ಡಿಜಿಟಲ್ ಇಂಡಿಯಾದ ಒಂದು ದಶಕ
ಹತ್ತು ವರ್ಷಗಳ ಹಿಂದೆ, ನಾವು ಅಜ್ಞಾತ ಪ್ರದೇಶಕ್ಕೆ ಒಂದು ದಿಟ್ಟ ಪ್ರಯಾಣವನ್ನು ಬಹಳ ದೃಢನಿಶ್ಚಯದಿಂದ ಆರಂಭಿಸಿದೆವು. ಭಾರತೀಯರ ತಂತ್ರಜ್ಞಾನ ಬಳಕೆಯ ಸಾಮರ್ಥ್ಯದ ಬಗ್ಗೆ ದಶಕಗಳಷ್ಟು ಕಾಲ ಸಂದೇಹವಿತ್ತು, ನಾವು ಈ ದೃಷ್ಟಿಕೋನ ಬದಲಿಸಿದೆವು ಮತ್ತು ಭಾರತೀಯರು ತಂತ್ರಜ್ಞಾನ ಬಳಸುವ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟೆವು.
ತಂತ್ರಜ್ಞಾನದ ಬಳಕೆ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಿಸುತ್ತದೆ ಎಂದು ದಶಕಗಳಿಂದ ಭಾವಿಸಲಾಗಿತ್ತು, ಆದರೆ ನಾವು ಈ ಮನಸ್ಥಿತಿ ಬದಲಾಯಿಸಿದ್ದೇವೆ ಮತ್ತು ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ನಿರ್ಮೂಲ ಮಾಡಲು ತಂತ್ರಜ್ಞಾನ ಬಳಸಿಕೊಂಡಿದ್ದೇವೆ.
ಉದ್ದೇಶ ಸರಿಯಾಗಿದ್ದಾಗ, ನಾವೀನ್ಯತೆ ದುರ್ಬಲರನ್ನು ಸಬಲಗೊಳಿಸುತ್ತದೆ. ಎಲ್ಲರನ್ನೂ ಒಳಗೊಳ್ಳುವ ವಿಧಾನವಿದ್ದಾಗ, ತಂತ್ರಜ್ಞಾನ ವಂಚಿತರ ಜೀವನದಲ್ಲಿ ಬದಲಾವಣೆ ತರುತ್ತದೆ. ಈ ನಂಬಿಕೆ ಡಿಜಿಟಲ್ ಇಂಡಿಯಾಕ್ಕೆ ಬುನಾದಿ ಹಾಕಿತು ಲಭ್ಯತೆಯನ್ನು ಪ್ರಜಾಪ್ರಭುತ್ವಗೊಳಿಸುವ, ಎಲ್ಲರನ್ನೂ ಒಳಗೊಂಡ ಡಿಜಿಟಲ್ ಮೂಲಸೌಕರ್ಯ ನಿರ್ಮಿಸುವ ಮತ್ತು ಎಲ್ಲರಿಗೂ ಅವಕಾಶ ಒದಗಿಸುವ ಅಭಿಯಾನ ಇದು.
2014ರಲ್ಲಿ, ಅಂತರ್ಜಾಲ ಲಭ್ಯತೆ ಸೀಮಿತವಾಗಿತ್ತು,ಡಿಜಿಟಲ್ ಸಾಕ್ಷರತೆ ಕಡಿಮೆಯಿತ್ತು ಮತ್ತು ಸರಕಾರಿ ಸೇವೆಗಳಿಗೆ ಆನ್‌ಲೈನ್ ಪ್ರವೇಶ ವಿರಳವಾಗಿತ್ತು. ಭಾರತದಂತಹ ದೊಡ್ಡ ಮತ್ತು ವೈವಿಧ್ಯಮಯ ದೇಶ ನಿಜವಾಗಿಯೂ ಡಿಜಿಟಲ್ ಆಗಲು ಸಾಧ್ಯವೇ ಎಂದು ಹಲವರು ಅನುಮಾನಿಸಿದರು.
ಇಂದು, ಆ ಪ್ರಶ್ನೆಗೆ ಕೇವಲ ಡೇಟಾ ಮತ್ತು ಡ್ಯಾಶ್ ಬೋರ್ಡ್‌ಗಳಲ್ಲಿ ಮಾತ್ರವಲ್ಲ, 140 ಕೋಟಿ ಭಾರತೀಯರ ಜೀವನದಲ್ಲಿಯೂ ಉತ್ತರ ಸಿಕ್ಕಿದೆ. ನಾವು ಹೇಗೆ ಆಡಳಿತ ನಡೆಸುತ್ತೇವೆ, ಹೇಗೆ ಕಲಿಯುತ್ತೇವೆ, ವಹಿವಾಟು ನಡೆಸುತ್ತೇವೆ ಮತ್ತು ನಿರ್ಮಿಸುತ್ತೇವೆ ಎಂಬುದರಿಂದ ಹಿಡಿದು ಎಲ್ಲೆಡೆಯೂ ಡಿಜಿಟಲ್ ಇಂಡಿಯಾ ಇದೆ.
