ಬಿಜೆಪಿಯ 10 ವರ್ಷಗಳ ಆಡಳಿತ: ಆರ್ಥಿಕತೆಯ ಆಳ – ಅಗಲ

Update: 2024-02-18 08:26 GMT

 ಭಾಗ-1

ಸರ್ವಾಧಿಕಾರದ ಹಿನ್ನೆಲೆ

ಹಿಂದುತ್ವದ ನಾಝೀವಾದ ಮತ್ತು ಅಭಿವೃದ್ಧಿ ಎನ್ನುವ ಮರೀಚಿಕೆಯನ್ನು ಮಿಶ್ರಣ ಮಾಡಿ ದೇಶಕ್ಕೆ ಕಳೆದ ಹತ್ತು ವರ್ಷಗಳ ಕಾಲ ಯಶಸ್ವಿಯಾಗಿ ಉಣ ಬಡಿಸಿದ ಮೋದಿ-ಶಾ-ಆರೆಸ್ಸೆಸ್ ನೇತೃತ್ವದ ಬಿಜೆಪಿ ಸರಕಾರವು ಮೂರನೇ ಬಾರಿ ಪುನರಾಯ್ಕೆ ಬಯಸುತ್ತಿದೆ. ತಾನು ಈ ಬಾರಿಯೂ ಗೆಲ್ಲಬಹುದೆಂಬ ಆತ್ಮ ವಿಶ್ವಾಸದಲ್ಲಿದೆ. ಬಹುಶಃ ಎಪ್ರಿಲ್-ಮೇ ತಿಂಗಳಲ್ಲಿ ನಡೆಯಬಹುದಾದ ಲೋಕಸಭಾ ಚುನಾವಣೆಗೆ ಮೋದಿ-ಶಾ ಜೋಡಿಯ ಮುಂದಾಳತ್ವದಲ್ಲಿ ಬಿಜೆಪಿ ಪಕ್ಷವು ಸಂಪೂರ್ಣವಾಗಿ ಸನ್ನದ್ಧವಾಗಿದೆ. ಜಾತಿ ಮತ್ತು ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸುತ್ತಿರುವ ಇವರ ಬಳಿ ದೊಡ್ಡ ಮಟ್ಟದ ಕಾಯಕರ್ತರ ಪಡೆಯಿದೆ. ಕ್ರೂನಿ ಬಂಡವಾಳಶಾಹಿಗಳಿಂದ ಸಂಗ್ರಹಿಸಿದ ಸಾವಿರಾರು ಕೋಟಿ ರೊಕ್ಕವಿದೆ. ಜನರನ್ನು ಪ್ರಚೋದಿಸಬಲ್ಲ ಮತಾಂಧತೆಯ ಬಾಣಗಳಿವೆ. ಇವರು ಹುಟ್ಟು ಹಾಕಿದ ದ್ವೇಷದ ವ್ಯವಸ್ಥೆಯಿದೆ. ಸರ್ವಾಧಿಕಾರಿ ಪ್ರಯೋಗದ ಕಾರಣದಿಂದ ಸಮಾಜದಲ್ಲಿ ಭಯದ ವಾತಾವರಣವಿದೆ.

ತನ್ನ ಪ್ರಪಗಂಡಾದ ಭಾಗವಾಗಿ ಬಿಜೆಪಿ ಹತ್ತು ವರ್ಷಗಳ ಕಲ್ಯಾಣ ಯೋಜನೆಗಳನ್ನು ಪ್ರಚಾರ ಮಾಡಲು ಸಿದ್ಧತೆ ನಡೆಸಿದೆ. ಇದಕ್ಕೆ ಬೆಂಬಲವಾಗಿ ಚುನಾವಣಾ ಬಾಂಡ್ ಮೂಲಕ ಕ್ರೂನಿ ಬಂಡವಾಳಶಾಹಿಗಳಿಂದ ಹರಿದು ಬಂದ ಅಪಾರವಾದ ಹಣ, ಸಂಪತ್ತು, ತಮ್ಮ ನೈತಿಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಳೆದುಕೊಂಡ ಬಹುಪಾಲು ಗೋದಿ ಮಾಧ್ಯಮಗಳು, ಭ್ರಷ್ಟರಾಗಿ ಬಿಜೆಪಿ ಜೊತೆಗೆ ಟೊಂಕ ಕಟ್ಟಿ ನಿಂತಿವೆ, ಬಿಜೆಪಿಯ ಯೋಜನೆಗಳನ್ನು ಕೊಂಡಾಡುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿವೆ. ಪ್ರಜ್ಞಾವಂತರು ಮತ್ತು ವಿರೋಧ ಪಕ್ಷಗಳು ನಾವು ಇವರನ್ನು ಹೇಗೆ ಎದುರಿಸಬೇಕು ಎಂದು ಚರ್ಚೆ, ತಂತ್ರಗಾರಿಕೆಯ ಅಗತ್ಯವಿದೆ. ಬಿಜೆಪಿಯ ವೈಫಲ್ಯಗಳನ್ನು ವಿವರಿಸುವಂತಹ ಸರಳ ಕಥನಗಳನ್ನು ಬಳಸಿಕೊಳ್ಳಬೇಕಿದೆ.

