ಅಲ್ಪಸಂಖ್ಯಾತರ ಇಲಾಖೆ ಕಾರ್ಯದರ್ಶಿ, ಕೆಎಂಡಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್
‘ಅಲ್ಪಸಂಖ್ಯಾತರ ಕೌಶಲಾಭಿವೃದ್ಧಿ’ ಆರು ಟೆಂಡರ್‌ಗಳಲ್ಲಿ ಪೂರ್ವ ನಿರ್ಧರಿತ ಫಲಾನುಭವಿಗಳಿಗೆ ಅನುಕೂಲ: ಆರೋಪ
fb.com/p/KMDC-Ltd
ಬೆಂಗಳೂರು : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ಕೆಎಂಡಿಸಿ) 2026-27ನೇ ಸಾಲಿಗೆ ಪ್ರಕಟಿಸಿರುವ ಆರು ಕೌಶಲಾಭಿವೃದ್ಧಿ ತರಬೇತಿ ಟೆಂಡರ್‌ಗಳಲ್ಲಿರುವ ಅರ್ಹತಾ ಮಾನದಂಡಗಳು, ಮೌಲ್ಯಮಾಪನ ವಿಧಾನ ಹಾಗೂ ಬಿಡ್ ಸಲ್ಲಿಕೆಗೆ ನೀಡಿರುವ ಅವಧಿ ಸಹಿತ ಹಲವು ಷರತ್ತುಗಳು ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ ಕಾಯ್ದೆ, 1999, ಸಂವಿಧಾನದ ಅನುಚ್ಛೇದ 14 ಮತ್ತು 19(1)(g)ಕ್ಕೆ ವಿರುದ್ಧವಾಗಿವೆ ಎಂದು ಆರೋಪಿಸಿ ಹೈಕೋರ್ಟ್ ವಕೀಲ ಎಸ್.ಎ.ಎಚ್.ರಝ್ವಿ ಸರಕಾರಕ್ಕೆ ಲೀಗಲ್ ನೋಟಿಸ್ ನೀಡಿದ್ದಾರೆ. ಈ ಟೆಂಡರ್‌ಗಳನ್ನು ತಕ್ಷಣ ಹಿಂಪಡೆದು ನ್ಯಾಯಸಮ್ಮತ ಹಾಗೂ ಸ್ಪರ್ಧಾತ್ಮಕ ಷರತ್ತುಗಳೊಂದಿಗೆ ಮರು ಪ್ರಕಟಿಸದಿದ್ದರೆ ಲೋಕಾಯುಕ್ತ ಹಾಗೂ ಹೈಕೋರ್ಟ್ ಮೊರೆ ಹೋಗುವುದಾಗಿ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಒಂದೇ ದಿನ ಆರು ಟೆಂಡರ್: ಜುಲೈ 22ರಂದು ಪ್ರಕಟವಾದ ಆರು ಟೆಂಡರ್‌ಗಳ ಒಟ್ಟು ಮೌಲ್ಯ ಸುಮಾರು 5.7 ಕೋಟಿ ರೂ.ಗಳು. ನಾಲ್ಕು ಟೆಂಡರ್‌ಗಳು ಎಐ ಆಧಾರಿತ ಫಾರ್ಮಾ ಕೌಶಲಾಭಿವೃದ್ಧಿ ತರಬೇತಿಗೆ, ಒಂದು ಸಮುದ್ರ ಆಹಾರ ಸಂಸ್ಕರಣಾ ತಂತ್ರಜ್ಞ ತರಬೇತಿಗೆ ಹಾಗೂ ಮತ್ತೊಂದು ಕ್ಲೌಡ್ ಎಐ ತರಬೇತಿಗೆ ಸಂಬಂಧಿಸಿವೆ. ಎಲ್ಲ ಟೆಂಡರ್‌ಗಳಿಗೂ ಒಂದೇ ರೀತಿಯ ಪೂರ್ವ ಬಿಡ್ ಸಭೆ, ಒಂದೇ ಬಿಡ್ ಸಲ್ಲಿಕೆ ದಿನಾಂಕ ಹಾಗೂ ಒಂದೇ ತಾಂತ್ರಿಕ ಮತ್ತು ಹಣಕಾಸು ಬಿಡ್ ತೆರೆಯುವ ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಟೆಂಡರ್ ಪ್ರಕಟಣೆ ಮತ್ತು ಬಿಡ್ ಸಲ್ಲಿಕೆ ನಡುವಿನ ಅವಧಿ ಕೇವಲ 15 ದಿನಗಳಷ್ಟೇ ಇವೆ. ಈ ಅವಧಿಯಲ್ಲಿ ಹೊಸ ಅರ್ಹತಾ ದಾಖಲೆ, ಒಪ್ಪಂದ, ಹಣಕಾಸು ದಾಖಲೆ ಹಾಗೂ ಪಾಲುದಾರಿಕೆ ವ್ಯವಸ್ಥೆಗಳನ್ನು