80 ಕೆಜಿ ತೂಕದ ಅಪರೂಪದ ಹಲಸಿನ ಹಣ್ಣು

Update: 2026-07-27 14:40 IST

ಹಾಸನ: ಕೃಷಿ ವೈವಿಧ್ಯತೆ ಮತ್ತು ನೈಸರ್ಗಿಕ ಸಂಪತ್ತಿಗೆ ಹಾಸನ ಜಿಲ್ಲೆ ಹೆಸರುವಾಸಿ. ಜಿಲ್ಲೆಯ ಹಿರಿಯ ರೈತರೊಬ್ಬರ ತೋಟದಲ್ಲಿ ಬೆಳೆದಿರುವ ಅಪರೂಪದ ಹಲಸಿನ ಹಣ್ಣು ಕೃಷಿ ಆಸಕ್ತರ ಗಮನ ಸೆಳೆಯುತ್ತಿದೆ.

ಸಾಮಾನ್ಯವಾಗಿ 5ರಿಂದ 15 ಕೆಜಿ ತೂಕದ ಹಲಸಿನ ಹಣ್ಣುಗಳನ್ನು ನೋಡುವ ನಮಗೆ, ಬರೋಬ್ಬರಿ 80 ಕೆಜಿ ತೂಕದ ಹಲಸಿನ ಹಣ್ಣು ನೋಡಿ ಅಚ್ಚರಿ ಮೂಡಿದೆ. ಈ ಅಚ್ಚರಿಗೆ ಕಾರಣ ಕೃಷಿಕ ಬಸಲಿಂಗಪ್ಪಅವರು. ಅವರ ಜಮೀನಿನಲ್ಲಿ ಬೆಳೆದ ಬೃಹತ್ ಗಾತ್ರದ ಈ ಹಣ್ಣು ವಿಶ್ವ ದಾಖಲೆಯನ್ನೇ ಮೀರಿಸುವ ಸಾಮರ್ಥ್ಯ ಹೊಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

25 ವರ್ಷಗಳ ಹಿಂದೆ ಬಿತ್ತಿದ ಬೀಜ: ಹಿರಿಯ ಕೃಷಿಕ ಬಸಲಿಂಗಪ್ಪಅವರು ಅವರು ಸುಮಾರು 25 ವರ್ಷಗಳ ಹಿಂದೆ ಹಳೇಬೀಡು ಭಾಗದಿಂದ ತಂದ ಅಪರೂಪದ ಹಲಸಿನ ಬೀಜವನ್ನು ತಮ್ಮ 12 ಎಕರೆ ಕಾಫಿ ಮತ್ತು ಮೆಣಸಿನ ಮಿಶ್ರ ತೋಟದಲ್ಲಿ ನೆಟ್ಟಿದ್ದರು. ಯಾವುದೇ ವಿಶೇಷ ರಾಸಾಯನಿಕ ಪ್ರಯೋಗ, ಕೊಂಬೆ ಕತ್ತರಿಸುವಿಕೆ ಅಥವಾ ಕೃತಕ ನಿರ್ವಹಣೆ ಇಲ್ಲದೆ, ಸಂಪೂರ್ಣ ನೈಸರ್ಗಿಕವಾಗಿ ಬೆಳೆದ ಈ ಮರ ಇಂದು 50 ಅಡಿಗಿಂತಲೂ ಹೆಚ್ಚು ಎತ್ತರಕ್ಕೆ ಬೆಳೆದು ನಿಂತಿದೆ.

12 ವರ್ಷಗಳಿಂದ ಈ ಮರ ನಿರಂತರವಾಗಿ ಉತ್ತಮ ಇಳುವರಿ ನೀಡುತ್ತಿದ್ದು, ಪ್ರತೀ ವರ್ಷ ತನ್ನ ವಿಶಿಷ್ಟ ಹಣ್ಣುಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.

ಈ ಮರದಲ್ಲಿ ಬಿಡುವ ಬಹುತೇಕ ಕಾಯಿಗಳು 35ರಿಂದ 40 ಕೆಜಿ ತೂಕವಿರುತ್ತವೆ. ಆದರೆ ಈ ವರ್ಷ ತೂಕ ಮಾಡಿದಾಗ ಒಂದು ಹಲಸಿನ ಹಣ್ಣು ಬರೋಬ್ಬರಿ 80 ಕೆಜಿ ತೂಗಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿತು.

