×
Ad

ನಿವೃತ್ತ ಬ್ಯಾಂಕ್ ಅಧಿಕಾರಿಯ ‘ಗುಂಪು ಬಾಳೆ’ ಕೃಷಿ

Update: 2025-10-27 14:40 IST

ಚಾಮರಾಜನಗರ: ಸಾಮಾನ್ಯ ವಿಧಾನದಲ್ಲಿ ಒಂದು ಬಾಳೆ ಕಂದು ನೆಟ್ಟು ಅಕ್ಕ-ಪಕ್ಕದಲ್ಲಿ ಬೆಳೆಯುವ ಕಂದು ತೆಗೆಯಲಾಗುತ್ತದೆ. ಆದರೆ ಗುಂಪು ಬಾಳೆ ವಿಧಾನ ಹಾಗಲ್ಲ. ಒಂದು ಬಾಳೆ ನೆಟ್ಟು ಅದರ ಸುತ್ತ ಬೆಳೆಯುವ ಕಂದುಗಳನ್ನು ತೆಗೆಯದೆ ಬೆಳೆಸಲಾಗುತ್ತದೆ. ಈ ವಿಧಾನದ ಮೂಲಕ ಕೆ.ಎಂ.ನಾಗರಾಜು ಅವರು ‘ಗುಂಪು ಬಾಳೆ’ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.

ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಕಲ್ಪುರ (ಗೋವಿಂದವಾಡಿ) ಗ್ರಾಮದ ನಿವಾಸಿ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಕೆ.ಎಂ.ನಾಗರಾಜು ಅವರು ಸಾವಯವ ಕೃಷಿಯಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದಾರೆ. ತನ್ನ 3.5 ಎಕರೆಯಲ್ಲಿ ಗುಂಪು ಬಾಳೆ ಬೆಳೆದಿದ್ದಾರೆ. ಈ ಹಿಂದೆ 300 ರಸಬಾಳೆ ಗಿಡ, 270 ಏಲಕ್ಕಿ ಬಾಳೆ ನೆಟ್ಟು ನೆಟ್ಟಿದ್ದರು. 200ಕ್ಕೂ ಹೆಚ್ಚು ತೆಂಗಿನ ಮರಗಳು ನಳನಳಿಸುತ್ತಿವೆ. ಊರಿನ ಒಳಗೆ ಇರುವ 4 ಎಕರೆ ಜಮೀನಿನಲ್ಲಿ 300 ತೆಂಗಿನ ಮರ, ಟೊಮೆಟೊ ಬೆಳೆಯುತ್ತಿದ್ದಾರೆ.

ಕೆ.ಎಂ.ನಾಗರಾಜು ಅವರು ವಿಷಮುಕ್ತ ಆಹಾರ ಉತ್ಪಾದನೆ ಮಾಡಬೇಕೆಂಬ ಉದ್ದೇಶದಿಂದ ಸಾವಯವ ವಿಧಾನದಲ್ಲಿ ಕೃಷಿ ಪ್ರಾರಂಭಿಸಿದರು. ಎರಡು ಕಡೆ ಇರುವ ತೋಟಗಳಲ್ಲಿ ಜೀವಾಮೃತ ತಯಾರಿಕೆ ತೊಟ್ಟಿಗಳನ್ನು ನಿರ್ಮಾಣ ಮಾಡಿಸಿದ್ದಾರೆ. ಸಾವಿರ ಲೀಟರ್‌ನ ಎರಡು ತೊಟ್ಟಿಗಳಲ್ಲಿ ಜೀವಾಮೃತ ತಯಾರಿಸಲು 50 ಕೆ.ಜಿ ಸಗಣಿ, 10 ಕೆ.ಜಿ ಕೊಬ್ಬರಿ ಹಿಂಡಿ, 10 ಕೆ.ಜಿ ಹುರುಳಿ ಹಿಟ್ಟು, 10 ಕೆ.ಜಿ ಬೆಲ್ಲ ಹಾಕಿ 10 ದಿನ ಕೊಳೆಸಿ ಬಳಿಕ ಬೆಳೆಗಳಿಗೆ ಜೀವಾಮೃತ ನೀಡುತ್ತಿದ್ದಾರೆ.

