×
Ad

‘ವಿಕ್ಟೋರಿಯಾ’ ಎಂಬ ಅವ್ಯವಸ್ಥೆಯುಳ್ಳ ಸರಕಾರಿ ಆಸ್ಪತ್ರೆ

ದಾಖಲಾತಿ ವಿಳಂಬ, ಸಕಾಲಕ್ಕೆ ಸಿಗದ ಚಿಕಿತ್ಸಾ ವರದಿ, ಸಿಬ್ಬಂದಿಯ ಉಡಾಫೆ

Update: 2025-11-28 15:06 IST

ಬೆಂಗಳೂರು, ನ.27: ರಾಜ್ಯದ ಅತಿದೊಡ್ಡ ಸರಕಾರಿ ಆಸ್ಪತ್ರೆಯಾದ ‘ವಿಕ್ಟೋರಿಯಾ ಆಸ್ಪತ್ರೆ’ಯಲ್ಲಿ ಜನಸಾಮಾನ್ಯರಿಗೆ ಸರಿಯಾಗಿ ಸ್ಪಂದನೆ ಇಲ್ಲದಂತಾಗಿದ್ದು, ದಾಖಲಾತಿ ಹಾಗೂ ಚಿಕಿತ್ಸೆಗಾಗಿ ಇಲ್ಲಿನ ರೋಗಿಗಳು ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ.

ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಗೆ ಪ್ರತಿನಿತ್ಯ ಸರಾಸರಿ 500ರಿಂದ 600 ಒಳರೋಗಿಗಳು ಹಾಗೂ 1,000ದಿಂದ 1,200 ಹೊರರೋಗಿಗಳು ರಾಜ್ಯದ ವಿವಿಧೆಡೆಯಿಂದ ಬರುತ್ತಾರೆ. ಆದರೆ, ಇಲ್ಲಿಗೆ ಬರುವ ರೋಗಿಗಳು ಆಸ್ಪತ್ರೆಗೆ ದಾಖಲಾಗಬೇಕಾದಲ್ಲಿ ದಿನವಿಡೀ ಕಾಯಬೇಕಾಗುತ್ತದೆ. ತುರ್ತು ಚಿಕಿತ್ಸೆ ಅಗತ್ಯವಿದ್ದರೆ ಮಾತ್ರ ಕೂಡಲೇ ದಾಖಲಿಸಿಕೊಳ್ಳುತ್ತಾರೆ. ಸ್ಕ್ಯಾನಿಂಗ್, ರಕ್ತಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳು ವಿಳಂಬವಾಗುತ್ತಿವೆ. ಹೀಗಾಗಿ, ಖಾಸಗಿ ಪ್ರಯೋಗಾಲಯಗಳಿಗೆ ತೆರಳಬೇಕಾದ ಪರಿಸ್ಥಿತಿಯಿದೆ. ವಾರ್ಡ್‌ಗಳಿಗೆ ಬರುವ ಸಿಬ್ಬಂದಿ ಅನಗತ್ಯವಾಗಿ ರೇಗಾಡುತ್ತಾರೆ. ಒಪಿಡಿ ವಿಭಾಗದಲ್ಲಿ ವಿನಾಕಾರಣ ತಡ ಮಾಡುತ್ತಾರೆ. ಹೆಚ್ಚು ಪ್ರಶ್ನಿಸಿದರೆ ಸಂಬಂಧಿಸಿದ ವೈದ್ಯರೇ ಇಲ್ಲ ಎಂಬ ಕಾರಣ ಕೊಡುತ್ತಾರೆ ಎನ್ನುವುದು ಇಲ್ಲಿನ ರೋಗಿಗಳ ದೂರು.

‘ತಿಂಗಳಾದರೂ ರಕ್ತಪರೀಕ್ಷೆ ವರದಿ ಸಿಕ್ತಿಲ್ಲ..’

ಆಸ್ಪತ್ರೆಯಲ್ಲಿ ಒಂದು ತಿಂಗಳಾದರೂ ರಕ್ತಪರೀಕ್ಷೆ ವರದಿ ಸಿಗುತ್ತಿಲ್ಲ. ರಕ್ತ ಕೊಟ್ಟರೂ ಪ್ರಯೋಗಾಲಯಕ್ಕೆ ಕಳುಹಿಸದೇ, ಗುಡುಸಾಗಿದೆ ಎಂದು ಮತ್ತೆ ಮತ್ತೆ ರಕ್ತಬೇಕೆಂದು ಸಿಬ್ಬಂದಿ ಹೇಳುತ್ತಾರೆ. 4-5 ಬಾರಿ ರಕ್ತ ಕೊಟ್ಟರೂ ಸಹ ವರದಿ ಬರಲ್ಲ. ರಕ್ತಪರೀಕ್ಷೆ ವರದಿ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂಬುದು ರೋಗಿಗಳ ಆರೋಪವಾಗಿದೆ.

