾರ ಮುಂಬೈನಲ್ಲಿ ನಿಧನರಾಗಿದ್ದಾರೆ. ಡಕುನ್ಹಾರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಅಮುಲ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಭಾರತೀಯ ಹೈನ್ಯೋದ್ಯಮ ಒಕ್ಕೂಟದ ಹಾಲಿ ಅಧ್ಯಕ್ಷ ಆರ್.ಎಸ್.ಸೋಧಿ, ಅಮುಲ್ ಬಾಲಕಿ ಅಳುತ್ತಿರುವ ಚಿತ್ರವನ್ನು ಹಂಚಿಕೊಂಡು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಡಕುನ್ಹಾರ ನಿಧನದ ಸುದ್ದಿಯನ್ನು ದೃಢಪಡಿಸಿರುವ ಅಮುಲ್ ಬ್ರ್ಯಾಂಡ್‌ನ ಮಾಲಕತ್ವ ಹೊಂದಿರುವ ಗುಜರಾತ್ ಸಹಕಾರ ಹಾಲು ಮಾರುಕಟ್ಟೆ ಮಹಾ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ತಾ, "1960ರಿಂದ ಅಮುಲ್‌ನೊಂದಿಗೆ ಸಹಭಾಗಿತ್ವ ಹೊಂದಿದ್ದ ಡಕುನ್ಹಾ ಕಮ್ಯುನಿಕೇಶನ್ಸ್‌ನ ಅಧ್ಯಕ್ಷ ಹಾಗೂ ಭಾರತೀಯ ಜಾಹೀರಾತು ಉದ್ಯಮದ ದಂತಕತೆಯಾದ ಶ್ರೀ ಸಿಲ್ವೆಸ್ಟರ್ ಡಕುನ್ಹಾ ಅವರು ಕಳೆದ ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದವಾಗುತ್ತಿದೆ. ಅವರ ದುಃಖಕರ ಸಾವಿನ ಸಂತಾಪದಲ್ಲಿ ಅಮುಲ್ ಕುಟುಂಬವೂ ಭಾಗಿಯಾಗುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.

ಅಮುಲ್‌ನ ನಾಯಕರಾಗಿದ್ದ ದಂತಕತೆ ವಿ.ಕುರಿಯನ್ ಅವರು ಡಕುನ್ಹಾರ ಜಾಣ್ಮೆಯನ್ನು ಹೇಗೆ ದೃಢೀಕರಿಸಿದ್ದರು ಎಂಬ ಬಗ್ಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಹೆಮ್ಮೆಯಿಂದ ಸ್ಮರಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಡೆರೆಕ್ ಒ'ಬ್ರಿಯನ್ ಕೂಡಾ, ಸಿಲ್ವೆಸ್ಟರ್ ಡಕುನ್ಹಾರನ್ನು ಜಾಹೀರಾತು ಉದ್ಯಮದ ದಂತಕತೆ ಎಂದು ಬಣ್ಣಿಸಿದ್ದು, ಜಾಹೀರಾತು ಉದ್ಯಮದ ಮೇಲೆ ಅವರು ಬೀರಿದ ಪ್ರಭಾವದ ಕುರಿತು ಟ್ವೀಟ್ ಮಾಡಿದ್ದಾರೆ.

ಕಲಾವಿದ ಸಿಲ್ವೆಸ್ಟರ್ ಡಕುನ್ಹಾ ಅವರು ತಮ್ಮ ಪತ್ನಿ ನಿಶಾರೊಂದಿಗೆ 1966ರಲ್ಲಿ ಅಮುಲ್‌ಗಾಗಿ ಪ್ರಖ್ಯಾತ 'Utterly Butterly' ಅಭಿಯಾನಕ್ಕೆ ಜನ್ಮ ನೀಡಿದರು. ಆನಂತರ ಅದು ವಿಶ್ವಾದ್ಯಂತ ಮುದ್ದಾದ 'ಅಮುಲ್ ಬಾಲಕಿ'ಯಾಗಿ ಪರಿಚಯವಾಯಿತು. ಈ ಅಭಿಯಾನವು ತನ್ನ ವಿನೋದಮಯ ಹಾಗೂ ಸಕಾಲಿಕ ಸಂದೇಶಗಳೊಂದಿಗೆ ಅತಿ ಶೀಘ್ರದಲ್ಲೇ ಜನಪ್ರಿಯವಾಗಿ ಈ ಕಾಲಘಟ್ಟದವರೆಗೂ ವೀಕ್ಷಕರನ್ನು ಆಕರ್ಷಿಸುವ ಅಭಿಯಾನವಾಗಿಯೇ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News