ಆದರೆ ವಿರೋಧ ಪಕ್ಷಗಳು ಈ ಫ್ಯಾಶಿಸ್ಟ್ ಸಂಘಟನೆಗೆ ಸವಾಲೊಡ್ಡುವಂತಹ ಶಕ್ತಿ ಮತ್ತು ಪೂರ್ವ ಸಿದ್ಧತೆ, ತಂತ್ರಗಾರಿಕೆಯ ಕೊರತೆಯಿಂದ ಸೊರಗಿವೆ. ವಿರೋಧ ಪಕ್ಷಗಳ ವೇದಿಕೆ ‘ಇಂಡಿಯಾ’ ಮೇಲ್ನೋಟಕ್ಕೆ ಕಾಣುವಂತೆ ಗೊಂದಲದ ಗೂಡಾಗಿದೆ. ಇವರ ಬಳಿ ಯಾವುದೇ ನಿರ್ದಿಷ್ಟ ಅಜೆಂಡಾಗಳಿಲ್ಲ. ಕಾಂಗ್ರೆಸ್, ಆರ್‌ಜೆಡಿ ಮತ್ತು ಎಡ ಪಕ್ಷಗಳನ್ನು ಹೊರತುಪಡಿಸಿ ಇತರ ಇಪ್ಪತ್ತಕ್ಕೂ ಅಧಿಕ ವಿರೋಧ ಪಕ್ಷಗಳಿಗೆ ಆರೆಸ್ಸೆಸ್ ಸಿದ್ಧಾಂತದ ಕುರಿತು ಬಲವಾದ ವಿರೋಧವಿಲ್ಲ. ಇವರಿಂದ ಬಿಜೆಪಿ-ಆರೆಸ್ಸೆಸ್ ನ್ನು ಸೋಲಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಪ್ರಜಾಪ್ರಭುತ್ವವಾದಿಗಳನ್ನು ಕಾಡುತ್ತಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರವಾಗಿ 2022ರಲ್ಲಿ ಜಾಗತಿಕವಾಗಿ 181 ದೇಶಗಳ ಪೈಕಿ ಭಾರತದಲ್ಲಿ ಪತ್ರಿಕಾ ಸ್ವಾತಂತ್ರವು 150ನೇ ಸ್ಥಾನದಲ್ಲಿದ್ದರೆ 2023ರಲ್ಲಿ ಅದು 181ನೇ ಸ್ಥಾನಕ್ಕೆ ಕುಸಿದಿದೆ. 2013ರಲ್ಲಿ 140ನೇ ಸ್ಥಾನದಲ್ಲಿತ್ತು. ದ್ವೇಷದ ರಾಜಕಾರಣದ ಪ್ರಕ್ರಿಯೆ ಗಮನಿಸಿದಾಗ 2004-2014ರ ಯುಪಿಎ ಅವಧಿಯಲ್ಲಿ ಜಾರಿ ನಿರ್ದೇಶನಾಲಯವು (ಈ.ಡಿ.) 26 ಪ್ರಕರಣಗಳನ್ನು, ಸಿಬಿಐ 72 ಪ್ರಕರಣಗಳನ್ನು ತನಿಖೆ ಮಾಡಿದ್ದರೆ 2014ರಿಂದ 2024ರವರೆಗೆ ಈ.ಡಿ. 121 ಪ್ರಕರಣಗಳನ್ನು, ಸಿಬಿಐ 124 ಪ್ರಕರಣಗಳನ್ನು ತನಿಖೆ ಮಾಡುತ್ತಿದೆ. 2004-14ರ ಅವಧಿಯಲ್ಲಿ ಈ.ಡಿ. ತನಿಖೆಯ ಶೇ.54ರಷ್ಟು ಪ್ರಮಾಣವು, ಸಿಬಿಐ ತನಿಖೆಯ ಶೇ.60ರಷ್ಟು ಪ್ರಮಾಣವು ವಿರೋಧ ಪಕ್ಷಗಳ ವಿರುದ್ಧವಾಗಿದ್ದರೆ 2014-2024ರ ಅವಧಿಯಲ್ಲಿ ಈ.ಡಿ. ಮತ್ತು ಸಿಬಿಐ ತನಿಖೆಯ ಶೇ.95ರಷ್ಟು ಪ್ರಮಾಣವು ವಿರೋಧ ಪಕ್ಷಗಳ ವಿರುದ್ಧವಾಗಿದೆ. ಬಿಜೆಪಿಯ ಈ ಫ್ಯಾಶಿಸಂ ಕುರಿತು ಜನತೆಗೆ ವಿವರಿಸಬೇಕಿದೆ

