ಜಾನಪದ ಗಾರುಡಿಗ ಬಾನಂದೂರು ಕೆಂಪಯ್ಯರಿಗೆ 75ರ ಸಂಭ್ರಮ
ಕನ್ನಡ ಜಾನಪದ ಪರಂಪರೆಯನ್ನು ತಮ್ಮ ವಿಶಿಷ್ಟ ಹಾಡುಗಾರಿಕೆ ಮೂಲಕ ಶ್ರೀಮಂತಗೊಳಿಸುತ್ತ, ಜಾನಪದ ಜಂಗಮನಾಗಿ ನಾಡಿನ ತುಂಬಾ ತಿರುಗಾಡುತ್ತಾ ಕನ್ನಡ ಮನಸ್ಸುಗಳನ್ನು ಪ್ರಭಾವಿಸಿದ ಅಪರೂಪದ ಜನಪದ ಪ್ರತಿಭೆ ಡಾ. ಬಾನಂದೂರು ಕೆಂಪಯ್ಯ. ರಾಮನಗರ ಜಿಲ್ಲೆಯ, ಬಿಡದಿ ಹೋಬಳಿಯ, ಬಾನಂದೂರು ಗ್ರಾಮದಲ್ಲಿ ತಮಟೆ, ನಗಾರಿ ನುಡಿಸುತ್ತಿದ್ದ ಜನಪದ ಕಲಾವಿದ ವೆಂಕಟಯ್ಯ ಹಾಗೂ ಜನಪದ ಗಾಯಕಿ ಹುಚ್ಚಮ್ಮ ದಂಪತಿಯ 8ನೇ ಮಗನಾಗಿ ಜನಿಸಿದ ಬಾನಂದೂರರು ನಮ್ಮ ನಾಡು ಕಂಡ ವಿಶಿಷ್ಟ ಜಾನಪದ ಗಾರುಡಿಗ.
ಜನಪದ ಕಲಾವಿದ ಕುಟುಂಬದ ಹಿನ್ನೆಲೆಯಿಂದ ಬಂದ ಬಾನಂದೂರರು, ಜಾನಪದ ಅಕಾಡಮಿ ಪ್ರಶಸ್ತಿ ಪಡೆದ ಒಡಹುಟ್ಟಿದ ಅಕ್ಕ ಸೋಬಾನೆ ಹೊನ್ನಕ್ಕನ ಹಾಡುಗಳನ್ನು ಕೇಳುತ್ತ ಬೆಳೆದವರು. ತಮಟೆ, ನಗಾರಿ ಚರ್ಮ ವಾದ್ಯಗಳನ್ನು ನುಡಿಸುತ್ತಿದ್ದ ಒಡಹುಟ್ಟಿದ ಅಣ್ಣ ನಗಾರಿ ಸಿದ್ದಯ್ಯ ಅವರು ಸಹ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡಮಿ ಪ್ರಶಸ್ತಿ ಪುರಸ್ಕೃತರು. ಬಾನಂದೂರು ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ಬಾನಂದೂರು ಕೆಂಪಯ್ಯ ಅವರು, ಬಿಡದಿಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು, ಬೆಂಗಳೂರಿನ ಮಲ್ಲೇಶ್ವರಂ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. ಆನರ್ಸ್ ಪದವಿಯನ್ನು ಹಾಗೂ 1984ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.
1980ರಲ್ಲಿ ಮೈಸೂರಿನ ಆಕಾಶವಾಣಿಯಲ್ಲಿ ಉದ್ಘೋಷಕರಾಗಿ, 1983ರಲ್ಲಿ ಧಾರವಾಡದ ಆಕಾಶವಾಣಿಯಲ್ಲಿ ಜಾನಪದ ಸಂಗೀತ ನಿರ್ಮಾಪಕರಾಗಿ ಸೇರ್ಪಡೆಗೊಂಡ ಇವರು ಮುದೋಳು, ಜಮಖಂಡಿ, ಬಾಗಲಕೋಟೆ, ಬಿಜಾಪುರ, ಮಹಾಲಿಂಗಪುರ ಮುಂತಾದ ಉತ್ತರ ಕರ್ನಾಟಕ ಭಾಗಗಳಲ್ಲಿ ಕೆಲಸ ಮಾಡುತ್ತ ಸಾವಿರಾರು ಜನ ಅಲಕ್ಷಿತ ಜನಪದ ಕಲಾವಿದರನ್ನು ಮೊತ್ತಮೊದಲ ಬಾರಿಗೆ ಆಕಾಶವಾಣಿಗೆ ಪರಿಚಯಿಸುವ ಮೂಲಕ ಜನಪದ ಗಾಯಕರಿಗೊಂದು ವೇದಿಕೆಯನ್ನು ಕಲ್ಪಿಸಿಕೊಟ್ಟರು.
ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ರಾಯಚೂರು, ಬೆಳಗಾಂ, ವಿಜಾಪುರ, ಬಾಗಲಕೋಟೆ, ಕಲಬುರಗಿ ಮುಂತಾದ ಜಿಲ್ಲೆಯ ಹಳ್ಳಿಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಜನಪದ ಕಲಾವಿದರನ್ನು ಗುರುತಿಸಿ ಆಕಾಶವಾಣಿಯ ಮೂಲಕ ಇಡೀ ನಾಡಿಗೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಯಕ್ಷಗಾನ, ತಾಳಮದ್ದಲೆ, ಸಂಪ್ರದಾಯ ಪದ, ಚೌಡಿಕೆ ಪದ, ಏಕತಾರಿ ಪದ, ಮೈಲಾರಲಿಂಗನ ಪದ, ಗೊಂದಲಿಗರ ಪದ, ಭಜನೆ ಪದ, ತತ್ವಪದ, ಪಾರಿಜಾತ ಪದ, ಕೋಲಾಟ ಪದ, ಹಂತಿ ಪದ, ದೇವರ ಪದ, ಲಾವಣಿ, ಗೀಗೀ ಪದ, ಹರದೇಸಿ-ನಾಗೇಸಿ ಪದ, ಡೊಳ್ಳಿನ ಪದ, ಗುಮುಟೆ ಪದ, ಹಾಲಕ್ಕಿ ಸುಗ್ಗಿ ಪದ ಮುಂತಾದ ಹಾಡುಗಾರಿಕೆಯವರನ್ನು ಗುರುತಿಸಿದರು. ಸಣ್ಣಾಟ-ದೊಡ್ಡಾಟಗಳಾದ ಸಂಗ್ಯಾ ಬಾಳ್ಯ, ಹೇಮರೆಡ್ಡಿ ಮಲ್ಲಮ್ಮ, ಶಿವಶಕ್ತಿ ವಾಗ್ವಾದ ಮುಂತಾದ ಪ್ರದರ್ಶನ ಕಲೆಗಳನ್ನು ನಾಡಿಗೆ ಪರಿಚಯಿಸಿದರು. ಹಲಗಿ ಮಜಲು, ಡೊಳ್ಳು, ಡೊಳ್ಳಿನ ಕೈಪೆಟ್ಟು, ಕರಡಿ ಮಜಲು, ಉದ್ದು ಗುಮುಟೆ, ದುಂಡು ಗುಮುಟೆ, ಕಣಿಯವಾದನ ಮುಂತಾದ ಚರ್ಮವಾದ್ಯ, ತಂತಿವಾದ್ಯ, ಊದುವಾದ್ಯ, ಚೌಡಿಕೆ ವಾದ್ಯಗಳನ್ನು ಆಕಾಶವಾಣಿಯಲ್ಲಿ ಪ್ರದರ್ಶಿಸುವ ಮೂಲಕ ಬೆಳಕಿಗೆ ತಂದರು.
ಜನಮಾನಸದಿಂದ ಮರೆತು ಹೋಗಿದ್ದ, ಜಗತ್ತಿನ ಅತಿದೊಡ್ಡ ವಾದ್ಯವೆಂದೇ ಹೆಸರಾಗಿರುವ, ಪುರಾತನ ಜನಪದ ಚರ್ಮವಾದ್ಯವಾದ ಜಗ್ಗಲಿಗೆಯನ್ನು 21ನೇ ಶತಮಾನದಲ್ಲಿ ಮೊತ್ತಮೊದಲಿಗೆ ನಾಡಿಗೆ ಪರಿಚಯಿಸಿದ ಕೀರ್ತಿ ಬಾನಂದೂರರಿಗೆ ಸಲ್ಲುತ್ತದೆ. ವಿಶೇಷವಾದ ಈ ಜಗ್ಗಲಿಗೆ ವಾದ್ಯವನ್ನು ಕುರಿತು ಕೆಂಪಯ್ಯನವರು ಮೊತ್ತಮೊದಲಿಗೆ ಪತ್ರಿಕೆಯಲ್ಲಿ ಲೇಖನ ಬರೆಯುವ ಮೂಲಕ ಜಾನಪದ ವಿದ್ವತ್ ಲೋಕಕ್ಕೆ ಈ ವಾದ್ಯವನ್ನು ಪರಿಚಯಿಸಿದರು. ಮೊತ್ತಮೊದಲಿಗೆ ಮೈಸೂರು ದಸರಾದಲ್ಲಿ ಜಗ್ಗಲಿಗೆ ವಾದ್ಯ ಪ್ರದರ್ಶಿಸುವಂತೆ ಮಾಡಿದ ಕೆಂಪಯ್ಯನವರು ಈ ಕಲಾವಿದರಿಗೆ ಪ್ರಶಸ್ತಿ ದೊರಕುವಂತೆ ಮಾಡಿದರು.