ಸಾಮಾನ್ಯವಾಗಿ ವಿಶ್ವದ ವಿವಿಧ ಭಾಗಗಳಲ್ಲಿ ದಾಖಲಾಗಿರುವ ಹಲಸಿನ ಹಣ್ಣುಗಳ ತೂಕ ಸುಮಾರು 50ರಿಂದ 55 ಕೆಜಿ ಆಸುಪಾಸಿನಲ್ಲಿದೆ ಎನ್ನಲಾಗುತ್ತದೆ. ಈ ಹಿನ್ನೆಲೆಯಲ್ಲಿ 80 ಕೆಜಿ ತೂಕದ ಹಣ್ಣು ಅಧಿಕೃತವಾಗಿ ದಾಖಲಾಗಿದರೆ ಅದು ವಿಶ್ವ ದಾಖಲೆಯ ಪುಟಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

 

ವರ್ಷಕ್ಕೆ ಕೇವಲ 15 ಹಣ್ಣುಗಳು: ಇಷ್ಟು ದೊಡ್ಡ ಗಾತ್ರದ ಹಣ್ಣುಗಳನ್ನು ಹೊರುವ ಈ ಮರ ವರ್ಷಕ್ಕೆ ಸುಮಾರು 15 ಕಾಯಿಗಳನ್ನು ಮಾತ್ರ ನೀಡುತ್ತದೆ.ಕಡಿಮೆ ಸಂಖ್ಯೆಯಲ್ಲಿದ್ದರೂ ಪ್ರತಿಯೊಂದು ಹಣ್ಣಿನ ಗಾತ್ರ ಮತ್ತು ತೂಕವೇ ಇದರ ವಿಶೇಷತೆ.

ಈ ಹಣ್ಣು ಸ್ಥಳೀಯವಾಗಿ ‘ಬಕ್ಕೆ ಹಲಸು’ ತಳಿಗೆ ಸೇರಿದ್ದು ಎಂದು ರೈತರು ಹೇಳುತ್ತಾರೆ. ಗಟ್ಟಿಯಾದ ತೊಳೆ, ಸಿಹಿ ಹಾಗೂ ಉತ್ತಮ ಗುಣಮಟ್ಟದ ತೊಳೆಗಳು ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ.

ಈಮರದ ಬಗ್ಗೆ ಮಾಹಿತಿ ಹರಡುತ್ತಿದ್ದಂತೆ ಕೃಷಿ ವಿಜ್ಞಾನಿಗಳು, ರೈತರು, ವಿದ್ಯಾರ್ಥಿಗಳು ಹಾಗೂ ಹಲಸಿನ ಹಣ್ಣು ಪ್ರಿಯರು ತೋಟಕ್ಕೆ ಭೇಟಿ ನೀಡಿ ಹಣ್ಣು ಮತ್ತು ಮರವನ್ನು ವೀಕ್ಷಿಸುತ್ತಿದ್ದಾರೆ. ಬಂದವರು ಈ ಅಪರೂಪದ ತಳಿಯ ಸಸಿಗಳನ್ನು ನೀಡುವಂತೆ ರೈತರಲ್ಲಿ ಮನವಿ ಮಾಡುತ್ತಿದ್ದಾರೆ. ಬಸಲಿಂಗಪ್ಪಅವರ ಪುತ್ರ, ಪ್ರತಾಪ್ ಈಗ ಈ ಅಪರೂಪದ ತಳಿಯನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಬೀಜ ಹಾಗೂ ಕಸಿ (ಗ್ರಾಫ್ಟಿಂಗ್) ವಿಧಾನದಲ್ಲಿ ಹೊಸ ಸಸಿಗಳನ್ನು ತಯಾರಿಸಿ ರೈತರಿಗೆ ವಿತರಿಸುವ ಯೋಜನೆ ರೂಪಿಸಿದ್ದಾರೆ.ಇದರಿಂದ ಈ ವಿಶಿಷ್ಟ ತಳಿ ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಲ್ನಾಡ್ ಮೆಹಬೂಬ್

contributor

Similar News