14, ಫೆಬ್ರವರಿ 2024ರ ‘ದ ಹಿಂದೂ’ ದಿನಪತ್ರಿಕೆಯ ವರದಿಯ ಪ್ರಕಾರ 2014-19ರ 16ನೇ ಲೋಕಸಭೆಯಲ್ಲಿ 200 ಮಸೂದೆಗಳನ್ನು ಅನುಮೋದಿಸಲಾಗಿದೆ. ಇದರ ಪೈಕಿ ಶೇ.21ರಷ್ಟು (42) ಮಸೂದೆಗಳನ್ನು ಮಾತ್ರ ಪರಿಶೀಲಿಸಲಾಗಿದೆ. ಶೇ.79 (158) ಮಸೂದೆಗಳು ಯಾವುದೇ ಚರ್ಚೆ, ಪರಿಶೀಲನೆ ಇಲ್ಲದೆ ಅನುಮೋದನೆಗೊಂಡಿದೆ. 2019-24ರ 17ನೇ ಲೋಕಸಭೆಯಲ್ಲಿ 221 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಇದರ ಪೈಕಿ ಶೇ.16ರಷ್ಟು (35) ಮಸೂದೆಗಳು ಮಾತ್ರ ಚರ್ಚೆ, ಪರಿಶೀಲನೆಗೆ ಒಳಪಟ್ಟಿವೆ. ಮಿಕ್ಕ ಶೇ.84ರಷ್ಟು (186) ಮಸೂದೆಗಳು ಯಾವುದೇ ಚರ್ಚೆ, ಪರಿಶೀಲನೆ ಇಲ್ಲದೆ ಅಂಗೀಕಾರಗೊಂಡಿವೆ. ಇದು ಬಿಜೆಪಿ ಪಕ್ಷದ ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ಪ್ರದರ್ಶಿಸುತ್ತದೆ. ಇದರ ಕುರಿತು ಜನರ ಬಳಿ ವಿವರಿಸಬೇಕಿದೆ

