ಪಿಸುದನಿಗಳು ಘರ್ಜನೆಯಾಗುವ ದಿನ...

Update: 2026-07-27 11:20 IST

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಹನ್ನೆರಡು ವರ್ಷಗಳಲ್ಲಿ ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಐವತ್ತಾರು ಇಂಚಿನ ಎದೆ ನಡುಗಿದೆ, ಬೆನ್ನು ಬಾಗಿದೆ. ದ್ವೇಷದ ಮಾರುಕಟ್ಟೆಯಲ್ಲಿದ್ದ ಎಲ್ಲ ‘ಕೀಟನಾಶಕ’ಗಳ ಪ್ರಯೋಗದ ಹೊರತಾಗಿಯೂ ‘ಜಿರಳೆ’ಗಳು ಸಾಯದೆ ಸಾಕ್ಷಾತ್ ಪ್ರಧಾನಿಯವರ ಮನಸ್ಸಿನೊಳಗೆ ನುಗ್ಗಿ ನಡುರಾತ್ರಿಯಲ್ಲಿ ಎದ್ದು ಕೂರುವಂತೆ ಮಾಡಿದೆ.

ವಾಟ್ಸ್‌ಆ್ಯಪ್ ಯೂನಿವರ್ಸಿಟಿಯ ಅಂಧ ವಿದ್ಯಾರ್ಥಿಗಳು ನಿಜವಾದ ಯೂನಿವರ್ಸಿಟಿಯ ಜಾಣವಿದ್ಯಾರ್ಥಿಗಳ ಎದುರು ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಸುಳ್ಳು, ಅಪಪ್ರಚಾರ ಮತ್ತು ಚಾರಿತ್ರ್ಯಹನನದ ಮೂಲಕವೇ ಕಟ್ಟುತ್ತಿದ್ದ ಕಥನಗಳೆಲ್ಲ ದಿಲ್ಲಿಯ ಯುಮುನಾ ನದಿಯ ಕೊಳಚೆ ನೀರಲ್ಲಿ ಕೊಚ್ಚಿಹೋಗಿವೆ.

ಮುಂದೇನು? ಯುದ್ಧದಲ್ಲಿ ಸಾಮಾನ್ಯವಾಗಿ ಗೆದ್ದವರು ಸಂಭ್ರಮಾಚರಣೆಯಲ್ಲಿ ಮೈಮರೆಯುತ್ತಾರೆ, ಸೋತವರು ಸೋಲಿನ ಸೇಡುತೀರಿಸಿಕೊಳ್ಳಲು ವ್ಯೆಹರಚನೆಯಲ್ಲಿ ತೊಡಗಿಕೊಳ್ಳುತ್ತಾರೆ. ನರೇಂದ್ರಮೋದಿ ಮತ್ತು ಅಮಿತ್ ಶಾ ಜೋಡಿ ಗೆದ್ದ ಕಾಲದಲ್ಲಿಯೂ ಮೈಮರೆಯದೆ ಇನ್ನೊಂದು ಗೆಲುವಿಗೆ ತಾಲೀಮು ನಡೆಸುವ ಅಪರೂಪದ ಜೋಡಿ. ಕಳೆದ ಹನ್ನೆರಡು ವರ್ಷಗಳ ಅವಧಿಯಲ್ಲಿ ಬಿಜೆಪಿಯ ಗೆಲುವಿನ ಓಟವನ್ನು ನೆನಪು ಮಾಡಿಕೊಂಡರೆ ಈ ಅಪರೂಪದ ಜೋಡಿ ಈಗ ಏನು ಯೋಚಿಸುತ್ತಿರಬಹುದು ಎನ್ನುವುದನ್ನು ಊಹಿಸಿಕೊಳ್ಳಬಹುದು.

ಸರ್ವಾಧಿಕಾರಿಯೊಬ್ಬ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಸರ್ವಾಧಿಕಾರಿಯಾದರೆ ಗಾಬರಿ ಪಡಬೇಕಾಗಿಲ್ಲ.ಆತ ವಿನಾಶದ ಹಾದಿಯಲ್ಲಿದ್ದಾನೆ ಎಂದು ನಿರಾಳವಾಗಿ ಇರಬಹುದು. ಸರ್ವಾಧಿಕಾರಿ ಪ್ರಜಾಪ್ರಭುತ್ವ ವಾದಿಯಾಗಲು ಪ್ರಯತ್ನಪಡುವಂತೆ ಕಂಡರೆ ಆತನ ಮೇಲೆ ಎಚ್ಚರಿಕೆಯ ಕಣ್ಣು ಇಡಬೇಕಾಗುತ್ತದೆ. ಇದು ಮನಪರಿವರ್ತನೆಯಲ್ಲ ಮನವಂಚನೆ.

