×
Ad

ಫೆಬ್ರವರಿ ಮೊದಲ ವಾರದಲ್ಲಿ ಅಧಿಕಾರಾವಧಿ ಅಂತ್ಯ

ಕೊಡಗಿನ 101 ಗ್ರಾಪಂಗಳಿಗೆ ನಡೆಯಬೇಕಿದೆ ಚುನಾವಣೆ

Update: 2026-01-15 11:07 IST

ಮಡಿಕೇರಿ : ಕೊಡಗು ಜಿಲ್ಲೆಯ 103 ಗ್ರಾಮ ಪಂಚಾಯತ್‌ಗಳ ಸದಸ್ಯರ ಅಧಿಕಾರಾವಧಿ ಜನವರಿ ಕೊನೆಯ ಮತ್ತು ಫೆಬ್ರವರಿ ಮೊದಲ ವಾರದಲ್ಲಿ ಮುಕ್ತಾಯಗೊಳ್ಳಲಿದೆ.

ಈ ಪೈಕಿ ಪೊನ್ನಂಪೇಟೆ ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ್ದರೆ, ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಪಂ ಇದೀಗ ಕುಶಾಲನಗರ ಪುರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ವಿರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮ ಪಂಚಾಯತ್ ಅಧಿಕಾರವಧಿ 2027ರಲ್ಲಿ ಪೂರ್ಣಗೊಳ್ಳಲಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 101 ಗ್ರಾಪಂಗಳಿಗೆ ಚುನಾವಣೆ ನಡೆಯಬೇಕಿದೆ.

2020ರ ಡಿ.22ರಂದು ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕಿನ ಗ್ರಾಪಂಗಳಿಗೆ ಹಾಗೂ ಡಿ.27ರಂದು ವಿರಾಜಪೇಟೆ ತಾಲೂಕಿನ ಗ್ರಾಪಂಗಳಿಗೆ ಚುನಾವಣೆ ನಡೆದು ಡಿ.30ರಂದು ಏಕಕಾಲದಲ್ಲಿ ಚುನಾವಣಾ ಫಲಿತಾಂಶ ಹೊರಬಿದ್ದಿತ್ತು.

ಚುನಾವಣೆಯೋ?, ಆಡಳಿತಾಧಿಕಾರಿ ನೇಮಕವೋ?: 2015ರಲ್ಲಿ ನಡೆದ ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಸದಸ್ಯರ ಅಧಿಕಾರಾವಧಿ 2020ರ ಜೂನ್‌ನಲ್ಲಿ ಮುಕ್ತಾಯಗೊಂಡಿತ್ತು. ಆದರೆ, ಜೂನ್-ಜುಲೈನಲ್ಲಿ ಕೋವಿಡ್ ಕಾರಣದಿಂದಾಗಿ ಚುನಾವಣಾ ಆಯೋಗವು ಗ್ರಾಪಂ ಚುನಾವಣೆಯನ್ನು ಮುಂದೂಡಿತ್ತು. ಅಲ್ಲದೆ, ಅಂದಿನ ಬಿಜೆಪಿ ಸರಕಾರ ಗ್ರಾಪಂಗಳಿಗೆ ಜಿಲ್ಲಾಧಿಕಾರಿ ಮೂಲಕ ಆಡಳಿತಾಧಿಕಾರಿಗಳನ್ನು ನೇಮಕಗೊಳಿಸಿದ್ದು, ಆರು ತಿಂಗಳ ಕಾಲ ಗ್ರಾಪಂಗಳಲ್ಲಿ ಆಡಳಿತಾಧಿಕಾರಿಗಳು ಅಧಿಕಾರ ನಡೆಸಿದ್ದರು.

