ದೊಡ್ಡ ಅಂತಾಪುರದಲ್ಲಿ ವಿಜಯನಗರೋತ್ತರ ದಳವಾಯಿ-ಗೌಡರ ದಾನಶಾಸನ ಪತ್ತೆ

ಗ್ರಾಮಾಡಳಿತ, ಆರ್ಥಿಕ ವ್ಯವಸ್ಥೆ ಕುರಿತು ಬೆಳಕು ಚೆಲ್ಲಿದ ಅಪರೂಪದ ಶಾಸನ

Update: 2026-07-27 14:48 IST

ಸಂಡೂರು: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೊಡ್ಡ ಅಂತಾಪುರ ಗ್ರಾಮದಲ್ಲಿ ವಿಜಯನಗರೋತ್ತರ ಕಾಲಕ್ಕೆ ಸೇರಿದ ಅಪರೂಪದ ದಾನಶಾಸನ ಪತ್ತೆಯಾಗಿದ್ದು, ಗ್ರಾಮೀಣ ಆಡಳಿತ, ದೇವಾಲಯಗಳ ಆರ್ಥಿಕ ವ್ಯವಸ್ಥೆ, ದಾನಧರ್ಮ ಹಾಗೂ ಸಾಮಾಜಿಕ ಮೌಲ್ಯಗಳ ಅಧ್ಯಯನಕ್ಕೆ ಮಹತ್ವದ ದಾಖಲೆ ಎನ್ನಲಾಗಿದೆ.

ವಿಜಯನಗರ ತಿರುಗಾಟ ಸಂಶೋಧನ ತಂಡವು ಹಲವು ವರ್ಷಗಳಿಂದ ವಿಜಯನಗರ ಸಾಮ್ರಾಜ್ಯ ಮತ್ತು ಅದರ ನಂತರದ ಕಾಲದ ಪುರಾತತ್ವ ಹಾಗೂ ಶಾಸನ ಸಂಪತ್ತಿನ ಕುರಿತು ಅಧ್ಯಯನ ನಡೆಸುತ್ತಿದ್ದು, ಅದರ ಭಾಗವಾಗಿ ಗ್ರಾಮದ ಚಂದ್ರಶೇಖರ ಅವರ ಹೊಲದಲ್ಲಿರುವ ಹುಟ್ಟುಬಂಡೆಯ ಮೇಲೆ ಈ ಶಾಸನವನ್ನು ಪತ್ತೆಹಚ್ಚಲಾಗಿದೆ.

ಈ ಸಂಶೋಧನಾ ತಂಡದಲ್ಲಿ ಪ್ರೊ. ಎಚ್. ತಿಪ್ಪೇಸ್ವಾಮಿ, ಡಾ. ಗೋವಿಂದ, ಡಾ. ಕೃಷ್ಣೆಗೌಡ, ಸಂಶೋಧಕರಾದ ಎಚ್. ರವಿ, ಅಶೋಕ ನಾಯಕ್ ದಿದ್ದಿಗಿ, ಇಸ್ಮಾಯಿಲ್ ಸಿದ್ದಿಕಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಮಾರುತಿ ಜಿ.ವಿ. ಮತ್ತು ಶ್ರೀಕಾಂತ ಪಾಲ್ಗೊಂಡಿದ್ದರು. ಸ್ಥಳೀಯರಾದ ತಾಯಪ್ಪ, ರಾಗಿ ಶಿವರಾಮಪ್ಪ, ಬಂಡ್ರಿ ಪಾಪಯ್ಯ ಮತ್ತು ಬಾಬಣ್ಣ ಅವರ ಸಹಕಾರವೂ ಮಹತ್ವದ್ದಾಗಿದೆ.

