ಸ್ಮಾರ್ಟ್ ಸಿಟಿ ಯೋಜನೆ; ಕೊನೆಗೂ ಸ್ಮಾರ್ಟ್ ಆಗದ ಸಿಟಿಗಳು?
ರಾಜ್ಯದ ಏಳು ಸ್ಮಾರ್ಟ್ ಸಿಟಿಗಳಿಗೆ ಒಟ್ಟಾರೆ ಸುಮಾರು ರೂ. 7,000 ಕೋಟಿ ವೆಚ್ಚ ನಿರ್ಧರಿಸಲಾಗಿದ್ದು, ಪ್ರತೀ ನಗರಕ್ಕೆ ಐದು ವರ್ಷಗಳಲ್ಲಿ ರೂ. 1,000 ಕೋಟಿ ಅನುದಾನ ನೀಡುವ ಗುರಿ ಇಡಲಾಗಿತ್ತು. ವರದಿಗಳ ಪ್ರಕಾರ ರಾಜ್ಯದ ಈ ಏಳು ನಗರಗಳಲ್ಲಿ ಒಟ್ಟು 889 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಸರಕಾರದ ಪ್ರಕಾರ ಇದರಲ್ಲಿ 590 ಕಾಮಗಾರಿಗಳು ಪೂರ್ಣಗೊಂಡಿವೆ ಎನ್ನಲಾಗಿದೆ. ಇದುವರೆಗೆ ರೂ. 5,068 ಕೋಟಿ ವೆಚ್ಚವಾಗಿದ್ದು, ಉಳಿದ 295 ಕಾಮಗಾರಿಗಳು ಇನ್ನೂ ಪ್ರಾರಂಭವಾಗಿಲ್ಲ ಅಥವಾ ಪ್ರಗತಿಯಲ್ಲೇ ಇವೆ. ಅಂದರೆ ಸ್ಮಾರ್ಟ್ ಸಿಟಿ ಯೋಜನೆ ಆರಂಭವಾಗಿ ಹೆಚ್ಚು ಕಡಿಮೆ ಹತ್ತು ವರ್ಷ ಕಳೆದರೂ ಒಟ್ಟಾರೆ ಪ್ರಗತಿ ಶೇ.26ರಷ್ಟೇ ಎನ್ನುವುದು ಗ್ರೌಂಡ್ ರಿಪೋರ್ಟ್‌ಗಳಿಂದ ಸ್ಪಷ್ಟವಾಗುತ್ತದೆ.
ನಗರಗಳ ಅಭಿವೃದ್ಧಿ ಯೊಂದಿಗೆ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವುದು, ತಂತ್ರಜ್ಞಾನದ ಸಹಾಯದಿಂದ ನಾಗರಿಕರಿಗೆ ಉತ್ತಮ ಜೀವನಮಟ್ಟ ಒದಗಿಸುವುದು ಮತ್ತು ಆರ್ಥಿಕ ಬೆಳವಣಿಗೆಗೆ ವೇಗ ನೀಡುವುದು ಎಂಬ ಘೋಷಣೆಯೊಂದಿಗೆ ಕೇಂದ್ರ ಸರಕಾರವು 2015ರ ಜೂನ್ 25ರಂದು ‘ಸ್ಮಾರ್ಟ್ ಸಿಟಿ ಮಿಷನ್’ ಅನ್ನು ಜಾರಿಗೆ ತಂದಿತ್ತು. ದೇಶದಾದ್ಯಂತ ವೇಗವಾಗಿ ನಗರೀಕರಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೂಲಸೌಕರ್ಯಗಳ ಕೊರತೆ, ಸಂಚಾರ ಸಮಸ್ಯೆ, ಪರಿಸರ ಹಾನಿ, ಅಸಮರ್ಪಕ ಸೇವೆಗಳು ಮತ್ತು ಆಡಳಿತಾತ್ಮಕ ಅಸಮರ್ಥತೆಯನ್ನು ನಿವಾರಿಸುವ ಉದ್ದೇಶದಿಂದ 100 ನಗರಗಳನ್ನು ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಈ ಯೋಜನೆ ಹೊಂದಿತ್ತು. ಜನವರಿ 2016ರಿಂದ ಜೂನ್ 2018ರವರೆಗೆ ನಾಲ್ಕು ಹಂತಗಳಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯಮಟ್ಟದ ಅಂಕಗಳ ಆಧಾರದ ಮೇಲೆ ನಗರಗಳನ್ನು ಆಯ್ಕೆ ಮಾಡಿ, ನಂತರ ರಾಷ್ಟ್ರೀಯ ಮಟ್ಟದ ಸ್ಪರ್ಧೆಯ ಮೂಲಕ ಸ್ಮಾರ್ಟ್ ಸಿಟಿ ಪ್ರಸ್ತಾವಗಳನ್ನು ಮೌಲ್ಯಮಾಪನ ಮಾಡಿ ಅಂತಿಮವಾಗಿ 100 ನಗರಗಳನ್ನು ಘೋಷಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಕರ್ನಾಟಕದಿಂದ ಬೆಂಗಳೂರು, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ತುಮಕೂರು, ಶಿವಮೊಗ್ಗ ಸೇರಿದಂತೆ ಏಳು ನಗರಗಳು ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿವೆ.