2020ರಲ್ಲಿ ಗ್ರಾಪಂ ಚುನಾವಣೆಯ ವಾರ್ಡ್‌ವಾರು ಮೀಸಲು ಪಟ್ಟಿಯನ್ನು ಆ.27ರಂದು ಪ್ರಕಟಿಸಲಾಗಿತ್ತು. ಆಯೋಗದ ನಿಯಮದಂತೆ ಮೀಸಲು ಹೊರಡಿಸಿದ 45 ದಿನಗಳ ಬಳಿಕ ಚುನಾವಣಾ ದಿನಾಂಕ ಹೊರಡಿಸಬೇಕಾಗುತ್ತದೆ. 2020ರಲ್ಲಿ ಕೋವಿಡ್ ಕಾರಣದಿಂದಾಗಿ ಚುನಾವಣೆ ಮುಂದೂಡಲಾಗಿತ್ತು. ಈ ಸಂಬಂಧ 2020ರಲ್ಲಿ ಕೋರ್ಟ್‌ನಲ್ಲಿ ವಾದ ಕೂಡ ನಡೆದಿತ್ತು.

ಆದರೆ, ಇದೀಗ ಮೀಸಲು ನಿಗದಿಪಡಿಸುವ ಅಧಿಕಾರ ಸರಕಾರದ ಕೈಯಲ್ಲಿದೆ. ಸರಕಾರ ಮೀಸಲು ಪಟ್ಟಿ ಘೋಷಿಸಿದರೆ, ಮಾತ್ರ ರಾಜ್ಯ ಚುನಾವಣಾ ಆಯೋಗಕ್ಕೆ ಚುನಾವಣಾ ಸಿದ್ಧತೆ ನಡೆಸಲು ಸಾಧ್ಯವಾಗಲಿದೆ. ಸರಕಾರ ಮೀಸಲು ಪಟ್ಟಿಯನ್ನು ಹೊರಡಿಸದೇ ಇದ್ದಲ್ಲಿ ಗ್ರಾಪಂ ಚುನಾವಣೆ ತಡವಾಗುವ ಸಾಧ್ಯತೆ ಇದ್ದು, ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಸಾಧ್ಯತೆ ಇವೆ.

ಮೀಸಲು ನಿಗದಿ ಮತ್ತಷ್ಟು ವಿಳಂಬ: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ 2021ರಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಮೀಸಲು ನಿಗದಿಪಡಿಸುವ ಅಧಿಕಾರ ರಾಜ್ಯ ಚುನಾವಣಾ ಆಯೋಗದಿಂದ ಕಿತ್ತುಕೊಂಡ ಬಳಿಕ ಸ್ಥಳೀಯ ಸಂಸ್ಥೆಗಳು ಚುನಾವಣೆಗೆ ಗ್ರಹಣ ಹಿಡಿದಿದೆ. ಮೀಸಲು ನಿಗದಿಪಡಿಸುವ ವಿಷಯದಿಂದಾಗಿ 2021ರಲ್ಲಿ ಅವಧಿ ಪೂರ್ಣಗೊಂಡರೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯದೆ ಐದು ವರ್ಷ ಕಳೆದಿದೆ. ಇದೀಗ ಗ್ರಾಪಂ ಅಧಿಕಾರವಧಿ ಮುಕ್ತಾಯದತ್ತ ಬಂದರೂ ಮೀಸಲು ನಿಗದಿ ಪಡಿಸುವತ್ತ ರಾಜ್ಯ ಸರಕಾರ ಆಸಕ್ತಿ ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕಳೆದ ಐದು ವರ್ಷಗಳಿಂದ ಚುನಾವಣೆ ನಡೆಯದಿರುವ ಜಿಪಂ ಮತ್ತು ತಾಪಂ ಚುನಾವಣೆಯನ್ನು ರಾಜ್ಯ ಸರಕಾರ ಎಪ್ರಿಲ್‌ನಲ್ಲಿ ನಡೆಸಲು ಸಿದ್ಧತೆ ನಡೆಸುತ್ತಿದೆ. ಈ ನಡುವೆ ಎಪ್ರಿಲ್‌ನಲ್ಲಿ ರಾಜ್ಯ ಸರಕಾರ ಗ್ರಾಪಂ ಚುನಾವಣೆ ನಡೆಸಲು ಮುಂದಾದರೆ ರಾಜ್ಯದಲ್ಲಿ ಜಿಪಂ ಮತ್ತು ತಾಪಂ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.

