ಸತತ 'ಸಮಕಾಲೀನ-500 ಸಂಚಿಕೆ' ದಾಖಲಿಸಿದ ಶಿವಸುಂದರ್
ನಾಡಿನಲ್ಲಿ ಗಂಭೀರ ಚಿಂತನ ಬರಹಗಳನ್ನು ಬರೆಯುವ ಮತ್ತು 'ಸಮಕಾಲೀನ ಸಮಸ್ಯೆ'ಗಳನ್ನು ಕುರಿತು ಚಾನಲ್‌ಗಳಲ್ಲಿ ಚಿಂತನಾಶೀಲ ವಿಚಾರ ಮಂಡನೆ ಮಾಡುವುದು ಸುಲಭದ ಕಾರ್ಯವಲ್ಲ. ಅಲ್ಲಲ್ಲಿ ಬೆರಳೆಣಿಕೆಯ ಬರಹಗಾರರು, ಚಿಂತಕರು ಸಿಗಬಲ್ಲರು. ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ, ಬಾಯಿ ಮುಚ್ಚಿಸುವ ದುರುಳರು ದೇಶವನ್ನೇ ಆಕ್ರಮಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ನಿರ್ಭೀತಿಯಿಂದ ಮಾತಾಡುವುದು ಮತ್ತು ಬರೆಯುವುದು ಕಡು ಕಷ್ಟದ ಕೆಲಸವಾಗಿದೆ. ಅಂಥದ್ದರಲ್ಲೂ ಕೋಮುವಾದಿ ಶಕ್ತಿಗಳನ್ನು, ಪ್ರಜಾಪ್ರಭುತ್ವ ದ್ವೇಷಿಗಳನ್ನು, ಸರ್ವಾಧಿಕಾರಿಗಳನ್ನು ಮುಲಾಜಿಲ್ಲದೆ ಬರವಣಿಗೆ ಮತ್ತು ಮಾತುಗಳ ಮೂಲಕ ಜಾಡಿಸುವ ಅಪರೂಪದ ಪ್ರಗತಿಪರ ಚಿಂತಕ ನಮ್ಮೊಡನಿದ್ದಾರೆಂಬುದೇ ವಿಸ್ಮಯಕಾರಿ ಸಂಗತಿಯಾಗಿದೆ.
ಅಂತಹ ಅಚ್ಚರಿ ವ್ಯಕ್ತಿತ್ವದ ಚಿಂತಕರೇ ಶಿವಸುಂದರ್ ಎಂಬುದು ಹೆಮ್ಮೆಪಡುವ ವಿಚಾರ. ಸುಮಾರು 40 ವರ್ಷಗಳಿಂದ ಅವರನ್ನು ಗಮನಿಸುತ್ತಲೇ ಅವರ ಬರಹಗಳನ್ನು ಓದುತ್ತಾ, ಅವರ ಮಾತುಗಳನ್ನು ಕೇಳುತ್ತಾ ಬಂದಿದ್ದೇನೆ. ಹಾಗೆ ನೋಡಿದರೆ ಶಿವಸುಂದರ್ ಮತ್ತು ನನ್ನ ನಡುವೆ ಗಾಢವಾದ ಆಪ್ತತೆಯೇನೂ ಸಾಧ್ಯವಾಗಿಲ್ಲ. ಹಾಗೇ ನನಗಾಗಲಿ, ನನ್ನ ಸನಿಹದ ಪರಿಸರಕ್ಕಾಗಲಿ ಅವರು ಕಹಿಬೇವು ಕೂಡಾ ಆಗಿರುವುದಿಲ್ಲ. ಒಂದು ರೀತಿಯಲ್ಲಿ ಒಂದಿಷ್ಟು ಅಂತರದಲ್ಲೇ ಉಳಿದುಬಿಟ್ಟ ಆಪ್ತ ಬಂಧುವೇ ಆಗಿಬಿಟ್ಟಿದ್ದಾರೆ ಅನ್ನಬಹುದು.
