×
Ad

ಕಲಬುರಗಿ ಜಿಲ್ಲೆಯಲ್ಲಿ 37 ಪ್ರವಾಸಿ ತಾಣಗಳು

Update: 2025-09-27 11:49 IST

ಕಲಬುರಗಿ: ಕಲ್ಯಾಣ ಕರ್ನಾಟಕದ ಹಬ್ಬಾಗಿಲು ಐತಿಹಾಸಿಕ ಸ್ಮಾರಕಗಳ ತಾಣ ಎಂದೇ ಕರೆಯಲ್ಪಡುವ ಜಿಲ್ಲೆಯಲ್ಲಿ 37 ಸ್ಥಳಗಳನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಪಟ್ಟಿಯಲ್ಲಿವೆ.

ಕಲಬುರಗಿ ನಗರದ ಹಝ್ರತ್ ಖ್ವಾಜಾ ಬಂದೇ ನವಾಝ್ ದರ್ಗಾ, ಕಲಬುರಗಿ ಕೋಟೆ, ಶರಣಬಸವೇಶ್ವರ ದೇವಸ್ಥಾನ, ಶರಣಬಸವೇಶ್ವರ ಕೆರೆ, ಉದ್ಯಾನವನ, ಶೂರ್ (ಚೋರ್) ಗುಂಬಝ್, ಬಹಮನಿ ಸಾಮ್ರಾಜ್ಯದ ಚಕ್ರವರ್ತಿಗಳ ಸಮಾಧಿಗಳು ಹೊಂದಿರುವ ಹಫತ್ ಗುಂಬಝ್, ಬುದ್ಧ ವಿಹಾರ, ಜಿಲ್ಲಾ ವಿಜ್ಞಾನ ಕೇಂದ್ರ, ಸರಕಾರಿ ಪ್ರಾಚ್ಯವಸ್ತು ಸಂಗ್ರಹಾಲಯ, ಕೊರಂಟಿ ಹನುಮಾನ ದೇವಸ್ಥಾನ ಮತ್ತು ತಾಲೂಕು ವ್ಯಾಪ್ತಿಯ ಹೋಳಕುಂದಾ, ಫೀರೋಝಾಬಾದ್ ಪ್ರವಾಸೋದ್ಯಮ ಪಟ್ಟಿಯಲ್ಲಿದೆ.

ಸೇಡಂ ತಾಲೂಕಿನ ಮಳಖೇಡ್ ಕೋಟೆ ಪ್ರಾಚಿನ ಸ್ಮಾರಕಗಳು, ಮೋತಕಪಲ್ಲಿಯಲ್ಲಿ ಬಲಭೀಮೇಶ್ವರ ದೇವಸ್ಥಾನ, ಯಾನಗುಂದಿ ಮಾತಾ ಮಾಣಿಕೇಶ್ವರಿ ದೇವಸ್ಥಾನ, ಬಿಜನಳ್ಳಿ ಹರಳಯ ದಂಪತಿ ಪ್ರಾಚೀನ ಸ್ಮಾರಕ, ಅಫಜಲಪುರ ತಾಲೂಕಿನ ಗಾಣಗಾಪುರನ ದತ್ತನ ದೇವಸ್ಥಾನ, ಘತ್ತರಗಿಭಾಗ್ಯಮ್ಮ ದೇವಸ್ಥಾನ, ಮಣ್ಣೂರ ಎಲ್ಲಮ್ಮ ದೇವಸ್ಥಾನ, ಚಿತ್ತಾಪುರ ತಾಲೂಕಿನ ಸನ್ನತಿ ಚಂದ್ರಕಲಾ ಪರಮೇಶ್ವರಿ ದೇವಸ್ಥಾನ, ಕಗನಹಳ್ಳಿ ಬೌದ್ಧ ಸ್ತುಪಗಳು, ನಾಗಾವಿ ಎಲ್ಲಮ್ಮ ದೇವಸ್ಥಾನ ಮತ್ತು 60 ಸ್ತಂಬಗಳಗುಡಿ ಸೇರಿ ಪ್ರಾಚೀನ ಸ್ಮಾರಗಳು, ದಿಗ್ಗಾವಿ, ರಟಕಲ್ (ರೇವಗ್ಗಿ) ರೇವಣಸಿದ್ದೇಶ್ವರ ದೇವಸ್ಥಾನ, ಕೋರವಾರ ಅಣವೀರ ಭದ್ರೇಶ್ವರ ದೇವಸ್ಥಾನ, ಕಾಳಗಿ ಕಾಳೇಶ್ವರ ಮತ್ತು ಸೂರ್ಯ ನಾರಾಯಣ ದೇವಸ್ಥಾನ ಮತ್ತು ಪ್ರಾಚೀನ ಸ್ಮಾರಕಗಳು, ಸೂಗೂರ (ಕೆ) ವೆಂಕಟೇಶ್ವರ ಬಾಲಾಜಿ ದೇವಸ್ಥಾನಗಳು ಪ್ರವಾಸೋದ್ಯಮ ಸ್ಥಳವಾಗಿವೆ.

