×
Ad

ರಾಯಚೂರು ಉತ್ಸವಕ್ಕೆ ಭರದ ಸಿದ್ಧತೆ

ಗೋಡೆಗಳಿಗೆ ಕಲಾವಿದರಿಂದ ಸಿಂಗಾರ

Update: 2026-01-15 14:40 IST

ಬರೋಬ್ಬರಿ ಎರಡು ದಶಕಗಳ ಬಳಿಕ ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾ ಉತ್ಸವ ಆಯೋಜಿಸಿದ್ದು ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ಸಿದ್ಧತೆ ಭರದಿಂದ ಸಾಗಿದೆ. ನಗರದ ಪ್ರಮುಖ ರಸ್ತೆಗಳ ಗೋಡೆಗಳು ಬಣ್ಣಬಣ್ಣದಿಂದ ಸಿಂಗಾರಗೊಂಡಿದ್ದು ಜನರನ್ನು ಆಕರ್ಷಿಸುತ್ತಿವೆ.

ನಗರದಲ್ಲಿ ಜ.29, 30 ಹಾಗೂ 31ರಂದು ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಜಿಲ್ಲಾಧಿಕಾರಿ ನಿತಿಶ್ ಕೆ. ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಮೂರು ಪೂರ್ವ ಸಿದ್ಧತಾ ಸಭೆ ನಡೆಸಲಾಗಿದೆ. 22 ಸಮಿತಿಗಳನ್ನು ರಚನೆ ಮಾಡಿದ್ದು, ನಗರದಲ್ಲಿ ನಡೆಯುತ್ತಿದ್ದರೂ ಜಿಲ್ಲಾ ಕೇಂದ್ರಕ್ಕೆ ಸೀಮಿತವಾಗದಿರಲಿ ಎಂದು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಜೊತೆಗೂ ಸಭೆ ಮಾಡಲಾಗಿದೆ.

ಮೂರು ದಿನಗಳ ಉತ್ಸವ ವೀಕ್ಷಣೆಗೆ ಜಿಲ್ಲೆಯ ನಾನಾ ಕಡೆಯಿಂದ ಅನೇಕ ಜನ ಆಗಮಿಸುವುದರಿಂದ ಸ್ವಚ್ಛತೆಗೂ ಆದ್ಯತೆ ಕೊಡಲಾಗುತ್ತಿದೆ. ಗುಟ್ಕಾ, ಪಾನ್ ಮಸಾಲಾ ಜಗಿದು ಹಾಳುಮಾಡಿದ್ದ ಸಾರ್ವಜನಿಕ ರಸ್ತೆಯ ಗೋಡೆಗಳು ಈಗ ಬಣ್ಣ ಬಣ್ಣದ ಚಿತ್ತಾರದಲ್ಲಿವೆ. ಪರಿಸರ ಸಂರಕ್ಷಣೆ, ಸ್ವಚ್ಛತೆ ಮಂತ್ರ, ಸರಕಾರದ ನಾನಾ ಯೋಜನೆಗಳ ಬಗ್ಗೆ ಜಾಗೃತಿ ಸಂದೇಶ, ಶ್ರೇಷ್ಠ ಕ್ರೀಡಾಪಟುಗಳು, ಸಾಹಿತಿಗಳು, ನಾನಾ ರಂಗದ ದಿಗ್ಗಜರ ಚಿತ್ರಗಳನ್ನು ಬಿಡಿಲಾಗುತ್ತಿದೆ. ಮುಖ್ಯ ರಸ್ತೆ ಮೂಲಕವೇ ವಾಹನ ಸವಾರರು, ದಾರಿಹೋಕರು ಸಾಗುವುದರಿಂದ ಪ್ರಮುಖ ಮಾರ್ಗಗಳ ಗೋಡೆಗಳಲ್ಲಿ ಚಿತ್ರ ಬಿಡಿಸಲು ಪಾಲಿಕೆಯಿಂದ ಯೋಜನೆ ರೂಪಿಸಿಕೊಳ್ಳಲಾಗಿದೆ.

ನಗರದ ಸ್ಟೇಷನ್ ರಸ್ತೆಯಲ್ಲಿನ ಮಹಿಳಾ ಕಾಲೇಜು ಆವರಣದ ಗೋಡೆ, ಟ್ಯಾಗೋರ್ ಕಾಲೇಜ್ ಕಾಂಪೌಂಡ್, ಜಿಲ್ಲಾಧಿಕಾರಿ ನಿವಾಸದ ಗೋಡೆ, ಮಂತ್ರಾಲಯ ರಸ್ತೆಯಲ್ಲಿನ ಆರ್ಟಿಒ ಕಚೇರಿ, ಕೆಕೆಆರ್ಟಿಸಿ ಡಿಪೋ ಆವರಣ ಗೋಡೆ, ಮಹಿಳಾ ಕಾಲೇಜಿನಿಂದ ರೈಲ್ವೆ ಕೆಳಸೇತುವೆ ಕೊನೆವರೆಗಿರುವ ಗೋಡೆ, ಬಸವ ವೃತ್ತದಲ್ಲಿನ ನಾನಾ ಗೋಡೆಗಳು ಹುಬ್ಬಳ್ಳಿ-ಧಾರವಾಡದಿಂದ ಬಂದಿರುವ ಚಿತ್ರ ಕಲಾವಿದರಿಂದ ಹೊಸ ರೂಪ ಪಡೆದುಕೊಳ್ಳುತ್ತಿವೆ.