ಧಾರವಾಡ, ಗುಲ್ಬರ್ಗಾ, ಮಂಗಳೂರು, ಬೆಂಗಳೂರು, ಕೇರಳದ ತಿರುವನಂತಪುರದ ಆಕಾಶವಾಣಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಕೆಂಪಯ್ಯನವರು, 1986ರಲ್ಲಿ ತಿರುವನಂತಪುರದ ದೂರದರ್ಶನ ಕೇಂದ್ರದ ಸಹಾಯಕ ಕೇಂದ್ರ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಭಾರತ, ಅಮೆರಿಕ, ಇಂಗ್ಲೆಂಡ್ ಮುಂತಾದ ದೇಶ ವಿದೇಶಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನಪದ ಗೀತೆ, ತತ್ವಪದಗಳನ್ನು ಹಾಡುವ ಮೂಲಕ ಜನಪ್ರಿಯರಾಗಿದ್ದಾರೆ. ಅಮೆರಿಕದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಎರಡು ಬಾರಿ ಭಾಗವಹಿಸುವ ಮೂಲಕ ಸಾಗರದಾಚೆಗೂ ಕೂಡ ತಮ್ಮ ಗಾಯನ ಪ್ರತಿಭೆಯನ್ನು ಮೆರೆದಿದ್ದಾರೆ.
ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡಮಿಯ ಸದಸ್ಯರಾಗಿ, ಕರ್ನಾಟಕ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ, ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾಗಿ, ಕರ್ನಾಟಕ ಸರಕಾರದ ಜಾನಪದ ಜಾತ್ರೆ ಯೋಜನೆಯ ಅಧ್ಯಕ್ಷರಾಗಿ ಹಾಗೂ ಕರ್ನಾಟಕ ಜಾನಪದ ಅಕಾಡಮಿಯ ಅಧ್ಯಕ್ಷರಾಗಿ ಜಾನಪದ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಜನಪದರ ಮೂಲ ಧಾಟಿಯನ್ನು ಅನುಸರಿಸಿ ಹಾಡುವ ಅಪ್ಪಟ ಜನಪದ ದೇಸೀ ಪ್ರತಿಭೆ ಎಂಬುದಾಗಿ ನಾಡಿನಾದ್ಯಂತ ಚಿರಪರಿಚಿತರಾಗಿರುವ ಕೆಂಪಯ್ಯನವರು ಬಣ್ಣದ ಬಳೆಗಾರ; ಮೊಗ್ಗಾಗಿ ಬಾರೊ ತುರುಬಿಗೆ; ಚೆಂದುಳ್ಳಿ ಪದವ ಕಲಿಸವ್ವ ಜನಪದ ಗೀತೆ; ಸಂಗಾತಿ ಕರೆವ ದನಿ ಚೆಂದ-ಧ್ವನಿ ಸುರುಳಿಯನ್ನು ಹೊರತಂದಿದ್ದಾರೆ.
ಜನಪದ ಗಾಯನ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆ ಹಾಗೂ ಸಾಧನೆಯನ್ನು ಪರಿಗಣಿಸಿ ನಾಡಿನ ಅನೇಕ ಸಂಸ್ಥೆಗಳು ‘ಜಾನಪದ ಕೋಗಿಲೆ’; ‘ಜಾನಪದ ಗಾನಗಂಧರ್ವ’; ‘ಜಾನಪದ ಸಂಗೀತ ಲೋಕದ ಧ್ರುವತಾರೆ’(ಪಂಡಿತ ಪುಟ್ಟರಾಜ ಗವಾಯಿಗಳಿಂದ); ‘ಚೈತ್ರಮಾಸದ ಕೋಗಿಲೆ’(ಸಿದ್ಧಗಂಗ ಮಠ) ಮುಂತಾದ ಬಿರುದುಗಳನ್ನು ನೀಡಿ ಗೌರವಿಸಿ ಸನ್ಮಾನಿಸಿವೆ. ಕರ್ನಾಟಕ ಸರಕಾರದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(1985); ಡಾ. ಬಿ. ಆರ್. ಅಂಬೇಡ್ಕರ್ ಪ್ರಶಸ್ತಿ(1986), ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿ ಜೊತೆಗೆ, ಕೆಂಪೇಗೌಡ ಪ್ರಶಸ್ತಿ(ಬೆಂಗಳೂರು ಮಹಾನಗರ ಪಾಲಿಕೆ), ಆರ್ಯಭಟ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ(ಆದಿಚುಂಚನಗಿರಿ ಮಠ), ಕಾಡಿನ ಹಕ್ಕಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಇವರ ಜನಪದ ಪ್ರತಿಭೆಗೆ ಸಂದ ಪುರಸ್ಕಾರಗಳಾಗಿವೆ.