ಸನ್ಮಾನ್ಯ ನರೇಂದ್ರ ಮೋದಿಯವರು ರೂಪಾಂತರದ ಕಲೆಯಲ್ಲಿ ಪ್ರಖ್ಯಾತರು. ‘ಹಿಂದೂ ಹೃದಯ ಸಾಮ್ರಾಟ’ರಾಗಿ ಗುಜರಾತ್ ಪ್ರವೇಶಿಸಿ ಆ ಪಾತ್ರದ ಕೆಲಸ ಮುಗಿದ ನಂತರ ‘ವಿಕಾಸ ಪುರುಷ’ನ ಅವತಾರ ಎತ್ತಿ ಅದರ ಮೂಲಕವೇ ದಿಲ್ಲಿ ಗದ್ದುಗೆ ಏರಿರುವ ಮೋದಿಯವರು ಈಗ ‘ವಿಶ್ವಗುರು’ ಅವತಾರದಲ್ಲಿದ್ದಾರೆ. ಹೊಸ ವಿದ್ಯಮಾನಗಳ ಗ್ರಹಿಕೆಯಲ್ಲಿ ತುಸು ಎಡವಿದರೂ ತಕ್ಷಣದಲ್ಲಿ ಎಚ್ಚೆತ್ತುಕೊಂಡಿರುವ ಮೋದಿ, ಈಗ ಪ್ರಜಾಪ್ರಭುತ್ವವಾದಿಯ ಹೊಸ ವೇಷಧಾರಣೆಯ ಪ್ರಯತ್ನದಲ್ಲಿದ್ದಾರೆ. ಇದು ದಾಳಿಗೆ ಮೊದಲು ಹುಲಿ, ಎರಡು ಹೆಜ್ಜೆ ಹಿಂದೆ ಇಟ್ಟ ಹಾಗೆ.

ನರೇಂದ್ರಮೋದಿಯವರು ಕಾಕ್ರೋಚ್ ಚಳವಳಿಗೆ ಮಣಿಯಲು ಮೇಲ್ನೋಟಕ್ಕೆ ನಾಲ್ಕು ಕಾರಣಗಳನ್ನು ನೀಡಬಹುದು. ಮೊದಲನೆಯದಾಗಿ, ಬಿಜೆಪಿ ಮತಬ್ಯಾಂಕ್ ನ ಬಹುದೊಡ್ಡ ಪಾಲುದಾರರಾದ ಮಧ್ಯಮ ವರ್ಗದ ಕುಟುಂಬಗಳ ಯುವಜನರು ತಿರುಗಿಬಿದ್ದಿರುವುದು ಹೊಸ ಬೆಳವಣಿಗೆ. ಬಡವರು, ಕಾರ್ಮಿಕರು, ರೈತರು ಮತ್ತು ದಲಿತ-ಹಿಂದುಳಿದ-ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿರುವ ಯುವಜನರ ಬಗ್ಗೆ ಮೋದಿಯವರಾಗಲಿ, ಅವರ ಪಕ್ಷವಾಗಲಿ ಹಿಂದೆಯೂ ತಲೆಕೆಡಿಸಿಕೊಂಡಿರಲಿಲ್ಲ. ಕಾಕ್ರೋಚ್ ಚಳವಳಿಯಲ್ಲಿ ಎಂದಿನ ‘ಆಂದೋಲನ ಜೀವಿ’ ಗಳ ಜೊತೆಯಲ್ಲಿ ಮಧ್ಯಮ ವರ್ಗಕ್ಕೆ ಸೇರಿರುವ ಮೇಲ್ಜಾತಿಯ ಕುಟುಂಬಗಳ ಯುವಜನರು ಭಾಗವಹಿಸುತ್ತಿರುವುದು ಮೋದಿಯವರ ನಿದ್ದೆಗೆಡಿಸಿದೆ.