ಈ ಹೊತ್ತಿನಲ್ಲಿ ಪುರೋಹಿತಶಾಹಿ-ಬಂಡವಾಳಶಾಹಿ-ಕೋಮುವಾದಿ-ಸಂವಿಧಾನ ವಿರೋಧಿ-ಪ್ರಜಾತಂತ್ರ ದ್ವೇಷಿಗಳನ್ನು ತಮ್ಮ ಬರವಣಿಗೆ ಮತ್ತು ಮಾತುಗಳಲ್ಲಿ ತೀವ್ರವಾಗಿ ಖಂಡಿಸುವ ಅಪರೂಪದ ಚಿಂತಕರಲ್ಲಿ ಶಿವಸುಂದರ್ ಪ್ರಮುಖರಾಗಿದ್ದಾರೆ. ಇಂದು ಭಾರತ ದೇಶ ಕೋಮುವಾದಿಗಳಷ್ಟೆ ಅಲ್ಲ, ಸರ್ವಾಧಿಕಾರಿಗಳ ಕೈಯ್ಯಲ್ಲಿ ದೇಶವಾಸಿಗಳು ನರಳುವಂತಾಗಿರುವುದನ್ನು ಮುಕ್ತವಾಗಿ ಹೇಳಿದರೂ ಅದನ್ನು ನಂಬಲು ಬಹಳಷ್ಟು ಜನ ಸಿದ್ದರಾಗುವುದಿಲ್ಲ. ಅದಕ್ಕೆ ಕಾರಣ ಆನೇಕ ಇರಬಹುದು. ದೇಶವಾಳುವ ಸರ್ವಾಧಿಕಾರಿಗಳ ಬಗ್ಗೆ ಮುಕ್ತವಾಗಿ ಹೇಳಲು ಮೀನ ಮೇಷವೆಣಿಸುವವರೇ ಹೆಚ್ಚಾಗಿದ್ದಾರೆ. ಅದರಿಂದ 'ದೇಶದ್ರೋಹಿ' ಪಟ್ಟ ಕಟ್ಟಿಯಾರೋ ಎಂಬ ಭಯಾತಂಕದಲ್ಲಿ ಮುಳುಗಿರುವವರೇ ಹೆಚ್ಚು. ಅವರ ಬಗ್ಗೆ ಒಳ್ಳೆಯದನ್ನು ಹೇಳಲು ಕೂಡಾ ಹಿಂಜರಿಯುವ ಪ್ರವೃತ್ತಿಯೂ ಬೆಳೆಯುತ್ತಿದೆ. 'ಅವರ ಪಾಡಿಗೆ ಅವರನ್ನು ಬಿಟ್ಟು ನಮ್ಮ ಪಾಡಿಗೆ ನಾವಿದ್ದುಬಿಡುವುದೇ ಕ್ಷೇಮ' ಎಂಬ ತೀರ್ಮಾನಕ್ಕೆ ಬಂದಿರುವಂತೆ ಭಾಸವಾಗುತ್ತದೆ.
ವಾಸ್ತವ ಸ್ಥಿತಿ ಹೀಗಿರುವಾಗ ಶಿವಸುಂದರ್ ಯಾವುದೇ ಒಂದು ದುರ್ಘಟನೆ, ಅನಾಹುತ, ದುರಂತ, ಬೆಳವಣಿಗೆ ಇತ್ಯಾದಿ ಸಂಭವಿಸಿದಲ್ಲಿ ಕ್ಷಣಾರ್ಧದಲ್ಲಿ ಸುದೀರ್ಘ ವಿಶ್ಲೇಷಣಾತ್ಮಕ ಬರಹ ಬರೆಯುವ, ಅಷ್ಟೇ ಮೊನಚಾದ ಪದಗಳಿಂದೊಡಗೂಡಿದಂತೆ ಮಾತಾಡುವ ಕ್ರಿಯಾಶೀಲತೆ ಕಂಡಾಗ ವಿಸ್ಮಯವಾಗುತ್ತದೆ. ಓದಿದ ಮೇಲೆ, ಮಾತು ಕೇಳಿದ ಮೇಲೆ ರೋಮಾಂಚನವಾಗುತ್ತದೆ. ತಕ್ಷಣವೇ ಮೆಚ್ಚುಗೆ ವ್ಯಕ್ತಪಡಿಸುವ, ಅಭಿನಂದನೆ ಹೇಳುವ ಮನಸ್ಸಾಗುತ್ತದೆ. ಆದರೆ, ಅದಕ್ಕೆ ಉದ್ಯುಕ್ತವಾಗಲು ಹೋಗದೆ ಮನದಲ್ಲೇ ಮಂಡಿಗೆ ಮೆಲ್ಲುತ್ತಾ ಸಮಾಧಾನಪಡುವ ಸ್ಥಿತಿಯೇ ಉಳಿದುಕೊಂಡಿದೆ. ಒಮ್ಮೊಮ್ಮೆ 'ಸೂಪರ್' ಅಂತಲೋ 'ಅದ್ಭುತ' ಅಂತಲೋ ಪ್ರತಿಕ್ರಿಯಿಸಿರುವುದನ್ನು ಬಿಟ್ಟು ಬೇರೇನೂ ಮಾಡಲಾಗಿಲ್ಲ.
