ಮತಕಾವಲು ಸಮಿತಿಯಿಂದ ಬಿಎಲ್‌ಒ, ಅಂಗನವಾಡಿ ಕಾರ್ಯಕರ್ತೆಯರ ಸಮೀಕ್ಷೆ : ಆಯೋಗದಿಂದ ನಾಲ್ವರಲ್ಲಿ ಒಬ್ಬರಿಗೆ ತರಬೇತಿ ಇಲ್ಲ
8ಶೇ.64.8ರಷ್ಟು ಬಿಎಲ್‌ಒಗಳಿಗೆ ತರಬೇತಿ ಅರ್ಥವಾಗಿಲ್ಲ
ಬೆಂಗಳೂರು : ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್)ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳಾಗಿ(ಬಿಎಲ್‌ಒ) ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಕುರಿತು ನಾಗರಿಕ ಮತಕಾವಲು ಸಮಿತಿ ನಡೆಸಿರುವ ಸಮೀಕ್ಷೆಯು ಚುನಾವಣಾ ಆಡಳಿತದ ತರಬೇತಿ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ರಾಜ್ಯಾದ್ಯಂತ ವಿವಿಧ ಮತಕ್ಷೇತ್ರಗಳ 202 ಬಿಎಲ್‌ಒ-ಅಂಗನವಾಡಿ ಕಾರ್ಯಕರ್ತೆಯರು ಸಮೀಕ್ಷೆಯಲ್ಲಿ ಭಾಗವಹಿಸಿದ್ದು, ತರಬೇತಿ ವಿಷಯಕ್ಕೆ ಸಂಬಂಧಿಸಿದಂತೆ, ಎಸ್‌ಐಆರ್ ಆರಂಭಕ್ಕೂ ಮುನ್ನ 156 ಮಂದಿ (ಶೇ.76.5) ಮಾತ್ರ ಚುನಾವಣಾ ಆಯೋಗದಿಂದ ತರಬೇತಿ ಪಡೆದಿದ್ದಾರೆ. ಇನ್ನು ಉಳಿದ 48 ಮಂದಿ (ಶೇ.23.5) ತರಬೇತಿ ಪಡೆಯದೆ, ಕಾರ್ಯಕ್ಕೆ ನಿಯೋಜಿತರಾಗಿದ್ದಾರೆ. ಅಂದರೆ ಪ್ರತೀ ನಾಲ್ವರಲ್ಲಿ ಒಬ್ಬರಿಗೆ ತರಬೇತಿಯೇ ಆಗಿಲ್ಲ ಎನ್ನುವುದು ಸಮೀಕ್ಷೆಯಿಂದ ಗೊತ್ತಾಗುತ್ತದೆ ಎನ್ನಲಾಗಿದೆ.
ಅಷ್ಟು ಮಾತ್ರವಲ್ಲದೇ, ಶೇ.38ರಷ್ಟು ಮಂದಿಗೆ ಒಂದು ದಿನಕ್ಕಿಂತ ಕಡಿಮೆ ಅವಧಿಯ ತರಬೇತಿ ನೀಡಲಾಗಿದೆ. ಅಂದರೆ, ಕೆಲವು ಗಂಟೆಗಳು ಮಾತ್ರ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಮಾಹಿತಿ ಪರಿಶೀಲನೆ, ಡಿಜಿಟಲ್ ಅಪ್ಲಿಕೇಶನ್ ಬಳಕೆ ಮತ್ತು ವಿವಿಧ ವರ್ಗದ ಪ್ರಕರಣಗಳನ್ನು ನಿರ್ವಹಿಸುವ ಜವಾಬ್ದಾರಿಗಳಿವೆ. ಇಂತಹ ಪ್ರಕ್ರಿಯೆಗೆ ಕೆಲವು ಗಂಟೆಗಳ ತರಬೇತಿ ಸಾಕಾಗುತ್ತದೆಯೇ? ಇದು ಅಂಗನವಾಡಿ ಕಾರ್ಯಕರ್ತೆಯರಾಗಿರುವ ಬಿಎಲ್‌ಒಗಳಿಗೆ ಚುನಾವಣಾ ಆಯೋಗ ನೀಡಿರುವ ಕಳಪೆ ಗುಣಮಟ್ಟವನ್ನು ಪ್ರದರ್ಶಿಸುತ್ತದೆ ಎಂದು ‘ನಾಗರಿಕ ಮತಕಾವಲು ಸಮಿತಿ’ಯು ಆಕ್ರೋಶ ವ್ಯಕ್ತಪಡಿಸಿದೆ.