ಸಿದ್ಧಪಡಿಸಲು ಸಾಧ್ಯವಿಲ್ಲವೆಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಕರ್ನಾಟಕದಲ್ಲಿ ಕಚೇರಿ ಕಡ್ಡಾಯಕ್ಕೆ ಆಕ್ಷೇಪ: ಪ್ರತೀ ಟೆಂಡರ್‌ನಲ್ಲೂ ಬಿಡ್‌ದಾರರು ಹಾಗೂ ಕನ್ಸೋರ್ಟಿಯಂ ಪಾಲುದಾರರು ಕರ್ನಾಟಕದಲ್ಲಿ ನೋಂದಾಯಿತ ಅಥವಾ ಪ್ರಾದೇಶಿಕ ಕಚೇರಿ ಹೊಂದಿರಬೇಕು ಎಂಬ ಷರತ್ತು ವಿಧಿಸಲಾಗಿದೆ. ರಾಜ್ಯದ ಹೊರಗಿನ ಅನುಭವಿ ಸಂಸ್ಥೆಗಳನ್ನು ಸ್ಪರ್ಧೆಯಿಂದ ದೂರವಿಡುವ ಉದ್ದೇಶದಿಂದಲೇ ಈ ಷರತ್ತು ರೂಪಿಸಲಾಗಿದೆ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ.
ದುಪ್ಪಟ್ಟು ವಹಿವಾಟು ಕಡ್ಡಾಯ: ಸುಮಾರು 94 ಲಕ್ಷ ರೂ.ಗಳಿಂದ 97 ಲಕ್ಷ ರೂ. ಮೌಲ್ಯದ ಟೆಂಡರ್‌ಗಳಿಗೆ ವಾರ್ಷಿಕ ವಹಿವಾಟು 1.88 ಕೋಟಿ ರೂ. ಮತ್ತು 1.95 ಕೋಟಿ ರೂ. ಇರಬೇಕು ಎಂದು ನಿಗದಿಪಡಿಸಿರುವುದು ಸಮಂಜಸವಲ್ಲ. ಇದರಿಂದ ಸಣ್ಣ ಹಾಗೂ ಮಧ್ಯಮ ಮಟ್ಟದ ತರಬೇತಿ ಸಂಸ್ಥೆಗಳು ಸ್ಪರ್ಧೆಯಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ನೋಟಿಸ್‌ನಲ್ಲಿ ಪ್ರತಿಪಾದಿಸಲಾಗಿದೆ.
ನಾಲ್ಕು ನಗರಗಳಿಗೆ ಒಂದೇ ಮಾದರಿ ಟೆಂಡರ್: ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಯಾದಗಿರಿ ನಗರಗಳಿಗೆ ಪ್ರಕಟಿಸಿರುವ ನಾಲ್ಕು ಎಐ ಫಾರ್ಮಾ ಟೆಂಡರ್‌ಗಳಲ್ಲಿ ಮೌಲ್ಯ, ಷರತ್ತುಗಳು, ಅರ್ಹತೆ ಮತ್ತು ವೇಳಾಪಟ್ಟಿ ಬಹುತೇಕ ಒಂದೇ ರೀತಿಯಾಗಿದೆ. ಇದರಿಂದ ನಾಲ್ಕೂ ಯೋಜನೆಗಳನ್ನು ಒಂದೇ ಸಂಸ್ಥೆ ಪಡೆಯುವಂತೆ ಟೆಂಡರ್ ವಿನ್ಯಾಸಗೊಳಿಸಲಾಗಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ನೋಟಿಸ್ ಉಲ್ಲೇಖಿಸಲಾಗಿದೆ.
ಕರ್ನಾಟಕದಲ್ಲಿನ ಅನುಭವಕ್ಕೆ ಮಾತ್ರ ಅಂಕ: ಕೆಲವು ಟೆಂಡರ್‌ಗಳಲ್ಲಿ ರಾಜ್ಯ ಸರಕಾರದ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ, ಕರ್ನಾಟಕದ ಎಂಒಯು
ಹಾಗೂ ಕರ್ನಾಟಕದಲ್ಲೇ ತರಬೇತಿ ನೀಡಿದ ಅಭ್ಯರ್ಥಿಗಳ ಸಂಖ್ಯೆಗೆ ಮಾತ್ರ ಅಂಕ ನೀಡಲಾಗಿದೆ. ಬೇರೆ ರಾಜ್ಯಗಳಲ್ಲಿ ಸಮಾನ ಅಥವಾ ಹೆಚ್ಚಿನ ಅನುಭವ ಹೊಂದಿರುವ ಸಂಸ್ಥೆಗಳಿಗೆ ಮಾನ್ಯತೆ ನೀಡದಿರುವುದು ತಾರತಮ್ಯವೆಂದು ವಾದಿಸಲಾಗಿದೆ.