ರಕ್ತ ತೆಗೆದುಕೊಂಡ ವೈದ್ಯಕೀಯ ಸಿಬ್ಬಂದಿ ಪ್ರಯೋಗಾಲಯಕ್ಕೆ ಕಳಿಸುವುದು ತಡವಾಗುತ್ತಿದೆ. ಹಾಗಾಗಿ ರಕ್ತ ಹೆಪ್ಪುಗಟ್ಟಿ ವರದಿ ಬರುತ್ತಿಲ್ಲ. ವಿಕ್ಟೋರಿಯಾದಂಥ ದೊಡ್ಡ ಆಸ್ಪತ್ರೆಯಲ್ಲೇ ಸಮಯಕ್ಕೆ ಸರಿಯಾಗಿ ರಕ್ತ ಪರೀಕ್ಷೆ ವರದಿ ಸಿಗುವುದಿಲ್ಲವೆಂದರೆ ಹೇಗೆ? ಲೋಪದೋಷಗಳು ಇದ್ದರೆ ಆಸ್ಪತ್ರೆ ಆಡಳಿತ ಮಂಡಳಿ ಸರಿಪಡಿಸಬೇಕು. ರಕ್ತ ಪರೀಕ್ಷೆ ವರದಿಯನ್ನು ಬೇಗ ಸಿಗುವಂತೆ ಮಾಡಬೇಕು ಎನ್ನುವುದು ರೋಗಿಗಳ ಆಗ್ರಹವಾಗಿದೆ.

ಕೋತಿ, ಇಲಿ, ಜಿರಳೆಗಳ ಕಾಟ:

ಆಸ್ಪತ್ರೆಯ ಸಿ ಬ್ಲಾಕ್‌ನಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದೆ. ರೋಗಿಗಳಿಗೆ ತಂದಿರುವ ಹಣ್ಣುಹಂಪಲು, ತಿಂಡಿ,ತಿನಿಸುಗಳನ್ನು ಹೊತ್ತೊಯ್ಯುತ್ತವೆ. ಇಲ್ಲಿ ಕೋತಿಗಳಷ್ಟೇ ಅಲ್ಲದೆ, ಜಿರಳೆ, ಇಲಿಗಳ ಕಾಟವೂ ಇದೆ. ಆಸ್ಪತ್ರೆಯ ಕೆಲವು ವಾರ್ಡ್, ಶೌಚಾಲಯಗಳಲ್ಲಿ ಇಲಿ, ಜಿರಳೆಗಳು ಹೆಚ್ಚಿವೆ. ಶೌಚಾಲಯಗಳ ಸ್ಥಿತಿಯಂತೂ ಹೇಳಲಸಾಧ್ಯ ಸ್ಥಿತಿ. ನಾವು ಕಾಯಿಲೆಯನ್ನು ನಿವಾರಿಸಿಕೊಂಡು ಹೋಗುತ್ತಿದ್ದೇವೋ, ಕಾಯಿಲೆ ತೆಗೆದುಕೊಂಡು ಹೋಗುತ್ತಿದ್ದೇವೋ ಗೊತ್ತಾಗುತ್ತಿಲ್ಲ. ಆಸ್ಪತ್ರೆಯೇ ರೋಗಗ್ರಸ್ಥವಾದರೆ ನಮ್ಮ ಪಾಡೇನು..? ಎಂಬುದು ಇಲ್ಲಿನ ರೋಗಿಗಳ ಪ್ರಶ್ನೆಯಾಗಿದೆ.

‘ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದರು. ಈ ವೇಳೆ, ರೋಗಿಗಳು ಯಾವುದೇ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಿ. ರೋಗಿಗಳ ಪರಿಸ್ಥಿತಿ ಕೈಮೀರಿದೆ ಎಂದು ದಾಖಲು ಮಾಡಿಕೊಳ್ಳದೆ ಇರಬೇಡಿ ಎಂದು ಆಸ್ಪತ್ರೆಯ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದರೂ, ಸಹ ಸರಿಯಾದ ರೀತಿಯಲ್ಲಿ ಪಾಲನೆ ಆಗುತ್ತಿಲ್ಲ’ ಎಂಬುದು ತುಮಕೂರಿನ ರಮೇಶ್ ದೂರಿದರು.

