ಕೊಡಗಿನಲ್ಲಿ 4,512 ಬಿಪಿಎಲ್ ಕಾರ್ಡ್ ಎಪಿಎಲ್‌ಗೆ
ಮಡಿಕೇರಿ : ಕುಟುಂಬದ ವಾರ್ಷಿಕ ಆದಾಯ ನಿಗದಿಗಿಂತ ಹೆಚ್ಚಾಗಿದ್ದರೂ ಮಾನದಂಡಗಳನ್ನು ಉಲ್ಲಂಘಿಸಿ ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್ ಕಾರ್ಡ್ ಗಳನ್ನು ಪಡೆದಿದ್ದ ಕೊಡಗು ಜಿಲ್ಲೆಯ 4,512 ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಗೆ ವರ್ಗಾಯಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ 2025ರ ಸೆಪ್ಟೆಂಬರ್ ತಿಂಗಳಿನಿಂದ ಎರಡು ತಿಂಗಳ ಕಾಲ ನಡೆದ ಪಡಿತರ ಚೀಟಿ ಪರಿಷ್ಕರಣಾ ಕಾರ್ಯದ ವೇಳೆ ಸರಕಾರದ ಆದೇಶವನ್ನು ಉಲ್ಲಂಘಿಸಿ ಬಿಪಿಎಲ್ ಕಾರ್ಡ್ ಪಡೆದವರನ್ನು ಪತ್ತೆಹಚ್ಚಲಾಗಿದೆ.
ವಾರ್ಷಿಕವಾಗಿ 1.20 ಲಕ್ಷ ರೂ. ಗಿಂತ ಹೆಚ್ಚು ಆದಾಯವಿರುವ, ಜಿಎಸ್‌ಟಿ,ಕಂಪೆನಿ ತೆರಿಗೆ ಪಾವತಿಸುತ್ತಿರುವ ಆಧಾರದ ಮೇಲೆ ಕಾರ್ಡ್ ಗಳ ಪರಿವರ್ತನೆಗೆ ಆಹಾರ ಇಲಾಖಾ ಅಧಿಕಾರಿಗಳು ಕ್ರಮವಹಿಸಿದ್ದಾರೆ.
ಕೊಡಗು ಜಿಲ್ಲಾದ್ಯಂತ ನಡೆದ ಪಡಿತರ ಚೀಟಿ ಪರಿಷ್ಕರಣಾ ಕಾರ್ಯದಲ್ಲಿ ಒಟ್ಟು 4,869 ಕುಟುಂಬಗಳು ನಿಯಮ ಉಲ್ಲಂಘಿಸಿ ಬಿಪಿಎಲ್ ಕಾರ್ಡ್ ಪಡೆದಿರುವುದು ಪತ್ತೆಯಾಗಿತ್ತು.ಅದರಲ್ಲಿ 4,512 ಬಿಪಿಎಲ್ ಕಾರ್ಡ್‌ಗಳು ಇದೀಗ ಎಪಿಎಲ್‌ಗೆ ಬದಲಾಯಿಸಲಾಗಿದೆ.ಉಳಿದ 357 ಬಿಪಿಎಲ್ ಕಾರ್ಡ್ ಕುಟುಂಬಗಳ ದಾಖಲೆಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ.
ಆಹಾರ ಇಲಾಖಾ ಅಧಿಕಾರಿಗಳು ಕೊಡಗು ಜಿಲ್ಲಾದ್ಯಂತ ಪಡಿತರ ಚೀಟಿ ಪರಿಷ್ಕರಣೆ ಮತ್ತು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಡಿಕೇರಿ ತಾಲೂಕಿನ 936,ಸೋಮವಾರಪೇಟೆ 1,026,ವಿರಾಜಪೇಟೆ 993, ಕುಶಾಲನಗರ 1,138 ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ 749 ಬಿಪಿಎಲ್ ಕಾರ್ಡ್‌ಗಳು ಅನರ್ಹರ ಪಾಲಾಗಿತ್ತು.
ಇದೀಗ 2025ರ ಡಿಸೆಂಬರ್ ತಿಂಗಳ ಅಂತ್ಯಕ್ಕೆ, ಮಡಿಕೇರಿ ತಾಲೂಕಿನಲ್ಲಿ 936,ಸೋಮವಾರಪೇಟೆ 936,ವಿರಾಜಪೇಟೆ 883,ಕುಶಾಲನಗರ 1,050 ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ 707 ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಬದಲಾಯಿಸಲಾಗಿದೆ. ಪ್ರಸಕ್ತ ಕೊಡಗು ಜಿಲ್ಲೆಯಲ್ಲಿ 9,019(ಎಎವೈ),99,405 (ಬಿಪಿಎಲ್) ಹಾಗೂ 39,147(ಎಪಿಎಲ್) ಕಾರ್ಡ್ ಗಳು ಸೇರಿ ಒಟ್ಟು 1,47,571 ಪಡಿತರ ಚೀಟಿಗಳಿವೆ.
ಮಾನದಂಡಗಳೇನು?
ಸಾರ್ವಜನಿಕ ಪಡಿತರ ವಿತರಣಾ ಪದ್ಧತಿಯಡಿ ಆದ್ಯತೇತರ ಕುಟುಂಬಗಳನ್ನು (ಎಪಿಎಲ್) ಗುರುತಿಸಲು, ಪ್ರಸಕ್ತ ಇರುವ ಹೊರಗಿಡುವ ಮಾನದಂಡಗಳನ್ನು ಅನುಸರಿಸಲಾಗಿದೆ. ಅನರ್ಹರು ಪಡೆದಿದ್ದ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್‌ಗಳನ್ನು ಈ ಮಾನದಂಡಗಳ ಅನುಸಾರ ಪತ್ತೆ ಮಾಡಲಾಗಿದೆ. ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ.ಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು, ಸರಕಾರದ ಅಥವಾ ಸರಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರಕಾರಿ ಪ್ರಾಯೋಜಿತ, ಸರಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವೃತ್ತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಎಪಿಎಲ್ ಕುಟುಂಬಗಳಾಗಿರಲಿವೆ. ನಗರ ಪ್ರದೇಶಗಳಲ್ಲಿ ಒಂದು ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿ ಹೊಂದಿದ ಕುಟುಂಬವನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನ ಹೊಂದಿರುವ ಎಲ್ಲ ಕುಟುಂಬಗಳನ್ನು ಎಪಿಎಲ್ ಪಟ್ಟಿಗೆ ಸೇರಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಪಡಿತರ ಚೀಟಿಗಳ ಪರಿಷ್ಕರಣಾ ಕಾರ್ಯಕೈಗೊಂಡು 4,512 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಸರಕಾರದ ನಿಯಮ ಉಲ್ಲಂಘಿಸಿ ಪಡಿತರ ಚೀಟಿ ಪಡೆದವರನ್ನು ಇಲಾಖೆ ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ. ಅನರ್ಹರ ಕೈಗೆ ಬಿಪಿಎಲ್ ಕಾರ್ಡ್ ಸಿಗದ ಹಾಗೆ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ.
- ಮಂಟೆಸ್ವಾಮಿ, ಆಹಾರ ಇಲಾಖೆ ಜಂಟಿ ನಿರ್ದೇಶಕ