ಡಿಜಿಟಲ್ ಅಂತರದ ನಿವಾರಣೆ
2014ರಲ್ಲಿ, ಭಾರತದಲ್ಲಿ ಅಂದಾಜು 25 ಕೋಟಿ ಅಂತರ್ಜಾಲ ಸಂಪರ್ಕಗಳಿದ್ದವು. ಇಂದು, ಆ ಸಂಖ್ಯೆ 97 ಕೋಟಿಗೂ ಹೆಚ್ಚಾಗಿದೆ. ಭೂಮಿ ಮತ್ತು ಚಂದ್ರನ ನಡುವಿನ ಅಂತರದ 11 ಪಟ್ಟು ದೂರಕ್ಕೆ ಸಮಾನವಾದ 42 ಲಕ್ಷ ಕಿ.ಮೀ.ಗಳಿಗೂ ಹೆಚ್ಚು ಆಪ್ಟಿಕಲ್ ಫೈಬರ್ ಕೇಬಲ್ ಈಗ ಅತ್ಯಂತ ದೂರದ ಹಳ್ಳಿಗಳನ್ನು ಸಹ ಸಂಪರ್ಕಿಸಿದೆ.
ಭಾರತ ವಿಶ್ವದಲ್ಲೇ ಅತಿ ವೇಗದ 5ಜಿ ಅಳವಡಿಕೆ ಹೊಂದಿದ್ದು, ಕೇವಲ ಎರಡು ವರ್ಷಗಳಲ್ಲಿ 4.81 ಲಕ್ಷ ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ. ಅತಿ ವೇಗದ ಅಂತರ್ಜಾಲ ಈಗ ನಗರ ಕೇಂದ್ರಗಳು ಮತ್ತು ಗಾಲ್ವಾನ್, ಸಿಯಾಚಿನ್ ಮತ್ತು ಲಡಾಖ್ ಸೇರಿದಂತೆ ಮುಂಚೂಣಿ ಸೇನಾ ನೆಲೆಗಳನ್ನು ತಲುಪಿದೆ.
ನಮ್ಮ ಡಿಜಿಟಲ್ ಬೆನ್ನೆಲುಬಾಗಿರುವ ಇಂಡಿಯಾ ಸ್ಟ್ಯಾಕ್, ಯುಪಿಐನಂತಹ ವೇದಿಕೆಗಳನ್ನು ಸಕ್ರಿಯಗೊಳಿಸಿದೆ, ಇದು ಈಗ ವರ್ಷಕ್ಕೆ 100+ ಬಿಲಿಯನ್ ವಹಿವಾಟು ನಿರ್ವಹಿಸುತ್ತಿದೆ. ಎಲ್ಲಾ ನೈಜ-ಸಮಯದ ಡಿಜಿಟಲ್ ವಹಿವಾಟುಗಳಲ್ಲಿ ಅಂದಾಜು ಅರ್ಧದಷ್ಟು ಭಾರತದಲ್ಲಿ ನಡೆಯುತ್ತವೆ.
ನೇರ ಸವಲತ್ತು ವರ್ಗಾವಣೆ (ಡಿಬಿಟಿ) ಮೂಲಕ, ರೂ.44 ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ನೇರವಾಗಿ ನಾಗರಿಕರಿಗೆ ವರ್ಗಾಯಿಸಲಾಗಿದೆ, ಮಧ್ಯವರ್ತಿಗಳನ್ನು ತಪ್ಪಿಸಲಾಗಿದೆ ಮತ್ತು ರೂ.3.48 ಲಕ್ಷ ಕೋಟಿ ಸೋರಿಕೆ ಉಳಿಸಲಾಗಿದೆ.
ಸ್ವಾಮಿತ್ವದಂತಹ ಯೋಜನೆಗಳು 2.4 ಕೋಟಿಗೂ ಹೆಚ್ಚು ಆಸ್ತಿ ಕಾರ್ಡ್ ಗಳನ್ನು ವಿತರಿಸಿವೆ ಮತ್ತು 6.47 ಲಕ್ಷ ಹಳ್ಳಿಗಳನ್ನು ನಕ್ಷೆ ಮಾಡಿವೆ, ಇದರಿಂದಾಗಿ ಹಲವು ವರ್ಷಗಳ ಕಾಲದ ಭೂ ಸಂಬಂಧಿತ ಅನಿಶ್ಚಿತತೆ ಕೊನೆಗೊಂಡಿದೆ.