ವಿಚಿತ್ರವೆಂದರೆ, ಕಠೋರ ನಿಷ್ಟುರದ ಬರಹಗಳನ್ನು ಧೈರ್ಯವಾಗಿ ಪ್ರಕಟಿಸುವ, ಮುಕ್ತ ಅಭಿಪ್ರಾಯದ ಮಾತುಗಳನ್ನು ಪ್ರಸಾರ ಮಾಡುವ ಮಾಧ್ಯಮಗಳಾದರೂ ದೇಶದಲ್ಲಿ ಉಳಿದಿವೆಯೆ ಎಂಬ ತಡಕಾಟ ನಡೆಸಿದರೆ ದಿಗ್ಭ್ರಮೆಯಾಗುತ್ತದೆ. ದೇಶದ ಉದ್ದಗಲಕ್ಕೂ ಪ್ರಸ್ತುತ ರಾಜಕೀಯ ಮೇಲಾಟವನ್ನು, ದುರುಳ ಕೋಮುವಾದಿ ಆಟ್ಟಹಾಸವನ್ನು, ಕಪಟ ದೇಶಪ್ರೇಮಿ ನಾಟಕ ಪ್ರದರ್ಶನವನ್ನು ಕೊಂಡಾಟ ಮಾಡುವವರೇ ತುಂಬಿಹೋಗಿರುವ ನಗ್ನಸತ್ಯ ತಾಂಡವವಾಡುತ್ತಿರುವುದನ್ನು ಕಂಡು ದಿಗ್ಮೂಢರಾಗುವ ಘೋರ ವ್ಯಾಪಿಸಿಕೊಂಡಿದೆ. ಇಂತಹ ಭಯಾನಕ ವಾತಾವರಣದಲ್ಲಿ ಶಿವಸುಂದರ್ ಅವರ ನಿಷ್ಠುರವಾದ ವಾಸ್ತವ ಸತ್ಯಕ್ಕೆ ಕನ್ನಡಿ ಹಿಡಿಯುವ ಬರಹಗಳು ಮತ್ತು ಚಿಂತನಾರ್ಹ ಮಾತುಗಳು ಸಹಸ್ರಾರು ಜನರಿಗೆ ಸುಲಭವಾಗಿ ತಲುಪುತ್ತಿರುವುದು ಕೂಡಾ ಸೋಜಿಗವುಂಟುಮಾಡುತ್ತದೆ. ಅಂತಹ ಎದೆಗಾರಿಕೆಯ ಮಾಧ್ಯಮಗಳು ಕೂಡಾ ನಮ್ಮ ನಡುವೆ ಉಳಿದು ಬೆಳೆಯುತ್ತಿರುವುದು ಹೆಮ್ಮೆಯ ವಿಚಾರ.
ಅಂತಹ ಮಾಧ್ಯಮಗಳೇ 'ವಾರ್ತಾ ಭಾರತಿ' ಎಂಬ ದಿನಪತ್ರಿಕೆ ಮತ್ತು 'ವಾರ್ತಾ ಭಾರತಿ ಚಾನಲ್' ಎಂದು ಹೇಳಲು ಹರ್ಷವಾಗುತ್ತದೆ. ಶಿವಸುಂದರ್ ಅವರ ಬರಹ ಮತ್ತು ಮಾತುಗಳಿಗೆ ಪ್ರಬಲ ವೇದಿಕೆಯಾಗಿ ಇವು ಲಭ್ಯವಾಗಿರುವುದು ಪ್ರಜಾಪ್ರಭುತ್ವ ಪ್ರೇಮಿಗಳಿಗೆ ಸಂತಸದಾಯಕ ಸಂಗತಿ, 'ವಾರ್ತಾ ಭಾರತಿ' ದಿನಪತ್ರಿಕೆಗೆ 22 ವರ್ಷಗಳ ಇತಿಹಾಸವಿದೆ. ಎರಡೂಕಾಲು ದಶಕಗಳ ಹಿಂದೆ ಮಂಗಳೂರಿನಲ್ಲಿ ಪಾರಂಭಗೊಂಡ ಈ ದಿನಪತ್ರಿಕೆ ಬೆಂಗಳೂರಿಗೂ ದಾಪುಗಾಲಿಟ್ಟು ಬಂದಿದ್ದು ಅದ್ಭುತ ಬೆಳವಣಿಗೆ. ಸದ್ಯದಲ್ಲೇ ರಾಜ್ಯದ ನಾಲ್ಕು ದಿಕ್ಕಿಗೂ ದಾಟುವ ಸಾಹಸ ಮಾಡಲಿರುವುದು ಕನ್ನಡ ಓದುಗರ ಪಾಲಿನ ಶುಭದಾಯಕ ಸಂಗತಿಯಾಗಿದೆ.
'ವಾರ್ತಾ ಭಾರತಿ ಚಾನಲ್' ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ಅಪರೂಪದ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಶಿವಸುಂದರ್ ಅವರ 'ಸಮಕಾಲೀನ'ದ 500ನೇ ಸಂಚಿಕೆಯ ನೇರ ಪ್ರಸಾರವನ್ನು ಅಲ್ಲಿಯೇ ನೋಡಬಹುದಿತ್ತು. ಅಲ್ಲಿಗೆ ರಾಜಧಾನಿಯ ಹಲವಾರು ಮುತ್ಸದ್ದಿ ಚಿಂತಕರು, ಮೇಧಾವಿ ಬರಹಗಾರರು, ದಿಟ್ಟ ಹೋರಾಟಗಾರರು ಬಂದಿದ್ದರೆಂಬುದು ಅಪರೂಪದ ಸಂಗತಿ. ಅವರಲ್ಲಿ ಬಹುತೇಕರು ಶಿವಸುಂದರ್ ಅವರ ಬರಹ ಮತ್ತು ಮಾತುಗಳ ಅಭಿಮಾನಿಗಳಾಗಿದ್ದವರು ಎಂಬುದು ಅದ್ಭುತವೇ ಸರಿ. ಬರೀ ಬರಹದ ಮೂಲಕ, ಮಾತು ಕೇಳುವ ಮೂಲಕ ಸಹಸ್ರಾರು ಜನರಿಗೆ ಇಷ್ಟವಾಗಿದ್ದ ಅವರನ್ನು ನೇರ ಕಾಣುವ, ಅವರೊಂದಿಗೆ ಸಂವಾದ ನಡೆಸುವ ಹಂಬಲ ತುಂಬಿಕೊಂಡು ಬಂದಿದ್ದವರೇ ಹೆಚ್ಚಿದ್ದುದು ವಿಶೇಷ.