ಎರಡನೆಯದಾಗಿ ಅಣ್ಣಾ ಹಝಾರೆ ಚಳವಳಿಯೊಳಗೆ ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರು ನುಸುಳಿದಂತೆ ಕಾಕ್ರೋಚ್ ಚಳವಳಿಯೊಳಗೆ ಕಾಂಗ್ರೆಸ್ ಮತ್ತಿತರ ವಿರೋಧಪಕ್ಷಗಳ ಕಾರ್ಯಕರ್ತರು ಸೇರಿಕೊಳ್ಳುವುದು ಮೋದಿಯವರಿಗೆ ಬೇಡವಾಗಿತ್ತು. ಕಳ್ಳರ ಮನಸ್ಸನ್ನು ಕಳ್ಳರು ಬಹಳ ಬೇಗ ಅರ್ಥಮಾಡಿಕೊಳ್ಳುತ್ತಾರೆ. ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿಯವರೇ ನೇರವಾಗಿ ಜಂತರ್ ಮಂತರ್ ವೇದಿಕೆ ಹತ್ತಿದ್ದರೆ ಮೋದಿಯವರು ಖುಷಿ ಪಡುತ್ತಿದ್ದರು. ರಾಹುಲ್ ಗಾಂಧಿಯವರು ಅದಕ್ಕೆ ಅವಕಾಶ ನೀಡದೆ ರಾಜಕೀಯ ಬಣ್ಣ ಬಳಿಯಲು ಕಾದು ನಿಂತ ಬಿಜೆಪಿ ಬಳಗವನ್ನು ನಿರಾಶೆಗೊಳಿಸಿದರು. ಈ ಚಳವಳಿ ಮುಂದುವರಿದು ರಾಜ್ಯಗಳಿಗೂ ಪಸರಿಸಿದರೆ ಬೇರೆ ಪಕ್ಷಗಳ ಕಾರ್ಯಕರ್ತರು ಕಾಕ್ರೋಚ್ ಚಳವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸಾಧ್ಯತೆಗಳಿತ್ತು. ಗುಜರಾತ್ ನ ವಿದ್ಯಾರ್ಥಿ ಹಾಸ್ಟೆಲ್ ಕ್ಯಾಂಟೀನ್‌ನಲ್ಲಿ ಶುರುವಾಗಿದ್ದ ಸಣ್ಣ ಮುಷ್ಕರ ‘ನವನಿರ್ಮಾಣ ಕ್ರಾಂತಿ’ಯ ರೂಪ ಪಡೆದುಕೊಂಡದ್ದು ಹಾಗೆ ಅಲ್ಲವೇ? ಇದನ್ನು ಗುಜರಾತಿಯೊಬ್ಬ ಅರ್ಥಮಾಡಿಕೊಳ್ಳದೆ ಇರುತ್ತಾನೆಯೇ?

ಮೂರನೆಯದಾಗಿ ಸ್ವಪಕ್ಷ, ಮಿತ್ರಪಕ್ಷ ಮತ್ತು ಆರೆಸ್ಸೆಸ್ ನೊಳಗೆ ನಿಧಾನವಾಗಿ ಮೇಲೇಳುತ್ತಿದ್ದ ಅಸಮಾಧಾನದ ಗುಳ್ಳೆಗಳು. ಜಾತಿ-ಧರ್ಮಗಳನ್ನು ಮೀರಿ ವಿದ್ಯಾರ್ಥಿ-ಯುವಜನರು ತಿರುಗಿಬಿದ್ದಿರುವುದು ಬಿಜೆಪಿಯ ಹಿರಿಯ ಸಚಿವರು ಮತ್ತು ಶಾಸಕರನ್ನು ಚಿಂತೆಗೀಡು ಮಾಡಿತ್ತು. ಒಬ್ಬ ಸಚಿವನ ತಲೆ ಉಳಿಸಿಕೊಳ್ಳಲಿಕ್ಕಾಗಿ ಇಂತಹ ದೊಡ್ಡ ಅಪಾಯವನ್ನು ಆಹ್ಹಾನಿಸಿಕೊಳ್ಳುವುದು ಅನಗತ್ಯ ಎನ್ನುವುದು ಅವರ ಅಭಿಪ್ರಾಯವಾಗಿತ್ತು.

ದಿಲ್ಲಿಯ ನಂತರ ದೊಡ್ಡಪ್ರಮಾಣದಲ್ಲಿ ವಿದ್ಯಾರ್ಥಿ ಪ್ರತಿರೋಧ ಶುರುವಾಗಿರುವುದು ಬಿಹಾರದಲ್ಲಿ. ಮೈತ್ರಿಪಕ್ಷದ ಬೆನ್ನೇರಿ ಅಧಿಕಾರಕ್ಕೆ ಬಂದಿದ್ದರೂ ಇಂದಿಗೂ ಅಲ್ಲಿ ಬಿಜೆಪಿಗೆ ಭದ್ರವಾದ ನೆಲೆಯಿಲ್ಲ. ನಿತೀಶ್ ಕುಮಾರ್ ಪದಚ್ಯುತಿಯ ನಂತರ ಅಸಮಾಧಾನದಿಂದ ಇರುವ ಜೆಡಿ (ಯು) ಕಾರ್ಯಕರ್ತರು ವಿದ್ಯಾರ್ಥಿ ಚಳವಳಿಯನ್ನು ಬೆಂಬಲಿಸಲು ಶುರುಮಾಡಿದ್ದರು. ಇದೇ ವೇಳೆ ಇನ್ನೊಂದು ಪ್ರಮುಖ ಮೈತ್ರಿಪಕ್ಷವಾದ ತೆಲುಗುದೇಶಂ ಪಕ್ಷದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮೋದಿಯವರ ಕಠಿಣ ನಡೆ ಬಗ್ಗೆ ಚಿಂತಿತರಾಗಿದ್ದರಂತೆ. ಇವೆಲ್ಲದರ ಜೊತೆಯಲ್ಲಿ ಆರೆಸ್ಸೆಸ್ ಪರಿವಾರಕ್ಕೆ ಸೇರಿರುವ ಎಬಿವಿಪಿ ವಿದ್ಯಾರ್ಥಿಗಳನ್ನು ಹಿಡಿದಿಟ್ಟುಕೊಳ್ಳಲಾಗದೆ ಚಡಪಡಿಸುತ್ತಿತ್ತು.