ಆರ್ಥಿಕ ಸೋಲುಗಳು

ಮೊನ್ನೆ 2023-24ರ ಮಧ್ಯಂತರ ಬಜೆಟ್ ಮಂಡಿಸಿದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ದೇಶದ 50ಶೇ. ಜನರ ಆದಾಯ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಇದು ಸುಳ್ಳೆಂದು ಸಾಬೀತುಪಡಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಜಾಗತಿಕ ಅಸಮಾನತೆಯ 2022ರ ವರದಿಯು (Internationali inequality report) ಭಾರತವು ಸಮೃದ್ಧಿಯಾದ ಶ್ರೀಮಂತರು ಇರುವ ಅತ್ಯಂತ ಬಡ ದೇಶ ಎಂದು ಹೇಳುತ್ತಿದೆ. ಆರ್ ಬಿಐ ವರದಿಯ ಪ್ರಕಾರ 5 ಸಾವಿರಕ್ಕೂ ಕಡಿಮೆ ವರಮಾನವಿರುವ ಶೇ.21ರಷ್ಟು ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿದರೆ ಶೇ.61.6 ಜನಸಂಖ್ಯೆ ಕೆಟ್ಟದಾಗಿದೆ ಎಂದು ಹೇಳಿದ್ದಾರೆ. 5 ರಿಂದ 10 ಸಾವಿರ ವರಮಾನವಿರುವ ಶೇ.28.3 ಜನಸಂಖ್ಯೆ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿದರೆ ಶೇ.51.6 ಜನಸಂಖ್ಯೆ ಹದಗೆಟ್ಟಿದೆ ಎಂದು ಹೇಳುತ್ತಿದ್ದಾರೆ. 10 ರಿಂದ 25 ಸಾವಿರ ವರಮಾನವಿರುವ ಶೇ.32.5 ಜನಸಂಖ್ಯೆ ಪರಿಸ್ಥಿತಿ ಸುಧಾರಿಸಿದೆ ಎಂದಿದ್ದಾರೆ ಶೇ.44.1 ಜನಸಂಖ್ಯೆ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದ್ದಾರೆ. 25 ರಿಂದ 50 ಸಾವಿರ ವರಮಾನವಿರುವ ಶೇ.37.8 ಜನಸಂಖ್ಯೆ ಪರಿಸ್ಥಿತಿ ಚೆನ್ನಾಗಿದೆ ಎಂದಿದ್ದರೆ ಶೇ.38 ಜನಸಂಖ್ಯೆ ಹದಗೆಟ್ಟಿದೆ ಎಂದು ಹೇಳುತ್ತಿದ್ದಾರೆ. 50 ಸಾವಿರದಿಂದ 1 ಲಕ್ಷ ವರಮಾನವಿರುವ ಶೇ.46.7 ಜನಸಂಖ್ಯೆ ಪರಿಸ್ಥಿತಿ ಚೆನ್ನಾಗಿ ಎಂದಿದ್ದರೆ ಶೇ.29.7 ಜನಸಂಖ್ಯೆ ಹದಗೆಟ್ಟಿದೆ ಎಂದು ಹೇಳುತ್ತಿದ್ದಾರೆ. 1 ಲಕ್ಷ ಕ್ಕೂ ಹೆಚ್ಚಿರುವ ವರಮಾನವಿರುವ ಶೇ.55.2 ಜನಸಂಖ್ಯೆ ಪರಿಸ್ಥಿತಿ ಚೆನ್ನಾಗಿದೆ ಎಂದಿದ್ದರೆ ಶೇ.25 ಜನಸಂಖ್ಯೆ ಹದಗೆಟ್ಟಿದೆ ಎಂದು ಹೇಳುತ್ತಿದ್ದಾರೆ. ಈ ಸಮೀಕ್ಷೆಯನ್ನು ಗಮನಿಸಿದರೆ ಶೇ.25ರಷ್ಟಿರುವ ಅತಿ ಶ್ರೀಮಂತರು, ಶ್ರೀಮಂತರು, ಮೇಲ್ಮಧ್ಯಮ ವರ್ಗದವರಿಗೆ ಹತ್ತು ವರ್ಷದ ಮೋದಿ ಆಡಳಿತ ಲಾಭದಾಯಕವಾಗಿದೆ. ಅವರಿಗೆ ಉತ್ತಮ ಅನುಭವ ಕೊಟ್ಟಿದೆ. ಶೇ.65ಕ್ಕಿಂತ ಹೆಚ್ಚಿನ ಪ್ರಮಾಣದ ಕೆಳಸ್ತರದಲ್ಲಿ ಬದುಕುತ್ತಿರುವ ಜನಸಂಖ್ಯೆ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳುತ್ತಿದ್ದಾರೆ. ಇಂತಹ ವರದಿಗಳನ್ನು ಮುಚ್ಚಿಡುವ ಗೋದಿ ಮೀಡಿಯಾಗಳು ಬಿಜೆಪಿ ಪರವಾಗಿ ಸುಳ್ಳುಗಳನ್ನು ಬಿತ್ತರಿಸುತ್ತಿವೆ. ನಾವು ಇದನ್ನು ಜನರ ಮುಂದೆ ವಿವರಿಸಬೇಕಿದೆ