ಅಂತಹದೊಂದು ಅಪೂರ್ವ ಅವಕಾಶವನ್ನು ಸೃಷ್ಟಿ ಮಾಡಿಕೊಟ್ಟಿದ್ದ 'ವಾರ್ತಾ ಭಾರತಿ'ಯನ್ನು ಅಭಿನಂದಿಸಲೇಬೇಕು. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿರುವ ದೇವರಾಜ ಅರಸು ಸಭಾಂಗಣ ತುಂಬಿಹೋಗಿತ್ತು. ಅಷ್ಟರಮಟ್ಟಿಗೆ ಶಿವಸುಂದರ್ ವಿಶಿಷ್ಟ-ವಿಭಿನ್ನ ಕುತೂಹಲಕರ ಚಿಂತಕರಾಗಿ ರೂಪುಗೊಂಡಿದ್ದಾರೆಂಬುದಕ್ಕೆ ಅದು ಸಾಕ್ಷಿ ಹೇಳುತ್ತಿತ್ತು. 500ನೇ ಸಂಚಿಕೆಯ ನೇರ ಪ್ರಸಾರದಲ್ಲಿ ಅವರು ಯಾವುದೇ ಅಳುಕಿಲ್ಲದೆ ಅರ್ಧ ಗಂಟೆಗೂ ಮೀರಿ ತಮ್ಮ ಎದೆಯಾಳದಲ್ಲಿ ಹುದುಗಿರುವ ಅಪರೂಪದ ಚಿಂತನೆಗಳನ್ನು ನೇರಾನೇರ ಪ್ರಸ್ತುತಪಡಿಸಿದ್ದು ಅಭೂತಪೂರ್ವ ಅನ್ನಿಸಿತು.
ಪ್ರಸ್ತುತದಲ್ಲಿ ದೇಶ ಕಂಡಿರುವ ಕೋಮು ರಾಜಕೀಯದ ದಿಕ್ಕು, ದಲಿತ-ಹಿಂದುಳಿದ-ಅಲ್ಪಸಂಖ್ಯಾತ ಜನವರ್ಗದ ಶೋಚನೀಯ ಸ್ಥಿತಿ. ಕೆಲವೇ ಕೆಲವು ಸಿರಿವಂತರ ಆರ್ಥಿಕ ಪೈಪೋಟಿಯಲ್ಲಿ ನಲುಗುತ್ತಿರುವ ದೇಶದ ಅರ್ಥ ವ್ಯವಸ್ಥೆ, ಕೋಮು ದ್ವೇಷ ಮತ್ತು ಸರ್ವಾಧಿಕಾರಿ ಧೋರಣೆಯ ರಾಜಕಾರಣ ಹೊರಟಿರುವ ಹಾದಿ, ಭವಿಷ್ಯದ ಭಾರತ ಏನೆಲ್ಲಾ ಅನಾಹುತ-ಆಪತ್ತುಗಳಿಗೆ ಸಾಕ್ಷಿಯಾಗಲಿದೆ, ಅಸ್ಥಿರ ಸ್ಥಿತಿ ತಲುಪುತ್ತಿರುವ ವಿಪಕ್ಷ ರಾಜಕಾರಣ, ಇದರಿಂದ ಭವಿಷ್ಯದ ಜನರ ಆತಂಕ-ತಲ್ಲಣ ಇತ್ಯಾದಿಗಳನ್ನು ಕುರಿತು ಮಾತಾಡಿದ ಶಿವಸುಂದರ್, ಅಭಿಪ್ರಾಯಗಳನ್ನು ಪ್ರತ್ಯಕ್ಷವಾಗಿ ಕೇಳಿದವರಿಗೆ ಈ ಚಿಂತಕ ಮಹಾಶಯ 500 ಅಲ್ಲ, ಸಹಸ್ರ ಸಂಖ್ಯೆಯ ಸಂಚಿಕೆಗಳಲ್ಲಿ ಹೀಗೇ ಮಾತಾಡುತ್ತಿರಲಿ ಎಂಬ ಆಶಯವಿತ್ತು.