ಶಿಲ್ಪಕಲೆಯ ವೈಶಿಷ್ಟ್ಯ: ಸುಮಾರು ನಾಲ್ಕು ಅಡಿ ಎತ್ತರ ಮತ್ತು ಮೂರು ಅಡಿ ಅಗಲದ ಗ್ರಾನೈಟ್ ಬಂಡೆಯ ಮೇಲೆ ಶಾಸನ ಕೆತ್ತಲಾಗಿದೆ. ಮೇಲ್ಭಾಗದಲ್ಲಿ ಎಡಕ್ಕೆ ಚಂದ್ರ, ಬಲಕ್ಕೆ ಸೂರ್ಯನ ಚಿಹ್ನೆಗಳು ಹಾಗೂ ಮಧ್ಯದಲ್ಲಿ ಶಿವಲಿಂಗದ ಎದುರು ಭಕ್ತಿಭಾವದಿಂದ ಕುಳಿತಿರುವ ನಂದಿಯ ಶಿಲ್ಪವಿದೆ. ಅದರ ಕೆಳಭಾಗದಲ್ಲಿ ದೊಡ್ಡ ಶಿವಲಿಂಗವನ್ನು ಕೆತ್ತಲಾಗಿದೆ.

ಈ ಶಿಲ್ಪಗಳು ಶಾಸನದ ಧಾರ್ಮಿಕ ಹಿನ್ನೆಲೆಯ ಜೊತೆಗೆ ಆ ಕಾಲದ ಶಿಲ್ಪಿಗಳ ಕಲಾತ್ಮಕ ನೈಪುಣ್ಯವನ್ನೂ ಪ್ರತಿಬಿಂಬಿಸುತ್ತವೆ. ಶಾಸನವನ್ನು ಕೆತ್ತಿಸಿದವರು ಶೈವ ಸಂಪ್ರದಾಯದವರಾಗಿದ್ದರೆಂಬುದಕ್ಕೂ ಇದು ಸಾಕ್ಷಿಯಾಗಿದೆ.

ಎಂಟು ಸಾಲುಗಳಲ್ಲಿ ಅಡಗಿರುವ ಇತಿಹಾಸ

ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿ ಕೆತ್ತಲ್ಪಟ್ಟಿರುವ ಈ ಶಾಸನವು ಎಂಟು ಸಾಲುಗಳನ್ನು ಒಳಗೊಂಡಿದೆ. ಶುಭಮಸ್ತು ಎಂಬ ಮಂಗಳ ಪದದಿಂದ ಆರಂಭವಾಗುವ ಶಾಸನದಲ್ಲಿ ಅಂತಾಪುರದ ದಳವಾಯಿ ತಿರುಮಲಯ್ಯ ಹಾಗೂ ಗೌಡ ಹನುಮಿನಾಯಕರು ಮಲ್ಲಿಕಾರ್ಜುನ ದೇವಾಲಯಕ್ಕೆ ಭೂಮಿಯನ್ನು ದಾನವಾಗಿ ನೀಡಿರುವುದನ್ನು ದಾಖಲಿಸಲಾಗಿದೆ.

ದಾನವಾಗಿ ನೀಡಿದ ಭೂಮಿಯಿಂದ ಬರುವ ಆದಾಯದಿಂದ ದೇವರಿಗೆ ನಿತ್ಯಪೂಜೆ ಹಾಗೂ ಅಮೃತಪಡಿ ನೈವೇದ್ಯ ನಿರಂತರವಾಗಿ ನಡೆಯಬೇಕೆಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ.

ದೇವಾಲಯಗಳು ಗ್ರಾಮೀಣ ಆರ್ಥಿಕತೆಯ ಕೇಂದ್ರ

ಈ ಶಾಸನವು ವಿಜಯನಗರೋತ್ತರ ಕಾಲದಲ್ಲಿ ದೇವಾಲಯಗಳು ಕೇವಲ ಪೂಜಾಸ್ಥಳಗಳಾಗಿರದೆ, ಗ್ರಾಮೀಣ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿದ್ದವು ಎಂಬುದನ್ನು ಸ್ಪಷ್ಟಪಡಿಸುತ್ತದೆ. ನಿತ್ಯಪೂಜೆ, ಅನ್ನದಾನ, ಉತ್ಸವಗಳು ಹಾಗೂ ಧಾರ್ಮಿಕ ಸೇವೆಗಳು ನಿರಂತರವಾಗಿ ನಡೆಯಲು ಭೂಮಿಯನ್ನು ಶಾಶ್ವತ ಆದಾಯದ ಮೂಲವಾಗಿ ದಾನ ನೀಡುವ ಸಂಪ್ರದಾಯ ಅಂದು ಪ್ರಚಲಿತದಲ್ಲಿತ್ತು.

