ಯಾದಗಿರಿ ಹೆದ್ದಾರಿಗಳಲ್ಲಿ ಎಎನ್‌ಪಿಆರ್ ಕ್ಯಾಮರಾ ಕಣ್ಗಾವಲು

►ವಾಹನಗಳ ವೇಗ, ಸಂಖ್ಯೆ, ಸಂಚಾರ ಮಾಹಿತಿ ತಕ್ಷಣ ದಾಖಲೆ ►ನಿಯಮ ಮೀರಿದವರಿಗೆ ಸ್ವಯಂಚಾಲಿತ ದಂಡ ವ್ಯವಸ್ಥೆ ಆರಂಭ

Update: 2026-07-27 14:59 IST

ಯಾದಗಿರಿ: ಇನ್ನು ಮುಂದೆ ಯಾದಗಿರಿ ಜಿಲ್ಲೆಯ ರಾಜ್ಯ ಹೆದ್ದಾರಿಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ತಪ್ಪಿಸಿಕೊಳ್ಳುವುದು ಸುಲಭವಲ್ಲ. ವಾಹನಗಳ ಸಂಚಾರದ ಮೇಲೆ ಹೈಟೆಕ್ ಕಣ್ಗಾವಲು ನಡೆಸಲು ಪೋಲಿಸ್ ಇಲಾಖೆ ಅತ್ಯಾಧುನಿಕ ಎಎನ್‌ಪಿಆರ್ ( ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್) ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರಿಂದ ವಾಹನಗಳ ಪ್ರತಿಯೊಂದು ಚಲನೆಯೂ ಕ್ಯಾಮರಾದಲ್ಲಿ ದಾಖಲಾಗಲಿದೆ.

ಜಿಲ್ಲೆಯ ಪ್ರಮುಖ ರಾಜ್ಯ ಹೆದ್ದಾರಿಗಳ ಒಟ್ಟು ಎಂಟು ಸ್ಥಳಗಳಲ್ಲಿ ಗ್ಯಾಂಟ್ರಿ ಮಾದರಿಯ ಎಎನ್‌ಪಿಆರ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇವು ವಾಹನದ ನೋಂದಣಿ ಸಂಖ್ಯೆ, ಸಂಚಾರದ ಸಮಯ, ವೇಗ, ಸೇರಿ ವಿವಿಧ ಮಾಹಿತಿಯನ್ನು ಕ್ಷಣಾರ್ಧದಲ್ಲಿ ದಾಖಲಿಸಿಕೊಂಡು ನಿಯಂತ್ರಣ ಕೇಂದ್ರಕ್ಕೆ ರವಾನಿಸಲಿವೆ.

ಅತಿವೇಗ, ಸಂಚಾರ ನಿಯಮ ಉಲ್ಲಂಘನೆ, ಅನುಮಾನಾಸ್ಪದ ವಾಹನಗಳ ಚಲನವಲನ ಮತ್ತು ಅಪರಾಧ ಕೃತ್ಯಗಳಲ್ಲಿ ಬಳಸುವ ವಾಹನಗಳನ್ನು ಪತ್ತೆಹಚ್ಚುವಲ್ಲಿ ಈ ವ್ಯವಸ್ಥೆ ಪ್ರಮುಖ ಪಾತ್ರ ವಹಿಸಲಿದೆ. ಕಳವಾದ ವಾಹನಗಳು ಜಿಲ್ಲೆ ಪ್ರವೇಶಿಸಿದರೂ ಅಥವಾ ಹೊರಹೋದರೂ ಕ್ಯಾಮರಾ ತಕ್ಷಣವೇ ಮಾಹಿತಿ ಒದಗಿಸುತ್ತದೆ.

ರಾಜ್ಯದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆಗೆ ಆದ್ಯತೆ ನೀಡಿರುವ ಪೋಲಿಸ್ ಇಲಾಖೆ, ಈ ಒಂದು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲು ಮುಂದಾಗಿದೆ. ಹೆದ್ದಾರಿಗಳಲ್ಲಿ ಸಂಚಾರ ನಿಯಮ ಪಾಲನೆ ಹೆಚ್ಚಿಸುವ ಜೊತೆಗೆ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಪೋಲಿಸ್ ಇಲಾಖೆ ಈ ಪ್ರಯತ್ನ ಮಾಡುತ್ತಿದೆ.

ಸಂಚಾರ ನಿಯಮ ಉಲ್ಲಂಘನೆ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ನಿಯಮಾನುಸಾರ ದಂಡ ವಿಧಿಸುವಪ್ರಕ್ರಿಯೆಯೂ ಈ ವ್ಯವಸ್ಥೆ ಮೂಲಕ ನಡೆಯುತ್ತದೆ. ಇದರಿಂದ ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾಹಿತಿ ನೀಡಿದ್ದಾರೆ.

ರಾಜ್ಯದ ಹೆದ್ದಾರಿಗಳಲ್ಲಿ ಅಪಘಾತಗಳ ಪ್ರಮಾಣ ಹಾಗೂ ರಸ್ತೆ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಎಎನ್ಪಿಆರ್ ಆಧಾರಿತ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ನಿಯಮಾನುಸಾರ ದಂಡ ವಿಧಿಸಲಾಗುತ್ತದೆ.

-ಪೃಥ್ವಿಕ್ ಶಂಕರ್

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯಾದಗಿರಿ

ರಸ್ತೆ ಸಂಚಾರ ನಿಯಮ ಪಾಲಿಸದವರಿಗೆ ಪೊಲೀಸ್ ಇಲಾಖೆ ಕೈಗೊಂಡಿರುವ ಈ ಕ್ರಮ ಸೂಕ್ತವಾಗಿದೆ. ವಾಹನ ಸವಾರರು ಸೀಟ್‌ಬೆಲ್ಟ್ ಧರಿಸದಿರುವುದು, ವೇಗ ಮಿತಿ ಮೀರುವುದು, ಮೊಬೈಲ್ ಬಳಸುತ್ತ ವಾಹನ ಚಲಾಯಿಸುವುದು ಸೇರಿ ಹಲವು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇಂತಹ ಚಾಲಕರನ್ನು ತಂತ್ರಜ್ಞಾನದ ಮೂಲಕ ಗುರುತಿಸಿ ಕ್ರಮ ಕೈಗೊಳ್ಳುವುದರಿಂದ ಕಾನೂನಿನ ಬಗ್ಗೆ ಭಯ ಮತ್ತು ಜವಾಬ್ದಾರಿ ಎರಡೂ ಬರುತ್ತವೆ. ಪೊಲೀಸ್ ಇಲಾಖೆ ವೇಗ ಮಿತಿ ಫಲಕ ಅಳವಡಿಸಬೇಕು.

-ಬಸವರಾಜ ಹಿಟ್ಟಿಗಿ

ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶರಬು ಬಿ.ನಾಟೇಕಾರ್ ಯಾದಗಿರಿ

contributor

Similar News