ಆದಾದ ಮರು ಕ್ಷಣವೇ ನಾಡಿನ ಇನ್ನೊಬ್ಬ ವಿಶಿಷ್ಟ ಚಿಂತಕರಾದ ಡಾ. ಎ. ನಾರಾಯಣ ಪ್ರತ್ಯಕ್ಷರಾದರು. ಅವರು ಶಿವಸುಂದರ್ ಜೊತೆ 'ಸಂವಾದ' ನಡೆಸಿಕೊಡಲು ಒಪ್ಪಿ ಬಂದಿದ್ದರು. ಅವರು ಮೊದಲು ಮಂಗಳೂರು ಮೂಲದ ಕನ್ನಡ ಪತ್ರಿಕೆಗಳ ಬಗ್ಗೆ ವಿಶೇಷವಾಗಿ ಬೆಳಕು ಚೆಲ್ಲಿದರು. ಶತಮಾನದ ಹಿಂದೆ 'ಮಂಗಳೂರು ಸಮಾಚಾರ' ದಿನಪತ್ರಿಕೆಗೆ ಜೀವ ಕೊಟ್ಟ ಮಂಗಳೂರಿನಲ್ಲಿ ಇತ್ತಿತ್ತ ಯಾವ ಕನ್ನಡ ದಿನಪತ್ರಿಕೆಗಳೂ ಬಹಳ ವರ್ಷ ಜೀವಂತವಾಗಿ ಉಳಿಯಲಿಲ್ಲವೆಂಬ ಸತ್ಯ ಹೇಳುತ್ತಾ ಹೋದಾಗ ಅಚ್ಚರಿಯಾಯಿತು. ಅಲ್ಲಿ ಮಹತ್ವದ ಆಶಯ ತುಂಬಿಕೊಂಡು ಆರಂಭಗೊಂಡಿದ್ದ ನವಭಾರತ, ಮುಂಗಾರು, ಜನವಾಹಿನಿ ಮುಂತಾದವು ಬಹಳ ಬೇಗ ಸ್ತಬ್ದಗೊಂಡವು. ಆದರೆ, 'ವಾರ್ತಾ ಭಾರತಿ' ಎರಡು ದಶಕಗಳ ನಂತರವೂ ಗಟ್ಟಿಯಾಗಿ ಉಳಿದುಕೊಂಡು ಬಂದಿರುವುದನ್ನು ಉಲ್ಲೇಖಿಸುತ್ತಾ, ಅದು ರಾಜಧಾನಿ ಬೆಂಗಳೂರಿಗೆ ಬಂದು ಬೇರೂರಿರುವ, ಮುಂದೆ ರಾಜ್ಯದ ಇತರೆ ಪ್ರಮುಖ ನಗರಗಳಿಗೂ ವ್ಯಾಪಿಸಿಕೊಳ್ಳಲು ಸಿದ್ಧವಾಗಿರುವ ಸಂಗತಿಯನ್ನು ಹೊರಗೆಡಹಿದರು. ಯಾಕೆ ಕರಾವಳಿಯಲ್ಲಿ ಕನ್ನಡ ಪತ್ರಿಕೋದ್ಯಮದ ಅಸ್ತಿತ್ವ ಅಲುಗಾಡುತ್ತಿದೆಯೆಂಬುದನ್ನು ಹೇಳುತ್ತಾ 'ವಾರ್ತಾ ಭಾರತಿ ಚಾನಲ್' ಅಪರೂಪದ ಚಿಂತಕ ಶಿವಸುಂದರ್ ರ 500ನೇ ಸಂಚಿಕೆಯನ್ನು ಜನರ ಸಮ್ಮುಖದಲ್ಲಿ ನೇರ ಪ್ರಸಾರ ಮಾಡುವ ಸಾಹಸಕ್ಕೆ ಮುಂದಾಗಿರುವ ಬಗ್ಗೆ ಹೆಮ್ಮೆಪಟ್ಟರು.
ಆನಂತರ ಶಿವಸುಂದರ್ ಜೊತೆ 'ಸಂವಾದ' ನಡೆಸಿಕೊಟ್ಟರು. ತಾವೇ ಕೆಲವು ಪ್ರಶ್ನೆಗಳನ್ನು ಕೇಳುತ್ತಾ ಪರಿಹಾರ ರೂಪದ ಅಭಿಪ್ರಾಯ ಪಡೆದುಕೊಂಡರು. ಅದರ ಜೊತೆಗೆ ಸಭಾಂಗಣದಲ್ಲಿ ತುಂಬಿದ್ದ ಕುತೂಹಲಿಗರಿಗೂ 'ಸಂವಾದ' ನಡೆಸಲು ಅನುವು ಮಾಡಿಕೊಟ್ಟರು. ಹಾಗೆ ಸಂವಾದದಲ್ಲಿ ಭಾಗವಹಿಸಿದ್ದವರಲ್ಲಿ ಬಹುತೇಕರು ಶಿವಸುಂದರ್ ಅವರ 499 ಸಂಚಿಕೆಗಳಲ್ಲದಿದ್ದರೂ ಅನೇಕ ಸಂಚಿಕೆಗಳನ್ನು