ಜನಪ್ರತಿನಿಧಿಗಳ ಭಿನ್ನಾಭಿಪ್ರಾಯದಿಂದ ಪಾಳು ಬಿದ್ದಿರುವ ಬಾಬೂಜಿ ಭವನ
ಪೂರ್ಣಗೊಂಡು ವರ್ಷವಾದರೂ ಉದ್ಘಾಟನೆಯಾಗದ ಭವನ
ಕೋಲಾರ : ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳ ಒಳ ಜಗಳದಿಂದಾಗಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾದ ಡಾ.ಬಾಬು ಜಗಜೀವನ್ ರಾಮ್ ಭವನ ಪೂರ್ಣಗೊಂಡು ವರ್ಷವಾದರೂ ಉದ್ಘಾಟನೆಗೊಳ್ಳದೆ ಪಾಳುಕೊಂಪೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗಳಿಗೆ ಗ್ರಾಸವಾಗಿದೆ.
ದಲಿತ ಸಮುದಾಯದ ಒಕ್ಕೊರಲ ಒತ್ತಾಯಕ್ಕೆ ಮಣಿದು ಎರಡು ದಶಕಗಳ ಹಿಂದೆ, ಅಂದು ಕೇಂದ್ರ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ ಅವರ ಪ್ರಯತ್ನದ ಫಲವಾಗಿ 2007ರಲ್ಲಿ ಜಗಜೀವನ್ ರಾಮ್ ಭವನಕ್ಕೆ ರಾಜ್ಯ ಸರಕಾರ 4 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ, ನಿವೇಶನ ಇಲ್ಲದ ಕಾರಣ ಭವನ ನಿರ್ಮಾಣ ಸಾಧ್ಯವಾಗಿಲ್ಲ. ಸಮಾಜ ಕಲ್ಯಾಣ ಇಲಾಖೆಗೆ ಬಂದ 4 ಕೋಟಿ ರೂ.ಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲಾಯಿತು.
ಇತ್ತ ನಿವೇಶನ ಹುಡುಕಾಟ ವರ್ಷಗಟ್ಟಲೇ ಸಾಗುತ್ತಿದ್ದರೆ ಮತ್ತೊಂದೆಡೆ ಬ್ಯಾಂಕ್ ನಲ್ಲಿ ಇಡಲಾಗಿದ್ದ ಹಣಕ್ಕೆ ಬಡ್ಡಿ ಬೆಳೆದು, ಅದು ನಿವೇಶನ ಸಿಗುವ ವೇಳೆಗೆ 6 ಕೋಟಿ ರೂ. ಆಯಿತು. ಅಂತಿಮವಾಗಿ ಕೋಲಾರ ಹೊರವಲಯದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಒಂದು ಎಕರೆ ಭೂಮಿ ಬಾಬು ಜಗಜೀವನ್ ರಾಮ್ ಭವನಕ್ಕೆ ಮೀಸಲಿಡಲಾಯಿತು. ಆದರೆ, ಕೆಲವೇ ದಿನಗಳಲ್ಲಿ ಅದೇ ಜಮೀನಿನಲ್ಲಿ ಅರ್ಧ ಎಕರೆ ಬೇರೊಂದು ನಿಗಮಕ್ಕೆ ನೀಡಿದ್ದು, ಕೊನೆಗೆ ಬಾಬೂಜಿ ಭವನ ನಿರ್ಮಾಣಕ್ಕೆ ಅರ್ಧ ಎಕರೆ ಅಷ್ಟೇ ಉಳಿಯಿತು.
ಅಂತೂ ಇಂತೂ ಕಟ್ಟಡ ನಿರ್ಮಾಣಕ್ಕೆ ಶುಭಗಳಿಗೆ ಬಂತು: ಅಂತೂ ಇಂತೂ ನಿವೇಶನ ಸಿಕ್ಕ ನಂತರ ಕೆ.ಎಚ್.ಮುನಿಯಪ್ಪನವರೇ ಉದ್ಘಾಟನೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು. ಆರಂಭದಿಂದಲೂ ಮಂದಗತಿಯಲ್ಲೇ ಸಾಗಿದ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿತು. ಒಳಾಂಗಣದಲ್ಲಿ ಟೈಲ್ಸ್ ಕೆಲಸ ಹಾಗೂ ಬಣ್ಣದ ಕೆಲಸ ಬಾಕಿ ಇತ್ತು. ಅಪೂರ್ಣ ಸ್ಥಿತಿಯಲ್ಲಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸುವ ವೇಳೆ ಉದ್ಘಾಟನೆ ಮಾಡಲು ತಯಾರಿ ನಡೆಸಲಾಗಿತ್ತು. ಭವನದ ನಿರ್ಮಾಣಕ್ಕಾಗಿ ಶ್ರಮಿಸಿರುವ ಕೆ.ಎಚ್.ಮುನಿಯಪ್ಪ ಅವರನ್ನು ಆಹ್ವಾನಿಸಿ ಪ್ರತ್ಯೇಕ ಕಾರ್ಯಕ್ರಮ ರೂಪಿಸಿ ಭವನ ಉದ್ಘಾಟನೆ ಮಾಡಬೇಕೆಂದು ದಲಿತ ಸಮುದಾಯದ ಮುಖಂಡರು ಪಟ್ಟು ಹಿಡಿದ ಕಾರಣ ಮುಖ್ಯಮಂತ್ರಿಯವರನ್ನು ಉದ್ಘಾಟನಾ ಪಟ್ಟಿಯಿಂದ ಕೈ ಬಿಡಲಾಯಿತು.