ಬಿಎಲ್‌ಒಗಳಿಗೆ ತಾರ್ಕಿಕ ವ್ಯತ್ಯಾಸ ಕುರಿತು ತರಬೇತಿ ಕೊರತೆ: ಸಮೀಕ್ಷೆಯಲ್ಲಿ ಬಂದಿರುವ ಅಂಕಿ-ಅಂಶಗಳು ಕೇವಲ ತರಬೇತಿಯ ಕೊರತೆ ಮಾತ್ರವಲ್ಲದೇ, ಎಸ್‌ಐಆರ್ ಪ್ರಕ್ರಿಯೆಯ ಅತ್ಯಂತ ಮಹತ್ವದ್ದಾಗಿರುವ ತಾರ್ಕಿಕ ವ್ಯತ್ಯಾಸ(ಲಾಜಿಕಲ್ ಡಿಸ್ಕ್ರಿಪೆನ್ಸಿ) ಕುರಿತು ಶೇ.100ರಷ್ಟು ಬಿಎಲ್‌ಒಗಳಿಗೆ ಚುನಾವಣಾ ಆಯೋಗ ತರಬೇತಿ ವೇಳೆಯಲ್ಲಿ ಮಾಹಿತಿಯೇ ನೀಡಿಲ್ಲ ಎನ್ನುವ ಆತಂಕಕಾರಿ ದತ್ತಾಂಶ ಬೆಳಕಿಗೆ ಬಂದಿದೆ.
ಚುನಾವಣಾ ಆಯೋಗದಿಂದ ಬಿಎಲ್‌ಒಗಳಿಗೆ ಗಣತಿ ನಮೂನೆ ಭರ್ತಿ ಮಾಡುವುದಷ್ಟೇ ತರಬೇತಿ ನೀಡಲಾಗಿದೆ. ಆದರೆ, ನಂತರ ಬರುವ ಮುಖ್ಯ ಕಲಂಗಳಾದ ರಿವೆರಿಫೈ ಎನ್ಯುಮರೇಷನ್ ಫಾರಂ/ಅನ್‌ಮ್ಯಾಪ್ ದ ಇಲೆಕ್ಟಾರ್, 85+/ಪ್ರಾಬಬಲ್ ಎಎಸ್‌ಡಿ ಫಾರ್ ರಿವೆರಿಫಿಕೇಷನ್, ವೀವ್ ಲಾಜಿಕಲ್ ಡಿಸ್ಕ್ರಿಪೆನ್ಸಿಸ್, ಡೂಪ್ಲಿಕೆಟ್ ಎಲೆಕ್ಟಾರ್ ವೆರಿಫಿಕೇಷನ್, ಸಿಮಿಲರ್ ಫೋಟೊ ಎಲೆಕ್ಟಾರ್ ವೆರಿಫಿಕೇಷನ್ ಎಂಬ ತಾಂತ್ರಿಕ ಹಂತಗಳ ಬಗ್ಗೆ ಅವರಿಗೆ ಮಾಹಿತಿಯೂ ಇಲ್ಲ, ತಾಂತ್ರಿಕ ಅಂಶಗಳ ಕುರಿತು ಸಮರ್ಪಕ ತರಬೇತಿಯೂ ನೀಡಿಲ್ಲ ಎನ್ನುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಶೇ.75ರಷ್ಟು ಬಿಎಲ್‌ಒಗಳ ಶೈಕ್ಷಣಿಕ ಅರ್ಹತೆ ಪಿಯುಸಿ ಅಥವಾ ಅದಕ್ಕಿಂತ ಕಡಿಮೆ: ಎಸ್‌ಐಆರ್‌ನಲ್ಲಿ ತೊಡಗಿಕೊಂಡಿರುವ ಬಿಎಲ್‌ಒಗಳ ವಿದ್ಯಾರ್ಹತೆ ಸಮೀಕ್ಷೆಯಲ್ಲಿ ಭಾಗವಹಿಸಿದ 202 ಜನರ ಪೈಕಿ ಎಸೆಸೆಲ್ಸಿ ಮಾಡಿದವರು 91 (ಶೇ.44.6), ಪಿಯುಸಿ 64 (ಶೇ.31.4), ಪದವಿ ಮಾಡಿದವರು 51 (ಶೇ.25) ರಷ್ಟಿದ್ದಾರೆ. ಅಂದರೆ, ಒಟ್ಟು ಶೇ.75 ಬಿಎಲ್‌ಒಗಳ ಶೈಕ್ಷಣಿಕ ಅರ್ಹತೆ ಪಿಯುಸಿ ಅಥವಾ ಅದಕ್ಕಿಂತ ಕಡಿಮೆ. ಇದು ಅಂಗನವಾಡಿ ಕಾರ್ಯಕರ್ತೆಯರ (ಬಿಎಲ್‌ಒಗಳ) ಸಾಮರ್ಥ್ಯವನ್ನು ಪ್ರಶ್ನಿಸುವ ಅಂಶವಲ್ಲ. ಆದರೆ, ಪ್ರಕ್ರಿಯೆಯಲ್ಲಿ ತಾರ್ಕಿಕ ವ್ಯತ್ಯಾಸ ಪ್ರಮುಖ ಹಂತವಾಗಿದೆ.
ಮತದಾರರ ಪಟ್ಟಿಯಲ್ಲಿನ ಮಾಹಿತಿ ಮತ್ತು ಸಂಗ್ರಹಿಸಿದ ಮಾಹಿತಿಯ ನಡುವೆ ಕಂಡುಬರುವ ವ್ಯತ್ಯಾಸಗಳನ್ನು ಗುರುತಿಸುವುದು, ಅವುಗಳನ್ನು ಹೇಗೆ ದಾಖಲಿಸಬೇಕು, ಯಾವ ಸಂದರ್ಭದಲ್ಲಿ ಯಾವ ಕ್ರಮ ಅನುಸರಿಸಬೇಕು ಎಂಬ ಅರಿವು ಇಲ್ಲದೆ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಕಷ್ಟವಾಗಬಹುದು. ಅಷ್ಟೇ ಅಲ್ಲದೆ, ಪ್ರಕ್ರಿಯೆಯಲ್ಲಿ ಮತದಾರರ ದಾಖಲೆಗಳ ಪರಿಶೀಲನೆ, ನಿಯಮಗಳ ಅರ್ಥೈಸಿಕೊಳ್ಳುವುದು, ಡಿಜಿಟಲ್ ಅಪ್ಲಿಕೇಶನ್ ಬಳಕೆ ಸಂಕೀರ್ಣ ಪ್ರಕರಣಗಳನ್ನು ನಿರ್ವಹಿಸುವುದು
ಕಷ್ಟ ಸಾಧ್ಯ ಎಂದು ನಾಗರಿಕ ಮತಕಾವಲು ಸಮಿತಿ ವಕ್ತಾರ ಸರೋವರ್ ಅಭಿಪ್ರಾಯಪಟ್ಟಿದ್ದಾರೆ.
