ನಾಡ ಪಿಎಚ್‌ಸಿಯನ್ನು ಮೇಲ್ದರ್ಜೆಗೇರಿಸುವ ಬೇಡಿಕೆ ಮತ್ತೆ ಮುನ್ನೆಲೆಗೆ
ಕುಂದಾಪುರ : ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಪ್ರತಿದಿನ ಸರಾಸರಿ ನೂರಕ್ಕೂ ಮಿಕ್ಕಿ ರೋಗಿಗಳು ಆಗಮಿಸಿ ಆಗತ್ಯ ಆರೋಗ್ಯ ಚಿಕಿತ್ಸೆ ಪಡೆಯುವ ಗ್ರಾಮೀಣ ಭಾಗದ ಜನರ ಆಶಾಕಿರಣವಾಗಿರುವ ನಾಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು ಎನ್ನುವುದು ಬಹುವರ್ಷಗಳ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.
ಹಿಂದೆ ಬಹಳಷ್ಟು ಸಲ ಈ ಬೇಡಿಕೆ ಸಾರ್ವಜನಿಕರಿಂದ ಕೇಳಿಬಂದಿದ್ದರೂ, ಪ್ರತಿಬಾರಿಯೂ ಒಂದಿಲ್ಲೊಂದು ಕಾರಣದಿಂದ ಹಿನ್ನೆಲೆಗೆ ಸರಿದು ಬಿಡುತ್ತಿತ್ತು. ಹೀಗಾಗಿ ಅದಿನ್ನೂ ಈಡೇರಿಲ್ಲ. ಅದಕ್ಕೆ ಅಗತ್ಯದಷ್ಟು ಜನರ ಬೆಂಬಲದ ಕೊರತೆಯೂ ಕಾರಣವಾಗಿತ್ತು. ಆದರೆ ಈಗ ಬೇಡಿಕೆ ಮುನ್ನೆಲೆಗೆ ಬರಲು ಮುಖ್ಯ ಕಾರಣ ಸದ್ಯ ಪ್ರಾಥಮಿಕ ಆರೋಗ್ಯಕ್ಕೆ ಅಗತ್ಯದಷ್ಟು ಸಿಬ್ಬಂದಿ ಇಲ್ಲದೇ, ಗ್ರಾಮೀಣ ಭಾಗದ ಜನರಿಗೆ ನಿರಂತರ ಆರೋಗ್ಯ ಸೇವೆ ಒದಗಿಸಲು ತೊಡಕಾಗುತ್ತಿದೆ. ಇದರಿಂದ ಜನರು ದುಬಾರಿಯಾದ ಖಾಸಗಿ ವ್ಯವಸ್ಥೆಯನ್ನು ನೆಚ್ಚಿ ಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿರುವುದು.
ನಾಡ, ಬಡಾಕೆರೆ, ಹಡವು, ಸೇನಾಪುರ ಗ್ರಾಮಗಳಿಗೆ ಸಂಬಂಧಪಡುವ ಆಸ್ಪತ್ರೆ ಇದಾಗಿದ್ದು, ಇದಲ್ಲದೆ ಮೊವಾಡಿ, ಪಡುಕೋಣೆ, ಮೊವಾಡಿ, ಮರವಂತೆ ಸಹಿತ ಹತ್ತಾರು ಊರುಗಳ ಜನರಿಗೆ ಅನಾರೋಗ್ಯ ಉಂಟಾದಾಗ ಇಲ್ಲಿಗೆ ಬರುತ್ತಾರೆ. 50 ವರ್ಷಗಳಿಗೂ ಹೆಚ್ಚು ಕಾಲದಿಂದ ಇರುವ ಈ ಆಸ್ಪತ್ರೆಯು ಮೊದಲು ದಿನದ 24ಗಂಟೆಯೂ ಕಾರ್ಯಾಚರಿಸುತ್ತಿದ್ದು, ರೋಗಿಗಳು ಬರುವುದು ಕಡಿಮೆಯಾಗಿದ್ದರಿಂದ ಈಗ ಅದು ಸ್ಥಗಿತಗೊಂಡು ಹಲವು ವರ್ಷಗಳೇ ಸಂದಿವೆ.