ಎಲ್ಲರಿಗೂ ಸಮಾನ ಅವಕಾಶಗಳು
ಭಾರತದ ಡಿಜಿಟಲ್ ಆರ್ಥಿಕತೆ ಎಂಎಸ್‌ಎಂಇಗಳು ಮತ್ತು ಸಣ್ಣ ಉದ್ಯಮಿಗಳನ್ನು ಹಿಂದೆಂದಿಗಿಂತಲೂ ಉತ್ತಮವಾಗಿ ಸಬಲೀಕರಣಗೊಳಿಸುತ್ತಿದೆ.
ಒಎನ್‌ಡಿಸಿ (ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್) ಒಂದು ಕ್ರಾಂತಿಕಾರಿ ವೇದಿಕೆಯಾಗಿದ್ದು, ಇದು ಖರೀದಿದಾರರ ಮತ್ತು ಮಾರಾಟಗಾರರ ವಿಶಾಲ ಮಾರುಕಟ್ಟೆಯೊಂದಿಗೆ ತಡೆರಹಿತ ಸಂಪರ್ಕ ಒದಗಿಸುವ ಮೂಲಕ ಅವಕಾಶಗಳ ಹೊಸ ಕಿಟಕಿ ತೆರೆದಿದೆ.
ಜಿಇಎಂ (ಸರಕಾರಿ ಇ-ಮಾರ್ಕೆಟ್‌ಪ್ಲೇಸ್) ಸಾಮಾನ್ಯ ಜನರಿಗೆ ಸರಕಾರದ ಎಲ್ಲಾ ಇಲಾಖೆಗಳಿಗೆ ಸರಕು ಮತ್ತು ಸೇವೆಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ಇದು ಜನಸಾಮಾನ್ಯರಿಗೆ ದೊಡ್ಡ ಮಾರುಕಟ್ಟೆ ಒದಗಿಸುವುದಲ್ಲದೆ, ಸರಕಾರಕ್ಕೆ ಹಣ ಉಳಿಸುತ್ತದೆ.
ಇದನ್ನು ಕಲ್ಪಿಸಿಕೊಳ್ಳಿ: ನೀವು ಮುದ್ರಾ ಸಾಲಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುತ್ತೀರಿ. ನಿಮ್ಮ ಸಾಲದ ಅರ್ಹತೆಯನ್ನು ಖಾತೆ ಸಂಗ್ರಾಹಕ ಚೌಕಟ್ಟಿನ ಮೂಲಕ ನಿರ್ಣಯಿಸಲಾಗುತ್ತದೆ. ನೀವು ಸಾಲ ಪಡೆಯುತ್ತೀರಿ ಮತ್ತು ನಿಮ್ಮ ಉದ್ಯಮ ಪ್ರಾರಂಭಿಸುತ್ತೀರಿ. ನೀವು ಜಿಇಎಂನಲ್ಲಿ ನೋಂದಾಯಿಸಿಕೊಳ್ಳುತ್ತೀರಿ, ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತೀರಿ ಮತ್ತು ನಂತರ ಒಎನ್‌ಡಿಸಿ ಮೂಲಕ ಉದ್ಯಮ ವಿಸ್ತರಿಸುತ್ತೀರಿ.
ಒಎನ್‌ಡಿಸಿ ಇತ್ತೀಚೆಗೆ 20 ಕೋಟಿ ವಹಿವಾಟುಗಳನ್ನು ದಾಟಿದೆ, ಕೊನೆಯ 10 ಕೋಟಿ ವಹಿವಾಟುಗಳು ಕೇವಲ ಆರು ತಿಂಗಳಲ್ಲಿ ನಡೆದಿವೆ. ಬನಾರಸಿ ನೇಕಾರರಿಂದ ಹಿಡಿದು ನಾಗಾಲ್ಯಾಂಡಿನ ಬಿದಿರು ಕುಶಲಕರ್ಮಿಗಳವರೆಗೆ, ಮಾರಾಟಗಾರರು ಈಗ ಮಧ್ಯವರ್ತಿಗಳು ಅಥವಾ ಡಿಜಿಟಲ್ ಏಕಸ್ವಾಮ್ಯವಿಲ್ಲದೆ ದೇಶಾದ್ಯಂತ ಗ್ರಾಹಕರನ್ನು ತಲುಪುತ್ತಿದ್ದಾರೆ.