ನಾಲ್ಕನೆಯದಾಗಿ ಮೋದಿ ಸರಕಾರಕ್ಕೆ ಈ ಸಂಸತ್ ಅಧಿವೇಶನದಲ್ಲಿಯೇ ಕ್ಷೇತ್ರ ಮರುವಿಂಗಡಣೆಯ ಮಸೂದೆಗೆ ಅಂಗೀಕಾರ ಪಡೆಯಬೇಕಾಗಿದೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದ ಹೊರತು ಕಲಾಪ ನಡೆಸಲು ಬಿಡುವುದಿಲ್ಲ ಎಂದು ವಿರೋಧಪಕ್ಷಗಳು ಗಟ್ಟಿಯಾದ ನಿರ್ಧಾರ ಕೈಗೊಂಡ ನಂತರ ಮೋದಿಯವರಿಗೂ ಬೇರೆ ದಾರಿ ಇರಲಿಲ್ಲ. ಕಾಕ್ರೋಚ್ ಚಳವಳಿಯ ಕಾಲದಲ್ಲಿಯೇ ಮಳೆಗಾಲದ ಅಧಿವೇಶನ ಶುರುವಾಗಿರುವುದನ್ನು ನೋಡಿದರೆ ಕಾಲವೂ ಮೋದಿ ಸರಕಾರದ ಮೇಲೆ ಮುನಿದಂತೆ, ವಿರೋಧಪಕ್ಷಗಳಿಗೆ ಸಹಕರಿಸಿದಂತೆ ಕಾಣುತ್ತಿದೆ.

ಒಂದು ಹೆಜ್ಜೆ ಹಿಂದೆ ಇಟ್ಟ ನರೇಂದ್ರಮೋದಿಯವರ ಮುಂದಿನ ಹೆಜ್ಜೆ ಏನೆಂಬುದು ಈಗಿನ ಕುತೂಹಲ. ಏನು ಮಾಡಬಹುದು? ಮುಂದಿನ ಮೂರು ವರ್ಷಗಳ ಕಾಲ ಬಿಜೆಪಿ ಸರಕಾರ ವಿದ್ಯಾರ್ಥಿ-ಯುವಜನರನ್ನು ಗುರಿಯಾಗಿಟ್ಟುಕೊಳ್ಳಲಿದೆ. ಈ ವರ್ಗವನ್ನು ಓಲೈಸಲು ಹೊಸ ಯೋಜನೆಗಳು, ಶಿಕ್ಷಣದ ಸುಧಾರಣೆಗೆ ಹೊಸ ಕ್ರಮಗಳು ಘೋಷಣೆಯಾಗಬಹುದು. ಈ ಮೂಲಕ ತಮ್ಮ ಸಾಂಪ್ರದಾಯಿಕ ಮತ ಬ್ಯಾಂಕನ್ನು ಸುಭದ್ರಗೊಳಿಸುವ ಪ್ರಯತ್ನವನ್ನು ಕಾಣಬಹುದು. ಸಾಮಾನ್ಯವಾಗಿ ರಾಜಕಾರಣಿಗಳು ಅನುಭವದಿಂದ ಪಾಠ ಕಲಿಯುವುದಿಲ್ಲ ಎಂಬ ಮಾತಿದೆ, ಆದರೆ ನರೇಂದ್ರಮೋದಿ ಉಳಿದವರೆಲ್ಲಗಿಂತ ಭಿನ್ನ. ಅವರು ಅನುಭವದಿಂದಲೂ ಪಾಠ ಕಲಿಯುತ್ತಾರೆ.