4 ಗ್ರಾಮಗಳ 12,228 ಜನರು ಈ ಆಸ್ಪತ್ರೆ ವ್ಯಾಪ್ತಿಗೆ ಬರುತ್ತಾರೆ. ನಾಡ ಸುತ್ತಮುತ್ತಲಿನ ಹತ್ತಾರು ಊರುಗಳಿಗೆ ಇದೇ ಆಸ್ಪತ್ರೆ ಆಸರೆಯಾಗಿದ್ದು, ದಿನವೊಂದಕ್ಕೆ ಸರಾಸರಿ 80ರಿಂದ 90 ಮಂದಿ ರೋಗಿಗಳು ಇಲ್ಲಿಗೆ ಚಿಕಿತ್ಸೆಗಾಗಿ ಬರುತ್ತಾರೆ. ಕೆಲವೊಮ್ಮೆ ಈ ಸಂಖ್ಯೆ 100-120ರ ಗಡಿಯೂ ದಾಟುತ್ತದೆ. ಸಿಬ್ಬಂದಿ ಕೊರತೆ ನಡುವೆಯೂ ಇರುವಂತಹ ವೈದ್ಯರು, ಸಿಬ್ಬಂದಿ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಪ್ರಮುಖವಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಜ್ವರ, ಕೆಮ್ಮು, ಶೀತ ಇನ್ನಿತರ ಕಾಯಿಲೆಗಳಿರುವ ರೋಗಿಗಳು ಇಲ್ಲಿಗೆ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಾರೆ.
ಹುದ್ದೆಗಳು ಖಾಲಿ ಖಾಲಿ: ಈ ಆಸ್ಪತ್ರೆಗೆ ಮಂಜೂರಾದ ಹುದ್ದೆಗಳು ಒಟ್ಟು 17. ಒಬ್ಬ ವೈದ್ಯಾಧಿಕಾರಿ, ಫಾರ್ಮಾಸಿಸ್ಟ್, ಪ್ರಥಮ ದರ್ಜೆ ಸಹಾಯಕ ಹುದ್ದೆ ಖಾಲಿಯಿದ್ದು, ಹೊರಗಿನಿಂದ ನಿಯೋಜಿಸಲಾಗಿದೆ. ಲ್ಯಾಬ್ ಟೆಕ್ನೀಶಿಯನ್ ಇದ್ದಾರೆ. ಹಿರಿಯ ಪ್ರೈಮರಿ ಹೆಲ್ತ್ ಕೇರ್ ಅಧಿಕಾರಿಯಿದ್ದರೂ, ಅವರಿಗೆ ತಾಲೂಕು ಜವಾಬ್ದಾರಿ ನೀಡಲಾಗಿದೆ. ಆರೋಗ್ಯ ನಿರೀಕ್ಷಣಾಧಿಕಾರಿ 1 ಹುದ್ದೆ ಖಾಲಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ 5ರಲ್ಲಿ ಇಬ್ಬರು ಇದ್ದಾರೆ.
ಇನ್ನು 4 ಉಪ ಆರೋಗ್ಯ ಕೇಂದ್ರಗಳಿಗೆ 4 ಸಿಎಚ್‌ಒ ಗಳಿದ್ದಾರೆ. 1 ಸ್ಟಾಫ್ ನರ್ಸ್ ಇದ್ದು, ಇನ್ನೊಂದು ಖಾಲಿಯಿದೆ. ಡಾಟಾ ಎಂಟ್ರಿ ಆಪರೇಟರ್ ಒಬ್ಬರಿದ್ದಾರೆ. ಈ ಆಸ್ಪತ್ರೆಯು ತಾಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ.ಗೂ ಹೆಚ್ಚು ದೂರವಿದೆ. ಅದಲ್ಲದೇ ಅತೀ ಹೆಚ್ಚು ರೋಗಿಗಳು ಬರುವ ಆಸ್ಪತ್ರೆಯೂ ಆಗಿರುವುದರಿಂದ ಯಾರಿಗಾದರೂ ತುರ್ತು ಅನಾರೋಗ್ಯ ಉಂಟಾದರೆ ಕುಂದಾಪುರಕ್ಕೆ ತೆರಳಬೇಕು. ಅದಕ್ಕಾಗಿ ಗ್ರಾಮೀಣ ಭಾಗದ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎನ್ನುವ ಬೇಡಿಕೆ ಅನೇಕ ವರ್ಷಗಳಿಂದ ಇದೆ.