ವೈವಿಧ್ಯತೆ ಕಾಪಾಡಲು ಪ್ರತಿ ಗೋಡೆಯಲ್ಲೂ ಒಂದೊಂದು ವಿಷಯ ಆಧರಿಸಿ ಚಿತ್ರಗಳನ್ನು ಬಿಡಿಸುತ್ತಿರುವುದು ವಿಶೇಷವಾಗಿದೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಪ್ರಸ್ತುತ 10 ಲಕ್ಷ ರೂ. ಅನುದಾನ ಬಳಕೆ ಮಾಡಿಕೊಂಡು ವಾಲ್ ಪೇಂಟಿಂಗ್ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್ಆರ್ ) ಬಳಸಿಕೊಂಡು ಅಂದಾಜು 2-3 ಕೋಟಿ ರೂ. ವೆಚ್ಚದಡಿ ನಗರದ ಒಳ ರಸ್ತೆಗಳಲ್ಲಿರುವ ಖಾಸಗಿ, ಸರಕಾರಿ ಕಚೇರಿಗಳ ಆವರಣ ಗೋಡೆಗಳಿಗೂ ಬಣ್ಣ ಬಳಿಯಲು ಯೋಜಿಸಲಾಗುತ್ತಿದೆ. ಜನವರಿ 20ರೊಳಗೆ ಬಣ್ಣ ಬಳಿಯುವ ಕಾಮಗಾರಿ ಮುಗಿಸುವ ಗುರಿ ಹೊಂದಿದ್ದಾರೆ. ಒಟ್ಟಿನಲ್ಲಿ 2006 ರಲ್ಲಿ ಅಂದಿನ ಶಾಸಕ ಎ.ಪಾಪಾರೆಡ್ಡಿ ಅವಧಿಯಲ್ಲಿ ನಡೆದ ಜಿಲ್ಲಾ ಉತ್ಸವ ಬಳಿಕ ಅತಿವೃಷ್ಟಿ, ಅನಾವೃಷ್ಟಿ ಸೇರಿ ಅನೇಕ ಕಾರಣಗಳಿಂದ ನಡೆದಿರಲಿಲ್ಲ. ಈಗ ಜಿಲ್ಲಾಧಿಕಾರಿ ನಿತಿಶ್ ಕೆ, ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ. ಅವರ ಜೋಡಿ ಅನೇಕ ಅಭಿವೃದ್ಧಿ ಕಾರ್ಯಗಳ ಜೊತೆಗೆ ಈಗ ಜಿಲ್ಲಾ ಉತ್ಸವ ಅಚ್ಚುಕಟ್ಟಾಗಿ ನಿರ್ವಹಿಸಲು ಮುಂದಾಗಿದೆ.

ರಾಯಚೂರು ಉತ್ಸವ ಹಿನ್ನೆಲೆಯಲ್ಲಿ ಈಗಾಗಲೇ ರಾಯಚೂರು ಪಟ್ಟಣದ ಸೌಂದರ್ಯೀಕರಣಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ರಸ್ತೆ ವಿಸ್ತರಣೆ, ದುರಸ್ತಿ ಕಾರ್ಯ ನಡೆದಿದ್ದು, ಜನತೆ ಸಹಕಾರ ನೀಡಬೇಕು. ನಗರದ ಎಲ್ಲ ಮುಖ್ಯರಸ್ತೆಗಳು ಸುಂದರವಾಗಿ ಕಾಣುವಂತೆ ಪಾಲಿಕೆ ಕೈಗೊಂಡ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು. ರಾಯಚೂರು ಸಿಟಿ ಸೇರಿದಂತೆ ಜಿಲ್ಲೆಯ ಎಲ್ಲ ವ್ಯಾಪಾರಸ್ಥರು ಈಗಿನಿಂದಲೇ ರಾಯಚೂರು ಉತ್ಸವದ ಅಲಂಕಾರಕ್ಕೆ ಕಾರ್ಯಯೋಜನೆ ರೂಪಿಸಿ ಸಹಕರಿಸಬೇಕು.

-ಜುಬಿನ್ ಮೊಹಪಾತ್ರ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು.

ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ನಗರದ ರೈಲ್ವೆ ನಿಲ್ದಾಣ, ಜಿಲ್ಲೆಯ ಎಲ್ಲ ಬಸ್ ನಿಲ್ದಾಣಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಪೋಸ್ಟರ್ ಮತ್ತು ಬ್ಯಾನರ್ ಅಳವಡಿಸಿ ಪ್ರಚಾರ ಕಾರ್ಯಕ್ಕೆ ಒತ್ತು ಕೊಡಲಾಗಿದೆ. ಹೊರಗಡೆಯಿಂದ ಉತ್ಸವಕ್ಕೆ ಆಗಮಿಸುವ ಕಲಾವಿದರು ಮತ್ತು ಇತರರಿಗೆ ಸರಿಯಾದ ರೀತಿಯಲ್ಲಿ ವಸತಿಗೃಹಗಳ ವ್ಯವಸ್ಥೆ ಮಾಡಲು ಸಂಬಂಧಿಸಿದ ಉಪ ಸಮಿತಿಯ ಸದಸ್ಯರಿಗೆ ಸೂಚನೆ ನೀಡಲಾಗಿದೆ.

-ನಿತಿಶ್ ಕೆ. ಜಿಲ್ಲಾಧಿಕಾರಿ, ರಾಯಚೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ,ರಾಯಚೂರು

contributor

Similar News