ಈಗ ಮೋದಿ ವಿರೋಧಿ ಪಾಳಯ ಏನು ಮಾಡಬೇಕು? ದಯವಿಟ್ಟು ನರೇಂದ್ರ ಮೋದಿಯವರನ್ನು ಕಿತ್ತೊಗೆಯುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ಜಂತರ್ ಮಂತರ್ ನಲ್ಲಿ ಸೇರಿದ್ದ ವಿದ್ಯಾರ್ಥಿ ಯುವಜನರ ಹೆಗಲ ಮೇಲೆ ಹೊರಿಸಿ ಫಲಿತಾಂಶಕ್ಕಾಗಿ ಕಾಯುತ್ತಾ ಕೂರಬೇಡಿ, ನಿಮಗೆ ನಿರಾಶೆಯಾಗಲಿದೆ. ನೇಪಾಳ,ಬಾಂಗ್ಲಾದಲ್ಲಿ ನಡೆದಿದ್ದ ಕ್ಷಿಪ್ರಕ್ರಾಂತಿ ನಡೆಯುತ್ತದೆ ಎಂದು ನಿರೀಕ್ಷಿಸಿದವರು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಿ. ಕತ್ತಲೆಯ ಸುರಂಗದ ಕೊನೆಯಲ್ಲಿ ಕಾಣುವ ಬೆಳಕು ಒಮ್ಮೊಮ್ಮೆ ಬೆಳಕಿನ ಮರೀಚಿಕೆಯೂ ಆಗಿರುತ್ತದೆ ಎನ್ನುವುದನ್ನು ಮರೆಯಬೇಡಿ.

ಇದಕ್ಕೆ ಕಾರಣಗಳು ಹಲವು. ಜಂತರ್ ಮಂತರ್ ನಲ್ಲಿ ಸೇರಿದ್ದ ಚಳವಳಿಗಾರರೆಲ್ಲರ ಸಂಖ್ಯೆಯನ್ನು ನೋಡಿ ತೇಲಿಹೋಗುವ ಅಗತ್ಯ ಇಲ್ಲ. ಜೆಎನ್ ಯು ವಿದ್ಯಾರ್ಥಿಗಳ ಚಳವಳಿ ಇರಲಿ,

ಸಿಎಎ-ಎನ್‌ಆರ್‌ಸಿ ವಿರುದ್ಧದ ಹೋರಾಟದ ಕಾಲದಲ್ಲಿಯೂ ಸೇರಿದ್ದ ಜನ ಕಡಿಮೆ ಸಂಖ್ಯೆಯಲ್ಲಿ ಏನಿರಲಿಲ್ಲ. ಅಂತಿಮವಾಗಿ ದಿಲ್ಲಿಯಲ್ಲಿಯೇ ನಡೆದ ಚುನಾವಣೆಗಳ ಫಲಿತಾಂಶ ಏನಾಯಿತು ಎನ್ನುವುದು ನಮ್ಮ ಕಣ್ಣ ಮುಂದಿದೆ.

ನೀಟ್ ವಿರುದ್ಧದ ಚಳವಳಿಯಲ್ಲಿ ಜಂತರ್ ಮಂತರ್‌ನಲ್ಲಿ ಮಾತ್ರವಲ್ಲ ಕರ್ನಾಟಕವೂ ಸೇರಿದಂತೆ ಹೆಚ್ಚಿನ ಕಡೆಗಳಲ್ಲಿ ಹೆಚ್ಚು ಸದ್ದು ಮಾಡಿರುವುದು ಎಡಪಕ್ಷಗಳ ವಿದ್ಯಾರ್ಥಿ-ಯುವಜನ ಸಂಘಟನೆಗೆ ಸೇರಿರುವ ಯುವಚಳವಳಿಗಾರರು. ಅವರ ಸೈದ್ಧಾಂತಿಕ ಬದ್ಧತೆ, ದಣಿವರಿಯದ ಹೋರಾಟದ ಕೆಚ್ಚು ಮತ್ತು ಸೋಲೊಪ್ಪದ ಆಶಾವಾದಕ್ಕೆ ಒಂದು ದೊಡ್ಡ ಸಲಾಮ್. ಆದರೆ ಇಂದಿನ ಭಾರತದ ರಾಜಕಾರಣದಲ್ಲಿ ಅವರ ಪ್ರಸ್ತುತತೆ ಕಡಿಮೆಯಾಗುತ್ತಲೇ ಇದೆ.

ಇಂದಿಗೂ ಕರ್ನಾಟಕದ ಬಹುತೇಕ ಕಾರ್ಮಿಕ ಸಂಘಟನೆಗಳು ಎಡಪಕ್ಷಗಳ ಕೈಯಲ್ಲಿಯೇ ಇದೆ. ಅಂಗನವಾಡಿ ಕಾರ್ಯಕರ್ತರ ಸಮಾವೇಶ ನಡೆದರೆ ಲಕ್ಷಾಂತರ ಮಹಿಳೆಯರು ಸೇರುತ್ತಾರೆ. ಆದರೆ ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಗಳಿಸಿದ್ದು 0.06ಶೇ. (22,671) ಮತಗಳು ಮಾತ್ರ. ಇದಕ್ಕಿಂತ ಹೆಚ್ಚಿನ ಮತಗಳು ನೋಟಾಕ್ಕೆ (0.69ಶೇ.) ಬಿದ್ದಿದೆ.