ಕುತೂಹಲಾಸಕ್ತಿಯಿಂದ ಕೇಳಿದ್ದವರಾಗಿದ್ದುದು ವಿಶೇಷ. ಅವರು ಪ್ರಸ್ತಾಪಿಸುತ್ತಿದ್ದ ಸಂಚಿಕೆಗಳ ವಿಷಯ-ವಿಶ್ಲೇಷಣೆ ಇತ್ಯಾದಿಗಳನ್ನು ಹೇಳಿಕೊಳ್ಳುತ್ತಿದ್ದಾಗ. ಇಷ್ಟೊಂದು ಗಂಭೀರ ಕೇಳುಗರು ಮತ್ತು ಓದುಗರು ಈ ಹೊತ್ತಿಗೂ ಉಳಿದುಕೊಂಡಿದ್ದಾರಲ್ಲ ಎಂಬ ಸಮಾಧಾನವಾಗುತ್ತಿತ್ತು. ಶಿವಸುಂದರ್ 500 ಸಂಚಿಕೆಗಳಲ್ಲಿ ಹೀಗೆ ಮಾತಾಡಿರುವುದು ಸಾಧಾರಣ ಸಂಗತಿಯಲ್ಲ, ಅದು ಐದಾರು ವರ್ಷಗಳಲ್ಲಿ ನಡೆದಿರುವ ಅಪರೂಪದ ಯಾನ. ಒಂದು ಚಾನಲ್ ಅಷ್ಟು ದೀರ್ಘ ಕಾಲ ಚಿಂತಕರೊಬ್ಬರನ್ನು ಬಳಸಿಕೊಂಡಿರುವುದು, ಹಾಗೆ ಅವಕಾಶ ನೀಡುವ ಚಾನಲ್ ಗೆ ಆ ಚಿಂತಕರು ಸ್ಪಂದಿಸುವ, ಸಹಕರಿಸುವ ಮನಸ್ಸು ಅಸಾಧಾರಣವಾದದ್ದು ಅನ್ನಲೇಬೇಕು. ಅದಕ್ಕಾಗಿ 'ವಾರ್ತಾ ಭಾರತಿ ಚಾನಲ್' ಮತ್ತು 'ಶಿವಸುಂದರ್' ಇಬ್ಬರನ್ನೂ ಅಭಿನಂದಿಸಬೇಕಾಗಿದೆ. ಚಾನಲ್ ಗಳ ಇತಿಹಾಸದಲ್ಲಿ ಇದೊಂದು ದಾಖಲಾರ್ಹ ಸಂಗತಿಯಾಗಿದೆ ಅಂತಲೂ ಹೇಳಬಹುದು.
ಶಿವಸುಂದರ್ ಆರಂಭದಲ್ಲಿ ಎಡ ಪಂಥೀಯ ಚಿಂತನೆಯ ಹೋರಾಟಗಾರರಾಗಿದ್ದವರು. ಆಗಾಗ ನಾವೆಲ್ಲ ಒಟ್ಟಿಗೇ ಸೇರಿ ಹೋರಾಟ ಮಾಡಿದ್ದ ನೆನಪಿದೆ. ಆದರೆ, ಅವರು ತೀವ್ರಗಾಮಿ ಹೋರಾಟದಲ್ಲಿ ಬಿರುಸಾಗಿದ್ದರಿಂದ ಬರೀ ಕನ್ನಡ ನಾಡು-ನುಡಿ-ನೆಲ-ಜಲ ವಿಚಾರಗಳಲ್ಲಿ ನ್ಯಾಯ ಪಡೆಯವ ನಮ್ಮ ಸೀಮಿತ ಹೋರಾಟಕ್ಕೆ ಅವರದ್ದು ನಿಲುಕದೆ ಹೋಗಿತ್ತು ಅನ್ನುವ ಭಾವ ನಮ್ಮನ್ನು ಕಾಡಿದ್ದುಂಟು. ಅದರಿಂದಾಗಿ ನಮ್ಮನ್ನು ಅಂತರದಲ್ಲಿರಿಸಿರಬೇಕು ಎಂದು ಭಾವಿಸಲಾಗಿತ್ತು. ಆ ಹೊತ್ತಿನ ಕಾಲಕ್ಕೆ ಹೋರಾಟಕ್ಕೆ ದೀರ್ಘವೆನಿಸುವ ಕರಪತ್ರ ಟಿಪ್ಪಣಿ, ವಿಚಾರ ಮನನಕ್ಕೆ ಕೈಪಿಡಿ ತಯಾರಿಕೆಗಳಲ್ಲಿ ಸಿದ್ಧಹಸ್ತರಾಗಿದ್ದ ಶಿವಸುಂದರ್ ಅವರೇ ಅದನ್ನು ಸಿದ್ಧಪಡಿಸುತ್ತಿರಬೇಕು. ಅಂತಹ ಟಿಪ್ಪಣಿ ಅಥವಾ ಕೈಪಿಡಿ ಬರವಣಿಗೆಯೂ ಸುಲಭ ಸಾಧ್ಯವಿರಲಿಲ್ಲ. ಅದಕ್ಕೆ ಅಧ್ಯಯನಪೂರ್ಣವಾದ ಜ್ಞಾನವಿರಲೇಬೇಕಾಗುತ್ತದೆ.
