×
Ad

ದಿಲ್ಲಿಯ ಕೆಂಪು ಕೋಟೆ: ಮೊಗಲರ ವೈಭವ, ಇತಿಹಾಸ, ಸಂಸ್ಕೃತಿಯ ಜೀವಂತ ಸ್ಮಾರಕ

Update: 2026-01-12 13:01 IST

ದಿಲ್ಲಿ: ಭಾರತದ ರಾಜಧಾನಿ ದಿಲ್ಲಿಯ ಹೃದಯಭಾಗದಲ್ಲಿರುವ ಕೆಂಪು ಕೋಟೆ(ಲಾಲ್ ಕಿಲಾ-ರೆಡ್ ಫೋರ್ಟ್) ಭಾರತದ ಅತ್ಯಂತ ಮಹತ್ವದ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ. ಮೊಗಲ್ ಸಾಮ್ರಾಜ್ಯದ ವೈಭವ, ಶಿಲ್ಪಕಲೆಯ ಶ್ರೇಷ್ಠತೆ, ಭಾರತದ ಇತಿಹಾಸ, ಸಂಸ್ಕೃತಿ, ಸ್ವಾತಂತ್ರ್ಯ ಹೋರಾಟದ ಜೀವಂತ ಸಾಕ್ಷಿಯಾಗಿ ಈ ಕೋಟೆ ನಮ್ಮ ಮುಂದೆ ನಿಂತಿದೆ. ಸುಮಾರು 378 ವರ್ಷಗಳ ನಂತರವೂ ಈ ಕೋಟೆ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.

ಮೊಗಲ್ ಚಕ್ರವರ್ತಿ ಜಲಾಲುದ್ದೀನ್ ಮುಹಮ್ಮದ್ ಅಕ್ಬರ್ ನಿಧನದ ನಂತರ ಪಟ್ಟಕ್ಕೇರಿದ ಆತನ ಪುತ್ರ ಶಾಹಜಹಾನ್, ಮೊಗಲ್ ಸಾಮ್ರಾಜ್ಯದ ರಾಜಧಾನಿಯನ್ನು ಉತ್ತರಪ್ರದೇಶದ ಆಗ್ರಾದಿಂದ ದಿಲ್ಲಿಗೆ ಸ್ಥಳಾಂತರಿಸಿದರು. ತನ್ನ ನೂತನ ರಾಜಧಾನಿ ಶಾಹಜಹಾನಬಾದ್(ಇಂದಿನ ದಿಲ್ಲಿ)ಗೂ ಆಗ್ರಾದಲ್ಲಿರುವ ಕೆಂಪುಕೋಟೆಯಂತೆ ಭವ್ಯವಾದ ಕೋಟೆ ನಿರ್ಮಾಣ ಮಾಡಲು ಆದೇಶಿಸಿದರು. ಅದರಂತೆ, ಕ್ರಿ.ಶ.1638ರಲ್ಲಿ ಆರಂಭವಾದ ಕೋಟೆ ನಿರ್ಮಾಣ ಕಾರ್ಯವು 1648ರಲ್ಲಿ ಪೂರ್ಣಗೊಂಡಿತು.

ಶಾಹಜಹಾನ್ ಈ ಕೋಟೆಯನ್ನು ‘ಕಿಲಾ-ಎ-ಮುಬಾರಕ್’ (ಶುಭ ಹಾರೈಕೆಯ ಕೋಟೆ) ಎಂದು ಕರೆದಿದ್ದರು. ಕ್ರಿ.ಶ.1648 ರಿಂದ ಸರಿ ಸುಮಾರು 200 ವರ್ಷಗಳ ಕಾಲ ಈ ಕೋಟೆಯೂ ಮೊಗಲ್ ಚಕ್ರವರ್ತಿಗಳ ನಿವಾಸ ಹಾಗೂ ಆಡಳಿತದ ಶಕ್ತಿ ಕೇಂದ್ರವಾಗಿತ್ತು. ವಿಶ್ವಪ್ರಸಿದ್ಧ ತಾಣ ‘ತಾಜ್ ಮಹಲ್’ ನಿರ್ಮಾಣದ ವಾಸ್ತುಶಿಲ್ಪಿ ಉಸ್ತಾದ್ ಅಹ್ಮದ್ ಲಾಹೋರಿ ಉಸ್ತುವಾರಿಯಲ್ಲಿ ಇಂಡೋ-ಇಸ್ಲಾಮಿಕ್, ಪರ್ಷಿಯನ್ ವಾಸ್ತುಶಿಲ್ಪಶೈಲಿಯೊಂದಿಗೆ ಕೆಂಪು ಕೋಟೆಯನ್ನು ನಿರ್ಮಿಸಲಾಯಿತು.

