‘ಪತ್ರ-ಮಿತ್ರ’: ಪೋಸ್ಟ್ ಕಾರ್ಡ್‌ನಿಂದ ಭಾವನೆಗಳ ವಿನಿಮಯ

ಎಮ್ಮೆದೊಡ್ಡಿ ಸರಕಾರಿ ಪ್ರೌಢಶಾಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ

Update: 2026-07-27 14:30 IST

ಚಿಕ್ಕಮಗಳೂರು: ಹಿಂದಿನ ಕಾಲದಲ್ಲಿ ಕುಟುಂಬದ ಸದಸ್ಯರ ಯೋಗಕ್ಷೇಮ, ಪತ್ರ ವ್ಯವಹಾರ, ಪ್ರೇಮ ಸಂದೇಶ ವಿನಿಮಯ ಮಾಡಿಕೊಳ್ಳಲು ಪೋಸ್ಟ್ ಕಾರ್ಡ್‌ಗಳ ಬಳಕೆ ಮಾಡಲಾಗುತ್ತಿತ್ತು. ಆದರೆ, ಇಂದಿನ ಆಧುನಿಕ ತಂತ್ರಜ್ಞಾನ, ಬೆಳೆಯುತ್ತಿರುವ ಡಿಜಿಟಲ್ ವ್ಯವಸ್ಥೆ ಹಾಗೂ ಮೊಬೈಲ್ ಯುಗದಲ್ಲಿ ಪತ್ರ ಬರೆಯುವ ಸಂಸ್ಕೃತಿ ಮರೆಯಾಗಿದೆ. ಸರಿಯಾದ ವಿಳಾಸಕ್ಕೆ ತಲುಪಲು ವಾರಗಟ್ಟಲೇ ತಲುಪುತ್ತಿದ್ದ ದಿನಮಾನದಿಂದ, ಇಂದು ಕ್ಷಣಮಾತ್ರದಲ್ಲಿ ಸಂದೇಶಗಳು ರವಾನೆಯಾಗವ ಕಾಲಕ್ಕೆ ನಾವೆಲ್ಲರೂ ಕಾಲಿಟ್ಟಿದ್ದೇವೆ.

ಇಂದಿನ ಡಿಜಿಟಲ್ ಹಾಗೂ ಮೊಬೈಲ್ ಯುಗದಲ್ಲಿ ಮರೆಯಾಗುತ್ತಿರುವ ಪತ್ರ ಬರೆಯುವ ಸಂಸ್ಕೃತಿಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಎಮ್ಮೆದೊಡ್ಡಿ ಸರಕಾರಿ ಪ್ರೌಢಶಾಲೆಯಲ್ಲಿ ಅಪೂರ್ವವಾದ ಪತ್ರ-ಮಿತ್ರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಇಂದಿನ ಮಕ್ಕಳಿಗೆ ಪತ್ರ ಬರೆಯುವ ಅನುಭವ ಅಪರಿಚಿತವಾಗಿದೆ. ಮಕ್ಕಳಿಗೆ ಪತ್ರ ಬರೆಯುವುದು ಪರಿಚಯಿಸುವ ನಿಟ್ಟಿನಲ್ಲಿ ಎಮ್ಮೆದೊಡ್ಡಿ ಸರಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಶಾಲಾ ಮಕ್ಕಳಿಗೆ ಹಳೆಯ ದಿನಗಳ ಭಾವನಾತ್ಮಕ ಪತ್ರ ಸಂಸ್ಕೃತಿಯ ರುಚಿ ತೋರಿಸಲು ಈ ವಿಶಿಷ್ಟ ಪ್ರಯತ್ನ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಪೋಷಕರಿಗೆ, ಪಂಚಾಯತ್‌ಗೆ ಪತ್ರ ಸಂದೇಶ: ಪತ್ರ-ಮಿತ್ರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪೋಸ್ಟ್ ಕಾರ್ಡ್‌ಗಳಲ್ಲಿ ತಮ್ಮ ಮನದಾಳದ ಮಾತುಗಳನ್ನು ಬರೆದರು. ಹೆತ್ತವರಿಗೆ ಮತ್ತು ತಮ್ಮ ಗ್ರಾಮ ಪಂಚಾಯತ್‌ಗೆ ಪತ್ರ ಬರೆಯುವ ಮೂಲಕ ವಿಶಿಷ್ಟ ಅನುಭವವನ್ನು ತಮ್ಮದಾಗಿಸಿಕೊಂಡರು. ಪತ್ರದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡರು. ಹಿಂದಿನ ಕಾಲದಲ್ಲಿ ಸಮಾಚಾರವನ್ನು ತಲುಪಿಸುವ ಏಕೈಕ ಮಾರ್ಗವಾಗಿದ್ದ ಪೋಸ್ಟ್ ಕಾರ್ಡ್ ಬರೆಯುವ ಅನುಭವವನ್ನೂ ವಿದ್ಯಾರ್ಥಿಗಳು ಪಡೆದುಕೊಂಡರು.

ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಯರ ಯೋಗಕ್ಷೇಮ ವಿಚಾರಿಸುವ ಜತೆಗೆ, ಶಾಲೆಯಲ್ಲಿ ನಡೆಯಲಿರುವ ಪೋಷಕರ ಸಭೆ ಹಾಗೂ ಮುಂಬರುವ ಸ್ವಾತಂತ್ರ್ಯ ದಿನಾಚರಣೆಯ ಆಮಂತ್ರಣವನ್ನು ಪತ್ರದ ಮೂಲಕ ಪೋಷಕರಿಗೆ ತಲುಪಿಸುವ ಪ್ರಯತ್ನ ಮಾಡಿದರು. ವಿದ್ಯಾರ್ಥಿಗಳೂ ತಂದೆ ತಾಯಿಯರಿಗೆ ಬರೆದ ಪತ್ರ ಭಾವನಾತ್ಮಕವಾಗಿದ್ದು, ಅವರ ಭಾವನೆಗಳು ಅಕ್ಷರ ರೂಪದಲ್ಲಿ ಮೂಡಿಬಂದಿದ್ದವು.

ಕೇವಲ ವೈಯಕ್ತಿಕ ವಿಚಾರಗಳಷ್ಟೇ ಅಲ್ಲದೆ, ತಮ್ಮ ಶಾಲೆಗೆ ಬೇಕಾಗುವ ಮೂಲ ಸೌಲಭ್ಯಗಳ ಕುರಿತಾಗಿ ಗ್ರಾಮ ಪಂಚಾಯತ್‌ಗೆ ವಿದ್ಯಾರ್ಥಿಗಳು ಪತ್ರದಲ್ಲಿ ಮನವಿ ಸಲ್ಲಿಸಿ ಜವಾಬ್ದಾರಿಯುತ ಪ್ರಜೆಗಳಾಗಿ ಗಮನ ಸೆಳೆದರು.

ಶಾಲೆಯಲ್ಲಿ ನಡೆಯುತ್ತಿರುವ ಪಾಠ-ಪ್ರವಚನಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ತಮ್ಮ ಸ್ನೇಹಿತರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಪತ್ರಗಳನ್ನು ಸಿದ್ಧಪಡಿಸಿದರು. ಹಿಂದಿನ ಕಾಲದಲ್ಲಿ ಭಾವನೆಗಳನ್ನು ಪತ್ರದ ಮೂಲಕ ಹಂಚಿಕೊಳ್ಳುತ್ತಿದ್ದ ‘ಪತ್ರ-ಮಿತ್ರ’ ಪರಿಕಲ್ಪನೆಯನ್ನು ಮಕ್ಕಳು ಪತ್ರ ಬರೆಯುವ ಮೂಲಕ ಪ್ರಾಯೋಗಿಕವಾಗಿ ಅನುಭವಿಸಿದರು. ಈ ಅಪೂರ್ವ ಚಟುವಟಿಕೆ ವಿದ್ಯಾರ್ಥಿಗಳಲ್ಲಿ ಅಕ್ಷರ ಜ್ಞಾನ, ಅಭಿವ್ಯಕ್ತಿ ಸಾಮರ್ಥ್ಯ ಹಾಗೂ ಸಮಾಜದೊಂದಿಗಿನ ಒಡನಾಟ ಹೆಚ್ಚಿಸುವಲ್ಲಿ ಯಶಸ್ವಿಯಾಯಿತು. ಶಾಲೆಯ ಮುಖ್ಯಸ್ಥರು, ಶಿಕ್ಷಕ ವೃಂದ ಹಾಗೂ ಮಕ್ಕಳು ಈ ಸಂಭ್ರಮದ ಕ್ಷಣದಲ್ಲಿ ಪಾಲ್ಗೊಂಡಿದ್ದರು.

ಹಿಂದಿನ ಕಾಲದಲ್ಲಿ ಸಂವಹನ ಮಾಧ್ಯಮವಾಗಿ ಪತ್ರ ಪ್ರಧಾನವಾಗಿತ್ತು. ಆದರೆ, ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಬೆಳವಣಿಗೆಯಿಂದ ಪೋಸ್ಟ್ ಕಾರ್ಡ್ ಸಂಸ್ಕೃತಿ ಮರೆಯಾಗಿದ್ದು, ಇಂದಿನ ಮಕ್ಕಳಲ್ಲಿ ಪೋಸ್ಟ್ ಕಾರ್ಡ್ ಪತ್ರ ವ್ಯವಹಾರ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಪತ್ರ-ಮಿತ್ರ ಕಾರ್ಯಕ್ರಮ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಮನದಾಳದ ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸಿದರು.

-ಎಸ್.ಆರ್.ಸತೀಶ್, ಮುಖ್ಯ ಶಿಕ್ಷಕ,

ಎಮ್ಮೆದೊಡ್ಡಿ ಸರಕಾರಿ ಪ್ರೌಢಶಾಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ. ಎಲ್ ಶಿವು

contributor

Similar News