ಸ್ಮಾರ್ಟ್ ಸಿಟಿ ಮಿಷನ್, 2015ರಲ್ಲಿ ನಗರಜೀವನವನ್ನು ತಂತ್ರಜ್ಞಾನ ಸಹಾಯಿತ ಪರಿಹಾರಗಳು ಮತ್ತು ಮೂಲಭೂತ ಸೌಕರ್ಯಗಳ ಮೂಲಕ ಪರಿವರ್ತಿಸಲು ಪ್ರಾರಂಭಿಸಲಾಗಿತ್ತು. ಈಗ ಹಲವಾರು ಸಮಯಮಿತಿ ವಿಸ್ತರಣೆಗಳ ನಂತರ ಮೂಲ ಯೋಜನೆಯನ್ನು ಬಹುತೇಕ ಪೂರ್ಣಗೊಳಿಸಿದರೂ ತತ್ಕಾಲೀನವಾಗಿ ಪ್ರಗತಿಯಲ್ಲಿರುವ ಕೆಲಸವನ್ನು ಮುಗಿಸಲು ಮಾರ್ಚ್ 31, 2025ರವರೆಗೆ ವಿಸ್ತರಿಸಲಾಗಿದೆ. ದಾಖಲೆಗಳ ಪ್ರಕಾರ, ಸುಮಾರು 8,064 ಮಾನ್ಯಗೊಂಡ ಯೋಜನೆಗಳಲ್ಲಿ 100 ಸ್ಮಾರ್ಟ್ ಸಿಟಿಗಳಲ್ಲಿ ಜುಲೈ 2025ರ ತನಕ ಸುಮಾರು ರೂ. 1.53 ಲಕ್ಷ ಕೋಟಿ ಮೌಲ್ಯದ 7,636ಕ್ಕೂ ಹೆಚ್ಚು ಯೋಜನೆಗಳು ಪೂರ್ಣಗೊಂಡಿದ್ದು, ಉಳಿದ ಯೋಜನೆಗಳು ಪ್ರಗತಿಯಲ್ಲಿ ಇವೆ ಎನ್ನಲಾಗಿದೆ. ಸ್ವತಂತ್ರ ತಂತ್ರಜ್ಞರ ಪರಿಶೀಲನೆ ಪ್ರಕಾರ, ಡಿಸೆಂಬರ್ 2025 ಆರಂಭದ ವೇಳೆಗೆ ರೂ. 1.55 ಲಕ್ಷ ಕೋಟಿ ಮೌಲ್ಯದ 7,741 ಯೋಜನೆಗಳು ಪೂರ್ಣಗೊಂಡಿದ್ದು, 323 ಯೋಜನೆಗಳು ಇನ್ನೂ ಪ್ರಗತಿಯಲ್ಲಿ ಇವೆ ಎನ್ನುವ ಮಾಹಿತಿ ಇದೆ. ವರದಿಗಳ ಪ್ರಕಾರ ಕೇವಲ ಸುಮಾರು 18 ನಗರಗಳು ತಮ್ಮ ಎಲ್ಲಾ ಸ್ಮಾರ್ಟ್ ಸಿಟಿ ಯೋಜನೆಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿವೆ ಎನ್ನಲಾಗಿದೆ. ಅಂದರೆ ಬಹುತೇಕ ನಗರಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಯೋಜನಾ ಚಟುವಟಿಕೆಗಳು ಬಾಕಿ ಇವೆ ಅನ್ನುವುದಂತೂ ಸತ್ಯ.