ದಳವಾಯಿ-ಗೌಡರ ಆಡಳಿತದ ಸಾಕ್ಷಿ

ಶಾಸನದಲ್ಲಿ ದಳವಾಯಿ ಹಾಗೂ ಗೌಡ ಎಂಬ ಎರಡು ಆಡಳಿತ ಹುದ್ದೆಗಳ ಉಲ್ಲೇಖ ವಿಶೇಷ ಮಹತ್ವ ಪಡೆದಿದೆ. ದಳವಾಯಿ ಸೇನೆಯ ಮುಖ್ಯಸ್ಥನಷ್ಟೇ ಅಲ್ಲದೆ ಪ್ರಮುಖ ಆಡಳಿತಾಧಿಕಾರಿಯಾಗಿದ್ದರೆ, ಗೌಡ ಗ್ರಾಮಾಡಳಿತದ ಮುಖ್ಯಸ್ಥನಾಗಿದ್ದ. ಇಬ್ಬರೂ ಸೇರಿ ದೇವಾಲಯಕ್ಕೆ ಭೂದಾನ ನೀಡಿರುವುದು ಸ್ಥಳೀಯ ಆಡಳಿತ ಮತ್ತು ಧಾರ್ಮಿಕ ಸಂಸ್ಥೆಗಳ ನಡುವಿನ ಸಮನ್ವಯವನ್ನು ಸೂಚಿಸುತ್ತದೆ.

ಕನ್ನಡ ವಿಶ್ವವಿದ್ಯಾಲಯದ ಹಿರಿಯ ಶ್ರೇಣಿ ಪ್ರಾಧ್ಯಾಪಕರಾದ ಡಾ. ಗೋವಿಂದ ಅವರ ಪ್ರಕಾರ, ಈ ಶಾಸನವು ಗ್ರಾಮಮಟ್ಟದ ಆಡಳಿತ ವ್ಯವಸ್ಥೆಯ ಪರಿಣಾಮಕಾರಿತ್ವಕ್ಕೆ ಪ್ರಮುಖ ಸಾಕ್ಷಿಯಾಗಿದೆ.

16ನೇ ಶತಮಾನದ ಅಪರೂಪದ ದಾಖಲೆ

ಶಾಸನದಲ್ಲಿ ರಾಜನ ಹೆಸರು ಅಥವಾ ಶಕವರ್ಷದ ಉಲ್ಲೇಖ ಇಲ್ಲದಿದ್ದರೂ, ಪರಾಭವ ಸಂವತ್ಸರ, ವೈಶಾಖ ಶುದ್ಧ ಪಾಡ್ಯಮಿ, ಬುಧವಾರ ಎಂಬ ಕಾಲಸೂಚನೆ ದೊರೆಯುತ್ತದೆ. ಲಿಪಿ ಹಾಗೂ ಭಾಷೆಯ ಆಧಾರದ ಮೇಲೆ ಸಂಶೋಧಕರು ಇದನ್ನು ವಿಜಯನಗರೋತ್ತರ 16ನೇ ಶತಮಾನದ ಶಾಸನವೆಂದು ಗುರುತಿಸಿದ್ದಾರೆ.

ಇದರಿಂದ ವಿಜಯನಗರ ಸಾಮ್ರಾಜ್ಯದ ಪತನದ ಬಳಿಕವೂ ಗ್ರಾಮಾಡಳಿತ, ದೇವಾಲಯಗಳ ನಿರ್ವಹಣೆ ಹಾಗೂ ದಾನ ಸಂಸ್ಕೃತಿ ನಿರಂತರವಾಗಿ ಮುಂದುವರಿದಿದ್ದುದನ್ನು ದೃಢಪಡಿಸುತ್ತದೆ.

ಶಾಪಾಶಯದ ಮೂಲಕ ದಾನದ ರಕ್ಷಣೆ: ಶಾಸನದ ಕೊನೆಯಲ್ಲಿ ದಾನವನ್ನು ರದ್ದುಗೊಳಿಸಿದರೆ ಅಥವಾ ಶಾಸನವನ್ನು ಹಾಳು ಮಾಡಿದವರಿಗೆ ವಾರಣಾಸಿಯಲ್ಲಿ ತಾಯಿಯನ್ನು ಕೊಂದ ಪಾಪ ಬರುತ್ತದೆ ಎಂಬ ಕಠಿಣ ಶಾಪಾಶಯವನ್ನು ದಾಖಲಿಸಲಾಗಿದೆ.