ಶಿವಸುಂದರ್ ಸಮಾಜವಾದ-ಕಮ್ಯುನಿಸಂ ಮತ್ತಿತರ ಇಸಂಗಳ ಕುರಿತಂತೆ ಧಂಡಿಯಾಗಿರುವ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿದ್ದಾರೆ. ಭಾರತದ ಪುರಾಣ-ಇತಿಹಾಸ ಮುಂತಾಗಿಯೂ ಓದಿಕೊಂಡಿರುವುದು ವ್ಯಕ್ತವಾಗುತ್ತದೆ. ವಿಶ್ವದ ಧರ್ಮಗಳ ಹುಟ್ಟು-ಬೆಳವಣಿಗೆಗಳ ಅರಿವು ಕೂಡಾ ಚೆನ್ನಾಗಿದೆ. ಭಾರತದ ಸ್ವಾತಂತ್ರ್ಯ ಚಳುವಳಿ ಸಂದರ್ಭದ ಇತಿಹಾಸವೂ ಅದ್ಭುತ ಜ್ಞಾನವನ್ನು ವಿಸ್ತರಿಸಬಲ್ಲದು. ಆಗ ಹಿಂದೂ ಮಹಾಸಭಾ ಆಗಲಿ, ಮುಸ್ಲಿಂ ಲೀಗ್ ಆಗಲಿ ಚಳುವಳಿಯಲ್ಲಿ ಭಾಗವಹಿಸದೆ ತಮ್ಮದೇ ಧರ್ಮಾಧಾರಿತ ಅಹವಾಲುಗಳನ್ನು ಬ್ರಿಟಿಷರ ಮುಂದಿಟ್ಟುಕೊಂಡು, ಅದನ್ನು ಪಡೆಯಲು ಕಾದು ಕುಳಿತಿದ್ದ ದುರುಳ ಇತಿಹಾಸ ಸಾಧಾರಣವಾದ್ದಲ್ಲ. ಆರ್ಥಿಕ ತಜ್ಞರೂ, ಮಹಾನ್ ಚಿಂತಕರೂ ಆಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ವಾದ ಬೇರೆಯೇ ಆಗಿದ್ದುದು ವಿಶೇಷ. ತಳ ಸಮುದಾಯಕ್ಕೆ ರಾಜಕೀಯ ಸ್ವಾತಂತ್ರ್ಯಕ್ಕೆ ಮುನ್ನ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ನ್ಯಾಯ ಬೇಕೆಂದು ಒತ್ತಾಯಿಸಿದ್ದರ ಹೊರತಾಗಿ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೆ ವಿರೋಧವಿದ್ದವರೇನೂ ಅಲ್ಲ.
ಇಂತಹದೆಲ್ಲಾ ವಿಚಿತ್ರ-ವಿಕ್ಷಿಪ್ತ ಇತಿಹಾಸವನ್ನೆಲ್ಲಾ ಶಿವಸುಂದರ್ ಚೆನ್ನಾಗಿ ಆರಿತಿದ್ದಾರೆ. ಬುದ್ಧನ ಕಾಲದ ಇತಿಹಾಸದಿಂದ ಹಿಡಿದು ಸಿಂಧೂ ನದಿ ನಾಗರೀಕತೆವರೆಗೂ ಗಂಭೀರ ಅಧ್ಯಯನದ ಮೂಲಕ ತಮ್ಮ ಜ್ಞಾನವನ್ನು ದೃಢಪಡಿಸಿಕೊಂಡಿದ್ದಾರೆ. ಅಂತಹದೆಲ್ಲಾ ಆಗಾಧವಾದ ಇತಿಹಾಸ, ವಿಶ್ವದ ವಿವಿಧ ದೇಶಗಳ ಕ್ರಾಂತಿ-ಸುಧಾರಣೆಗಳನ್ನೂ ಬಲ್ಲವರಾಗಿದ್ದಾರೆ. ಅದರಲ್ಲೂ ಭಾರತವು ಬುದ್ಧ-ಜೈನ-ಹಿಂದೂ-ಸಿಖ್-ಪಾರಸಿ-ಲಿಂಗಾಯತ ಮುಂತಾದ ಧರ್ಮಗಳಿಗೆ ತೌರು ನೆಲವೆಂಬುದನ್ನು ಆರಿತು. ಇಂದು ಆದೇ ದೇಶದಲ್ಲಿ ಕೋಮು ವಿಷ ಬೀಜ ಬಿತ್ತುತ್ತಾ, ಅಧಿಕಾರವನ್ನು ತಮ್ಮದಾಗಿಸಿಕೊಳ್ಳುತ್ತಾ, ಹಿಂದೂ ಹೆಸರಲ್ಲಿ ಮೇಲ್ಜಾತಿಯವರ 'ಜಾತಿ ಶ್ರೇಣೀಕೃತ' ಅಧಿಕಾರವನ್ನು ಅನುಭವಿಸುತ್ತಾ, ಇತರರನ್ನು ತಮ್ಮ ಕಾಲಾಳುಗಳನ್ನಾಗಿರಿಸಿಕೊಳ್ಳುವ ಷಡ್ಯಂತ್ರ ರೂಪಿಸಿರುವ ಬಗ್ಗೆಯೂ ಅರಿತವರಾಗಿದ್ದಾರೆ.