ಸ್ಮಾರ್ಟ್ ಸಿಟಿ ಮಿಷನ್‌ನ ಮೂಲ ಉದ್ದೇಶವೆಂದರೆ ನಗರಗಳಲ್ಲಿ ಸ್ಥಿರ ವಿದ್ಯುತ್ ಸರಬರಾಜು, ಸಮರ್ಪಕ ಕುಡಿಯುವ ನೀರು, ಪರಿಣಾಮಕಾರಿ ಒಳಚರಂಡಿ ವ್ಯವಸ್ಥೆ, ಉತ್ತಮ ಆರೋಗ್ಯ ಮತ್ತು ಶಿಕ್ಷಣ ಸೇವೆಗಳು, ಸುರಕ್ಷಿತ ಹಾಗೂ ಸುಗಮ ಸಾರ್ವಜನಿಕ ಸಾರಿಗೆ, ಘನತ್ಯಾಜ್ಯ ನಿರ್ವಹಣೆ, ಬಡವರಿಗೆ ಕೈಗೆಟುಕುವ ವಸತಿ, ಡಿಜಿಟಲ್ ಸಂಪರ್ಕ, ಇ-ಆಡಳಿತ, ನಾಗರಿಕರ ಪಾಲ್ಗೊಳ್ಳುವಿಕೆ, ಪರಿಸರ ಸಂರಕ್ಷಣೆ ಮತ್ತು ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ವಿಶೇಷ ಭದ್ರತೆ ಒದಗಿಸುವುದಾಗಿದೆ. ಸ್ಮಾರ್ಟ್ ಸಿಟಿ ಮಿಷನ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ ದೇಶಾದ್ಯಂತ ಒಟ್ಟು 5,929 ಯೋಜನೆಗಳಿಗೆ ರೂ. 1,78,492 ಕೋಟಿ ಮೌಲ್ಯದ ಟೆಂಡರ್ ನೀಡಲಾಗಿದ್ದು, ರೂ. 1,46,466 ಕೋಟಿ ಮೌಲ್ಯದ 5,245 ಯೋಜನೆಗಳಿಗೆ ವರ್ಕ್ ಆರ್ಡರ್ ನೀಡಲಾಗಿದೆ ಎನ್ನಲಾಗಿದೆ. ಇದರಲ್ಲಿ ರೂ. 45,264 ಕೋಟಿ ವೆಚ್ಚದ 2,673 ಯೋಜನೆಗಳು ಪೂರ್ಣಗೊಂಡಿವೆ ಎಂದು ದಾಖಲೆಗಳು ಹೇಳುತ್ತವೆ. 2017ರಿಂದ 2023ರ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮಾನ ಪಾಲಿನಲ್ಲಿ ಅನುದಾನ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದು, ಅಂಕಿ-ಅಂಶಗಳ ಮಟ್ಟದಲ್ಲಿ ಯೋಜನೆ ಮಹತ್ವದ ಸಾಧನೆ ಮಾಡಿದಂತೆ ಕಾಣುತ್ತದೆ. ವಾಸ್ತವದಲ್ಲಿ ಪರಿಸ್ಥಿತಿ ಆಗಿಲ್ಲ.