ಆಗ್ರಾದಿಂದ ಕೆಂಪು ಮರಳುಗಲ್ಲನ್ನು ತರಿಸಿ ನಿರ್ಮಿ ಸಿರುವ ಈ ಕೋಟೆಯ ಒಳಗಡೆ ‘ದಿವಾನ್ ಎ ಖಾಸ್’ ಹಾಗೂ ‘ದಿವಾನ್ ಎ ಆಮ್’, ‘ಮೋತಿ ಮಸೀದಿ’, ‘ರಂಗ ಮಹಲ್’, ‘ಹಮಾಮ್’ ಆಕರ್ಷಣೀಯವಾಗಿದೆ. ಇದಲ್ಲದೆ, ರಾಜಸ್ಥಾನದ ಮಖ್ರಾನದಿಂದ ತರಿಸಿರುವ ಬಿಳಿ ಅಮೃತಶಿಲೆಗಳಿಂದ ಮೊಗಲ್ ಚಕ್ರವರ್ತಿಗಳು ಹಾಗೂ ಅವರ ಕುಟುಂಬ ಸದಸ್ಯರ ನಿವಾಸಗಳನ್ನು ನಿರ್ಮಿಸಲಾಗಿದೆ. ಯಮುನಾ ನದಿಯ ದಡದಲ್ಲಿರುವ ಈ ಕೋಟೆಯ ಗೋಡೆಗಳು ಸುಮಾರು 33 ಮೀಟರ್ ಎತ್ತರವಿದ್ದು, ಆಗ್ರಾದಲ್ಲಿರುವ ಕೋಟೆಯಂತೆಯೆ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ದಿವಾನ್ ಎ ಆಮ್‌ನಲ್ಲಿ ಸಾಮಾನ್ಯ ಜನರ ಅಹವಾಲುಗಳನ್ನು ಮೊಗಲ್ ಚಕ್ರವರ್ತಿಗಳು ಆಲಿಸುತ್ತಿದ್ದರು. ಅರಸರು ಆಸೀನರಾಗಲು ಬಿಳಿ ಅಮೃತಶಿಲೆಯಿಂದ ನಿರ್ಮಿಸಿರುವ ಎತ್ತರದ ಆಸನವು ಆಕರ್ಷಕವಾಗಿದೆ. ದಿವಾನ್ ಎ ಖಾಸ್ ನಲ್ಲಿ ದೇಶ, ವಿದೇಶದಿಂದ ಬರುವಂತಹ ರಾಯಭಾರಿಗಳು, ಅತಿಗಣ್ಯ ವಕ್ತಿಗಳು, ಅತಿಥಿಗಳೊಂದಿಗೆ ಸಭೆ, ಸಮಾರಂಭಗಳನ್ನು ನಡೆಸಲಾಗುತ್ತಿತ್ತು. ರಂಗ ಮಹಲ್ ರಾಜಕುಟುಂಬದ ಮಹಿಳೆಯರ ನಿವಾಸವಾಗಿತ್ತು. ಅಲ್ಲಿ ಮಹಿಳೆಯರ ಮನರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು.

ಲಾಹೋರಿ ಗೇಟ್: ಕೆಂಪು ಕೋಟೆಯ ಪ್ರಮುಖ ಪ್ರವೇಶ ದ್ವಾರ ಲಾಹೋರಿ ಗೇಟ್. ಈ ದ್ವಾರದಿಂದ ಉತ್ತರ ದಿಕ್ಕಿನ ಲಾಹೋರ್ ಕಡೆಗೆ ಹೋಗುವ ಮಾರ್ಗ ಇದ್ದುದರಿಂದ ಇದನ್ನು ಲಾಹೋರಿ ಗೇಟ್ ಎಂದು ಕರೆಯಲಾಗುತ್ತಿತ್ತು. ಕೆಂಪುಮರಳುಗಲ್ಲಿನಿಂದ ನಿರ್ಮಿತವಾಗಿರುವ ಈ ಪ್ರವೇಶ ದ್ವಾರದ ಮೇಲೆ ಮೊಗಲ್ ಶೈಲಿಯ ಕಮಾನುಗಳು, ಅಲಂಕಾರಿಕ ವಿನ್ಯಾಸಗಳನ್ನು ಕೆತ್ತಲಾಗಿದೆ. ಲಾಹೋರಿ ಗೇಟ್ ಕೇವಲ ಒಂದು ದ್ವಾರ ಮಾತ್ರವಲ್ಲ, ಅದು ಭಾರತದ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಒಂದೇ ರೇಖೆಯಲ್ಲಿ ಜೋಡಿಸುವ ಜೀವಂತ ಸ್ಮಾರಕವಾಗಿದೆ. ಪ್ರತಿವರ್ಷ ಆಗಸ್ಟ್ 15ರಂದು ಭಾರತದ ಪ್ರಧಾನಮಂತ್ರಿ ಈ ಪ್ರವೇಶ ದ್ವಾರದ ಬಳಿಯೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ.