ಹಾಗಾಗಿಯೇ, ಒಂದು ವಿಷಯವನ್ನು ಕುರಿತು ಬರಹ ಸಿದ್ಧಪಡಿಸಬೇಕೆಂದುಕೊಂಡರೆ, ಯಾವುದೇ ಕಷ್ಟವಿಲ್ಲದೆ ದೀರ್ಘವಾದ-ಆಳವಾದ ಗಂಭೀರವಾದ ಲೇಖನವನ್ನು ಸಿದ್ಧಪಡಿಸುವ ಶಕ್ತಿ ಶಿವಸುಂದರ್ ಅವರಲ್ಲಿದೆ ಎಂಬುದನ್ನು ಕನ್ನಡನಾಡು ಅರ್ಥೈಸಿಕೊಂಡಿದೆ. ಅದರಿಂದಾಗಿಯೇ, ಯಾವುದಾದರೂ ಘಟನೆ, ಅನಾಹುತ, ಅಪತ್ತು ಘಟಿಸಿತೆಂದರೆ ತಕ್ಷಣ ಚಿಂತಕ ಶಿವಸುಂದರ್ ಏನು ಬರೆಯುತ್ತಾರೆ. ಹೇಗೆ ಮಾತಾಡುತ್ತಾರೆ ಎಂಬುದನ್ನು ತಿಳಿಯಲು ಹಾತೊರೆಯುತ್ತಾರೆ. ಜನರ ಈ ಬಗೆಯ ಹಾತೊರೆಯುವಿಕೆಯನ್ನು ಶಿವಸುಂದರ್ ಚೆನ್ನಾಗಿ ಬಲ್ಲವರಾಗಿರುವುದರಿಂದ ತಕ್ಷಣವೇ ಬರೆಯುತ್ತಾರೆ. ಅದು 'ವಾರ್ತಾ ಭಾರತಿ'ಯಲ್ಲಿ ಪ್ರಕಟವಾಗುತ್ತದೆ. ಅದರ ಜೊತೆಗೆ 'ವಾರ್ತಾ ಭಾರತಿ ಚಾನಲ್'ನಲ್ಲಿ ಮುಕ್ತವಾದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಅದೇ ವಿಚಾರಗಳೂ ವಾಟ್ಸಾಪ್ ಗ್ರೂಪ್ ಗಳಲ್ಲೂ ಹರಿದಾಡುತ್ತವೆ. ಅದನ್ನು ಸಹಸ್ರ ಸಂಖ್ಯೆಯಲ್ಲಿ ವೀಕ್ಷಕರು ನೋಡಿ ಮನನ ಮಾಡಿಕೊಳ್ಳುವುದುಂಟು.
ಶಿವಸುಂದರ್ ಬರೆದರೆಂದರೆ, ಮಾತಾಡಿದರೆಂದರೆ ಅದು ಕರಾರುವಕ್ಕಾಗಿರುತ್ತದೆ. ಅವರ ನಿಲುವು ಸರಿಯಾದುದಾಗಿರುತ್ತದೆಂಬ ಅಚಲ ವಿಶ್ವಾಸ ಹೊಂದಿರುವವರೇ ಹೆಚ್ಚಿದ್ದಾರೆ. ಶಿವಸುಂದರ್ ಕೂಡಾ ಎಂದೂ ಆ ಬಗೆಯ ನಂಬಿಕೆಗೆ ಚ್ಯುತಿ ಬರದಂತೆ ವಸ್ತುನಿಷ್ಠ ವಿಶ್ಲೇಷಣೆ ಮಾಡುವುದರಲ್ಲಿ ಪ್ರಾಮಾಣಿಕ ಚಿಂತನೆ ನಡೆಸುವವರಾಗಿರುವುದು ವಿಶೇಷವಾಗಿದೆ. ಅವರೆಂದೂ ತಾವು ಬರೆದಿದ್ದಕ್ಕೆ, ಮಾತಾಡಿದ್ದಕ್ಕೆ 'ಸ್ಪಷ್ಟಿಕರಣ' ಕೊಡುವ 'ವಿಷಾದ' ವ್ಯಕ್ತಪಡಿಸುವ ಪ್ರಮೇಯವನ್ನೇ ಸೃಷ್ಟಿಸಿರುವುದಿಲ್ಲ.
50 ಸಂವತ್ಸರಗಳನ್ನು ಕಂಡು ಮುಂದಡಿಯಿಟ್ಟಿರುವ ಶಿವಸುಂದರ್ ದೈಹಿಕವಾಗಿಯೂ ಯುವಕರಂತಿದ್ದಾರೆ. ಆದರೆ, ಮಾನಸಿಕವಾಗಿ ಪ್ರಬುದ್ಧ ವಯಸ್ಕರೇ ಆಗಿಬಿಟ್ಟಂತಿದ್ದಾರೆ. ಇಷ್ಟೆಲ್ಲಾ ಭಯಾನಕ ಸತ್ಯ ಹೇಳುವ, ಕಠೋರ ನಿಷ್ಟುರದ ವಿಶ್ಲೇಷಣೆ ಮಾಡಿ ಜನಸಾಮಾನ್ಯ ಓದುಗ-ಕೇಳುಗರನ್ನು ಜಾಗೃತಗೊಳಿಸುತ್ತಿರುವ ಈ ಜೀವ ಸ್ವಸ್ಥ ಮನಸ್ಥಿತಿಯ ಆರೋಗ್ಯದೊಡನೆ ನೂರು ವಸಂತ ಕಾಲ ಸಮಾಜ ಬಂಧುಗಳ ಚಿಂತನ ಸ್ವಾಸ್ಥ್ಯವನ್ನು ಕಾಪಾಡುತ್ತಿರಲೆಂದು ಹಾರೈಸುತ್ತೇನೆ.