ಗ್ರಾಪಂ ಚುನಾವಣೆ ಸರಿಯಾದ ಅವಧಿಗೆ ನಡೆಯಲೇಬೇಕು. ಜಿಲ್ಲಾ ಪಂಚಾಯತ್, ತಾಪಂ ಚುನಾವಣೆ ಮುಂದೂಡಿ ಇದೀಗ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಇದೀಗ ಗ್ರಾಪಂ ಅವಧಿ ಮುಕ್ತಾಯದತ್ತ ಬಂದಿದೆ. ಗ್ರಾಪಂನಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದಿದ್ದರೆ ಅಧಿಕಾರಿಗಳ ದರ್ಬಾರ್ ನಡೆಯಲಿದೆ. ಇದರಿಂದ ಸಾರ್ವಜನಿಕರ ಕೆಲಸ ನಡೆಯಲು ವಿಳಂಬವಾಗಲಿದೆ.

-ಸಿ.ಎಲ್.ವಿಶ್ವ, ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ

ಚುನಾವಣೆ ನಡೆಸಲು ಸರಕಾರ ಬದ್ಧ: ಡಿಕೆಶಿ

ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ನಮ್ಮ ಸರಕಾರ ಬದ್ಧವಾಗಿದೆ. ಮೀಸಲಾತಿ ವಿಚಾರ ಹಾಗೂ ಇತರ ತೊಡಕು ನಿವಾರಿಸಿ ಚುನಾವಣೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಪ್ರತಿಯೊಬ್ಬರೂ ಅದಕ್ಕೆ ಸಿದ್ಧರಾಗಬೇಕು.

-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ, 1993ರ ಸೆಕ್ಷನ್ 8 ಅಡಿಯಲ್ಲಿ ಗ್ರಾಮ ಪಂಚಾಯತ್ ಅವಧಿ ಪೂರ್ಣಗೊಂಡು ನೂತನ ಚುನಾವಣೆ ಮೂಲಕ ಸದಸ್ಯರ ಆಯ್ಕೆ ತಡವಾದ ಸಂದರ್ಭದಲ್ಲಿ ಸರಕಾರವು ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿಯನ್ನು ನೇಮಿಸಲು ಅವಕಾಶವಿದೆ. 6 ತಿಂಗಳ ಅವಧಿಯಲ್ಲಿ ಚುನಾವಣೆ ನಡೆಸಿ ನೂತನ ಆಡಳಿತ ಮಂಡಳಿ ರಚನೆಯಾಗುವವರೆಗೆ ಇವರು ಆಡಳಿತ ಮಂಡಳಿಯ ಎಲ್ಲ ಅಧಿಕಾರ ಹಾಗೂ ಕರ್ತವ್ಯಗಳನ್ನು ನಿರ್ವಹಿಸುವುದರಿಂದ ಸರಕಾರದ ಯಾವುದೇ ಯೋಜನೆ ಅನುಷ್ಠಾನಕ್ಕೆ ಕಾನೂನಾತ್ಮಕ ಅಡೆತಡೆಗಳು ಇರುವುದಿಲ್ಲ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ 26, ಸೋಮವಾರಪೇಟೆ 23, ವಿರಾಜಪೇಟೆ 17, ಕುಶಾಲನಗರ 16 ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ 19 ಸೇರಿ 101 ಗ್ರಾಪಂಗಳಿಗೆ 2026ರಲ್ಲಿ ಚುನಾವಣೆ ನಡೆಯಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಂ.ಇಸ್ಮಾಯಿಲ್ ಕಂಡಕರೆ

contributor

Similar News