ಹೀಗೆ ಭವನ ಅಂದಾಜು 8 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಬಾಬೂಜಿ ಭವನ ಉದ್ಘಾಟನಾ ಭಾಗ್ಯ ಇಲ್ಲದೆ ಗಿಡಗಂಟಿಗಳು ಬೆಳೆದು ನಿಂತಿದೆ. ಅಂದು ಮುಖ್ಯ ಮಂತ್ರಿಯಿಂದ ಉದ್ಘಾಟನೆಗೊಳ್ಳದೆ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಅನಾಥವಾಗಿ ಬಿದ್ದಿದೆ ಎಂದು ದಲಿತ ಮುಖಂಡರು ಬೇಸರವ್ಯಕ್ತಪಡಿಸಿದ್ದಾರೆ
ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಿ ಭವನ ಕಟ್ಟಿದರೂ ರಾಜಕೀಯ ಮುಖಂಡರ ಕಿತ್ತಾಟಕ್ಕೆ ಅಂಜಿದ ಜಿಲ್ಲಾಡಳಿತ ಬಡವರ ಬಾಬೂಜಿ ಭವನ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸದೆ ಇರುವುದು ವಿಪರ್ಯಾಸವೇ ಸರಿ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಡಾ.ಬಾಬು ಜಗಜೀವನ್ ರಾಮ್ ಭವನದ ಎಲ್ಲ ಕೆಲಸಗಳು ಪೂರ್ಣಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಮುದಾಯದ ಹಿರಿಯರು ಹಾಗೂ ಆಹಾರ ಸಚಿವ ಕೆ.ಎಚ್.ಮುನಿಯಪ್ಪನವರು, ಜಿಲ್ಲೆಯ ಎಲ್ಲ ಶಾಸಕರು ಒಂದೇ ದಿನ ಕೂಡಿ ಬರುವ ಗಳಿಗೆ ಇನ್ನೂ ಬಂದಿಲ್ಲ, ಈಗಲೂ ಪ್ರಯತ್ನ ಮಾಡುತ್ತಲೇ ಇದ್ದೇವೆ. ಶೀಘ್ರದಲ್ಲೇ ಕಾರ್ಯಕ್ರಮ ರೂಪಿಸುವ ಸುದಿನ ಬರುವ ನಿರೀಕ್ಷೆ ಇದೆ.
-ಶ್ರೀನಿವಾಸ್, ಜಂಟಿ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ
ಕೋಲಾರ ನಗರದ ಹೊರವಲಯದ ಟಮಕದ ಕೋಲಾರ ನಗರಾಭಿವೃದ್ದಿ ಪ್ರಾಧಿಕಾರದ ದೇವರಾಜ ಅರಸು ಬಡಾವಣೆಯಲ್ಲಿರುವ ಡಾ.ಬಾಬು ಜಗಜೀವನ್ ರಾಮ್ ಭವನ ಪೂರ್ಣಗೊಂಡು ವರ್ಷವಾದರೂ ಜನಪ್ರತಿನಿಧಿಗಳ ಭಿನ್ನಾಭಿಪ್ರಾಯದಿಂದ ಉದ್ಘಾಟನೆ ವಿಳಂಬ ಸರಿಯಲ್ಲ, ಇದು ದಲಿತ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ. ಜಿಲ್ಲಾಡಳಿತ ಆದಷ್ಟು ಬೇಗ ಸಂಬಂಧಪಟ್ಟ ಜನಪ್ರತಿನಿಧಿಗಳ ಮನವೊಲಿಸಿ ಕಟ್ಟಡವನ್ನು ಉದ್ಘಾಟಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಸಲಿ.
-ಹಾರೋಹಳ್ಳಿ ರವಿ, ಮುಖಂಡ, ದಲಿತ ಸಂಘರ್ಷ ಸಮಿತಿ, ಕೋಲಾರ