ಕೊಟ್ಟಿಗೆ ಗೊಬ್ಬರ, ಕೋಳಿ ಗೊಬ್ಬರ, ಕುರಿ ಗೊಬ್ಬರವನ್ನು ಹಾಕಿಸುತ್ತಿದ್ದಾರೆ. ಕಳೆ ಇದ್ದರೆ ಬೆಳೆ ಎಂದು ನಂಬಿರುವ ಹಿನ್ನೆಲೆಯಲ್ಲಿ ಕಳೆಯನ್ನು ಕೊಳೆಸಿ ಭೂಮಿಯ ಫಲವತತ್ತೆ ಹೆಚ್ಚಳ ಮಾಡುತ್ತಿದ್ದಾರೆ. ಎರೆಹುಳಗಳು ಮಣ್ಣಿನಲ್ಲಿ ಎದ್ದು ಕಾಣುತ್ತಿವೆ. ಘಮಲಿನಿಂದ ಕೂಡಿರುವ ಮಣ್ಣು ಉತ್ತಮವಾಗಿದೆ. ಬೋರ್‌ವೆಲ್ ಮೂಲಕ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ.

ಗುಂಪು ಬಾಳೆ ವಿಧಾನದಲ್ಲಿ ಸಾವಯವ ಪದ್ಧತಿ ಅನುಸರಿಸಿ ಸಮೃದ್ಧವಾದ ಬಾಳೆ ಬೆಳೆಯಲಾಗುತ್ತಿದೆ. ಕಂದುಗಳಲ್ಲಿ ಕಾಯಿ ಕಚ್ಚಿರುವ ಬಾಳೆ ಗೊನೆಗಳು ಅಧಿಕ ತೂಕದಿಂದ ಕೂಡಿವೆ. ಇದು ಕೃಷಿಯ ಸಮೃದ್ಧತೆಯ ಸಂಕೇತವಾಗಿ ಕಾಣುತ್ತಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಳೆಗೆ ಬಾಳೆ ಗೊನೆಗಳು ಮಾರಾಟವಾಗುತ್ತಿವೆ.

ರಾಸಾಯನಿಕ ಬಳಸಿ ಉತ್ಪಾದನೆ ಮಾಡಿದ ಆಹಾರದಲ್ಲಿ ರುಚಿ ಇಲ್ಲ, ಸತ್ವವಿಲ್ಲದಂತಾಗುತ್ತಿದೆ. ಹಾಗಾಗಿ ನನಗೆ ಅದರ ಮೇಲೆ ಒಲವಿಲ್ಲ. ಜಮೀನಿಗೆ ಬೆಂಕಿ ಹಾಕಲ್ಲ, ಸಾವಯವ ಕೃಷಿ ಶ್ರೀಮಂತರಿಗೆ ಮಾತ್ರ ಎನ್ನುವುದರಲ್ಲಿ ಅರ್ಥವಿಲ್ಲ. ಬಡವ ಮೂಟೆಗಟ್ಟಲೆ ಗೊಬ್ಬರಕ್ಕೆ ಹಣ ಪೋಲು ಮಾಡುವುದೂ ಇದೆ. ಪ್ರಕೃತಿಗೆ ಪೂರಕವಾಗಿ ಕೃಷಿ ಮಾಡಿದರೆ ಫಲ ದೊರೆಯುತ್ತದೆ.

-ಕೆ.ಎಂ.ನಾಗರಾಜು

ಸಾವಯವ ವಿಧಾನವೇ ಅತ್ಯುತ್ತಮ. ಆದರೆ ಇದರಲ್ಲಿ ಶ್ರಮವಿದೆ. ಜಮೀನಿನ ಮಾಲಕರ ಮಾರ್ಗದರ್ಶನದಲ್ಲಿ ಗುಂಪು ಬಾಳೆ ವಿಧಾನದಲ್ಲಿ ಉತ್ತಮವಾಗಿ ಬೆಳೆ ಬೆಳೆಯುತ್ತಿದ್ದೇವೆ.

-ಪುಟ್ಟೇಶ್, ಜಮೀನಿನ ಕೆಲಸಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾ.ಅಶ್ವಥ್ ಕುಮಾರ್

contributor

Similar News