ಎಲ್ಲ ಸವಲತ್ತುಗಳಿದ್ದರೂ ಕೂಡ ಸಿಬ್ಬಂದಿ ಕೊರತೆಯಿಂದ ಸ್ಥಳೀಯರಿಗೆ ತೊಂದರೆ ಆಗುತ್ತಿದೆ. ನಿವೃತ್ತಿ ಹೊಂದಿದ ಮತ್ತು ಇಲ್ಲಿಂದ ಬೇರೆ ಕಡೆ ವರ್ಗಾವಣೆಗೊಂಡ ಸಿಬ್ಬಂದಿಯ ಬದಲು ಹೊಸಬರ ಭರ್ತಿ ಆಗಿಲ್ಲ. ಹೊರಗುತ್ತಿಗೆ ಆಧಾರದ ಮೇಲೆ ಇರುವ ಸ್ಟಾಪ್ ನರ್ಸ್ ಮತ್ತು ಡಿ ಗ್ರೂಪ್, ಲ್ಯಾಬ್ ಟೆಕ್ನೀಶಿಯನ್ ನೌಕರರು ಹೊರತುಪಡಿಸಿ ಬೇರೆ ಯಾರು ಕಾಣುತ್ತಿಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ. ಆದಷ್ಟು ಬೇಗ ಸಿಬ್ಬಂದಿ ನೇಮಕಾತಿ ಆಗಲಿ.
-ಗೋಪಾಲಕೃಷ್ಣ ನಾಡ, ಸ್ಥಳೀಯರು.
ಸಮುದಾಯ ಆರೋಗ್ಯ ಕೇಂದ್ರವಾದರೆ ಅನುಕೂಲ
ಸಮುದಾಯ ಆರೋಗ್ಯ ಕೇಂದ್ರವಾದರೆ ಈಗಿರುವ ಹಳೆಯ ಕಟ್ಟಡದ ಬದಲು ಹೊಸ ಕಟ್ಟಡ ಆಗಲಿದ್ದು, 30 ಬೆಡ್‌ಗಳು ಹೆಚ್ಚುವರಿಯಾಗಿ ಸಿಗಲಿವೆ. ಇದರೊಂದಿಗೆ ಈಗಿರುವ ವೈದ್ಯರೊಂದಿಗೆ ಹೆರಿಗೆ ತಜ್ಞರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರ ನೇಮಕಾತಿಯಾಗುತ್ತದೆ. ಹೆಚ್ಚಿನ ಸಿಬ್ಬಂದಿಯು ನೇಮಕವಾಗಲಿದ್ದಾರೆ. ಇದಕ್ಕೆ ಮುಖ್ಯವಾಗಿ ಆಸ್ಪತ್ರೆ ವ್ಯಾಪ್ತಿಯಲ್ಲಿ ಒಂದು ಲಕ್ಷ ಜನಸಂಖ್ಯೆ ಬೇಕಿದ್ದು, ಈಗಿರುವ ಗ್ರಾಮಗಳ ಪ್ರಕಾರ ಇಲ್ಲಿರುವುದು 12 ಸಾವಿರ ಜನ. ಆಸುಪಾಸಿನ ಕೆಲ ಗ್ರಾಮಗಳನ್ನು ಸೇರಿಸಿಕೊಂಡರೆ ಇದು ತಲುಪಬಹುದು.
ಆದರೆ ಈ ಪ್ರಸ್ತಾವ ಈಗ ನನೆಗುದಿಗೆ ಬಿದ್ದಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ 2 ಎಕರೆ ಜಾಗದ ಅಗತ್ಯವಿದ್ದು, ಇಲ್ಲಿ ಕೇವಲ 60 ಸೆಂಟ್ಸ್ ಜಾಗ ಮಾತ್ರವಿದೆ. ಸೇನಾಪುರದಲ್ಲಿ ಜಾಗವಿದ್ದರೂ, ಅದು ದೂರವಾಗುತ್ತದೆ. ನಾಡದಲ್ಲಿಯೇ ಗ್ರಾಪಂ ಜಾಗ ಒದಗಿಸುವ ಕಾರ್ಯವನ್ನು ಸಂಬಂಧಪಟ್ಟವರು ಮಾಡಬೇಕಿದೆ.