×
Ad

ಅಕ್ರಮ ನಿರ್ಮಾಣದ ಹೆಸರಿನಲ್ಲಿ ರಾಜಧಾನಿಯ 2 ಕಾಲನಿಗಳು ನೆಲಸಮ

ಕಮರಿ ಹೋದ 300ಕ್ಕೂ ಅಧಿಕ ಮಕ್ಕಳ ಶೈಕ್ಷಣಿಕ ಭವಿಷ್ಯ..!

Update: 2025-12-29 12:49 IST

ಬೆಂಗಳೂರು : ಸರ್ವರಿಗೂ ಸಮಾನ ಶಿಕ್ಷಣ ಒದಗಿಸಿ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಲು ಸರಕಾರ ಒಂದೆಡೆ ಶ್ರಮಿಸುತ್ತಿದೆ. ಆದರೆ, ರಾಜಧಾನಿ ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎರಡು ಕಾಲನಿಗಳನ್ನು ಅಕ್ರಮ ನಿರ್ಮಾಣದ ಹೆಸರಿನಲ್ಲಿ ಸರಕಾರ ಧ್ವಂಸಗೊಳಿಸಿದ ಹಿನ್ನೆಲೆ ಅಲ್ಲಿದ್ದ ಸುಮಾರು 300ಕ್ಕೂ ಅಧಿಕ ಮಕ್ಕಳ ಶೈಕ್ಷಣಿಕ ಭವಿಷ್ಯ ಕಮರಿ ಹೋದಂತಾಗಿದೆ.

ಡಿ.20ರಂದು ಬ್ಯಾಟರಾಯನಪುರ ಕ್ಷೇತ್ರದ ಕೋಗಿಲು ಲೇಔಟ್‌ನಲ್ಲಿರುವ ಫಕೀರ ಕಾಲನಿ ಹಾಗೂ ವಸೀಂ ಕಾಲನಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ಅಧಿಕಾರಿಗಳು ಸುಮಾರು 400ಕ್ಕೂ ಅಧಿಕ ಮನೆಗಳನ್ನು ಕೆಡವಿದ್ದು, 3,000ಕ್ಕೂ ಹೆಚ್ಚು ಜನರನ್ನು ಬೀದಿಪಾಲು ಮಾಡಲಾಗಿದೆ, ಪ್ರಸ್ತುತ ಧ್ವಂಸಗೊಂಡಿರುವ ಎರಡು ಕಾಲನಿಗಳಲ್ಲಿ ಹತ್ತಾರು ಸಮಸ್ಯೆಗಳು ಬಿಗಡಾಯಿಸಿವೆ.

ಇಲ್ಲಿನ ಸ್ಥಳೀಯರ ಮಾಹಿತಿ ಪ್ರಕಾರ, 300ಕ್ಕೂ ಅಧಿಕ ಮಕ್ಕಳ ಶೈಕ್ಷಣಿಕ ಭವಿಷ್ಯ ಕೂಡ ನಿಂತು ಹೋಗಿದೆ. ಪಠ್ಯಪುಸ್ತಕ, ಜನನ ಪ್ರಮಾಣ ಪತ್ರ, ಬ್ಯಾಗ್, ಸಮವಸ್ತ್ರಗಳು ಮಣ್ಣಿನಡಿಯಲ್ಲಿ ಸಿಲುಕಿಹೋಗಿದೆ. ಇದರಿಂದಾಗಿ 5 ದಿನಗಳಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಗೈರಾಗುತ್ತಿರುವುದಾಗಿ ಸಂತ್ರಸ್ತ ವಿದ್ಯಾರ್ಥಿಗಳು ‘ವಾರ್ತಾ ಭಾರತಿ’ಯೊಂದಿಗೆ ನೋವು ತೋಡಿಕೊಂಡಿದ್ದಾರೆ.

ಪರೀಕ್ಷಾ ಪ್ರವೇಶಪತ್ರ ನಾಪತ್ತೆ: ‘‘ಇದ್ದಕ್ಕಿಂತದ್ದಂತೆ ಜಿಬಿಎ ಅಧಿಕಾರಿಗಳು ಜೆಸಿಬಿ ಮೂಲಕ ನಮ್ಮ ಮನೆಯನ್ನು ಧ್ವಂಸ ಮಾಡಲಾಯಿತು. ಮನೆಯ ಹಿಂಭಾಗದಲ್ಲಿದ್ದ ಕೆರೆಗೆ ನನ್ನ ಪುಸ್ತಕ, ಬ್ಯಾಗ್ ಎಲ್ಲವೂ ಹೋಗಿದೆ. ನನ್ನ ಸ್ನೇಹಿತೆಯ ಪರೀಕ್ಷಾ ಪ್ರವೇಶಪತ್ರ ಕೂಡ ಕಳೆದು ಹೋಗಿದೆ. ಅವಳು ಪರೀಕ್ಷೆಯನ್ನು ಬರೆಯಲು ಕೂಡ ಆಗಲಿಲ್ಲ’’ ಎಂದು ದ್ವಿತೀಯ ವರ್ಷದ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿ ನಸೀಮಾ ಬೇಗಂ ನೋವು ಹಂಚಿಕೊಂಡಿದ್ದಾರೆ.