ಎಡಪಕ್ಷಗಳು ಇಂಡಿಯಾ ಒಕ್ಕೂಟದ ಭಾಗವಾಗಿರುವ ಕಾರಣ ಸಿಪಿಎಂ-ಸಿಪಿಐ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಿದ್ದಿವೆ ಎಂದು ಹೇಳಬಹುದು, ಈ ವಾದದಲ್ಲಿ ನಿಜಾಂಶವೂ ಇದೆ. ಸ್ವತಂತ್ರವಾಗಿ ಸ್ಪರ್ಧಿಸಿದ್ದ ಪಶ್ಚಿಮ ಬಂಗಾಳದ ಕತೆ ಏನು? ಅಲ್ಲಿ ನಡೆದ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಗಳಲ್ಲಿ ಮೈಲುದ್ದಕ್ಕೂ ಕೆಂಪು ಹಾಸಿದಂತೆ ಎಡಪಕ್ಷಗಳ ಬೆಂಬಲಿಗರು ಸೇರಿದ್ದರು. ಅಲ್ಲಿ ಸಿಪಿಐ(ಎಂ) ಪಕ್ಷ ಗಳಿಸಲು ಸಾಧ್ಯವಾಗಿದ್ದು ಕೇವಲ 28,39,067 ಮತಗಳು ಮಾತ್ರ.

ಬಿಜೆಪಿಯನ್ನು ಹೊರತುಪಡಿಸಿದರೆ ಸೈದ್ಧಾಂತಿಕ ಬದ್ಧತೆಯನ್ನು ಕಾಣಲು ಸಾಧ್ಯವಾಗಿರುವುದು ಎಡಪಕ್ಷಗಳಲ್ಲಿ ಮಾತ್ರ. ಈ ಪಕ್ಷಗಳು ಮುಖ್ಯವಾಹಿನಿ ರಾಜಕಾರಣದಿಂದ ಮರೆಗೆ ಸರಿಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎನ್ನುವುದು ನಿಜ. ಅದೇ ರೀತಿ ವಾಸ್ತವಕ್ಕೆ ಕುರುಡಾಗುವುದು ಕೂಡಾ ಅಪಾಯಕಾರಿ. ಜಂತರ್ ಮಂತರ್ ನಲ್ಲಿ ಸೇರಿರುವ ಮೋದಿ ವಿರೋಧಿಗಳು ಮುಕ್ತವಾಗಿ ಮಾಧ್ಯಮಗಳ ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನಾವು ಕೇಳಬಯಸುವ ಆ ದನಿಗಳು ನಮ್ಮ ಕಿವಿಗೆ ಇಂಪಾಗಿ ಕೇಳುತ್ತಿದೆ. ಆದರೆ ಅಲ್ಲಿ ಮೋದಿ ಅವರ ಬಗ್ಗೆ ಅಭಿಮಾನ ಹೊಂದಿರುವವರೂ ಇದ್ದರು ಎನ್ನುವುದು ನಿಜ. ನೀಟ್ ಪರೀಕ್ಷೆಯ ಹಗರಣದ ಬಗ್ಗೆ ಅವರಿಗೆ ಅಸಮಾಧಾನವಿದ್ದರೂ ಅದು ಮೋದಿಯವರ ವಿರುದ್ಧ ಬಂಡೇಳುವಷ್ಟು ತೀವ್ರವಾಗಿಲ್ಲ. ಅದೇ ರೀತಿ ಜೆನ್ ಝಿಗಳ ದೊಡ್ಡ ಗುಂಪು ಮೋದಿ ಅಭಿಮಾನಿಗಳು (ಮುಖ್ಯವಾಗಿ ಆಮ್ ಆದ್ಮಿ ಪಕ್ಷದ ಅಭಿಮಾನಿಗಳು) ಅಲ್ಲದೆ ಇದ್ದರೂ ಅದು ಕಾಂಗ್ರೆಸ್ ಇಲ್ಲವೇ ಇತರ ಬಿಜೆಪಿಯೇತರ ಪಕ್ಷಗಳ ಮತದಾರರಾಗಲಿ, ಅಭಿಮಾನಿಗಳಾಗಲಿ ಅಲ್ಲ.

ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ದೇಶದ ನೂರು ಮತದಾರರ ಪೈಕಿ 37 ಜನಗಳಷ್ಟೇ ಬಿಜೆಪಿಗೆ ಮತಹಾಕಿದ್ದನ್ನು ಮರೆಯಲು ಸಾಧ್ಯವೇ? ಹಾಗಿದ್ದರೂ ಬಿಜೆಪಿ ಯಾಕೆ ದೇಶ ಆಳುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಸಂಶೋಧನೆ ಮಾಡುವ ಅಗತ್ಯ ಇಲ್ಲ. ಕಾಕ್ರೋಚ್ ಚಳವಳಿಯ ಕಾಲದಲ್ಲಿಯೇ ಅರವಿಂದ ಕೇಜ್ರಿವಾಲ್ ಅವರು ರಾಹುಲ್ ಗಾಂಧಿ ಬಗ್ಗೆ ಮಾಡಿದ ಟೀಕೆಗಳು ಸಾಕು. ವಿರೋಧಪಕ್ಷಗಳಲ್ಲಿನ ಬಿಕ್ಕಟ್ಟೇ ಬಿಜೆಪಿಯ ಶಕ್ತಿ.

2014ರ ಲೋಕಸಭಾ ಚುನಾವಣೆಯನ್ನು ಬಿಜೆಪಿ ಗೆದ್ದಿದ್ದು ನಿಜ. ಅದರ ನಂತರದ ಎರಡು ಲೋಕಸಭಾ ಚುನಾವಣೆಗಳನ್ನು ಬಿಜೆಪಿ ಗೆದ್ದಿದ್ದು ಸಾಧನೆಯ ಬಲದಿಂದ ಅಲ್ಲ. ನಿರುದ್ಯೋಗ, ಹಣದುಬ್ಬರ, ಬೆಲೆ ಏರಿಕೆ, ಡಿಮೊನಿಟೈಷೇಶನ್, ಕೋವಿಡ್ ನಿಯಂತ್ರಣದಲ್ಲಿನ ವೈಫಲ್ಯ, ಅವೈಜ್ಞಾನಿಕವಾದ ಜಿಎಸ್‌ಟಿ, ಕೃಷಿಕ್ಷೇತ್ರದ ಬಿಕ್ಕಟ್ಟು, ಸಂಪತ್ತಿನ ಅಸಮಾನ ಹಂಚಿಕೆಗಳ ಹೊರತಾಗಿಯೂ ಬಿಜೆಪಿ ಚುನಾವಣೆಗಳನ್ನು ಗೆಲ್ಲುತ್ತಿರುವುದು ಹೇಗೆ?

ಬಡವರು ಮತ್ತು ಅಶಿಕ್ಷಿತರನ್ನು ಬಿಟ್ಟುಬಿಡಿ ಭಾರತದಲ್ಲಿ ಬೆಳೆಯುತ್ತಲೇ ಇರುವ ಸದ್ಯ ಶೇಕಡಾ 25-30ರಷ್ಟಿರುವ ಮಧ್ಯಮ ವರ್ಗದ ಶಿಕ್ಷಿತ-ಉದ್ಯೋಗಸ್ಥ ಮತದಾರರಿಗೆ ಬಿಜೆಪಿಗೆ ಮತಹಾಕುವಾಗ ಸರಕಾರದ ಸಾಲುಸಾಲು ವೈಫಲ್ಯಗಳು ಗೊತ್ತಿರಲಿಲ್ಲವೇ? ಇವುಗಳಲ್ಲಿ ಬಹುತೇಕ ವೈಫಲ್ಯಗಳ ಬಲಿಪಶುಗಳು ಅವರೇ ಆಗಿದ್ದಾರೆ. ಮಾತು ಮಾತಿಗೆ ಸ್ವಾಮಿ ವಿವೇಕಾನಂದ, ಭಗತ್ ಸಿಂಗ್ ಗುಣಗಾನ ಮಾಡುವ ಈ ವರ್ಗದ ಜನ ಅಂತಹ ಮಹಾಪುರುಷರು ನಮ್ಮ ಮನೆಯಲ್ಲಿಬೇಡ ಪಕ್ಕದ ಮನೆಯಲ್ಲಿ ಹುಟ್ಟಲಿ ಎಂದು ತಮ್ಮ ಮಕ್ಕಳನ್ನು ಡಾಕ್ಟರ್-ಇಂಜಿನಿಯರ್ ಮಾಡಲು ಹಗಲಿರುಳೂ ದುಡಿಯುತ್ತಿರುತ್ತಾರೆ

