ಡ್ರಗ್ಸ್ ಮುಕ್ತ ಮಂಗಳೂರು ಅಭಿಯಾನ |ಡ್ರಗ್ಸ್ ತಾಣ, ಪೆಡ್ಲರ್‌ಗಳ ಮೇಲೆ ಪೊಲೀಸರ ಹದ್ದಿನ ಕಣ್ಣು
ಕಾಲೇಜುಗಳಲ್ಲಿ ಅಳವಡಿಸಲಾಗಿರುವ ಕ್ಯೂಆರ್ ಕೋಡ್‌ಗೆ ಉತ್ತಮ ಸ್ಪಂದನೆ
ಮಂಗಳೂರು : ಡ್ರಗ್ಸ್ ಮಾಯಾಜಾಲದಿಂದ ಮಂಗಳೂರನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಪೊಲೀಸ್ ಇಲಾಖೆಯ ಬೇಟೆ ಜೋರಾಗಿಯೇ ಸಾಗಿದೆ. ಸಾಮಾಜಿಕವಾಗಿ ಹಲವು ಸಂಘ, ಸಂಸ್ಥೆಗಳು ಡ್ರಗ್ಸ್ ವಿರೋಧಿ ಅಭಿಯಾನಗಳ ಮೂಲಕ ಗಮನ ಸೆಳೆದಿವೆ. ಪೊಲೀಸರ ಡ್ರಗ್ಸ್ ವಿರೋಧಿ ಕಾರ್ಯಾಚರಣೆಗೆ ಸಾಥ್ ನೀಡಿವೆ. ಶಾಲಾ, ಕಾಲೇಜುಗಳು ಸೇರಿದಂತೆ ಶಂಕಿತ ಡ್ರಗ್ಸ್ ತಾಣಗಳ ಸುತ್ತಮುತ್ತ ಹಾಗೂ ಪೆಡ್ಲರ್‌ಗಳ ಮೇಲಿನ ಪೊಲೀಸರ ಹದ್ದಿನ ಕಣ್ಣು ಸಾಕಷ್ಟು ಪ್ರಮಾಣದಲ್ಲಿ ಈ ಮಾರಾಟ ಜಾಲಕ್ಕೆ ಅಂಕುಶ ಬಿದ್ದಿರುವ ಮಾತುಗಳು ಸಾರ್ವಜನಿಕ ವಲಯದಲ್ಲಿಯೂ ಕೇಳಿ ಬರುತ್ತಿವೆ.
ಬಗೆದಷ್ಟು ಮೊಗೆಯುವ ಡ್ರಗ್ಸ್ ಜಾಲ: ಹಾಗಿದ್ದರೂ, ಈ ಸೇವನೆ ಮತ್ತು ಮಾರಾಟದ ಪ್ರಕರಣಗಳು, ಬಗೆದಷ್ಟೂ ಮೊಗೆಯುವಂತೆ ಪತ್ತೆಯಾಗುತ್ತಿರುವುದು ಈ ಡ್ರಗ್ಸ್ ಮಾಯಾಜಾಲದ ಕರಾಳತೆಗೆ ಸಾಕ್ಷಿಯಾಗಿದೆ. ಈ ವರ್ಷದ 9 ತಿಂಗಳ ಅವಧಿಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 110 ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ವರ್ಷ 12 ತಿಂಗಳಲ್ಲಿ 88 ಮಂದಿಯನ್ನು ಬಂಧಿಸಲಾಗಿತ್ತು. ವಿಶೇಷವೆಂದರೆ ಈ ಬಂಧಿಸಲ್ಪಟ್ಟ ಪೆಡ್ಲರ್‌ಗಳಲ್ಲಿ 66 ಮಂದಿ ಇನ್ನೂ ಜೈಲಿನಲ್ಲಿದ್ದಾರೆ.