ಇತ್ತೀಚಿನ ವರದಿಗಳ ಪೈಕಿ ಭಾರತದ ಶೇ.50.7ರಷ್ಟು ಜನಸಂಖ್ಯೆ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ. ಇವರ ಪೈಕಿ ಶೇ.67ರಷ್ಟು ಜನಸಂಖ್ಯೆ ಭೂರಹಿತ ಕೂಲಿ ಕಾರ್ಮಿಕರಿದ್ದಾರೆ. ಇವರ ಬಳಿ ಜಮೀನು ಒಡೆತನವಿಲ್ಲ. ಇಂತಹ ನಗ್ನ ಸತ್ಯಗಳನ್ನು ಮುಚ್ಚಿಟ್ಟು ಚುನಾವಣಾ ಭಾಷಣ ಮಾಡುತ್ತಿರುವ ಪ್ರಧಾನಿ ಮೋದಿಯವರು 2027ರ ಒಳಗೆ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಮಾಡುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. 2019ರಲ್ಲಿಯೂ ಇದೇ ಭರವಸೆ ಕೊಟ್ಟಿದ್ದರು. ಇಂದಿಗೂ ಇದು ಸಾಧ್ಯವಾಗಿಲ್ಲ. ಭಾರತವು ಮೂರನೇ ಅತಿ ದೊಡ್ಡ ರಾಷ್ಟ್ರವಾಗುತ್ತದೆ ಎಂದು ಹಾದಿ ತಪ್ಪಿಸುತ್ತಿದ್ದಾರೆ. ಆದರೆ ಜಾಗತಿಕ ಅಸಮಾನತೆಯ ವರದಿಯ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಅಸಮಾನತೆ ಹೆಚ್ಚಾಗುತ್ತಿದೆ ಮತ್ತು ತೀವ್ರವಾಗಿ ಬೆಳೆಯುತ್ತಿದೆ. ಕೋವಿಡ್ ಸಂದರ್ಭದಲ್ಲಿ ನೋಡಿದರೆ ಶೇ.10ರಷ್ಟು ಅತಿ ಶ್ರೀಮಂತರ ಸಂಪತ್ತು ಶೇ.121ರಷ್ಟು ಹೆಚ್ಚಾಗಿದೆ, ಶ್ರೀಮಂತರ ಸಂಪತ್ತು ಶೇ.70ರಷ್ಟು ಹೆಚ್ಚಾಗಿದೆ. ಹಣಕಾಸು ಇಲಾಖೆಯ ವರದಿಯ ಪ್ರಕಾರ ಇಲ್ಲಿ 35 ಕೋಟಿ ಜನಸಂಖ್ಯೆ ಬಡತನದಲ್ಲಿದ್ದಾರೆ. 80 ಕೋಟಿ ಜನಸಂಖ್ಯೆ ಇನ್ನೂ ಪಡಿತರ ವ್ಯವಸ್ಥೆಯ ಮೂಲಕ ಅಕ್ಕಿ, ಬೇಳೆ ಪಡೆಯುತ್ತಿದ್ದಾರೆ. ಇಂತಹ ಅಸಮಾನ ಭಾರತವು ಅದು ಹೇಗೆ 3ನೇ ಶ್ರೀಮಂತ ರಾಷ್ಟ್ರವಾಗುತ್ತದೆ ಎನ್ನುವ ಪ್ರಶ್ನೆಗಳನ್ನು ಜನತೆಯ ಮುಂದೆ ವಿವರಿಸಬೇಕಾಗಿದೆ.