ಚಿಂಚೋಳಿ ತಾಲೂಕಿನ ಚಂದ್ರಪಳ್ಳಿ ಜಲಾಶಯ, ಎತ್ತಿಪೋತ ಜಲಪಾತ, ಪಂಚಲಿಂಗೇಶ್ವರ ಬುಗ್ಗಿ, ಗೊಟ್ಟಂಗೊಟ್ಟ ಅರಣ್ಯ ಪ್ರದೇಶ, ಮೋಘಾ ರಾಮಲಿಂಗೇಶ್ವರ ದೇವಸ್ಥಾನ. ಜೇವರ್ಗಿ ತಾಲೂಕಿನ ಕುಳಗೇರಿ ಪ್ರಾಚೀನ ಅವಶೇಷಗಳು, ಯಡ್ರಾಮಿ ರಾಮತೀರ್ಥ ದೇವಸ್ಥಾನ, ಆಳಂದ ತಾಲೂಕಿನ ಹಝ್ರತ್ ಲಾಡ್ಲೆ ಮಶಾಕ ದರ್ಗಾ, ನರೋಣಾ ಕೇಮ ಲಿಂಗೇಶ್ವರ ದೇವಸ್ಥಾನ ಹಾಗೂ ಅಮರ್ಜಾ ಜಲಾಶಯ ರಾಜ್ಯ ಪ್ರವಾಸ ಸ್ಥಳವಾಗಿವೆ.

ಕಲಬುರಗಿ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಐತಿಹಾಸಿಕ ಹಾಗೂ ಸ್ಥಳಗಳು ಇವೆ. ನಮ್ಮ ಭಾಗದ ಮಕ್ಕಳಿಗೆ ನಮ್ಮ ಪರಂಪರೆ ಮತ್ತು ಸಂಸ್ಕೃತಿ ಬಗ್ಗೆ ಗೊತ್ತಾಗದ ರೀತಿಯಲ್ಲಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ರಾಜ್ಯ ಪುರಾತತ್ವ ಮತ್ತು ಪಾರಂಪರಿಕ ಇಲಾಖೆಯ ಸ್ಥಳೀಯ ಸ್ಮಾರಕ ಸ್ಥಳಗಳ ವೈಶಿಷ್ಟ್ಯ ಮತ್ತು ಇತಿಹಾಸವನ್ನು ತಿಳಿಸಲು ನಿರ್ದಿಷ್ಟ ಗೈಡ್‌ಗಳ ವ್ಯವಸ್ಥೆ ಇಲ್ಲದಷ್ಟು ಬಡಪಾಯಿ ಇಲಾಖೆ ಆಗಿದೆ ಎಂಬುದು ಸ್ಥಳೀಯರ ಆರೋಪ.

ಹಿಂದುಳಿದ ಪ್ರದೇಶ ಅಭಿವೃದ್ಧಿಗಾಗಿ ದೊಡ್ಡ ಕಂಪೆನಿಗಳು, ದೊಡ್ಡ ಯೋಜನೆಗಳು ಎಷ್ಟು ಮುಖ್ಯ, ಅಷ್ಟೇ ಪ್ರವಾಸಿ ತಾಣಗಳು ಸೌಂದರ್ಯೀಕರಣಗೊಳಿಸಿ ಸಂರಕ್ಷಣೆ ಮಾಡಬೇಕು. ಈ ಪ್ರದೇಶದ ಇತಿಹಾಸ ಪರಂಪರೆಯನ್ನು ಸ್ಥಳೀಯ, ದೇಶ, ವಿದೇಶಿ ಪ್ರವಾಸಿಗರಿಗೆ ಸರಳವಾಗಿ ತಲುಪುವಂತೆ ಮಾಡುವುದು ಅಗತ್ಯವಾಗಿದೆ. ಈ ಮೂಲಕ ಹಿಂದುಳಿದ ಭಾಗವನ್ನು ಐತಿಹಾಸಿಕವಾಗಿ ಮುಂದುವರಿದ ಭಾಗವಾಗಿ ಪರಿಚಯಿಸುವ ಕೆಲಸ ಪ್ರವಾಸೋದ್ಯಮ ಮತ್ತು ರಾಜ್ಯ ಪಾರಂಪರಿಕ ಹಾಗೂ ಪುರಾತತ್ವ ಇಲಾಖೆ ಮಾಡಬೇಕಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಮೊದಲು 32 ಸ್ಥಳಗಳು ಪ್ರವಾಸಿ ತಾಣದ ಪಟ್ಟಿಯಲ್ಲಿದ್ದವು, ಈ ವರ್ಷ 5 ಹೊಸ ಸ್ಥಳಗಳನ್ನು ಪ್ರವಾಸಿತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಇಲಾಖೆಯಿಂದ ಯಾವುದೇ ಟಿಕೇಟ್ ನಿಗದಿ ಮಾಡಿಲ್ಲ.

- ಬೇಬಿ ಮೊಗೇರ, ಉಪ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ ಕಲಬುರಗಿ

ಸಿಬ್ಬಂದಿ ಕೊರತೆಯ ನೆಪವನ್ನು ಇಟ್ಟುಕೊಂಡು ಪ್ರವಾಸೋದ್ಯಮ ಸ್ಥಳಗಳು ಮತ್ತು ಸ್ಮಾರಕಗಳನ್ನು ನಿರ್ಲಕ್ಷ್ಯಿಸಲಾಗುತ್ತಿದೆ ಎಂಬ ಆರೋಪಗಳಿವೆ. ಕಲ್ಯಾಣ ಕರ್ನಾಟಕದ ಭಾಗವದ ಪ್ರತಿಯೊಂದು ಸ್ಮಾರಕಗಳಿಗೆ ಅದರದೇ ಆದ ಇತಿಹಾಸವನ್ನು ಹೊಂದಿವೆ. ಅವುಗಳ ಸಂರಕ್ಷಣೆಗೆ ಇಲಾಖೆ ಮುಂದಾಗಬೇಕು. ಗುತ್ತಿಗೆ ಆಧಾರಿತ ಸಿಬ್ಬಂದಿಯ ನೇಮಕ ಮಾಡಿಕೊಂಡಾದರೂ ಈ ಭಾಗದ ಪ್ರವಾಸೋದ್ಯಮ ಬೆಳಸಲು ಟೂರಿಸ್ಟ್ ಗೈಡ್, ಸ್ಥಳಗಳಲ್ಲಿ ನೇಮ್ ಪ್ಲೇಟ್ ಅಳವಡಿಸುವುದು, ಐತಿಹಾಸಿಕ ಸ್ಥಳಗಳಿಗೆ ಶಾಲಾ ಮಕ್ಕಳಿಗೆ ಕೊಂಡೊಯ್ಯುವ ಕೆಲಸ ಇಲಾಖೆಗಳ ನೇತೃತ್ವದಲ್ಲಿ ಆಗಬೇಕು ಎಂಬುದು ಸಾರ್ವಜನಿಕರ ಮನವಿಯಾಗಿದೆ.

ಇತಿಹಾಸವನ್ನು ನೋಡುವಾಗ ಯಾವುದೇ ಭೇದಭಾವವಿಲ್ಲದೇ ನೋಡಬೇಕು. ನಾವು ಪಾರಂಪರಿಕವಾಗಿ ಶ್ರೀಮಂತಿಕೆ ಹೊಂದಿರುವ ಪ್ರದೇಶ ಕಲಬುರಗಿ ಆಗಿದೆ. ಆದರೆ ಇದನ್ನು ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿ ಇರುವಷ್ಟು ವೈಶಿಷ್ಟ್ಯವುಳ್ಳ ಸ್ಮಾರಕಗಳು ಬೇರೆ ಕಡೆ ಇಲ್ಲ. ಇಲ್ಲಿನ ಇತಿಹಾಸವನ್ನು ಪ್ರಚಾರ ಮಾಡುವ ಕೆಲಸ ಸರಕಾರ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ಆಗಬೇಕು.

- ಅಯಾಝುದ್ದೀನ್ ಪಟೇಲ್, ಹಿರಿಯ ಕಲಾವಿದ, ಸಂಶೋಧಕ ಕಲಬುರಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಾಜಿದ್‌ ಅಲಿ

contributor

Similar News