ಜಿಇಎಂ 50 ದಿನಗಳಲ್ಲಿ ರೂ.1 ಲಕ್ಷ ಕೋಟಿ ಜಿಎಂವಿ ದಾಟಿದೆ, ಇದರಲ್ಲಿ 1.8 ಲಕ್ಷಕ್ಕೂ ಹೆಚ್ಚು ಮಹಿಳಾ ನೇತೃತ್ವದ ಎಂಎಸ್‌ಎಂಇಗಳು ಸೇರಿದಂತೆ 22 ಲಕ್ಷ ಮಾರಾಟಗಾರರು ರೂ.46,000 ಕೋಟಿ ಮೌಲ್ಯದ ಬೇಡಿಕೆಗಳನ್ನು ಪೂರೈಸಿದ್ದಾರೆ.
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ: ಭಾರತದ ಜಾಗತಿಕ ಕೊಡುಗೆ
ಆಧಾರ್, ಕೋವಿನ್, ಡಿಜಿಲಾಕರ್ ಮತ್ತು ಫಾಸ್ಟ್‌ಟ್ಯಾಗ್‌ನಿಂದ ಪಿಎಂ-ವಾಣಿ ಮತ್ತು ಒಂದು ದೇಶ ಒಂದು ಚಂದಾದಾರಿಕೆಯವರೆಗೆ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಈಗ ಜಾಗತಿಕವಾಗಿ ಅಧ್ಯಯನ ಮಾಡಲಾಗುತ್ತಿದೆ ಮತ್ತು ಅಳವಡಿಸಿಕೊಳ್ಳಲಾಗುತ್ತಿದೆ.
ಕೋವಿನ್ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವನ್ನು ಸಕ್ರಿಯಗೊಳಿಸಿತು, 220 ಕೋಟಿ ಕ್ಯೂಆರ್-ಪರಿಶೀಲಿಸಬಹುದಾದ ಪ್ರಮಾಣಪತ್ರಗಳನ್ನು ನೀಡಿತು. 54 ಕೋಟಿ ಬಳಕೆದಾರರನ್ನು ಹೊಂದಿರುವ ಡಿಜಿಲಾಕರ್, 775 ಕೋಟಿಗೂ ಹೆಚ್ಚು ದಾಖಲೆಗಳನ್ನು ಸರಾಗ ಮತ್ತು ಸುರಕ್ಷಿತವಾಗಿರಿಸಿದೆ.
ನಮ್ಮ ಜಿ20 ಅಧ್ಯಕ್ಷತೆ ಮೂಲಕ, ಭಾರತವು ಜಾಗತಿಕ ಡಿಪಿಐ ಭಂಡಾರ ಮತ್ತು 25 ದಶಲಕ್ಷ ಸಾಮಾಜಿಕ ಪರಿಣಾಮ ನಿಧಿ ಪ್ರಾರಂಭಿಸಿತು, ಇದು ಆಫ್ರಿಕಾ ಮತ್ತು ದಕ್ಷಿಣ ಏಶ್ಯಾದ್ಯಂತ ರಾಷ್ಟ್ರಗಳಿಗೆ ಅಂತರ್ಗತ ಡಿಜಿಟಲ್ ಪರಿಸರ ವ್ಯವಸ್ಥೆ ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ನವೋದ್ಯಮ ಶಕ್ತಿ ಆತ್ಮನಿರ್ಭರ ಭಾರತ ಸಂಕಲ್ಪವನ್ನು ಈಡೇರಿಸುತ್ತಿದೆ
ಭಾರತ ಈಗ 1.8 ಲಕ್ಷಕ್ಕೂ ಹೆಚ್ಚು ನವೋದ್ಯಮಗಳನ್ನು ಹೊಂದಿರುವ ವಿಶ್ವದ ಅಗ್ರ 3 ನವೋದ್ಯಮ ಪೂರಕ ವ್ಯವಸ್ಥೆಗಳಲ್ಲಿ ಒಂದಾಗಿದೆ. ಆದರೆ, ಇದು ಕೇವಲ ನವೋದ್ಯಮ ಚಳವಳಿಗಿಂತ ಹೆಚ್ಚಿನದಾಗಿದೆ, ಇದು ತಂತ್ರಜ್ಞಾನದ ಪುನರುಜ್ಜೀವನವಾಗಿದೆ.