ಬಿಜೆಪಿಯ ಹತ್ತು ವರ್ಷಗಳ ಆಡಳಿತದಲ್ಲಿ 24.8 ಕೋಟಿ ಜನಸಂಖ್ಯೆ ಬಹು ಆಯಾಮ ಬಡತನದ ಸೂಚ್ಯಂಕದಿಂದ ಹೊರ ಬಂದಿದ್ದಾರೆ ಎಂದು ನೀತಿ ಆಯೋಗ ಹೇಳಿದೆ. ಇದನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುತ್ತಾರೆ. ಆದರೆ ಇದು ಸತ್ಯವೇ? ಆರ್ಥಿಕ ತಜ್ಞ ಸಂತೋಷ್ ಮೆಹ್ರೋತ್ರ ಅವರು 2014 ರಿಂದ 2022ರವರೆಗೆ ಜನರ ಕೊಳ್ಳುವಿಕೆ ಮತ್ತು ವೆಚ್ಚದ ಕುರಿತು ಯಾವುದೇ ಸಮೀಕ್ಷೆ ಮಾಡಲಿಲ್ಲ. ಇದರ ಕುರಿತಾಗಿ 2012ರಲ್ಲಿ ನಡೆದ ಸಮೀಕ್ಷೆಯ ಮಾಹಿತಿಯೇ ಕೊನೆಯದಾಗಿದೆ ಮತ್ತು ಇವರು ಹೇಳಿಕೊಳ್ಳುತ್ತಿರುವ ಬಹು ಆಯಾಮಗಳ ಸಮೀಕ್ಷೆಯು ಸಹ ದಶಕಗಳಿಂದ ಯೋಜನಾ ಆಯೋಗವು ಮಾಡುತ್ತಾ ಬಂದಿರುವ ಕೊಳ್ಳುವ ಮತ್ತು ವೆಚ್ಚ ಆಧಾರಿತ ಸಮೀಕ್ಷೆಯಲ್ಲ. ಈ ಬಹು ಆಯಾಮ ಎನ್ನುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಇದಕ್ಕಾಗಿ ಯುಎನ್‌ಡಿಪಿ (ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ) ಹತ್ತು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಭಾರತದ ಬಿಜೆಪಿ ಸರಕಾರವು ಇದರ ಜೊತೆಗೆ ಎರಡು ಹೆಚ್ಚುವರಿ ಮಾರ್ಗಸೂಚಿಗಳನ್ನು ಸೇರಿಸಿದೆ. ಅದರಲ್ಲಿ ಮೊದಲನೆಯದಾಗಿ ಬ್ಯಾಂಕ್ ಖಾತೆಗಳ ಸಂಖ್ಯೆ. ಇದನ್ನು ಅಭಿವೃದ್ಧಿ ಎಂದು ಪರಿಗಣಿಸಲಾಗಿದೆ. ಆದರೆ ವಿವಿಧ ಕಾರಣಗಳಿಗೆ ಮತ್ತು ಕಲ್ಯಾಣ ಯೋಜನೆಗಳಿಗಾಗಿ ಸಹಜವಾಗಿಯೇ ಕಳೆದ ಏಳೆಂಟು ವರ್ಷಗಳಲ್ಲಿ ಬ್ಯಾಂಕ್ ಖಾತೆಯ ಸಂಖ್ಯೆಯಲ್ಲಿ ಹೆಚ್ಳಳವಾಗಿದೆ. ಇದನ್ನೇ ಬಳಸಿಕೊಂಡು ಬಹು ಆಯಾಮ ಬಡತನದಲ್ಲಿ ಭಾರತ ಸುಧಾರಿಸಿದೆ ಎಂದು ವಂಚನೆ ಮಾಡಲಾಗುತ್ತಿದೆ. ಎರಡನೆಯದಾಗಿ ಇತ್ತೀಚಿನ ವರ್ಷಗಳಲ್ಲಿ ಮನೆಗಳಲ್ಲಿ ಸೂಲಗಿತ್ತಿಯರಿಂದ ಹೆರಿಗೆಯಾಗುವ ಕಾಲ ಮುಗಿದು ಹೋದ ಸಂಗತಿಯಾಗಿದೆ. ಬಹುತೇಕ ಮಕ್ಕಳು ಆಸ್ಪತ್ರೆಗಳಲ್ಲಿ ಜನಿಸುತ್ತಾರೆ. ಈ ಸರಕಾರವು ಇದನ್ನು ಬಳಸಿಕೊಂಡು ಅದನ್ನು ಬಹು ಆಯಾಮದ ಬಡತನದಲ್ಲಿ ಸುಧಾರಣೆಯಾಗಿದೆ ಎಂದು ಹೇಳುತ್ತಿದೆೆ. ಮೂರನೆಯದಾಗಿ 2005-2016 ವರ್ಷಗಳ ನಡುವೆ ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳಾಗಿದೆ. ನೀತಿ ಆಯೊಗವು 2005ರ ಆರಂಭದ ಹಂತ ಮತ್ತು 2015-16ರ ಕೊನೆಯ ಹಂತವನ್ನು ಮಾತ್ರ ಹೋಲಿಸಿ ಸಾಕಷ್ಟು ಸುಧಾರಣೆಯಾಗಿದೆ ಎಂದು ಮರೆ ಮೋಸ ಮಾಡುತ್ತಿದೆ ಮತ್ತು 2017, 2018ರಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ನು ನಡೆಸಲಿಲ್ಲ. 2019ರಲ್ಲಿ ನಡೆಸಲಾಯಿತು. ಆದರೆ ಕೋವಿಡ್ ಕಾರಣ 2020, 2021ರಲ್ಲಿ ಸಮೀಕ್ಷೆ ನಡೆಸಲಿಲ್ಲ. ಬದಲಿಗೆ 2015-16ರ ಅಂಕಿ-ಅಂಶವನ್ನು ಆಧರಿಸಿ 2020, 21, 22, 23ರ ಅಭಿವೃದ್ಧಿಯನ್ನು ಪ್ರೊಜೆಕ್ಟ್ ಮಾಡಿದೆ. ಅಂದರೆ 2019ರಿಂದ 20223ರವರೆಗೆ ಸಮೀಕ್ಷೆ ಮಾಡದೆ ನೀತಿ ಆಯೋಗವು ಕೇವಲ ಊಹೆಯನ್ನು ಆಧರಿಸಿ ಈ ಬಹು ಆಯಾಮದಲ್ಲಿ ಸುಧಾರಣೆಯಾಗಿದೆ ಎಂದು ವಂಚಿಸುತ್ತಿದೆ ಎಂದು ಹೇಳುತ್ತಾರೆ.

ಮುಖ್ಯ ಪ್ರಶ್ನೆಯೆಂದರೆ ಸರಕಾರದ ಅಂಕಿಅಂಶಗಳ ಪ್ರಕಾರ ಕೋವಿಡ್ ಸಂದರ್ಭದ ಎರಡು ವರ್ಷಗಳಲ್ಲಿ (2020,21) 5.5 ಲಕ್ಷ ಜನ ಮೃತ ಪಟ್ಟಿದ್ದಾರೆ ಎಂದು ತಿಳಿಸಿದರೆ, ಲಾನ್ಸೆಂಟ್ ಪತ್ರಿಕೆಯ ವರದಿಯ ಪ್ರಕಾರ ಸುಮಾರು 47 ಲಕ್ಷ ಜನಸಂಖ್ಯೆ ಮೃತರಾಗಿದ್ದಾರೆ. ಅಂದರೆ ಸರಕಾರವು 42 ಲಕ್ಷ ಜನಸಂಖ್ಯೆಯ ಸಾವನ್ನು ಮುಚ್ಚಿಟ್ಟಿದೆ. 4 ಕೋಟಿ ಜನಸಂಖ್ಯೆ ಉದ್ಯೋಗ ಕಳೆದುಕೊಂಡರು. ನಿರುದ್ಯೋಗದ ಪ್ರಮಾಣ ಶೇ.22ಕ್ಕೆ ತಲುಪಿತ್ತು. ಶೇ.92 ಜನಸಂಖ್ಯೆಯಲ್ಲಿರುವ ಅಸಂಘಟಿತ ವಲಯವೂ ಸಹ ಹಸಿವಿನಿಂದ ಬಳಲಬೇಕಾಯಿತು. ಇದು ಬಡತನವಲ್ಲವೇ? ಕೋವಿಡ್ ವ್ಯಾಕ್ಸಿನ್ ಕಾರಣದಿಂದ ಬಹುತೇಕ ಜನಸಂಖ್ಯೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಇದು ಅನಾರೋಗ್ಯವಲ್ಲವೇ? ಹಾಗಿದ್ದರೆ ಅದು ಹೇಗೆ ಬಹು ಆಯಾಮ ಬಡತನದ ಸೂಚ್ಯಂಕದಿಂದ 25 ಕೋಟಿ ಜನಸಂಖ್ಯೆ ಹೊರ ಬಂದಿದ್ದಾರೆ? ಈ ಎಲ್ಲಾ ನೈಜ ಅಂಕಿಅಂಶಗಳನ್ನು ಜನತೆಯೊಂದಿಗೆ ಹಂಚಿಕೊಳ್ಳಬೇಕಿದೆ.