ಹಮಾಮ್: ರಾಜಮನೆತನದವರ ಸ್ನಾನಕ್ಕಾಗಿ ನಿರ್ಮಿಸಲಾಗಿರುವ ಸ್ನಾನಗೃಹ(ಹಮಾಮ್)ರಚನೆಯನ್ನು ಅತಂತ್ಯ ವೈಜ್ಞಾನಿಕವಾಗಿ ರೂಪಿಸಲಾಗಿದೆ. ಇದರಲ್ಲಿ ಬೇಸಿಗೆ, ಚಳಿ ಹಾಗೂ ಮಳೆಗಾಲದ ವಾತಾವರಣಕ್ಕೆ ಅನುಗುಣವಾಗಿ ಸ್ನಾನಕ್ಕೆ ನೀರು ಲಭ್ಯವಿರುವಂತೆ ವಿನ್ಯಾಸಗೊಳಿಸಲಾಗಿದೆ. ನೆಲದ ಒಳಭಾಗದಲ್ಲಿ ಹರಿಯುವ ನೀರಿನ ಕಾಲುವೆಗಳು ಹಾಗೂ ಬಿಸಿ ನೀರನ್ನು ಒದಗಿಸುವ ವ್ಯವಸ್ಥೆಗಳು, ಮೊಗಲರಲ್ಲಿನ ವೈಜ್ಞಾನಿಕ ದೃಷ್ಟಿಕೋನವನ್ನು ಬಿಂಬಿಸುತ್ತದೆ. ಹಮಾಮ್‌ನ ಒಳಾಂಗಣದಲ್ಲಿ ಬಿಳಿ ಅಮೃತಶಿಲೆಯ ನೆಲ, ಬಣ್ಣ ಬಣ್ಣದ ಅಲಂಕಾರಗಳು ಹಾಗೂ ಗೋಡೆಗಳ ಮೇಲೆ ಕಂಡು ಬರುವಂತಹ ಸೂಕ್ಷ್ಮ ಚಿತ್ರಣಗಳು ಗಮನ ಸೆಳೆಯುತ್ತವೆ. ಗಾಳಿ, ಬೆಳಕಿನ ಸಂಚಲನಕ್ಕಾಗಿ ಚಿಕ್ಕ ಚಿಕ್ಕ ಕಿಟಕಿಗಳನ್ನು ನಿರ್ಮಿಸಲಾಗಿದೆ.

ರಂಗ್ ಮಹಲ್: ರಾಜಕುಟುಂಬದ ಮಹಿಳೆಯರು ವಾಸ ಮಾಡುತ್ತಿದ್ದ ಸ್ಥಳ ‘ರಂಗ್ ಮಹಲ್’. ಈ ಅರಮನೆಯ ಗೋಡೆಗಳು ಮತ್ತು ಮೇಲ್ಛಾವಣಿಯನ್ನು ಬಣ್ಣ ಬಣ್ಣದ ಚಿತ್ತಾರಗಳು, ಹೂವಿನ ಚಿತ್ರಗಳು ಹಾಗೂ ಅಮೂಲ್ಯ ರತ್ನಗಳಿಂದ ಅಲಂಕರಿಸಲಾಗಿತ್ತು. ರಂಗ್ ಮಹಲ್‌ನ ವಾಸ್ತುಶಿಲ್ಪವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅರಮನೆಯ ನೆಲಭಾಗದಲ್ಲಿ ಹರಿಯುವ ನೀರಿನ ಕಾಲುವೆಯಿಂದಾಗಿ ಕೊಠಡಿಗಳಲ್ಲಿ ತಂಪಾದ ವಾತಾವರಣ ನಿರ್ಮಾಣವಾಗುತ್ತಿತ್ತು. ಇಲ್ಲಿ ರಾಜಕುಟುಂಬದ ಸದಸ್ಯರಿಗಾಗಿ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು.