ಶೇ.64.8ರಷ್ಟು ಬಿಎಲ್‌ಒಗಳಿಗೆ ಸ್ಪಷ್ಟತೆ ಇಲ್ಲ: ಸಮೀಕ್ಷೆಯ ಪ್ರಕಾರ, ಎಸ್‌ಐಆರ್ ತರಬೇತಿ ಪಡೆದ ನಂತರವೂ ಬಹುತೇಕ ಬಿಎಲ್‌ಒಗಳಿಗೆ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ಸ್ಪಷ್ಟತೆ ಬಂದಿಲ್ಲ ಎಂಬುದು ಗಮನಾರ್ಹ ಅಂಶವಾಗಿದೆ. ಕೇವಲ 71 ಮಂದಿ (ಶೇ.35.1) ಮಾತ್ರ ತರಬೇತಿ ಸಂಪೂರ್ಣವಾಗಿ ಅರ್ಥವಾಯಿತು ಎಂದು ತಿಳಿಸಿದ್ದಾರೆ. 115 ಮಂದಿ (ಶೇ.56.9) ಅರ್ಧಂಬರ್ದ ಅರ್ಥವಾಯಿತು, 16 ಮಂದಿ (ಶೇ.7.9) ತರಬೇತಿ ಅರ್ಥವಾಗಲಿಲ್ಲ ಎಂದು ಹೇಳಿದ್ದಾರೆ. ಅಂದರೆ, 131 ಮಂದಿ (ಶೇ.64.8) ಬಿಎಲ್‌ಒಗಳಿಗೆ ಎಸ್‌ಐಆರ್ ಪ್ರಕ್ರಿಯೆ ಸಂಪೂರ್ಣವಾಗಿ ಅರ್ಥವಾಗಿಲ್ಲ ಎನ್ನವುದು ಸೂಚಿಸಿದೆ.
ಎಸ್‌ಐಆರ್ ತರಬೇತಿ ನೀಡಲಾಗಿದೆ ಎನ್ನುವುದಕ್ಕಿಂತ, ಅದು ಕಾರ್ಯನಿರ್ವಹಣೆಗೆ ಅಗತ್ಯವಾದಷ್ಟು ಪರಿಣಾಮಕಾರಿಯಾಗಿತ್ತೇ ಎಂಬುದು ಮುಖ್ಯ ಪ್ರಶ್ನೆ. ಸಮೀಕ್ಷೆಯ ಪ್ರಕಾರ, ಮೂರನೇ ಒಂದರಷ್ಟು ಮಂದಿಗೆ ಮಾತ್ರ ತರಬೇತಿ ಸಂಪೂರ್ಣವಾಗಿ ಅರ್ಥವಾಗಿದ್ದು, ಉಳಿದ ಶೇ.64.8ರಷ್ಟು ಬಿಎಲ್‌ಒಗಳಿಗೆ ಪ್ರಕ್ರಿಯೆಯ ಬಗ್ಗೆ ಸ್ಪಷ್ಟತೆ ದೊರೆತಿಲ್ಲ. ಇದನ್ನು ತಾರ್ಕಿಕ ವ್ಯತ್ಯಾಸ ತರಬೇತಿಯ ಕೊರತೆಯೊಂದಿಗೆ ಹೋಲಿಸಿದಾಗ ಎನ್ಯುಮರೇಷನ್ ಫಾರಂ ಭರ್ತಿಯ ತರಬೇತಿ ಸಿಕ್ಕರೂ, ಸಂಕೀರ್ಣ ಪರಿಶೀಲನಾ ಹಂತಗಳ ಬಗ್ಗೆ ಅರಿವು ಕಡಿಮೆ ಇದೆ. ಇದು ಕೇವಲ ತರಬೇತಿ ಅವಧಿಯ ಕೊರತೆಯಲ್ಲ, ತರಬೇತಿಯ ವಿಷಯ ವಸ್ತುವಿನಲ್ಲಿಯೇ ಗಂಭೀರ ಕೊರತೆ ಇದ್ದಿದ್ದನ್ನು ಸೂಚಿಸುತ್ತದೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಮಿತಿಯ ಸಂಘಟನೆ(ಎಪಿಸಿಆರ್) ಸಂಯೋಜಕ ಮುಹಮ್ಮದ್ ಪೀರ್ ಹೇಳಿದ್ದಾರೆ.