ನಮ್ಮ ಯುವಜನರಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕೌಶಲ್ಯ ಮತ್ತು ಎಐ ಪ್ರತಿಭೆಯ ವಿಷಯದಲ್ಲಿ ಭಾರತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
1.2 ಶತಕೋಟಿ ಇಂಡಿಯಾ ಎಐ ಮಿಷನ್ ಮೂಲಕ, ಭಾರತ ಜಾಗತಿಕವಾಗಿ ಪ್ರತೀ ಗಂಟೆಗೆ 1/ಜಿಪಿಯುಗಿಂತ ಕಡಿಮೆ ಬೆಲೆಯಲ್ಲಿ 34,000 ಜಿಪಿಯುಗಳಿಗೆ ಪ್ರವೇಶ ಸಕ್ರಿಯಗೊಳಿಸಿದೆ. ಇದು ಭಾರತವನ್ನು ಅಗ್ಗದ ಅಂತರ್ಜಾಲ ಆರ್ಥಿಕತೆ ಮಾತ್ರವಲ್ಲದೆ ಅತ್ಯಂತ ಕೈಗೆಟುಕುವ ಗಣನೆಯ ತಾಣವನ್ನಾಗಿ ಮಾಡಿದೆ.
ಭಾರತ ಮಾನವೀಯತೆಗೆ ಮೊದಲ ಆದ್ಯತೆ ನೀಡುವ ಎಐ ಪ್ರತಿಪಾದಿಸಿದೆ. ಎಐ ಕುರಿತ ಹೊಸದಿಲ್ಲಿ ಘೋಷಣೆಯು ಜವಾಬ್ದಾರಿಯೊಂದಿಗೆ ನಾವೀನ್ಯತೆ ಉತ್ತೇಜಿಸುತ್ತದೆ. ನಾವು ದೇಶಾದ್ಯಂತ ಎಐ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದೇವೆ.
ಮುಂದಿನ ಹಾದಿ
ಮುಂದಿನ ದಶಕ ಇನ್ನಷ್ಟು ಪರಿವರ್ತನಾತ್ಮಕವಾಗಿರುತ್ತದೆ. ನಾವು ಡಿಜಿಟಲ್ ಆಡಳಿತದಿಂದ ಜಾಗತಿಕ ಡಿಜಿಟಲ್ ನಾಯಕತ್ವದತ್ತ, ಭಾರತ ಮೊದಲು ಎಂಬುದರಿಂದ ಜಗತ್ತಿಗೆ ಭಾರತ ಮೊದಲು ಎಂಬುದರತ್ತ ಸಾಗುತ್ತಿದ್ದೇವೆ.
ಡಿಜಿಟಲ್ ಇಂಡಿಯಾ ಕೇವಲ ಸರಕಾರಿ ಕಾರ್ಯಕ್ರಮವಾಗಿ ಉಳಿದಿಲ್ಲ, ಅದು ಜನಾಂದೋಲನವಾಗಿ ಮಾರ್ಪಟ್ಟಿದೆ. ಆತ್ಮನಿರ್ಭರ ಭಾರತ ನಿರ್ಮಿಸುವಲ್ಲಿ ಮತ್ತು ಭಾರತವನ್ನು ಜಗತ್ತಿಗೆ ವಿಶ್ವಾಸಾರ್ಹ ನಾವೀನ್ಯತೆ ಪಾಲುದಾರನನ್ನಾಗಿ ಮಾಡುವಲ್ಲಿ ಇದು ಕೇಂದ್ರಬಿಂದುವಾಗಿದೆ.
ಎಲ್ಲಾ ನಾವೀನ್ಯಕಾರರು, ಉದ್ಯಮಿಗಳು ಮತ್ತು ಕನಸುಗಾರರಿಗೆ: ಮುಂದಿನ ಮಹತ್ವದ ಡಿಜಿಟಲ್ ಸಾಧನೆಗಾಗಿ ಜಗತ್ತು ಭಾರತದತ್ತ ನೋಡುತ್ತಿದೆ.
ಯಾವುದು ಸಶಕ್ತಗೊಳಿಸುತ್ತದೋ ಅದನ್ನು ನಾವು ನಿರ್ಮಿಸೋಣ.
ನಿಜವಾಗಿಯೂ ಮುಖ್ಯವಾದುದನ್ನು ಪರಿಹರಿಸೋಣ.
ಒಗ್ಗೂಡಿಸುವ, ಒಳಗೊಳ್ಳುವ ಮತ್ತು ಉನ್ನತಿಗೇರಿಸುವ ತಂತ್ರಜ್ಞಾನದೊಂದಿಗೆ ನಾವು ಮುನ್ನಡೆಯೋಣ.