ಮೋತಿ ಮಸೀದಿ

ಕೆಂಪು ಕೋಟೆಯ ಸಂಕೀರ್ಣದೊಳಗೆ ನಿರ್ಮಿಸಲಾಗಿರುವ ಮೋತಿ ಮಸೀದಿಯು ಮೊಗಲ್ ವಾಸ್ತಶಿಲ್ಪದ ಸೌಂದರ್ಯವನ್ನು ಸರಳತೆಯ ಮೂಲಕ ವ್ಯಕ್ತಪಡಿಸುವ ಅಪರೂಪದ ಸ್ಮಾರಕವಾಗಿದೆ. ಮೋತಿ ಮಸೀದಿಯನ್ನು ಮೊಗಲ್ ಚಕ್ರವರ್ತಿ ಔರಂಗಜೇಬ್ ನಿರ್ಮಿಸಿದರು. ಸಂಪೂರ್ಣವಾಗಿ ಬಳಿ ಅಮೃತಶಿಲೆಯಿಂದ ನಿರ್ಮಿಸಲಾದ ಈ ಮಸೀದಿ, ತನ್ನ ಹೊಳಪು ಮತ್ತು ಶಿಲ್ಪಕಲೆಯಿಂದಲೇ ಮೋತಿ(ಮುತ್ತು) ಎಂಬ ಹೆಸರನ್ನು ಪಡೆದಿದೆ. ಮೊಗಲ್ ಅರಮನೆಯ ಖಾಸಗಿ ಆರಾಧನಾ ಸ್ಥಳವಾಗಿ ಈ ಮಸೀದಿ ಬಳಸಲ್ಪಡುತ್ತಿತ್ತು. ಮೂರು ಗುಂಬಝ್‌ಗಳು, ಕಮಾನುಗಳು, ಒಳಾಂಗಣದಲ್ಲಿನ ಅಮೃತಶಿಲೆಯ ನೆಲ ಹಾಗೂ ಗೋಡೆಗಳು, ಪ್ರಾರ್ಥನೆಗೆ ಅಗತ್ಯವಾದ ಶಾಂತ ವಾತಾವರಣವನ್ನು ಒದಗಿಸುತ್ತದೆ. ಕಾಲಾನುಕ್ರಮದಲ್ಲಿ ಕೆಂಪುಕೋಟೆಯಲ್ಲಿ ಅನೇಕ ಬದಲಾವಣೆಗಳು ಕಂಡರೂ ಮೋತಿ ಮಸೀದಿ ತನ್ನ ಸರಳ ಸೌಂದರ್ಯ, ಧಾರ್ಮಿಕ ಗುರುತನ್ನು ಕಳೆದುಕೊಳ್ಳದೆ ಉಳಿದಿದೆ. ಇಂದಿಗೂ ಕೆಂಪು ಕೋಟೆ ವೀಕ್ಷಿಸಲು ಬರುವಂತಹ ಪ್ರವಾಸಿಗರಿಗೆ ಮೋತಿ ಮಸೀದಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ವಿಶ್ವ ಪಾರಂಪರಿಕ ತಾಣ

2007ರಲ್ಲಿ ಯುನೆಸ್ಕೋ ಸಂಸ್ಥೆಯು ದಿಲ್ಲಿಯ ಕೆಂಪು ಕೋಟೆಯನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸುವ ಮೂಲಕ, ಈ ಕಟ್ಟಡದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿತು. ಪ್ರತಿ ದಿನ ಸಂಜೆ ನಡೆಯುವ ಬೆಳಕು ಮತ್ತು ಧ್ವನಿಯ ಪ್ರದರ್ಶನ(ಲೈಟ್ ಮತ್ತು ಸೌಂಡ್ ಶೋ)ದ ಮೂಲಕ ಕೋಟೆಯ ಇತಿಹಾಸ, ಮೊಗಲರ ಆಡಳಿತವನ್ನು ಜನರಿಗೆ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮನಮುಟ್ಟುವ ರೀತಿಯಲ್ಲಿ ಪರಿಚಯಿಸಲಾಗುತ್ತದೆ. ಅಲ್ಲದೇ, ಕೋಟೆಯ ಒಳಗಡೆ ಇರುವಂತಹ ವಸ್ತು ಸಂಗ್ರಹಾಲಯವು ಮೊಗಲರ ಇತಿಹಾಸ, ಸಂಸ್ಕೃತಿಯ ಸೊಬಗನ್ನು ಪರಿಚಯಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಮ್ಜದ್ ಖಾನ್ ಎಂ.

contributor

Similar News