ಪ್ರೊ. ಎಚ್. ತಿಪ್ಪೇಸ್ವಾಮಿ ಅವರ ಪ್ರಕಾರ, ಇಂತಹ ಶಾಪಾಶಯಗಳು ಧಾರ್ಮಿಕ ನಂಬಿಕೆಯಷ್ಟೇ ಅಲ್ಲದೆ ದಾನಧರ್ಮ ಹಾಗೂ ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವ ಸಾಮಾಜಿಕ ನಿಯಂತ್ರಣ ವ್ಯವಸ್ಥೆಯಾಗಿದ್ದವು.

ಸಂರಕ್ಷಣೆಗೆ ಆಗ್ರಹ: ಮಳೆ, ಬಿಸಿಲು ಹಾಗೂ ನಿರ್ಲಕ್ಷ್ಯದಿಂದ ಇಂತಹ ಅಮೂಲ್ಯ ಶಾಸನಗಳು ಅಳಿವಿನಂಚಿಗೆ ತಲುಪುತ್ತಿವೆ. ಪುರಾತತ್ವ ಇಲಾಖೆ, ತಾಲೂಕು ಆಡಳಿತ ಹಾಗೂ ಸ್ಥಳೀಯ ಗ್ರಾಮಸ್ಥರು ಇವುಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಂಶೋಧನಾ ತಂಡದ ಸದಸ್ಯರಾದ ಡಾ. ಕೃಷ್ಣೆಗೌಡ ಮನವಿ ಮಾಡಿದ್ದಾರೆ.

ದೊಡ್ಡ ಅಂತಾಪುರದಲ್ಲಿ ಪತ್ತೆಯಾದ ಈ ದಾನಶಾಸನವು ವಿಜಯನಗರೋತ್ತರ ಇತಿಹಾಸದ ಅಧ್ಯಯನಕ್ಕೆ ಮಹತ್ವದ ಕೊಂಡಿಯಾಗಿದೆ. ಇದು ಕೇವಲ ದೇವಾಲಯಕ್ಕೆ ನೀಡಿದ ಭೂದಾನದ ದಾಖಲೆಯಲ್ಲ; ಗ್ರಾಮಾಡಳಿತ, ದಳವಾಯಿ-ಗೌಡರ ಅಧಿಕಾರ, ದೇವಾಲಯಗಳ ಆರ್ಥಿಕ ಸ್ವಾವಲಂಬನೆ, ದಾನಧರ್ಮ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಸಮಗ್ರ ಚಿತ್ರಣ ನೀಡುವ ಐತಿಹಾಸಿಕ ದಾಖಲೆಯಾಗಿದೆ.

ಈಗಾಗಲೇ ಪ್ರಾಗೈತಿಹಾಸಿಕ ನೆಲೆಗಳು, ಶಿಲಾಯುಗದ ಕುರುಹುಗಳು, ಜೈನ ಸ್ಮಾರಕಗಳು, ವಿಜಯನಗರ ಕಾಲೀನ ದೇವಾಲಯಗಳು ಹಾಗೂ ಅನೇಕ ಶಾಸನಗಳ ಮೂಲಕ ಹೆಸರುವಾಸಿಯಾಗಿರುವ ಸಂಡೂರು ಪ್ರದೇಶಕ್ಕೆ ಈ ಹೊಸ ಶಾಸನ ಮತ್ತೊಂದು ಅಮೂಲ್ಯ ಸೇರ್ಪಡೆಯಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಇನ್ನಷ್ಟು ವ್ಯವಸ್ಥಿತ ಪುರಾತತ್ವ ಸಂಶೋಧನೆ ನಡೆಸುವ ಅಗತ್ಯವನ್ನು ಈ ಪತ್ತೆ ಒತ್ತಿ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಮಹಮ್ಮದ್ ಖಾಸಿಂ

contributor

Similar News