ಒಂದು ಕೋಟಿಗೂ ಹೆಚ್ಚು ಜನರಿಗೆ ಆಯೋಗದ ನೊಟೀಸ್?
ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಾಜ್ಯಾದ್ಯಂತ ಒಂದು ಕೋಟಿಗೂ ಹೆಚ್ಚು ಜನರಿಗೆ ಚುನಾವಣಾ ಆಯೋಗದ ವತಿಯಿಂದ ನೊಟೀಸ್ ಬರುವ ಸಾಧ್ಯತೆ ಇದೆ ಎಂದು ನೆಲಮಟ್ಟದಲ್ಲಿ ಕೆಲಸ ಮಾಡುತ್ತಿರುವ ಹಲವರು ಅಂದಾಜಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಮತದಾರರ ದಾಖಲೆಯಲ್ಲಿರುವ ಮಾಹಿತಿಯಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಗುರುತಿಸುವುದು, ಪ್ರಕರಣಗಳಲ್ಲಿ ಯಾವ ಕ್ರಮ ಅನುಸರಿಸಬೇಕು, ಯಾವ ದಾಖಲೆಯನ್ನು ಪರಿಗಣಿಸಬೇಕು ಮತ್ತು ಮಾಹಿತಿಯನ್ನು ಹೇಗೆ ನಿರ್ವಹಿಸಬೇಕು ಎಂಬುದು ಬಿಎಲ್‌ಒಗಳಿಗೆ ಸ್ಪಷ್ಟವಾಗಿರಬೇಕು.
-ಸರೋವರ್ ಬೆಂಕಿಕೆರೆ, ವಕ್ತಾರ ನಾಗರಿಕ ಮತಕಾವಲು ಸಮಿತಿ
ಚುನಾವಣಾ ಆಯೋಗದ ನಿರ್ಲಕ್ಷ-ಬೇಜವಾಬ್ದಾರಿ ತನದಿಂದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲಕ್ಷಾಂತರ ಅರ್ಹ ಮತದಾರರು ಮತದಾನದ ಹಕ್ಕನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಬಿಎಲ್‌ಒಗಳಿಗೆ ಮ್ಯಾಪಿಂಗ್ ಮಾಡಲು ಬರವಣಿಗೆ ಮೂಲಕ ತರಬೇತಿ ಕೊಟ್ಟಿದ್ದೀರಾ? ಅದನ್ನು ಹೇಗೆ ಮಾಡುತ್ತೀರಾ ಎನ್ನುವ ಪ್ರಶ್ನೆಗೆ ಇದುವರೆಗೂ ಉತ್ತರಕೊಟ್ಟಿಲ್ಲ. ಈ ಪ್ರಕ್ರಿಯೆಯಲ್ಲಿ ಅರ್ಹ ಮತದಾರರು ಇಂದು ಮತದಾನದ ಹಕ್ಕನ್ನು ಕಳೆದುಕೊಂಡು, ನಾಳೆ ಪೌರತ್ವವನ್ನೇ ಕಳೆದುಕೊಂಡರೆ ಅದಕ್ಕೆ ಯಾರು ಹೊಣೆ?. ಚುನಾವಣಾ ಆಯೋಗದ ಬೇಜವಾಬ್ದಾರಿಗೆ ಜನ ದಂಡ ಕಟ್ಟುವಂತಾಗಿದೆ. ಆಯೋಗ ಇಲ್ಲಿಯವರೆಗೂ ಲಾಜಿಕಲ್ ಡಿಸ್ಕ್ರಿಪೆನ್ಸಿ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಇದನ್ನು ಉದ್ದೇಶ ಪೂರ್ವಕವಾಗಿ ಮಾಡುತ್ತಿದ್ದೀರಾ? ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇದಕ್ಕೆ ಉತ್ತರಿಸಬೇಕು
-ವಿನಯ್ ಶ್ರೀನಿವಾಸ್, ಪದಾಧಿಕಾರಿ, ನನ್ನ ಮತ ನನ್ನ ಹಕ್ಕು