ಆಸ್ಪತ್ರೆಯಲ್ಲಿದ್ದಾರೆ 500 ವೈದ್ಯರು

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಕಷ್ಟು ವೆಂಟಿಲೇಟರ್‌ಗಳು, ತರಬೇತಿ ಪಡೆದ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಯೊಂದಿಗೆ 20 ಹಾಸಿಗೆಗಳ ಐಸಿಯು ಇದೆ. ರೋಗಿಗಳಿಗೆ ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುವ ಪರವಾನಿಗೆ ಪಡೆದ ರಕ್ತನಿಧಿ ಕೇಂದ್ರವಿದೆ. ಸುಮಾರು 530 ಸಾಮಾನ್ಯ ಹಾಸಿಗೆಗಳಿವೆ. ಟ್ರಾಮಾ ಕೇರ್ ಕೇಂದ್ರದಲ್ಲಿ ಸುಮಾರು 134 ಸಾಮಾನ್ಯ ಹಾಸಿಗೆಗಳು, 36 ಐಸಿಯು ಹಾಸಿಗೆಗಳಿವೆ. ಯಕೃತ್ತಿನ ಕಸಿ(ಲಿವರ್ ಟ್ರಾನ್ಸಾಪ್ಲಾಂಟೇಷನ್) ಚಿಕಿತ್ಸೆಗೆ 150 ಹಾಸಿಗೆಗಳಿದ್ದು, ಆಸ್ಪತ್ರೆಯಲ್ಲಿ ಒಟ್ಟು 500 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.

ವೈದ್ಯರಿಂದ ಸಮಸ್ಯೆ ಇಲ್ಲ, ಉತ್ತಮ ಚಿಕಿತ್ಸೆ ಕೊಡುತ್ತಾರೆ. ಆದರೆ, ಇಲ್ಲಿ ಇತರ ಸಿಬ್ಬಂದಿಯವರದ್ದೇ ರಾಜ್ಯಭಾರ ಆಗಿದೆ. ಒಪಿಡಿ ವಿಭಾಗದಲ್ಲಿ ರೋಗಿಗಳಿಗೆ ಸಿಬ್ಬಂದಿ ನಿಂದಿಸುತ್ತಾರೆ, ರೇಗಾಡುತ್ತಾರೆ. ನೋವು ತಾಳದೆ ಬೇಗ ದಾಖಲಿಸಿಕೊಳ್ಳಿ ಎಂದರೆ ವೈದ್ಯರೇ ಬಂದಿಲ್ಲ ಎಂದು ಸುಳ್ಳು ಹೇಳುತ್ತಾರೆ. ದಿನವಿಡೀ ಕಾಯಬೇಕಾದ ಪರಿಸ್ಥಿತಿಯಿದೆ. ದೂರ ಊರುಗಳಿಂದ ಬಂದವರಿಗೆ ಸಮಸ್ಯೆ ಆಗುತ್ತಿದೆ.

 -ಮದನ್‌ಕುಮಾರ್, ಮಂಗಳೂರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಕ್ಯಾಂಟೀನ್‌ನಲ್ಲಿ ಊಟ-ತಿಂಡಿಯ ದರ ಕಡಿಮೆ ಇದ್ದರೂ ಗುಣಮಟ್ಟ ಇಲ್ಲ. ಬಿಸಿನೀರು ಸಿಗುವುದಿಲ್ಲ. ಹೊರಗಡೆ ತೆರಳಿ ಹೆಚ್ಚು ಹಣವನ್ನು ಕೊಟ್ಟು ಊಟ-ತಿಂಡಿಯನ್ನು ಮಾಡುವುದು ಕಷ್ಟ. ವಾರಗಟ್ಟಲೆ ಆಸ್ಪತ್ರೆಯಲ್ಲೇ ಇರಬೇಕಾದ ಸನ್ನಿವೇಶದಲ್ಲಿ ರೋಗಿಗಳ ಕಡೆಯವರಿಗೆ ಮಲಗುವುದಕ್ಕೂ ತೊಂದರೆ.

-ಸವಿತಾ, ದಾವಣಗೆರೆ

1897ರಲ್ಲಿ ಮೈಸೂರಿನ ರಾಜಪ್ರತಿನಿಧಿ ಕೆಂಪನಂಜಮ್ಮಣ್ಣಿ ಅಡಿಪಾಯ..!