ಕರ್ನಾಟಕದ ನೆಲಮಟ್ಟದ ವಾಸ್ತವ ಸ್ಥಿತಿ ಈ ಅಂಕಿ-ಅಂಶಗಳಿಗೆ ಸಂಪೂರ್ಣ ಭಿನ್ನವಾದ ಚಿತ್ರವನ್ನು ನೀಡುತ್ತದೆ. ರಾಜ್ಯದ ಏಳು ಸ್ಮಾರ್ಟ್ ಸಿಟಿಗಳಿಗೆ ಒಟ್ಟಾರೆ ಸುಮಾರು ರೂ. 7,000 ಕೋಟಿ ವೆಚ್ಚ ನಿರ್ಧರಿಸಲಾಗಿದ್ದು, ಪ್ರತೀ ನಗರಕ್ಕೆ ಐದು ವರ್ಷಗಳಲ್ಲಿ ರೂ. 1,000 ಕೋಟಿ ಅನುದಾನ ನೀಡುವ ಗುರಿ ಇಡಲಾಗಿತ್ತು. ವರದಿಗಳ ಪ್ರಕಾರ ರಾಜ್ಯದ ಈ ಏಳು ನಗರಗಳಲ್ಲಿ ಒಟ್ಟು 889 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಸರಕಾರದ ಪ್ರಕಾರ ಇದರಲ್ಲಿ 590 ಕಾಮಗಾರಿಗಳು ಪೂರ್ಣಗೊಂಡಿವೆ ಎನ್ನಲಾಗಿದೆ. ಇದುವರೆಗೆ ರೂ. 5,068 ಕೋಟಿ ವೆಚ್ಚವಾಗಿದ್ದು, ಉಳಿದ 295 ಕಾಮಗಾರಿಗಳು ಇನ್ನೂ ಪ್ರಾರಂಭವಾಗಿಲ್ಲ ಅಥವಾ ಪ್ರಗತಿಯಲ್ಲೇ ಇವೆ. ಅಂದರೆ ಸ್ಮಾರ್ಟ್ ಸಿಟಿ ಯೋಜನೆ ಆರಂಭವಾಗಿ ಹೆಚ್ಚು ಕಡಿಮೆ ಹತ್ತು ವರ್ಷ ಕಳೆದರೂ ಒಟ್ಟಾರೆ ಪ್ರಗತಿ ಶೇ.26ರಷ್ಟೇ ಎನ್ನುವುದು ಗ್ರೌಂಡ್ ರಿಪೋರ್ಟ್‌ಗಳಿಂದ ಸ್ಪಷ್ಟವಾಗುತ್ತದೆ. ಐದು ವರ್ಷದ ಕಾಲಮಿತಿಯ ಯೋಜನೆ ಈಗ ಹತ್ತನೇ ವರ್ಷಕ್ಕೂ ಕಾಲಿಟ್ಟರೂ ಕರ್ನಾಟಕದಲ್ಲಿ ಅರ್ಧದಷ್ಟು ಕಾಮಗಾರಿಗಳು ಪೂರ್ಣಗೊಳ್ಳದಿರುವುದು ಯೋಜನೆಯ ಅನುಷ್ಠಾನದ ಮೇಲಿನ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿದೆ ಎನ್ನಬಹುದು.
ರಾಜಧಾನಿ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದರೂ, ಇಲ್ಲಿನ ಕಾಮಗಾರಿಗಳ ವೇಗ ಮತ್ತು ಗುಣಮಟ್ಟದ ಬಗ್ಗೆ ವ್ಯಾಪಕ ಅಸಮಾಧಾನವಿದೆ. ಲಭ್ಯವಿರುವ ದಾಖಲೆಗಳನ್ನು ಆಧರಿಸಿ ಹೇಳುವುದಾದರೆ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು ರೂ. 3,000 ಕೋಟಿ ಮೌಲ್ಯದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ತಾಂತ್ರಿಕ ತೊಡಕುಗಳಿಂದ ವಿಳಂಬವಾಗಿದ್ದ ಯೋಜನೆಗೆ ಈಗ ವೇಗ ಸಿಕ್ಕಿದೆ. ರೂ. 1,499 ಕೋಟಿ ಮೌಲ್ಯದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ರೂ. 1,407 ಕೋಟಿ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದು ಕಾರ್ಯಾದೇಶ ನೀಡಲಾಗಿದೆ ಎಂದು ಅಂದಿನ ಸರಕಾರ ಹೇಳಿತ್ತು. ಆದರೂ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಇದುವರೆಗೆ 100 ಕೋಟಿ ರೂ. ಮೌಲ್ಯದ ಕಾಮಗಾರಿಯನ್ನೂ ಸರಿಯಾಗಿ ಸಂಪೂರ್ಣಗೊಳಿಸಿಲ್ಲ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಅನೇಕ ಯೋಜನೆಗಳು ಡಿಪಿಆರ್ ಮತ್ತು ಟೆಂಡರ್ ಹಂತದಲ್ಲೇ ಅಂಟಿಕೊಂಡಿದ್ದು, ವಿಳಂಬದಿಂದ ಯೋಜನಾ ವೆಚ್ಚ ಹೆಚ್ಚಾಗುತ್ತಿದೆ ಎಂಬುದು ಮತ್ತೊಂದು ಸಮಸ್ಯೆಯಾಗಿದೆ.