ವೈದ್ಯೆಯಾಗುವ ಆಸೆ, ಆದರೆ ಶಾಲೆಗೆ ಹೋಗಲಾಗುತ್ತಿಲ್ಲ: ನಾನು 7ನೇ ತರಗತಿ ಕಲಿಯುತ್ತಿದ್ದೇನೆ, ಉನ್ನತ ಶಿಕ್ಷಣ ಮಾಡಬೇಕೆಂಬ ಬಯಕೆಯಿದೆ. ವೈದ್ಯೆಯಾಗುವ ಕನಸಿದೆ. ಶಾಲೆಯ ಶುಲ್ಕ ಕೊಡಲು ಕೂಡ ಹಣವಿಲ್ಲ. ನಾವು ಮಾಡಿರುವ ತಪ್ಪು ಆದರೂ ಏನು? ಯಾಕೆ ನಮಗೆ ಶಾಲೆಗೆ ಹೋಗಲಾಗದಿರುವ ಪರಿಸ್ಥಿತಿ ಎದುರಾಗಿದೆ. ನಾನು ಶಾಲೆಗೆ ಹೋದಾಗ ನಿನ್ನಲ್ಲಿ ಸಮವಸ್ತ್ರ, ಪುಸ್ತಕ ಇಲ್ಲವೆಂದು ಶಾಲೆಯಿಂದು ಮರಳಿ ಕಳಿಸಿದ್ದಾರೆ ಎಂದು ವಿದ್ಯಾರ್ಥಿನಿ ಶೇಖ್ ಮೆಹಬೂಬ್ ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯಕ್ಕೆ ಸರಕಾರ ಮುಳ್ಳಾಗದಿರಲಿ: ಫಕೀರ ಕಾಲನಿಯ ಪಕ್ಕದಲ್ಲೇ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಹಾಗೂ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿವೆ. ಈ ಶಾಲೆಗಳಿಗೆ ಸುಮಾರು 50ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದಾರೆ. ಆದರೆ, ಈಗ ಬರಿಗೈಯಲ್ಲಿ ಹೋಗಿ ಬರುತ್ತಿದ್ದಾರೆ. ಜನಪ್ರತಿನಿಧಿಗಳ ವಿದ್ಯಾರ್ಥಿಗಳು ವಿದೇಶಗಳಲ್ಲಿ ಕಲಿಯುತ್ತಿದ್ದಾರೆ. ನಮ್ಮ ಮಕ್ಕಳ ಭವಿಷ್ಯದ ಕತೆಯೇನು? ಎಂದು ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಯ ಅಂಗಳವೇ ‘ತಾತ್ಕಾಲಿಕ ಮನೆ’: ಎರಡೂ ಕಾಲನಿಯಲ್ಲಿರುವ ಜನರಿಗೆ ನಿವಾಸಗಳಿಲ್ಲದೆ ದಿಕ್ಕು ದೋಚದಂತಾಗಿದ್ದು, ಎಲ್ಲಿಯೂ ಸರಿಯಾದ ನಿರಾಶ್ರಿತ ತಾಣಗಳು ಇಲ್ಲದಿರುವುದರಿಂದ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಮುಂಭಾಗವೇ ಗುಡಾರ, ಟೆಂಟ್‌ಗಳನ್ನು ಹಾಕಿಕೊಂಡು ದಿನದೂಡುತ್ತಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹದಗೆಡುತ್ತಿರುವ ಮಕ್ಕಳ ಆರೋಗ್ಯ: ಧ್ವಂಸಗೊಂಡಿರುವ ಮನೆಗಳ ಅವಶೇಷಗಳು ಕೆಲವು ಮಕ್ಕಳಿಗೆ ತಾಗಿ ಕೈ-ಕಾಲುಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಕೊರೆವ ಚಳಿಯಿಂದಾಗಿ ಪುಟ್ಟ ಮಕ್ಕಳಿಗೆ ಜ್ವರ, ಕೆಮ್ಮು, ನೆಗಡಿ ಬರುತ್ತಿದೆ. ಅವರಿಗೆ ಸರಿಯಾದ ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಔಷಧಿಗಳ ಕೊರೆತೆಯು ಇಲ್ಲಿ ಎದ್ದು ಕಾಣುತ್ತಿದೆ ಎಂದು ಮಕ್ಕಳ ಪೋಷಕಿ ಇಮಾಮ್ ಬೀ ಹೇಳುತ್ತಾರೆ.

‘ನ್ಯಾಯವಾದಿಯಾಗಿ ಮನೆ ಉಳಿಸಿಕೊಳ್ಳುತ್ತೇನೆ’

ಜಿಬಿಎ ಅಧಿಕಾರಿಗಳು ಜೆಸಿಬಿ ಮೂಲಕ ನನ್ನ ಮನೆಯನ್ನು ನೆಲಸಮಗೊಳಿಸಿದ್ದಾರೆ. ನನ್ನ ಪುಸ್ತಕ, ಬ್ಯಾಗ್ ಎಲ್ಲವು ಮಣ್ಣುಪಾಲಾಗಿದೆ. ಐದನೇ ತರಗತಿಯಲ್ಲಿ ನಾನು ಕಲಿಯುತ್ತಿದ್ದೇನೆ. ಮುಂದೆ ನಾನು ನ್ಯಾಯವಾದಿಯಾಗಿ ಕಾನೂನು ಬದ್ಧವಾಗಿ ಹೋರಾಡಿ ನನ್ನ ಮನೆಯನ್ನು ಉಳಿಸಿಕೊಳ್ಳುತ್ತೇನೆ. ನನ್ನ ತಂದೆ-ತಾಯಿಗೆ ನೆರಳಾಗುವಂತೆ ಮಾಡುತ್ತೇನೆ ಎಂಬುದು 5ನೇ ತರಗತಿಯ ಆಸ್ಮಾಳ ಆತ್ಮವಿಶ್ವಾಸದ ಮಾತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇಬ್ರಾಹಿಂ ಖಲೀಲ್ ಬನ್ನೂರು

contributor

Similar News