ಈ ನಡುವೆ, ಬೇಸರದ ಸಂಗತಿಯೆಂದರೆ ಬಂಧಿಸಲ್ಪಟ್ಟವರಲ್ಲಿ 11 ಮಂದಿ ಕಾಲೇಜು ವಿದ್ಯಾರ್ಥಿಗಳು ಸೇರಿದ್ದಾರೆ. ಈ ಡ್ರಗ್ಸ್ ಮಾಯಾಜಾಲ ಕಾಲೇಜು ಮಕ್ಕಳನ್ನೇ ಟಾರ್ಗೆಟ್ ಮಾಡಿ ಅವರನ್ನು ಸೇವನೆಗೆ ಪ್ರೇರೇಪಿಸುವುದು ಮಾತ್ರವಲ್ಲ, ಅವರನ್ನು ಪೆಡ್ಲರ್‌ಗಳನ್ನಾಗಿ ಪರಿವರ್ತಿಸುತ್ತಿರುವುದು ದುರಂತ. ಈ ನಿಟ್ಟಿನಲ್ಲಿ ಪೊಲೀಸರು ಕಾಲೇಜುಗಳತ್ತ ತಮ್ಮ ಕಾರ್ಯಾಚರಣೆಯನ್ನು ಬಿಗಿಗೊಳಿಸಿ, ತಪಾಸಣೆಗೆ ಒತ್ತು ನೀಡಿ, ಡ್ರಗ್ಸ್ ಸೇವನೆಯಲ್ಲಿ ಪಾಸಿಟಿವ್ ಕಂಡು ಬರುವ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಮೂಲಕ ನಶೆಯಿಂದ ಹೊರತರುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
30 ಕಾಲೇಜುಗಳಿಂದ 3,000ಕ್ಕೂ ಅಧಿಕ ವಿದ್ಯಾರ್ಥಿಗಳ ತಪಾಸಣೆ: ಪೊಲೀಸ್ ಇಲಾಖೆಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಡ್ರಗ್ಸ್ ತಪಾಸಣೆಗೆ ಒತ್ತು ನೀಡಿದೆ. ಈವರೆಗೆ 30 ಕಾಲೇಜುಗಳು ಸ್ವಯಂ ಪ್ರೇರಿತವಾಗಿ ಡ್ರಗ್ಸ್ ಸೇವನೆ ಕುರಿತು ವಿದ್ಯಾರ್ಥಿಗಳ ತಪಾಸಣೆ ನಡೆಸಿವೆ. ಈ ಮೂಲಕ ಸುಮಾರು 3,000ಕ್ಕೂ ಅಧಿಕ ವಿದ್ಯಾರ್ಥಿಗಳು ಈ ತಪಾಸಣೆಗೊಳಗಾಗಿದ್ದಾರೆ. ಮುಂದಿನ ಒಂದೆರಡು ತಿಂಗಳಲ್ಲಿ ಮತ್ತೆ 30 ಕಾಲೇಜುಗಳು ಈ ಡ್ರಗ್ಸ್ ಸೇವನೆ ತಪಾಸಣೆ ನಡೆಸಲಿವೆ. ಈ ಮೂಲಕ ಈ ಪ್ರಕ್ರಿಯೆ ಪುನರಾವರ್ತನೆಗೊಳ್ಳಲಿದೆ ಎಂದು ಡ್ರಗ್ಸ್ ಮುಕ್ತ ಮಂಗಳೂರು ಅಭಿಯಾನದ ಕುರಿತು ‘ವಾರ್ತಾಭಾರತಿ’ ಜತೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
‘ಕಳೆದ ವರ್ಷ ಡ್ರಗ್ಸ್ ಸೇವನೆ ತಪಾಸಣೆಯ ವೇಳೆ ಪಾಸಿಟಿವ್ ಆಗಿದ್ದ 120 ಮಂದಿಯನ್ನು ಈ ಬಾರಿ ಮರು ತಪಾಸಣೆಗೊಳಪಡಿಸಲಾಗಿತ್ತು. ಅವರಲ್ಲಿ ಕೇವಲ 20 ಮಂದಿ ಮಾತ್ರವೇ ಮತ್ತೆ ಪಾಸಿಟಿವ್ ಆಗಿರುವುದು ಕಂಡು ಬಂದಿದೆ. ಇದು ಒಳ್ಳೆಯ ಸಂಕೇತ. ಶೇ.100 ಅಲ್ಲದಿದ್ದರೂ ಇದು ಪ್ರೋತ್ಸಾಹದಾಯಕ’ ಎಂದು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಅಭಿಪ್ರಾಯಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಡ್ರಗ್ಸ್ ವಿರೋಧಿ ಅಭಿಯಾನದ ಕುರಿತಂತೆ ಸೋಮವಾರ ಪರಿಶೀಲನೆ ನಡೆಸಲಾಗಿದೆ. ಡ್ರಗ್ಸ್ ಸೇವನೆ ಮತ್ತು ಮಾರಾಟಕ್ಕೆ ಸಂಬಂಧಿಸಿ 11 ಮಂದಿ ವಿದ್ಯಾರ್ಥಿಗಳು ಹಾಗೂ ನಗರದ ನಾಲ್ಕೈದು ಮೆಡಿಕಲ್ ಕಾಲೇಜುಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಡ್ರಗ್ಸ್ ಪೂರೈಕೆ ಮತ್ತು ಸೇವನೆಗೆ ಸಂಬಂಧಿಸಿ ಮಾಹಿತಿ ನೀಡುವಂತೆ ಕಾಲೇಜುಗಳಲ್ಲಿ ಅಳವಡಿಸಲಾಗಿರುವ ಕ್ಯೂಆರ್ ಕೋಡ್‌ಗೆ ಉತ್ತಮ ಸ್ಪಂದನ ದೊರಕಿದೆ. ಡ್ರಗ್ಸ್ ಮುಕ್ತ ಅಭಿಯಾನ ನಿರಂತರ ಪ್ರಕ್ರಿಯೆ. ಆದರೆ ಈವರೆಗಿನ ನಮ್ಮ ಕಾರ್ಯಾಚರಣೆಯಲ್ಲಿ ಸ್ಪಷ್ಟ ಸುಧಾರಣೆ ಕಂಡುಬಂದಿದೆ. ಇನ್ನೂ ಸಾಕಷ್ಟು ಈ ನಿಟ್ಟಿನಲ್ಲಿ ನಾವು ಸಾಧಿಸಬೇಕಾಗಿದೆ. ನಾವದನ್ನು ಮಾಡುತ್ತಿದ್ದು, ಇದರ ಭಾಗವಾಗಲು ಅನೇಕರು ಮುಂದೆ ಬರುತ್ತಿದ್ದಾರೆ.
-ಸುಧೀರ್ ಕುಮಾರ್ ರೆಡ್ಡಿ, ಪೊಲೀಸ್ ಆಯುಕ್ತರು, ಮಂಗಳೂರು