ನರೇಂದ್ರ ಮೋದಿಯವರಿಗೆ ಯಾಕೆ ಮತಹಾಕುತ್ತೀರಾ ಎಂದು ಮಧ್ಯಮ ವರ್ಗಕ್ಕೆ ಸೇರಿರುವ ನಿಮ್ಮ ಸ್ನೇಹಿತರನ್ನೋ, ಬಂಧುಗಳನ್ನೋ ಒಮ್ಮೆ ಕೇಳಿ ನೋಡಿ. ಉತ್ತರ ಗೊತ್ತಾದಾಗ ಶಾಕ್ ಆಗ್ತೀರಾ? ಇವರಲ್ಲಿ ಬಹುತೇಕ ಮಂದಿ ‘ದೇಶದ್ರೋಹಿ ಮುಸ್ಲಿಮರಿಗೆ ಬುದ್ಧಿ ಕಲಿಸಲು ಮೋದಿಯವರೇ ಬೇಕು’ ಎನ್ನುತ್ತಾರೆ. ಈ ಶಿಕ್ಷಿತ-ಉದ್ಯೋಗಸ್ಥ ಜನರೇ ‘ಮೋದಿಯವರು ಇಲ್ಲದೆ ಇದ್ದರೆ ಪಾಕಿಸ್ತಾನ ನಮ್ಮನ್ನು ನುಂಗಿಹಾಕುತ್ತಿತ್ತು. ಮೋದಿಯವರ ನಂತರ ದೇಶದಲ್ಲಿ ಭಯೋತ್ಪಾಧನಾ ಕೃತ್ಯಗಳು ಹೇಗೆ ಕಡಿಮೆ ಆಯಿತು’’ ಎಂದೆಲ್ಲ ವಾಟ್ಸ್‌ಆ್ಯಪ್ ಯೂನಿವರ್ಸಿಟಿಯ ಜ್ಞಾನ ಹಂಚುತ್ತಾರೆ.

ಇಂತಹವರು ನೀಟ್ ಪರೀಕ್ಷೆಯ ಹಗರಣಕ್ಕಾಗಿ ಮುಂದಿನ ಚುನಾವಣೆಯಲ್ಲಿ ಮೋದಿಯವರನ್ನು ಶಿಕ್ಷಿಸುತ್ತಾರೆಯೇ? ಗೊತ್ತಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ತಲೆಮಾರಿನ ಮುಖ್ಯವಾಗಿ ಜೆನ್ ಝಿ ಸಮುದಾಯದ ರಾಜಕೀಯ ಆಲೋಚನೆಗಳು ಬದಲಾಗುತ್ತಿರುವ ಸಣ್ಣ ಸೂಚನೆಯನ್ನು ಜಂತರ್ ಮಂತರ್ ಚಳವಳಿ ನೀಡಿರುವುದು ನಿಜ. ಮಂದಿರ-ಮಸೀದಿ, ಹಿಂದೂ-ಮುಸ್ಲಿಮ್ ಕೇಂದ್ರಿತ ರಾಜಕೀಯ ಚರ್ಚೆಯಲ್ಲಿ ಮುಳುಗಿಹೋಗಿದ್ದ ಯುವಜನರು ತಮ್ಮ ಬದುಕಿಗೆ ನೇರವಾಗಿ ಸಂಬಂಧಿಸಿದ ಶಿಕ್ಷಣ, ಉದ್ಯೋಗ ಅಭಿವೃದ್ಧಿಯ ವಿಷಯಗಳ ಬಗ್ಗೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದಾರೆ.

ಜಂತರ್ ಮಂತರ್ ನಲ್ಲಿ ಕೇಳಿಬಂದ ಈ ಪಿಸುದನಿಗಳು ಪ್ರತಿಧ್ವನಿಸುತ್ತಾ ದೊಡ್ಡ ಗರ್ಜನೆಯಾದರೆ ಹೊಸಭಾರತವನ್ನು ಕಾಣಲು ಸಾಧ್ಯವಾಗಬಹುದು. ಒಂದಂತೂ ಸತ್ಯ, ತಮ್ಮನ್ನು ಬೆಂಬಲಿಸುತ್ತಾ ಬಂದ ಯುವಜನರ ಪಿಸುದನಿ ಉಳಿದವರಿಗೆ ಕೇಳಿಸಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ನರೇಂದ್ರಮೋದಿಯವರಿಗೆ ಖಂಡಿತ ಕೇಳಿದೆ. ಅದಕ್ಕಾಗಿಯೇ ಅವರು ನಡು ಬಗ್ಗಿಸಿದ್ದಾರೆ. ಈಗ ಅವರ ವಿರೋಧಿಗಳ ಸರದಿ, ಅವರೆಲ್ಲರೂ ಸೇರಿ ಯುವಜನರ ಪಿಸುದನಿಗೆ ಕಿವಿಗೊಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ದಿನೇಶ್ ಅಮಿನ್ ಮಟ್ಟು

contributor

Similar News