ಎಐ ಫಾರ್ಮಾ ಟೆಂಡರ್‌ಗಳ ವಿರುದ್ಧ ಆಕ್ಷೇಪ: ಎಐ ಫಾರ್ಮಾ ತರಬೇತಿ ಟೆಂಡರ್‌ನಲ್ಲಿ 25 ಶಾಶ್ವತ ವಿಷಯ ತಜ್ಞರು, ಐದು ವರ್ಷಗಳ ಎಐ ಆಧಾರಿತ ಫಾರ್ಮಾ ಅನುಭವ, ಇನ್‌ಹೌಸ್ ಎಐ/ಎಂಎಲ್ ಇಂಜಿನಿಯರ್‌ಗಳು, ಡೇಟಾ ವಿಜ್ಞಾನಿಗಳು, ಸಾಫ್ಟ್‌ವೇರ್ ಅಭಿವೃದ್ಧಿಪರರು, ಯುಐ/ಯುಎಕ್ಸ್ ವಿನ್ಯಾಸಕರನ್ನು ಕಡ್ಡಾಯಗೊಳಿಸಿರುವುದು ಅನಗತ್ಯ ಷರತ್ತು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಸೀಫುಡ್ ತರಬೇತಿ ಟೆಂಡರ್: ಎಂಎಸ್‌ಎಂಇ ರ್ಯಾಂಪ್ ಹಾಗೂ ರೂಟೆಜ್ ಸ್ಮಾರ್ಟ್ ವಿಲೇಜ್ ಸೆಂಟರ್ಸ್‌ನಡಿ ಈಗಾಗಲೇ ಇಂಪ್ಲಿಮೆಂಟೇಶನ್ ಪಾಲುದಾರರಾಗಿರಬೇಕು ಎಂಬ ಷರತ್ತು ಹೊಸ ಸ್ಪರ್ಧಾಳುಗಳಿಗೆ ಅವ ಕಾಶವಿಲ್ಲದಂತೆ ಮಾಡುತ್ತದೆ ಎಂದು ಆರೋಪಿಸಲಾಗಿದೆ.
ಕ್ಲೌಡ್ ಎಐ ಟೆಂಡರ್: ಕೇಂದ್ರ ಸರಕಾರದ ವೈಜ್ಞಾ ನಿಕ ಸಂಸ್ಥೆಯೊಂದಿಗೆ 6 ತಿಂಗಳ ಹಿಂದೆಯೇ ತಂತ್ರಜ್ಞಾನ ಪಾಲುದಾರಿಕೆ ಇರಬೇಕು, C-DAC ಅನುಮೋದಿತ ಬೋಧಕರಿಂದ ಮಾತ್ರ ತರಬೇತಿ ಮತ್ತು ಪ್ರಮಾಣೀಕರಣ ಇರಬೇಕು ಎಂಬ ಷರತ್ತುಗಳು ನಿರ್ದಿಷ್ಟ ಸಂಸ್ಥೆಗೆ ಅನುಕೂಲ ಕಲ್ಪಿಸುವಂತಿವೆ ಎಂದು ವಾದಿಸಲಾಗಿದೆ.
ಮೌಲ್ಯಮಾಪನ ಸಮಿತಿ ವಿವರ ಬಹಿರಂಗವಿಲ್ಲ: ತಾಂತ್ರಿಕ ಮೌಲ್ಯಮಾಪನ ಸಮಿತಿಯಲ್ಲಿ ಯಾರು ಸದಸ್ಯರು, ಅವರ ಅರ್ಹತೆ ಏನು, ಯಾವ ಮಾನದಂಡದ ಆಧಾರದಲ್ಲಿ ಅಂಕ ನೀಡಲಾಗುತ್ತದೆ ಎಂಬ ಮಾಹಿತಿ ಟೆಂಡರ್ ದಾಖಲೆಯಲ್ಲಿ ಇಲ್ಲ. ‘Presentation on Methodology'ಗೆ ಹೆಚ್ಚಿನ ಅಂಕ ಮೀಸಲಿಟ್ಟಿದ್ದರೂ ಅದರ ಮೌಲ್ಯಮಾಪನ ಮಾನದಂಡಗಳನ್ನು ಪ್ರಕಟಿಸಿಲ್ಲ ಎಂದು ನೋಟಿಸ್‌ನಲ್ಲಿ ಆಕ್ಷೇಪಿಸಲಾಗಿದೆ.