2004-2014ರ ವರೆಗಿನ ಯುಪಿಎ ಸರಕಾರದ ಅವಧಿಯಲ್ಲಿ ವಿತ್ತೀಯ ಕೊರತೆಯ ಪ್ರಮಾಣ ಸರಾಸರಿ ಶೇ.4.63ರಷ್ಟಿದ್ದರೆ 2014-23ರವರೆಗಿನ ಎನ್ ಡಿಎ ಸರಕಾರದಲ್ಲಿ ಅದು ಶೇ.5.13ರಷ್ಟಿದೆ. 2014ರಲ್ಲಿ ಸಾಲದ ಮೊತ್ತವು 52 ಲಕ್ಷ ಕೋಟಿಯಿದ್ದರೆ 2023ರ ವೇಳೆಗೆ 153 ಲಕ್ಷ ಕೋಟಿಯಷ್ಟಾಗಿದೆ. ಐಎಮ್ ಎಫ್ ಪ್ರಕಾರ ಭಾರತದ ಸಾಲ ಮತ್ತು ಜಿಡಿಪಿಯ ಅನುಪಾತವು ಶೇ.80ರ ಪ್ರಮಾಣವನ್ನು ದಾಟಿದೆ ಮತ್ತು 2027ರ ವೇಳೆಗೆ ಅದು ಶೇ.100 ಪ್ರಮಾಣವನ್ನು ತಲುಪುವ ನಿರೀಕ್ಷೆ ಇದೆ. 2013-14ರ ಬಜೆಟ್‌ನಲ್ಲಿ ಸಬ್ಸಿಡಿಗಳ ಪ್ರಮಾಣ ಜಿಡಿಪಿಯ ಶೇ.2.27ರಷ್ಟಿದ್ದರೆ 2022-23ರ ಬಜೆಟ್‌ನಲ್ಲಿ ಅದು ಶೇ.1.34ರಷ್ಟಿದೆ. ಅಂದರೆ ಶೇ.1ರಷ್ಟು ಕಡಿಮೆಯಾಗಿದೆ. ಸಾಮಾನ್ಯ ಸಂದರ್ಭದಲ್ಲಿ ಸಬ್ಸಿಡಿ ಪ್ರಮಾಣ ಕಡಿಮೆಯಾದಷ್ಟು ವಿತ್ತೀಯ ಕೊರತೆಯಲ್ಲಿಯೂ ಕುಂಠಿತವಾಗುತ್ತದೆ. ಆದರೆ ಇಲ್ಲಿ ಸಬ್ಸಿಡಿಯೂ ಕಡಿಮೆಯಾಗಿದೆ ಮತ್ತು ವಿತ್ತೀಯ ಕೊರತೆಯೂ ಶೇ.0.50ರಷ್ಟು ಹೆಚ್ಚಾಗಿದೆ. ಆದರೆ ಇದೇ ಅವಧಿಯಲ್ಲಿ ಬಂಡವಾಳದ ಮೇಲಿನ ವೆಚ್ಚವು ಶೇ.1.62 ರಿಂದ ಶೇ.3.32ರಷ್ಟಾಗಿದೆ. ಅಂದರೆ ದುಪ್ಪಟ್ಟಾಗಿದೆ. ಇದಕ್ಕೆ ಸರಕಾರವು ಉದ್ಯೋಗದ ಪ್ರಮಾಣ ಹೆಚ್ಚಾಗುತ್ತದೆ ಎಂದು ಸಮರ್ಥಿಸಿಕೊಳ್ಳುತ್ತದೆ. ಆದರೆ 2014ರಲ್ಲಿ ಉದ್ಯೋಗದ ಪ್ರಮಾಣ ಶೇ.41ರಷ್ಟಿದ್ದರೆ 2022ರ ವೇಳೆಗೆ ಅದು ಶೇ.39ಕ್ಕೆ ಕುಸಿದಿದೆ. ಅಂದರೆ ಬಡ ಕುಟುಂಬಗಳಿಗೆ ಆರೋಗ್ಯವೂ ಇಲ್ಲ, ಶಿಕ್ಷಣವೂ ಇಲ್ಲ, ಸಬ್ಸಿಡಿಯೂ ಇಲ್ಲ, ಉದ್ಯೋಗವೂ ಇಲ್ಲ. ಇಂತಹ ವಂಚನೆಯನ್ನು ಜನತೆಯ ಮುಂದೆ ವಿವರಿಸಬೇಕಾಗಿದೆ.

ಎಪ್ರಿಲ್ 2022ರಲ್ಲಿ ಸಗಟು ಹಣದುಬ್ಬರ ಶೇ.15ರಷ್ಟಿದ್ದರೆ, ಮೇ 2022ರಲ್ಲಿ ಚಿಲ್ಲರೆ ಹಣದುಬ್ಬರ ಶೇ.7.8ರಷ್ಟಿತ್ತು. 2014ರಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ 410, ಪೆಟ್ರೋಲ್ ಬೆಲೆ 71, ಡೀಸೆಲ್ ಬೆಲೆ 55ರೂ.ಗಳಿತ್ತು. 2024ರ ವೇಳೆಗೆ ಎಲ್ ಪಿಜಿ ಸಿಲಿಂಡರ್ ಬೆಲೆ 903, ಪೆಟ್ರೋಲ್ ಬೆಲೆ 97, ಡೀಸೆಲ್ ಬೆಲೆ 91ರೂ.ಗಳಾಗಿದೆ. ಅಂದರೆ ಹಣದುಬ್ಬರವೂ ಹೆಚ್ಚಾಗಿದೆ ಬೆಲೆಯೇರಿಕೆಯೂ ಗಗನ ಮುಟ್ಟಿದೆ. ರೂಪಾಯಿ ಮೌಲ್ಯವೂ ಕುಸಿದಿದೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಉದ್ಯೋಗಿಗಳ ವೇತನ ಹೆಚ್ಚಳವಾಗಿಲ್ಲ. ಈ ವಿಚಾರಗಳನ್ನು ಜನರ ಮುಂದಿಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಬಿ. ಶ್ರೀಪಾದ ಭಟ್

contributor

Similar News