ಜನಪದ ಗಾಯಕ ಮಾತ್ರವಾಗಿರದ ಕೆಂಪಯ್ಯನವರು ಲೇಖಕ ಕೂಡ ಹೌದು. ವಿದ್ಯಾರ್ಥಿ ದಿಸೆಯಲ್ಲಿಯೇ ಜನಪದ ಕಥೆ, ಸಣ್ಣ ಕಥೆ(ಉದಾ: ಬಿಟ್ಟಿಗೂಸ, ಕವನಾಪುರದೊಳಗೆ, ಘಾಟು ಗಮಲ)ಗಳನ್ನು ರಚಿಸಿದ್ದಾರೆ. ಸ್ವರಚಿತ ಕವಿತೆಗಳನ್ನು ಹಾಡುತ್ತಿದ್ದ ಇವರು ‘ನನ್ನ ಈ ನೆಲದಲ್ಲಿ’ ಕವನ ಸಂಕಲನವನ್ನು ಹಾಗೂ ‘ಬಯಲು ಸೀಮೆಯ ಜಾನಪದ ಕಥೆಗಳು’ ಸಂಕಲನವನ್ನು ಪ್ರಕಟಿಸಿದ್ದಾರೆ. ಜನಪದ ಸಂಗೀತ, ಗಾಯನ, ವಾದ್ಯಗಳ ಬಗೆಗೆ ಸದಾ ಕೌತುಕತೆಯನ್ನು ಉಳಿಸಿಕೊಂಡಿರುವ ಕೆಂಪಯ್ಯನವರು ‘ಕರ್ನಾಟಕದ ದಲಿತ ಜನಪದ ಸಂಗೀತ’ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸಂಶೋಧನಾ ಮಹಾಪ್ರಬಂಧವನ್ನು ಸಲ್ಲಿಸಿ 2000ರಲ್ಲಿ ಡಿ.ಲಿಟ್. ಪದವಿಯನ್ನು ಪಡೆದಿರುತ್ತಾರೆ. ಸುಡುಗಾಡು ಸಿದ್ಧರ ಬಗೆಗೆ ಜನಾಂಗೀಯ ಅಧ್ಯಯನ ನಡೆಸಿರುವ ಇವರು ‘ಸುಡುಗಾಡು ಸಿದ್ಧರು’ ಎಂಬ ಸಂಶೋಧನಾತ್ಮಕ ಕೃತಿಯನ್ನು ಹೊರತಂದಿದ್ದಾರೆ. ಗುರುರಾಜ ಹೊಸಕೋಟೆ ಅವರ ನಿರ್ದೇಶನದ ‘ಬಂಗಾರದ ಗೂಳಿ’ ಚಲನಚಿತ್ರಕ್ಕೆ ಗುಣಸಿಂಗ್ ಅವರ ಜೊತೆ ಸೇರಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿರುವ ಇವರು ‘ಜಿಪ್ಸಿಗಳು’ ಎನ್ನುವ ರಶ್ಯನ್ ನಾಟಕಕ್ಕೂ ಸಂಗೀತ ನಿರ್ದೇಕರಾಗಿ ಕೆಲಸ ಮಾಡಿದ್ದಾರೆ. ‘‘ತನುವಿನೊಳಗನುದಿನವಿದ್ದು ಎನ್ನ ಮನಕೊಂದ ಮಾತ ಹೇಳದೆ ಹೋದೆ ಹಂಸ’’ ಕೆಂಪಯ್ಯ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟ ತತ್ವಪದ.
ಕನ್ನಡ ಜಾನಪದ ಲೋಕ ಕಂಡ ಅಪರೂಪದ ದೇಸೀ ಮಟ್ಟಿನ ಜನಪದ ಹಾಡುಗಾರರಾದ ಡಾ. ಬಾನಂದೂರು ಕೆಂಪಯ್ಯ ಅವರು 2025 ಜೂನ್ 14ಕ್ಕೆ 75ನೇ ವಸಂತಕ್ಕೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಂವಿಧಾನ ಬಳಗವು ದಿನಾಂಕ: 14.06.2025 ರಂದು ವಿಶಿಷ್ಟ ಸಮಾರಂಭವನ್ನು ಆಯೋಜಿಸಿದೆ. ಬಾನಂದೂರರು ಜಾನಪದ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ‘ನೆಲದ ನುಡಿಕಾರ ಡಾ. ಬಾನಂದೂರು ಕೆಂಪಯ್ಯ’ ಎಂಬ ಬಿರುದು ನೀಡಿ ಗೌರವಿಸುತ್ತಿದೆ.