ಇತರ ನಗರಗಳಲ್ಲಿಯೂ ಸ್ಥಿತಿ ಬಹುತೇಕ ಒಂದೇ ರೀತಿಯಾಗಿದೆ. ತುಮಕೂರಿನಲ್ಲಿ 35 ವಾರ್ಡ್‌ಗಳ ಪೈಕಿ ಕೇವಲ ಹತ್ತು ವಾರ್ಡ್ ಗಳಲ್ಲಿ ಮಾತ್ರ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿದ್ದು, ಹಲವೆಡೆ ಕಳಪೆ ಕಾಮಗಾರಿಯ ಆರೋಪಗಳಿವೆ. ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ ರಸ್ತೆಗಳು ಶಿಥಿಲಾವಸ್ಥೆಗೆ ತಲುಪಿದ್ದು, ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಏಳು ಬಾರಿ ಪ್ರತಿಭಟನೆಗಳು ನಡೆದಿವೆ. ಹುಬ್ಬಳ್ಳಿ-ಧಾರವಾಡದಲ್ಲಿ ರಸ್ತೆ, ಕೆರೆ ಮತ್ತು ಉದ್ಯಾನವನಗಳ ಕಾಮಗಾರಿಗಳ ಗುಣಮಟ್ಟದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ ಎನ್ನುವ ಮಾಹಿತಿ ಇದೆ. ದಾವಣಗೆರೆಯಲ್ಲಿ ಮಹಾನಗರ ಪಾಲಿಕೆ ಮಾಹಿತಿಯಂತೆ 204 ಕಿಲೋಮೀಟರ್ ಮಣ್ಣಿನ ರಸ್ತೆಗಳಿದ್ದು, ಈಗಾಗಲೇ ನಿರ್ಮಿಸಲಾದ ರಸ್ತೆಗಳೂ ಕಳಪೆ ಎನ್ನುವ ಆರೋಪಗಳಿಗೆ ಗುರಿಯಾಗಿವೆ. ಮಂಗಳೂರಿನಲ್ಲಿ ಕೆಲ ವೃತ್ತಗಳು, ರಥಬೀದಿ ಹಾಗೂ ಕ್ಲಾಕ್ ಟವರ್ ಅಭಿವೃದ್ಧಿ ಹೊರತುಪಡಿಸಿ ರಸ್ತೆ, ಉದ್ಯಾನವನ, ಒಳಚರಂಡಿ ಸೇರಿದಂತೆ ಬಹುತೇಕ ಮೂಲಸೌಕರ್ಯ ಕಾಮಗಾರಿಗಳು ಇನ್ನೂ ಬಾಕಿ ಉಳಿದಿವೆ ಎನ್ನಲಾಗಿದೆ. ಬೆಳಗಾವಿಯಲ್ಲಿ ಡಿಜಿಟಲ್ ಲೈಬ್ರರಿ, ಸ್ಮಾರ್ಟ್ ಕ್ಲಾಸ್‌ಗಳು ಸೇರಿದಂತೆ ಕೆಲ ಯೋಜನೆಗಳು ಜಾರಿಯಾಗಿದ್ದರೂ, ಜನರಿಗೆ ಸ್ಮಾರ್ಟ್ ಸಿಟಿ ಯೋಜನೆಗಳ ಬಗ್ಗೆ ಸ್ಪಷ್ಟತೆ ಇಲ್ಲ ಎನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯ ಹೆಸರಿನಲ್ಲಿ ರಸ್ತೆ, ಒಳಚರಂಡಿ, ಕೆರೆ, ಉದ್ಯಾನವನ, ಪುರಾತನ ಸ್ಥಳಗಳ ಅಭಿವೃದ್ಧಿಗೆ ಭಾರೀ ಅನುದಾನ ಮೀಸಲಿಡಲಾಗಿದ್ದರೂ, ಬಹುತೇಕ ನಗರಗಳಲ್ಲಿ ಈ ಯೋಜನೆ ಕಾಂಕ್ರಿಟೀಕರಣಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಟೀಕೆ ವ್ಯಾಪಕವಾಗಿದೆ. ಹಸಿರೀಕರಣ, ವಾಹನ ಪಾರ್ಕಿಂಗ್, ಸಂಚಾರ ವ್ಯವಸ್ಥೆ ಸುಧಾರಣೆ, ಕುಡಿಯುವ ನೀರು, ಡಿಜಿಟಲ್ ಸೇವೆಗಳು ಮತ್ತು ಪರಿಸರ ಸ್ನೇಹಿ ಕಾಮಗಾರಿಗಳು ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿವೆ. ಸಣ್ಣ ಮಳೆಯಲ್ಲೇ ರಸ್ತೆಗಳು ಮತ್ತು ಫುಟ್ಪಾತ್‌ಗಳು ಹಾಳಾಗುತ್ತಿರುವುದು ‘ಸ್ಮಾರ್ಟ್’ ಅಭಿವೃದ್ಧಿಯ ಗುಣಮಟ್ಟವನ್ನು ಪ್ರಶ್ನಿಸುವಂತಾಗಿದೆ. ಹುಬ್ಬಳ್ಳಿಯಲ್ಲಿ ಮಹಾತ್ಮಾಗಾಂಧಿ ಉದ್ಯಾನವನದಲ್ಲಿ ರೂ. 4.50 ಕೋಟಿ ವೆಚ್ಚದಲ್ಲಿ ಪುನಾರಂಭಿಸಿದ ಪುಟಾಣಿ ರೈಲು ವ್ಯವಸ್ಥೆ ಉದ್ಘಾಟನೆ ದಿನವೇ ಬಣ್ಣ ಕಳಚಿದ ಘಟನೆಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. 100 ಅಡಿ ರಸ್ತೆಯ ಡಾಂಬರು ಕೇವಲ ಒಂದು ವರ್ಷದಲ್ಲೇ ಕಿತ್ತುಬಂದಿರುವ ಉದಾಹರಣೆಗಳು ‘ಸ್ಮಾರ್ಟ್ ಭ್ರಷ್ಟಾಚಾರ’ ಎಂಬ ಪದವನ್ನು ಜನಸಾಮಾನ್ಯರ ನಡುವೆ ಹರಡಿವೆ ಎನ್ನಬಹುದು.
ಸಾರ್ವಜನಿಕರ ಅಭಿಪ್ರಾಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಹೆಸರಿನಲ್ಲಿ ಪ್ರತ್ಯೇಕ ಕಟ್ಟಡಗಳು, ಸಿಬ್ಬಂದಿ ನಿಯೋಜನೆ ಮತ್ತು ರಿಯಲ್ ಎಸ್ಟೇಟ್ ಬೆಳವಣಿಗೆಗೆ ದಾರಿ ಮಾಡಿಕೊಡಲಾಗಿದೆ. ಸಹಜವಾಗಿ ನಡೆಯುತ್ತಿದ್ದ ಕಾಮಗಾರಿಗಳಿಗೆ ಹೊಸ ಹೆಸರಿಟ್ಟು ಹೆಚ್ಚಿನ ಹಣ ವ್ಯಯಿಸಲಾಗುತ್ತಿದೆ ಎಂಬ ಆರೋಪವೂ ಸಾರ್ವಜನಿಕರಿಂದ ಅಲ್ಲಲ್ಲಿ ಕೇಳಿಬರುತ್ತಿದೆ. ಕಾಮಗಾರಿಗಳಿಂದ ನಿತ್ಯ ಸಂಚಾರಕ್ಕೆ ಉಂಟಾಗುತ್ತಿರುವ ತೊಂದರೆ, ಅವೈಜ್ಞಾನಿಕ ಯೋಜನೆಗಳು ಮತ್ತು ಅತಿಯಾದ ವಿಳಂಬದಿಂದ ಜನಸಾಮಾನ್ಯರಲ್ಲಿ ಅಸಮಾಧಾನ ಹೆಚ್ಚಾಗಿದೆ. ಈ ಎಲ್ಲ ಟೀಕೆಗಳ ನಡುವೆಯೇ ಸರಕಾರವು ರಾಜ್ಯದ 275 ನಗರ ಸ್ಥಳೀಯ ಸಂಸ್ಥೆಗಳಿಗೆ ಅನ್ವಯವಾಗುವಂತೆ ಏಕರೂಪದ ಕಟ್ಟಡ ಬೈಲಾ ಜಾರಿಗೆ ತರುವ ನಿರ್ಧಾರ ಕೈಗೊಂಡಿದ್ದು, ಪರಿಸರ ಸ್ನೇಹಿ ನಿರ್ಮಾಣ, ಅಗ್ನಿ ಸುರಕ್ಷತೆ, ಎತ್ತರದ ಕಟ್ಟಡಗಳಿಗೆ ಮಾನದಂಡ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಸೇರಿದಂತೆ ಹಲವು ಅಂಶಗಳನ್ನು ಹೊಸ ಬೈಲಾದಲ್ಲಿ ಸೇರಿಸಲಾಗಿದೆ ಎನ್ನುವ ಹೇಳಿಕೆ ನೀಡಿತ್ತು. ಸ್ಮಾರ್ಟ್ ಸಿಟಿ ಯೋಜನೆಯ ಬಾಕಿ ಕಾಮಗಾರಿಗಳನ್ನು ಕರ್ನಾಟಕದಲ್ಲಿ 2023ರ ಜೂನ್ ಒಳಗೆ ಪೂರ್ಣಗೊಳಿಸುವ ಗುರಿ ಇಡಲಾಗಿದೆ ಎಂದು ಸರಕಾರ ಹೇಳಿತ್ತು. ಆದರೆ ಅದು ಜಾರಿಗೆ ಬಂದಿಲ್ಲ.
ಒಟ್ಟಾರೆ ಸ್ಮಾರ್ಟ್ ಸಿಟಿ ಮಿಷನ್ ಒಂದು ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಯೋಜನೆಯಾಗಿದ್ದರೂ, ಕರ್ನಾಟಕದಲ್ಲಿ ಅದರ ಅನುಷ್ಠಾನವು ಘೋಷಣೆ ಮತ್ತು ವಾಸ್ತವದ ನಡುವಿನ ಅಂತರವನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಅಂಕಿ-ಅಂಶಗಳಲ್ಲಿ ಸ್ಮಾರ್ಟ್ ಆಗಿರುವ ನಗರಗಳು ನಾಗರಿಕರ ದಿನನಿತ್ಯದ ಬದುಕಿನಲ್ಲಿ ಎಷ್ಟು ಸುಧಾರಣೆ ತಂದಿವೆ ಎಂಬ ಪ್ರಶ್ನೆಗೆ ಇನ್ನೂ ತೃಪ್ತಿಕರ ಉತ್ತರ ಸಿಕ್ಕಿಲ್ಲ. ‘ಸ್ಮಾರ್ಟ್’ ಎಂಬ ಪದ ಕೇವಲ ಕಾಗದದ ಮೇಲೆ ಉಳಿಯದೆ, ಜನರ ಅನುಭವದಲ್ಲಿ ಕಾಣಿಸಿಕೊಳ್ಳಬೇಕೆಂದರೆ ಯೋಜನೆಯ ದಿಕ್ಕು, ಕಾರ್ಯವೈಖರಿ, ಗುಣಮಟ್ಟ ಮತ್ತು ಪಾರದರ್ಶಕತೆಯನ್ನು ಸರಕಾರ ಗಂಭೀರವಾಗಿ ಮರುಪರಿಶೀಲಿಸಬೇಕಾದ ಅಗತ್ಯ ಈಗ ಅನಿವಾರ್ಯವಾಗಿದೆ.