ವಿಕ್ಟೋರಿಯಾ ರಾಣಿಯ 60 ವರ್ಷಗಳ ಆಳ್ವಿಕೆಯ ಸ್ಮರಣಾರ್ಥವಾಗಿ ಮೈಸೂರಿನ ಅಂದಿನ ಮಹಾರಾಣಿ ರಾಜಪ್ರತಿನಿಧಿಯಾಗಿದ್ದ ಕೆಂಪನಂಜಮ್ಮಣ್ಣಿ ಅವರು 1897ರ ಜೂನ್ 22 ರಂದು ವಿಕ್ಟೋರಿಯಾ ಆಸ್ಪತ್ರೆಗೆ ಅಡಿಪಾಯ ಹಾಕಿದರು. 1900ರ ಡಿಸೆಂಬರ್ 8ರಂದು ಅಂದಿನ ವೈಸ್‌ರಾಯ್ ಲಾರ್ಡ್ ಕರ್ಜನ್ ಅವರು ಆಸ್ಪತ್ರೆಯನ್ನು ಉದ್ಘಾಟಿಸಿದ್ದರು. ಆಗ 140 ಹಾಸಿಗೆಗಳನ್ನು ಈ ಆಸ್ಪತ್ರೆ ಒಳಗೊಂಡಿತ್ತು. ಇದು ಈಗ ಏಕಕಾಲದಲ್ಲಿ 1,000ಕ್ಕೂ ಹೆಚ್ಚು ರೋಗಿಗಳಿಗೆ ಅವಕಾಶ ಕಲ್ಪಿಸುವ ಭಾರತದ ಎರಡನೇ ಅತಿದೊಡ್ಡ ಆಸ್ಪತ್ರೆಯಾಗಿದೆ. ಇದು ಬೋಧನಾ ಆಸ್ಪತ್ರೆಯಾಗಿದ್ದು, ಭಾರತದ ಪ್ರಮುಖ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಲಗತ್ತಿಸಲಾಗಿದೆ. ಔಷಧ, ಶಸ್ತ್ರಚಿಕಿತ್ಸೆ, ಮೂಳೆಚಿಕಿತ್ಸೆ, ಚರ್ಮರೋಗ ಶಾಸ್ತ್ರ, ಮನೋವೈದ್ಯಶಾಸ್ತ್ರ, ರೇಡಿಯಾಲಜಿ ಮತ್ತು ರೇಡಿಯೊಥೆರಪಿ, ಫಿಸಿಯೋಥೆರಪಿ, ಫೋರೆನ್ಸಿಕ್ ಮೆಡಿಸಿನ್ ಸೂಪರ್ ಸ್ಪೆಷಾಲಿಟಿಗಳಾದ ಪ್ಲಾಸ್ಟಿಕ್ ಸರ್ಜರಿ, ಸರ್ಜಿಕಲ್ ಮತ್ತು ಮೆಡಿಕಲ್ ಗ್ಯಾಸ್ಟ್ರೋ ಎಂಟರಾಲಜಿ, ನರವಿಜ್ಞಾನ, ನರಶಸ್ತ್ರಚಿಕಿತ್ಸೆ, ಹೃದ್ರೋಗ ಮತ್ತು ಮೂತ್ರಶಾಸ್ತ್ರ ಸೇರಿದಂತೆ ಹಲವು ವಿಭಾಗಗಳು ಆಸ್ಪತ್ರೆಯಲ್ಲಿವೆ.

ಸ್ಪಂದಿಸದ ಆಡಳಿತ ಮಂಡಳಿ

ಆಸ್ಪತ್ರೆಯ ಸ್ಥಿತಿಗತಿಗಳ ಬಗ್ಗೆ ವಿವರಣೆ ಪಡೆಯಲು ವಿಕ್ಟೋರಿಯಾ ಆಸ್ಪತ್ರೆಯ ಆಡಳಿತ ಮಂಡಳಿಗೆ ‘ವಾರ್ತಾಭಾರತಿ’ ಪ್ರತಿನಿಧಿ ಕರೆ ಮಾಡಿದಾಗ ಯಾವುದೇ ಮಾಹಿತಿಯನ್ನು ನೀಡದ ಮಂಡಳಿಯವರು, ‘ನಾಲ್ಕು ದಿನ ಬಿಟ್ಟು ಕಚೇರಿಗೆ ಬನ್ನಿ’ ಎಂಬ ಸಬೂಬು ಹೇಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News